ಅವಿಭಜಿತ ದ.ಕ. ಜಿಲ್ಲೆಯ ಪ್ರಾಕೃತಿಕ ದುರಂತದಲ್ಲಿ 60 ಮೊಬೈಲ್ ಟವರ್‌ಗಳಿಗೆ ಹಾನಿ| ನೆರೆ ಹಾನಿ ಮಳೆ, ನೆರೆಯಲ್ಲೂ ಸ್ಥಗಿತವಾಗದ ಫೋನ್ ಸಂಪರ್ಕದ ಹಿಂದಿದೆ ತಂತ್ರಜ್ಞರ ಶ್ರಮ|
ಮಂಗಳೂರು[ಸೆ.12]: ದ.ಕ. ಮತ್ತುಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿಮಳೆ ಮತ್ತು ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ನಿಜ. ಆದರೆ ಇದರ ನಡುವೆಯೂ ಜನತೆಗೆ ಆಪತ್ಕಾಲದಲ್ಲಿ ನೆರವಾದ ಮೊಬೈಲ್ ಫೋನ್ ಸಂಪರ್ಕದಲ್ಲಿ ಹೆಚ್ಚು ವ್ಯತ್ಯಯವಾಗಿರಲಿಲ್ಲ. ಮೊಬೈಲ್ ಫೋನ್ ಸೇವಾ ಸಿಬ್ಬಂದಿಯ ಅವಿರತ ಶ್ರಮ ಇದರ ಹಿಂದಿದೆ.
ಮೊಬೈಲ್ ಫೋನ್ ಸಂಪರ್ಕಕ್ಕೆ ಮುಖ್ಯ ಮೂಲ ಸಂವಹನ ಟವರ್‌ಗಳು. ಇವು ಸುಸ್ಥಿತಿಯಲ್ಲಿದ್ದರೆ ಫೋನ್ ಸಂಪರ್ಕ ಸರಿಯಾಗಿರುತ್ತದೆ. ಖಾಸಗಿ ಮೊಬೈಲ್ ಫೋನ್ ಸೇವಾ ಕಂಪೆನಿಗಳು ಟವರ್‌ನಂಥ ಮೂಲಸೌಕರ್ಯ ನಿರ್ಮಾಣ ಮತ್ತು ನಿರ್ವಹಣೆ ವ್ಯವಸ್ಥೆಯನ್ನು ಸ್ವತಃ ಕೈಗೊಳ್ಳುವುದಿಲ್ಲ. ರಾಜ್ಯದ ಶೇ. 90ರಷ್ಟುಮೊಬೈಲ್ ಫೋನ್ ಸಂಪರ್ಕ ಮೂಲಸೌಕರ್ಯವನ್ನು ನಿಭಾಯಿಸುತ್ತಿರುವುದು ಇಂಡಸ್ ಟವರ್ಸ್ ಎಂಬ ಸಂಸ್ಥೆ. ಮಳೆ ಮತ್ತು ನೆರೆಯಲ್ಲಿ ಟವರ್‌ಗಳನ್ನು ನಿಭಾಯಿಸಿದ ರೀತಿಯನ್ನು ಕಂಪನಿಯ ಇರ್ಫಾನ್ ಉಲ್ಲಾ ಇತ್ತೀಚೆಗೆ ಮಂಗಳೂರಲ್ಲಿ ಸುದ್ದಿಗಾರರಿಗೆ ವಿವರಿಸಿದರು.
undefined
ಮಂಗಳೂರು ಕ್ಲಸ್ಟರ್‌ನಡಿ ದ.ಕ. ಮತ್ತುಉಡುಪಿ ಜಿಲ್ಲೆಗಳು ಬರುತ್ತವೆ. ಇಲ್ಲಿ ಈ ಸಂಸ್ಥೆ 850 ಟವರ್‌ಗಳನ್ನು ನಿಭಾಯಿಸುತ್ತಿದೆ. ಇದಕ್ಕಾಗಿ ಒಬ್ಬ ಕ್ಲಸ್ಟರ್ ಮ್ಯಾನೇಜರ್, ಫೀಲ್ಡ್ ಎಂಜಿನಿಯರ್‌ಗಳು ಮತ್ತು ಕ್ಷೇತ್ರ ತಂತ್ರಜ್ಞರು ಇರುತ್ತಾರೆ. ಪ್ರತಿ ತಂತ್ರಜ್ಞರ ಅಡಿಯಲ್ಲಿ ಸರಾಸರಿ 12 ಟವರ್‌ಗಳಿರುತ್ತವೆ. ಈ ಸಿಬ್ಬಂದಿ ದಿನದ 24 ಗಂಟೆಗಳೂ ಕಾರ್ಯಸನ್ನದ್ಧವಾಗಿರಬೇಕು. ಟವರ್‌ಗಳು ತಾಂತ್ರಿಕವಾಗಿ ಸಂಪೂರ್ಣವಾಗಿ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿರುವುದರಿಂದ ಯಾವುದೇ ಟವರ್‌ನಲ್ಲಿ ಲೋಪದೋಷ ಕಂಡು ಬಂದರೆ ತಕ್ಷಣ ಮಾಹಿತಿ ತಲುಪಿ ಸಿಬ್ಬಂದಿ ಧಾವಿಸಿ ಅದನ್ನು ಸರಿಪಡಿಸುತ್ತಾರೆ. ಏರ್‌ಟೆಲ್, ವೋಡಾಫೋನ್, ಐಡಿಯಾ ಮತ್ತು ರಿಲಯನ್ಸ್ ಜಿಯೋ ಸಂಪರ್ಕಗಳಿಗೆ ಈ ಟವರ್‌ಗಳೇ ಶಕ್ತಿ.
60 ಟವರ್‌ಗಳಿಗೆ ನೆರೆ ಹಾನಿ:
ಈ ಬಾರಿಯ ಮಳೆ ಮತ್ತು ನೆರೆಯಿಂದಾಗಿ ಕ್ಲಸ್ಟರ್‌ನ ಸುಮಾರು 60 ಟವರ್‌ಗಳಿಗೆ ಹಾನಿಯಾಗಿತ್ತು. ಈ ಬಾರಿಯ ಮಳೆಗಾಲದಲ್ಲಿ ನಮ್ಮ ವೃತ್ತದಡಿ ಹೆಚ್ಚು ಸಮಸ್ಯೆಕಂಡುಬಂದಿದ್ದು ಬಂಟ್ವಾಳ ತಾಲೂಕಿನಲ್ಲಿ. ಇಲ್ಲಿ ನಾಲ್ಕು ಟವರ್‌ಗಳು ನೀರಿನಲ್ಲೇ ಮುಳುಗಿ ದ್ವೀಪದಂತಾಗಿದ್ದವು ಎಂದು ಇಂಡಸ್ ಟವರ್ಸ್‌ನ ಮಂಗಳೂರು ಕ್ಲಸ್ಟರ್ ಮ್ಯಾನೇಜರ್ ಕಾರ್ತಿಕೇಯನ್ ನೆನಪಿಸಿಕೊಳ್ಳುತ್ತಾರೆ.
ಮೊಬೈಲ್ ಫೋನ್ ಟವರ್‌ಗಳು ಮೂರು ಹಂತಗಳಲ್ಲಿ ಕೆಲಸ ಮಾಡುತ್ತವೆ. ವಿದ್ಯುಚ್ಛಕ್ತಿ ಮೇಲೆ ಇವು ಕಾರ್ಯನಿರ್ವಸಬೇಕು. ವಿದ್ಯುಚ್ಛಕ್ತಿ ನಿಲುಗಡೆಯಾದರೆ ನಾಲ್ಕೈದು ಗಂಟೆಗಳ ಬ್ಯಾಟರಿ ಬ್ಯಾಕಪ್ ಇರುತ್ತದೆ. ಅದೂ ಸ್ಥಗಿತಗೊಂಡರೆ ಡೀಸೆಲ್ ಜನರೇಟರ್ ಬಳಸಲಾಗುತ್ತದೆ. ಭಾರತದಲ್ಲಿ ಭಾರತೀಯ ರೈಲ್ವೆ ಹೊರತುಪಡಿಸಿದರೆ ಅತಿ ಹೆಚ್ಚು ಡೀಸೆಲ್ ಬಳಸುವ ಸಂಸ್ಥೆ ಇಂಡಸ್ ಟವರ್ಸ್. ಅವಿಭಜಿತ ದ.ಕ. ಜಿಲ್ಲೆಯಲ್ಲೇ ಈ ಕಂಪೆನಿ ತಿಂಗಳಿಗೆ 8ರಿಂದ 9 ಸಾವಿರ ಲೀಟರ್ ಡೀಸೆಲ್ ಬಳಸುತ್ತಿದೆ.
ದೋಣಿಯಲ್ಲಿ ತೆರಳಿ ಡೀಸೆಲ್ ತುಂಬಿಸಿದರು:
ಬಂಟ್ವಾಳದಲ್ಲಿ ವಿದ್ಯುತ್ ಇಲ್ಲದೇ ಎರಡು ಟವರ್‌ಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಟವರ್ ಸ್ಥಳಗಳೂ ನೀರಿನೊಳಗೆ ಮುಳುಗಿದ್ದವು. ದೋಣಿಯಲ್ಲಿ ಡೀಸೆಲ್ ಸಾಗಿಸಿ ಟವರ್‌ಗಳಿಗೆ ಚಾಲನೆ ನೀಡಲಾಯಿತು ಎಂದು ಟೆಕ್ನಿಯನ್ ರಾಜೇಶ್ ಮಡಿವಾಳ ಸಾಹಸ ಹೇಳುತ್ತಾರೆ.
ಬಂಟ್ವಾಳ ಮಾತ್ರವಲ್ಲದೆ, ಬೆಳ್ತಂಗಡಿ, ಉಜಿರೆ, ಮಾಣೂರು, ರಂಜಪುರ, ಫರಂಗಿಪೇಟೆ, ಮೆಲ್ಕಾರು, ನೆಟ್‌ಬಾಗಿಲು ಮತ್ತು ಸುಬ್ರಮಣ್ಯದ ಕೆಲವು ಸ್ಥಳಗಳಲ್ಲಿ ಭೂ ಕುಸಿತದಿಂದಾಗಿಯೂ ಟವರ್‌ಗಳಿಗೆ ಹಾನಿಯಾಗಿತ್ತು. ಆದರೆ ಸಿಬ್ಬಂದಿಯ ಕಾರ್ಯತತ್ಪರತೆಯಿಂದಾಗಿ ಇವು ತಕ್ಷಣವೇ ಕಾರ್ಯಾರಂಭ ಮಾಡಿದ್ದವು.
ಕೇವಲ ಫೋನ್‌ಕರೆ ಮಾತ್ರವಲ್ಲದೆ ಆನ್‌ಲೈನ್ ಬ್ಯಾಂಕಿಂಗ್, ಕಾರ್ಡ್ ಸ್ವೈಪಿಂಗ್, ಮತ್ತು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೂ ಈ ಟವರ್‌ಗಳ ಸುಸ್ಥಿತಿಯಲ್ಲಿರುವುದು ಅವಶ್ಯಕ. ದ.ಕ. ಮತ್ತುಉಡುಪಿ ಜಿಲ್ಲೆಗಳಲ್ಲಿ ಗ್ರಾಹಕರಿಗೆ ಇದರ ಸಂಪರ್ಕ ಕಡಿತದ ಬಿಸಿ ಹೆಚ್ಚು ತಟ್ಟಲಿಲ್ಲ. ಮೊಬೈಲ್ ಫೋನ್ ಸಂಪರ್ಕದ ಹಿಂದೆ ಇಂಥ ತಂತ್ರಜ್ಞರು ಬೆಳಕಿಗೆ ಬಾರದೆ ಅವಿರತವಾಗಿ ಕೆಲಸ ಮಾಡುತ್ತಿರುತ್ತಾರೆ.
ಭಾರತದಲ್ಲಿ ಪ್ರತಿ ಐದು ಮೊಬೈಲ್ ಫೋನ್ ಕರೆಗಳ ಪೈಕಿ ಮೂರು ಇಂಡಸ್ ಟವರ್ಸ್ ಮೂಲಕವೇ ನಡೆಯುತ್ತಿವೆ. ಪ್ರತಿನಿತ್ಯ ಸುಮಾರು 60 ಕೋಟಿ ಜನರು ಇಂಡಸ್ ಟವರ್ಸ್ನಿಂದ ಫೋನ್‌ಅಥವಾ ಡೇಟಾ ಬಳಕೆ ಮಾಡುತ್ತಿರುತ್ತಾರೆ ಎಂದು ಕಂಪನಿಯ ಇರ್ಫಾನ್ ಉಲ್ಲಾ ತಿಳಿಸುತ್ತಾರೆ.