ಕೈಮುಗಿದು ಹೇಳ್ತೇನೆ ನಾನು ಮಹಾರಾಷ್ಟ್ರಿಗನಲ್ಲ ಅಪ್ಪಟ ಕನ್ನಡಿಗ: ಸಚಿವ ಚವ್ಹಾಣ

By Kannadaprabha NewsFirst Published Mar 1, 2020, 12:27 PM IST
Highlights

ನಾನೇನೂ ಹತ್ಯೆ ಮಾಡಿಲ್ಲ, ಕನ್ನಡ ಬಾರದ ನನಗೆ ರಾತ್ರಿ ನಿದ್ದೇನೂ ಬರ್ತಿಲ್ಲ | ನಾನು ಕನ್ನಡಿಗ, ನನ್ನ ರಕ್ತನಾಳಗಳಲ್ಲಿ ಹರಿಯೋ ರಕ್ತವೂ ಕನ್ನಡ, ಕನ್ನಡ ನನ್ನ ತಾಯಿ | ಪ್ರಭು ಚವ್ಹಾಣ್ ಮುಂಬೈನವ ಅಂತಾರೆ, ಹೊಟ್ಟೆ ಪಾಡಿಗೆ ಹೋಗಿದ್ದೆ|

ಬೀದರ್(ಮಾ.01): ಪ್ರಭು ಚವ್ಹಾಣ ಮುಂಬೈನವರು ಅಂತಾರೆ. ನಾನು ಸುಳ್ಳು ಹೇಳಲ್ಲ. ಕನ್ನಡ ನನ್ನ ತಾಯಿ. ನಾನು ಮರಾಠಿ ಓದೀನಿ ಹೌದು. ಆದರೆ ಕನ್ನಡ ಓದಿಲ್ಲ. ಅದರಲ್ಲಿ ನನ್ನ ದೋಷ ಇಲ್ಲ. ನಾನು ಹತ್ಯೆ ಮಾಡಿಲ್ಲ. ನನ್ನ ವಿದ್ಯಾರ್ಥಿ ಜೀವನದ ಅವಧಿಯಲ್ಲಿ ನನ್ನ ಹಳ್ಳೀಲಿ ಕನ್ನಡ ಶಾಲೆ ಇರಲಿಲ್ಲ. ಆದರೂ ವಿಧಾನ ಮಂಡಲದಲ್ಲಿ ನನ್ನ ಬಗ್ಗೆ ಹಾಸ್ಯ ಮಾಡ್ತಾರೆ. ನನಗೀಗ ಬಹಳ ಕಷ್ಟ ಆಗ್ತಿದೆ. ರಾತ್ರಿ ನಿದ್ದೇನೂ ಬರ್ತಿಲ್ಲ. ಹೀಗೆಲ್ಲ ಹೇಳಿದ್ದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ. 

ಇತ್ತೀಚೆಗೆ ವಿಧಾನ ಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಭು ಚವ್ಹಾಣ ಮುಂಬೈನಿಂದ ಬಂದವರು ಕನ್ನಡ ಬಲ್ಲವರಲ್ಲ ಎಂದು ಹೇಳಿದ್ದನ್ನು ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರೋಕ್ಷವಾಗಿ ಹೇಳಿ ಬೇಸರ ವ್ಯಕ್ತಪಡಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗ ಮಂತ್ರಿಯಾಗಿದ್ದೇನೆ, ಆದರೆ ಕನ್ನಡ ಬರಲ್ಲ ಅಂತಾರೆ. ಆದರೆ ಅವರದ್ದೇನೂ ತಪ್ಪಿಲ್ಲ. ನಾನು 1987ರಲ್ಲಿ ಹೊಟ್ಟೆಪಾಡಿಗಾಗಿ ಮುಂಬೈಗೆ ಹೋಗಿದ್ದೀನಿ. ವರ್ಷದ ಪ್ರತಿಯೊಂದು ಹಬ್ಬಕ್ಕೆ ಜಿಲ್ಲೆಗೆ ಬಂದಿದ್ದೇನೆ. ಕೈಮುಗಿದು ಹೇಳ್ತೀನಿ ನಾನು ಮಹಾರಾಷ್ಟ್ರಿಗನಲ್ಲ ನಾನು ಕರ್ನಾಟಕದವರು, ಬೀದರ್ ಜಿಲ್ಲೆಯ ಔರಾದ್ ತಾಲೂಕಿನವನು ಎಂದರು. ಆದರೆ ಶಾಸಕನಾದ ಮೇಲೆ ಪ್ರತಿಯೊಂದು ಗ್ರಾಮದಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿದ್ದೇನೆ. ಕನ್ನಡಕ್ಕೆ ಎಂದೂ ಕುಂದು ಬರದಂತೆ ಮಾಡಿದ್ದೇನೆ. ಮಾಡುತ್ತಿದ್ದೇನೆ. ನನ್ನ ರಕ್ತನಾಳಗಳೆಲ್ಲ ಕನ್ನಡಮಯ ಎಂದು ಹೇಳಲು ಬಯಸುತ್ತೇನೆ ಎಂದು ಸಚಿವ ಚವ್ಹಾಣ ಸ್ಪಷ್ಟಪಡಿಸಿದರು. 

ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸೋಮನಾಥ ಯಾಳವಾರ, ಡಾ. ಬಸವಲಿಂಗ ಪಟ್ಟದೇವರು, ಅಕ್ಕ ಅನ್ನಪೂರ್ಣ, ಜಿಪಂ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಶಾಸಕ ರಹೀಮ್ ಖಾನ್, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನಶೆಟ್ಟಿ, ಚಂದ್ರಕಾಂತ ಹೆಬ್ಬಾಳೆ ಮತ್ತಿತರರು ಇದ್ದರು. ಡಾ. ಬಸವರಾಜ ಬಲ್ಲೂರ್ ನಿರೂಪಿಸಿ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರೆ ಟಿಎಂ ಮಚ್ಚೆ ವಂದಿಸಿದರು.
 

click me!