Air Pollution: ಬೆಂಗ್ಳೂರಲ್ಲಿ ವಾಹನಗಳಿಂದಲೇ ಹೆಚ್ಚು ವಾಯು ಮಾಲಿನ್ಯ..!

By Girish GoudarFirst Published May 1, 2022, 10:32 AM IST
Highlights

*   ಸಾರಿಗೆ ವಲಯದಿಂದಲೇ ಹೆಚ್ಚು ವಾಯು ಮಾಲಿನ್ಯ
*  ಬೆಂಗ್ಳೂರಿನ ವಾಯು ಮಾಲಿನ್ಯಕ್ಕೆ ಶೇ.50ಕ್ಕೂ ಸಾರಿಗೆ ವಲಯದ ಕೊಡುಗೆ
*  ಡೀಸೆಲ್‌ ಜನರೇಟರ್‌ ಬಳಕೆಯೂ ಅಪಾಯಕಾರಿ
 

ಬೆಂಗಳೂರು(ಮೇ.01): ರಾಜಧಾನಿ ಬೆಂಗಳೂರಿನ(Bengaluru) ವಾಯು ಮಾಲಿನ್ಯಕ್ಕೆ ಸಾರಿಗೆ ವಲಯದ್ದೇ ದೊಡ್ಡ ಕೊಡುಗೆ. ಜನರ ಉಸಿರುಗಟ್ಟಿಸುವ ಗಾಳಿಯಲ್ಲಿ ತೇಲುವ ಒಟ್ಟು ಧೂಳಿನ ಕಣಗಳ (ಪಿಎಂ) ಶೇ.50 ಕ್ಕೂ ಹೆಚ್ಚು ಪ್ರಮಾಣದ ಕೊಡುಗೆಯನ್ನೇ ಸಾರಿಗೆ ವಲಯ ನೀಡುತ್ತಿದೆ ಎಂದು ಸಿ-ಸ್ಟೆಪ್‌ ಕೇಂದ್ರವು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ.

ಗಾಳಿಯಲ್ಲಿ ತೇಲುವ ಧೂಳಿನ ಕಣಗಳ ಗಾತ್ರ ಆಧರಿಸಿ ಧೂಳಿನ ಕಣಗಳನ್ನು ಪಿಎಂ 10 ಹಾಗೂ ಪಿಎಂ 2.5 ಎಂದು ವಿಂಗಡಿಸಲಾಗುತ್ತದೆ. ಇಂತಹ ಪಿಎಂ 10 ವಿಸರ್ಜನೆಯಲ್ಲಿ ಶೇ.50.6ರಷ್ಟು ಹಾಗೂ ಪಿಎಂ 2.5 ವಿಸರ್ಜನೆಯಲ್ಲಿ ಶೇ.63.5ರಷ್ಟು ದೊಡ್ಡ ಕೊಡುಗೆಯನ್ನು ಸಾರಿಗೆ ವಲಯ(Transport Sector) ನೀಡುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿಗಳ ಅಧ್ಯಯನಕ್ಕಾಗಿ ಕೇಂದ್ರ (ಸಿ-ಸ್ಟೆಪ್‌) ತನ್ನ ವರದಿಯಲ್ಲಿ ತಿಳಿಸಿದೆ.

ಆ ಒಂದು ಕಾರಣದಿಂದ ಸಂಸತ್‌ಗೆ ಸೈಕಲ್‌ನಲ್ಲಿ ಬಂದ ಆರೋಗ್ಯ ಸಚಿವ ಡಾ. ಮಾಂಡವೀಯ!

ನಗರದಲ್ಲಿ ಉಂಟಾಗುವ ವಾಯು ಮಾಲಿನ್ಯದಲ್ಲಿ(Air Pollution) (ಧೂಳಿನ ಕಣ) ಪಿಎಂ 10 ಮತ್ತು ಪಿಎಂ 2.5ರಲ್ಲಿ ಕ್ರಮವಾಗಿ ರಸ್ತೆಯ ಧೂಳಿನಿಂದಲೇ ಶೇ.16.9 ಮತ್ತು ಶೇ.6.8 ರಷ್ಟು ವಿಸರ್ಜನೆಯಾಗುತ್ತಿದೆ. ನಗರದ ನಾಯಂಡಹಳ್ಳಿ, ಬಾಪೂಜಿ ನಗರ, ರಾಯಪುರ ಮತ್ತು ಮೆಜೆಸ್ಟಿಕ್‌ ಭಾಗದಲ್ಲಿ ಪಿಎಂ ದಟ್ಟತೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ 2024ರ ಹೊತ್ತಿಗೆ ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಪಿಎಂ 10 ದಟ್ಟತೆ 28 ಸಾವಿರ ಟನ್‌ಗೆ ಹೆಚ್ಚಳವಾಗಲಿದೆ. 2019ಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ.15ರಷ್ಟು ಏರಿಕೆಯಾಗಲಿದೆ. ಆಗಲೂ ಸಾರಿಗೆ ಮತ್ತು ರಸ್ತೆ ಧೂಳುಗಳೇ ಪಿಎಂ 10ರ ಪ್ರಮುಖ ಉತ್ಪಾದಕಗಳಾಗಿರಲಿವೆ ಎಂದು ಎಚ್ಚರಿಸಿದೆ.

ಮಾಲಿನ್ಯದ ಇತರ ಮೂಲಗಳು

ಗೃಹ ಮತ್ತು ವಾಣಿಜ್ಯ ಬಳಕೆಯ ಇಂಧನ, ಡೀಸೆಲ್‌ ಜನರೇಟರ್‌, ಘನತ್ಯಾಜ್ಯದ ಸುಡುವಿಕೆ, ಕಟ್ಟಡ ನಿರ್ಮಾಣ ಮತ್ತು ಉರುಳಿಸುವ ಚಟುವಟಿಕೆಗಳು, ಕೈಗಾರಿಕಾ ಇಂಧನ ಬಳಕೆ, ವಿಮಾನ ನಿಲ್ದಾಣ ಮಾಲಿನ್ಯದ ಇತರ ಮೂಲಗಳಾಗಿವೆ.
ಕಡಿಮೆ ಆದಾಯವಿರುವ ಕೊಳಗೇರಿಗಳ ಜನರು ಅಡುಗೆ ಮಾಡಲು ಕಟ್ಟಿಗೆ ಬಳಸುತ್ತಿದ್ದಾರೆ. ವಿಜಿನಾಪುರ, ಶಾಂತಿನಗರ, ವರ್ತೂರು ವಾರ್ಡ್‌ಗಳಲ್ಲಿ ಕಟ್ಟಿಗೆ ಬಳಕೆ, ನಾಗರ ಬಾವಿ ವಾರ್ಡ್‌ನಲ್ಲಿ ಬಟ್ಟೆಗೆ ಇಸ್ತ್ರಿ ಹಾಕಲು ಕಲ್ಲಿದ್ದಲು ಬಳಸುತ್ತಿರುವುದನ್ನೂ ಸಹ ವರದಿ ಗುರುತಿಸಿದೆ. ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಕಲ್ಲಿದ್ದಲು ಬಳಕೆ ಮಾಡಲಾಗುತ್ತಿದ್ದು, ನಗರದ ಮಾಲಿನ್ಯ ಹೆಚ್ಚಲು ಅದೂ ಸಹ ನೆರವಾಗಿದೆ ಎಂದು ಹೇಳಲಾಗಿದೆ.

ಪವರ್‌ ಕಟ್‌ನಿಂದ ಮಾಲಿನ್ಯ ಹೆಚ್ಚಳ

ಬೆಂಗಳೂರಿನಲ್ಲಿ ಲೋಡ್‌ ಶೆಡ್ಡಿಂಗ್‌, ನಿರ್ವಹಣೆ ಕೆಲಸಗಳಿಗಾಗಿ ಆಗಾಗ ಪವರ್‌ ಕಟ್‌ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಡೀಸೆಲ್‌ ಜನರೇಟರ್‌ ಬಳಸುವುದು ಮಾಲಿನ್ಯ ಹೆಚ್ಚಿಸಿದೆ. ಬೆಳ್ಳಂದೂರು ವಾರ್ಡ್‌ನಲ್ಲಿ ಡೀಸೆಲ್‌ ಜನರೇಟರ್‌ನಿಂದ ಹೆಚ್ಚು ಮಾಲಿನ್ಯ ಆಗುತ್ತದೆ.

100 ಅತಿಯಾದ ಮಾಲಿನ್ಯ ಸ್ಥಳಗಳ ಪಟ್ಟಿಯಲ್ಲಿ ಭಾರತದಲ್ಲೇ 63 ಪ್ರದೇಶ!

ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಸೂಕ್ತವಾಗಿ ಅಳವಡಿಸಿಕೊಂಡರೆ ವರ್ಷಕ್ಕೆ 800 ರಿಂದ 1,200 ಸಾವು ತಪ್ಪಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುಮಾರು .3,230 ಕೋಟಿ ವೆಚ್ಚದಲ್ಲಿ ತಂತ್ರಜ್ಞಾನಗಳ ಅಳವಡಿಕೆ, ಇಲಾಖೆಗಳ ಸಾಮರ್ಥ್ಯ ವೃದ್ಧಿಯ ಕಾರ್ಯಕ್ರಮ ಮತ್ತು ಮೂಲಭೂತ ಸೌಕರ್ಯ ಮತ್ತು ಅಗತ್ಯ ಸಹಾಯಧನ ನೀಡಿದರೆ ನಗರದ ಮಾಲಿನ್ಯ ನಿಯಂತ್ರಿಸಬಹುದು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮಾಲಿನ್ಯ ನಿಯಂತ್ರಣಕ್ಕೆ ಕ್ರಮಗಳು

-ಪ್ರತಿ ಮನೆಗೂ ಗ್ಯಾಸ್‌ ಸಂಪರ್ಕ
-ರಸ್ತೆ ಬದಿಯಲ್ಲಿ ಗಿಡ ನೆಡಬೇಕು
-ಫುಟ್‌ಪಾತ್‌, ಡಿವೈಡರ್‌ ಸೇರಿದಂತೆ ರಸ್ತೆ ಬದಿಯಲ್ಲಿ ಜಿಯೋ ಸಿಂಥೆಟಿಕ್‌ ವಸ್ತುಗಳ ಬಳಕೆ
-ಬಸ್ಸು, ರೈಲುಗಳ ನಿಲ್ದಾಣಗಳಿಗೆ ಸಂಪರ್ಕ ಹೆಚ್ಚಳ
-ಭಾರಿ ವಾಹನಗಳಿಗೆ ಡೀಸೆಲ್‌ ಕಣಗಳ ಫಿಲ್ಟರ್‌ ಅಳವಡಿಕೆ
-ಸೋಲಾರ್‌ ಬಳಕೆ ಹೆಚ್ಚಳ
 

click me!