ಮಕ್ಕಳು ಕೇಳಿದ ತಕ್ಷಣ ಸ್ಕೂಟಿ ಕೊಡಿಸಿ ಮಾರ್ಕೆಟ್‌ಗೆ ಹೋಗೋದು, ಬಸ್‌ಸ್ಟಾಪ್‌ಗೆ ಡ್ರಾಪ್ ಮಾಡಿಸಿಕೊಂಡು ಮಗ, ಮಗಳು ಸ್ಕೂಟಿ ಓಡಿಸ್ತಿದ್ದಾಳೆ ಅಂತ ಬೀಗುತ್ತಿದ್ದವರು ಸ್ವಲ್ಪ ಆಲೋಚಿಸಬೇಕಿದೆ. ಹೊಸ ಸಂಚಾರಿ ನಿಯಮಗಳು ಬಂದಿದ್ದು, ಚಾಲನಾ ಪರವಾನಗಿ ಸೇರಿ ಇತರ ದಾಖಲೆ ಇಲ್ಲದೆ ಓಡಾಡಿದ್ರೆ ದೊಡ್ಡ ಮೊತ್ತದ ದಂಡ ತೆರಬೇಕಾಗಿದೆ.
ಚಿತ್ರದುರ್ಗ(ಸೆ.09): ಮಗಳು ಸ್ಕೂಟಿ ಡ್ರೈವಿಂಗ್ ಮಾಡುವುದನ್ನು ಕಲಿತಿರುವುದು ಮನೆಯ ಸಣ್ಣ-ಪುಟ್ಟಸಮಸ್ಯೆ ನಿವಾರಣೆ ಮಾಡಿರಬಹುದು. ಆದರೆ, ಕಾನೂನು ಮಾತ್ರ ಬೇರೆಯದನ್ನೇ ಹೇಳುತ್ತದೆ. ಮೋಟಾರು ವಾಹನ ಕಾಯ್ದೆ ಅಧಿನಿಯಮ 1988ಕ್ಕೆ ತಿದ್ದುಪಡಿ ಮಾಡಿ ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಹಾಲಿ ಇದ್ದ ದಂಡದ ದರವನ್ನು ಹೆಚ್ಚಿಸಿದ್ದು, ಅದರ ಭೀಕರ ಪರಿಣಾಮವನ್ನು ಎಲ್ಲರೂ ಉಣ್ಣುವಂತಾಗಿದೆ.
ಅಪ್ರಾಪ್ತರಿಗೆ (18 ವರ್ಷದ ಒಳಗೆ) ವಾಹನ ಚಾಲನೆ ಮಾಡಲು ಅವಕಾಶ ನೀಡಿದರೆ ರು.25000 ದಂಡ ಮತ್ತು ವಾಹನ ನೀಡಿದವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ದಂಡವನ್ನು ನ್ಯಾಯಾಲಯದಲ್ಲೇ ಹೋಗಿ ಪಾವತಿ ಮಾಡಬೇಕು. ಮಗಳು ಸ್ಕೂಟಿ ಓಡಿಸ್ತಾಳೆ ಎಂಬ ಸಂಭ್ರಮ ಕೆಲಕಾಲದಲ್ಲೇ ಆತಂಕದ ವಾತಾವರಣ ಸೃಷ್ಟಿಸಲಿದೆ. ಅಪ್ರಾಪ್ತಳಿಗೆ ಸ್ಕೂಟಿ ಕೊಡಿಸಿದ ಕಾರಣಕ್ಕೆ ಪೋಷಕರು ಜೈಲು ಹಕ್ಕಿಗಳಾಗಬೇಕಾಗುತ್ತದೆ.
undefined
ಟ್ಯೂಷನ್ ಗೀಳು:
ಪ್ರೌಢಶಾಲೆ ಹಂತದಲ್ಲೇ ಓದಿನ ಕಡೆಗೆ ಹೆಚ್ಚು ಗಮನ ನೀಡುತ್ತಿರುವ ವಿದ್ಯಾರ್ಥಿನಿಯರು ಸ್ಕೂಟಿ ಕೊಡಿಸುವಂತೆ ಪೋಷಕರಿಗೆ ದುಂಬಾಲು ಬೀಳುತ್ತಿದ್ದಾರೆ. ಪರಿಣಾಮ ಇರುವ ಆರ್ಥಿಕ ಸಂಕಷ್ಟಗಳ ನಡುವೆಯೇ ಪೋಷಕರು ಪರಿಪಾಟಲುಪಟ್ಟು ವಾಹನ ಕೊಡಿಸುತ್ತಿದ್ದಾರೆ. ಆದರೆ, ಸ್ಕೂಟಿ ಓಡಿಸಲು ಚಾಲನಾ ಪರವಾನಗಿಬೇಕು ಎಂಬ ಉಸಾಬರಿಗೆ ಹೋಗುತ್ತಿಲ್ಲ. ಮುಂಜಾನೆ 6 ಗಂಟೆಗೆ ಟ್ಯೂಷನ್ ಹೋಗುವ ವಿದ್ಯಾರ್ಥಿನಿಯರು ತಾವು ಹೋಗುತ್ತಿರುವುದು ಅಪಾಯಕಾರಿ ಚಾಲನೆ ಎಂಬುದನ್ನು ಗಮನಿಸುತ್ತಿಲ್ಲ.
ಈ ಮೊದಲು ಡಿಎಲ್ ಇಲ್ಲದಿದ್ದರೆ 100 ರು. ದಂಡ ವಿಧಿಸಿ ಪೊಲೀಸರು ಸಾಗ ಹಾಕುತ್ತಿದ್ದರು. ವಿದ್ಯಾರ್ಥಿನಿಯರು ಎಂಬ ಕಾರಣಕ್ಕೆ ಬುದ್ಧಿವಾದ ಹೇಳಿ ಕಳಿಸುತ್ತಿದ್ದರು. ಕೆಲವು ವಿದ್ಯಾರ್ಥಿನಿಯರಂತೂ ದೂರದಲ್ಲೆಲ್ಲೋ ಪೊಲೀಸರು ಕಂಡರೆ ಸಾಕು, ಅಡ್ಡ ದಾರಿಗಳಲ್ಲಿ ಗಾಡಿ ನುಗ್ಗಿಸಿಕೊಡು ಹೋಗುತಿದ್ದರು. ಇಂತಹ ಸಂದರ್ಭಗಳಲ್ಲೇ ಅಪಘಾತಗಳು ಸಂಭವಿಸಿರುವ ಉದಾಹರಣೆಗಳೂ ಇವೆ. ಈ ವಿಚಾರದಲ್ಲಿ ವಿದ್ಯಾರ್ಥಿಗಳೂ ಕೂಡ ಭಿನ್ನವಾಗೇನೂ ಇಲ್ಲ. ಬೈಕ್‌ಗಳಲ್ಲಿ ಮೂವರು ಕುಳಿತು ಜೋರಾಗಿ ಹೋಗುತ್ತಾರೆ.
ತಪ್ಪಿಸಿಕೊಳ್ಳಲು ಛಾನ್ಸೇ ಇಲ್ಲ:
ಪೊಲೀಸರ ಕಣ್ಣು ತಪ್ಪಿಸಿಕೊಂಡು ಬಂದೆವು ಎಂದು ವಿದ್ಯಾರ್ಥಿಗಳಾಗಲೀ, ವಿದ್ಯಾರ್ಥಿನಿಯರಾಗಲೀ ಖುಷಿಯಿಂದ ಹೇಳಿಕೊಳ್ಳುವಂತಿಲ್ಲ. ಏಕೆಂದರೆ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯಿಂದ ಈಗಾಗಲೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾಗಳ ಪ್ರತಿ ಹಂತದ ರೀಡಿಂಗ್ ಮೇಲೆ ಇಲಾಖೆ ಅಧಿಕಾರಿಗಳು ಕಣ್ಣಾಯಿಸುತ್ತಿದ್ದಾರೆ.
ಸಿಸಿಟಿವಿ ಕಣ್ಗಾವಲು:
ನಿಮ್ಮ ಗಾಡಿಗಳನ್ನು ಪೊಲೀಸರೇ ತಡೆದು ತಪಾಸಣೆ ಮಾಡಬೇಕೆಂದೇನಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಆ ಕೆಲಸ ಮಾಡುತ್ತವೆ. ನಿಮಗೆ ಗೊತ್ತಿಲ್ಲದಂತೆ ವಾಹನಗಳ ಮಾಲೀಕರಿಗೆ ನೋಟಿಸ್‌ಗಳು ಜಾರಿಯಾಗುತ್ತವೆ. ಆಮೇಲೆ ದಂಡ ಕಟ್ಟುವುದು, ಕೋರ್ಟ್‌ಗೆ ಹೋಗಿ ಗಾಡಿ ಬಿಡಿಸಿಕೊಂಡು ಬರುವುದು, ವಕೀಲರ ಇಡುವುದು ಎಲ್ಲ ಶುರುವಾಗುತ್ತದೆ. ಅಗತ್ಯ ಬಿದ್ದರೆ ಜೈಲಿಗೆ ಬುತ್ತಿ ಹೊರಲೂ ಒಬ್ಬರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ.