Mandya : ಮೈಷುಗರ್‌ ಎಂಡಿ ದಿಢೀರ್‌ ಬದಲಾವಣೆ..!

By Kannadaprabha NewsFirst Published Jul 4, 2023, 8:35 AM IST
Highlights

ಮೈಷುಗರ್‌ ಕಾರ್ಖಾನೆ ಹಣೆಬರಹವೇ ಸರಿಯಾಗಿಲ್ಲವೋ ಅಥವಾ ಅಧಿಕಾರಕ್ಕೆ ಬರುವ ಸರ್ಕಾರಗಳು ಸೂತ್ರದ ಬೊಂಬೆಯಂತೆ ಕಾರ್ಖಾನೆಯನ್ನು ಆಡಿಸುತ್ತಿವೆಯೋ ಅಥವಾ ಖಾಸಗಿ ಕಾರ್ಖಾನೆಗಳ ಕೈವಾಡದಿಂದ ಮೈಷುಗರ್‌ ರೋಗಗ್ರಸ್ಥವಾಗಿಯೇ ಉಳಿದಿದೆಯೋ ಗೊತ್ತಿಲ್ಲ. ಕಾರ್ಖಾನೆಗೆ ಹಿಡಿದಿರುವ ಗ್ರಹಣ ಮಾತ್ರ ಬಿಡುತ್ತಲೇ ಇಲ್ಲ.

 ಮಂಡ್ಯ ಮಂಜುನಾಥ

 ಮಂಡ್ಯ :  ಮೈಷುಗರ್‌ ಕಾರ್ಖಾನೆ ಹಣೆಬರಹವೇ ಸರಿಯಾಗಿಲ್ಲವೋ ಅಥವಾ ಅಧಿಕಾರಕ್ಕೆ ಬರುವ ಸರ್ಕಾರಗಳು ಸೂತ್ರದ ಬೊಂಬೆಯಂತೆ ಕಾರ್ಖಾನೆಯನ್ನು ಆಡಿಸುತ್ತಿವೆಯೋ ಅಥವಾ ಖಾಸಗಿ ಕಾರ್ಖಾನೆಗಳ ಕೈವಾಡದಿಂದ ಮೈಷುಗರ್‌ ರೋಗಗ್ರಸ್ಥವಾಗಿಯೇ ಉಳಿದಿದೆಯೋ ಗೊತ್ತಿಲ್ಲ. ಕಾರ್ಖಾನೆಗೆ ಹಿಡಿದಿರುವ ಗ್ರಹಣ ಮಾತ್ರ ಬಿಡುತ್ತಲೇ ಇಲ್ಲ.

Latest Videos

ಕಾರ್ಖಾನೆ ಆರಂಭಗೊಳ್ಳುವ ಹೊತ್ತಿನಲ್ಲಿ ನಿರ್ದೇಶಕರನ್ನು ಬದಲಾವಣೆ ಮಾಡುವ ತನ್ನ ಹಳೇ ಚಾಳಿಯನ್ನು ಈಗಿನ ಸರ್ಕಾರವೂ ಮುಂದುವರೆಸಿದೆ. ಈ ಬೆಳವಣಿಗೆಯಿಂದ ತಾಂತ್ರಿಕ ಪರಿಣಿತರಿಲ್ಲದೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಹೇಗೆ ನಡೆಯಲಿದೆ ಎಂಬ ಅನುಮಾನ ಮೂಡಿಸಿದೆ.

ತಾಂತ್ರಿಕ ಪರಿಣತಿ ಹೊಂದಿದ್ದ ಅಪ್ಪ ಸಾಹೇಬ್‌ ಪಾಟೀಲ್‌ ಅವರನ್ನು ಗುತ್ತಿಗೆ ಆಧಾರದ ಮೇಲೆ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ಅವರನ್ನು ಒಂದೇ ವರ್ಷಕ್ಕೆ ಬದಲಾವಣೆ ಮಾಡಲಾಗಿದೆ. ಇವರ ಜಾಗಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಡಾ.ಎಂ.ಆರ್‌.ರವಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಹಿಂದಿನ ಮರ್ಮ ಯಾರಿಗೂ ತಿಳಿಯದಾಗಿದೆ.

ಹಣವಿಲ್ಲದಿದ್ದಾಗ ತಾಂತ್ರಿಕ ನಿಪುಣರಿದ್ದರು:

2022-23ನೇ ಸಾಲಿನಲ್ಲಿ ಮೂರು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಅಪ್ಪಾಸಾಹೇಬ್‌ ಪಾಟೀಲ್‌ ಅವರನ್ನು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಬಿಜೆಪಿ ಸರ್ಕಾರ ನೇಮಕ ಮಾಡಿಕೊಂಡಿತ್ತು. ಆ ಸಮಯದಲ್ಲಿ ಆಡಳಿತಾರೂಢ ಸರ್ಕಾರ 50 ಕೋಟಿ ರು. ಘೋಷಿಸಿದರೂ ಸಮರ್ಪಕವಾಗಿ ಕಾಲಮಿತಿಯೊಳಗೆ ಹಣ ಬಿಡುಗಡೆ ಮಾಡಲಿಲ್ಲ. ಇದರ ಪರಿಣಾಮ ಕಾರ್ಖಾನೆ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಆತುರಾತುರವಾಗಿ ನಡೆಸಲಾಯಿತು. ಜೂನ್‌ ತಿಂಗಳಲ್ಲಿ ಕಾರ್ಯಾರಂಭವಾಗಬೇಕಿದ್ದ ಕಾರ್ಖಾನೆ ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ಆರಂಭಗೊಂಡಿತು. ಅಂದು ಕೇವಲ 1,01,843 ಕಬ್ಬನ್ನು ಮಾತ್ರ ನುರಿಸಿ 35,892 ಕ್ವಿಂಟಾಲ್‌ ಸಕ್ಕರೆ ಉತ್ಪಾದನೆ ಮಾಡುವುದಕ್ಕಷ್ಟೇ ಶಕ್ತವಾಗಿತ್ತು. ಹಣವಿಲ್ಲದ ಸಮಯದಲ್ಲಿ ತಾಂತ್ರಿಕ ನಿಪುಣರಿದ್ದರೂ ಕಾರ್ಖಾನೆಗೆ ಯಾವುದೇ ಪ್ರಯೋಜನ ದೊರಕದಂತಾಯಿತು.

ಹಣ ಸಿಕ್ಕಾಗ ತಾಂತ್ರಿಕ ಪರಿಣಿತರೇ ಇಲ್ಲ:

ಇದೀಗ ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಮೈಷುಗರ್‌ ಕಾರ್ಯಾರಂಭಕ್ಕೆ 50 ಕೋಟಿ ರು. ಹಣವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿತು. ಇದು ಹೊಸ ಸಂಚಲವನ್ನೇ ಸೃಷ್ಟಿಸಿತು. ಕಾರ್ಖಾನೆಯ ಎಲ್ಲಾ ಯಂತ್ರೋಪಕರಣಗಳನ್ನು ವ್ಯವಸ್ಥಿತವಾಗಿ ಕಬ್ಬು ಅರೆಯುವಿಕೆಗೆ ಸಜ್ಜುಗೊಳಿಸಿ ಜೂ.30ರಿಂದಲೇ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಅಷ್ಟರಲ್ಲೇ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ್‌ ಪಾಟೀಲ್‌ ಅವರನ್ನು ಬದಲಾವಣೆ ಮಾಡಿರುವುದು ವಿಪರ್ಯಾಸವಲ್ಲದೆ ಮತ್ತೇನು?

ನಿಮ್ಮ ಕೈಲಿ ಕಾರ್ಖಾನೆಯನ್ನು ಮುನ್ನಡೆಸಲಾಗದಿದ್ದರೆ ಬಿಟ್ಟುಬಿಡಿ. ನಾವು ಅಧಿಕಾರಕ್ಕೆ ಬಂದು ಕಾರ್ಖಾನೆಯನ್ನು ಮುನ್ನಡೆಸುತ್ತೇವೆ, ಹೊಸ ಕಾರ್ಖಾನೆಯನ್ನು ನಿರ್ಮಾಣ ಮಾಡುತ್ತೇವೆ ಎಂದು ಬೊಬ್ಬೆ ಹಾಕಿದ್ದ ಕಾಂಗ್ರೆಸ್ಸಿಗರು ಇದೀಗ ತಾಂತ್ರಿಕ ಪರಿಣಿತರೇ ಇಲ್ಲದೆ ಕಾರ್ಖಾನೆಯನ್ನು ಹೇಗೆ ಮುನ್ನಡೆಸುವರು. ಕಾರ್ಖಾನೆಯಲ್ಲಿ ಸಮರ್ಪಕವಾಗಿ ಕಬ್ಬು ಅರೆಯುವ ಬಗ್ಗೆ ರೈತರಲ್ಲಿ ವಿಶ್ವಾಸ ಮೂಡುವುದಾದರೂ ಹೇಗೆ? ಕಾರ್ಖಾನೆ ಸಮರ್ಥವಾಗಿ ಮುನ್ನಡೆಯಲು ರೈತರ ಸಹಕಾರ ಬೇಡುವ ಸರ್ಕಾರ ತಾಂತ್ರಿಕ ನಿಪುಣರನ್ನು ಉಳಿಸಿಕೊಂಡು ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲವೇಕೆ ಎಂಬ ಮಾತುಗಳು ರೈತ ಸಮುದಾಯದಿಂದ ಕೇಳಿಬರುತ್ತಿವೆ.

ಕಬ್ಬು ಕಟಾವು ಮಾಡುವವರಿಲ್ಲ:

ಕಾರ್ಖಾನೆಗೆ ನಿತ್ಯ 3000 ದಿಂದ 3500 ಟನ್‌ ಕಬ್ಬು ಕಟಾವು ಮಾಡುವುದಕ್ಕೆ ಮಹಾರಾಷ್ಟ್ರ, ಜಾರ್ಖಂಡ್‌, ಬೆಳಗಾವಿ, ಬಿಜಾಪುರ ಕಡೆಗಳಿಂದ 3500 ಮಂದಿ ಕಬ್ಬು ಕಟಾವು ಮಾಡುವವರನ್ನು ವ್ಯವಸ್ಥೆ ಮಾಡಿದ್ದರು. ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆಯಿಂದ ಅವರಿಗೆ ಮುಂಗಡ ಹಣ ನೀಡಿಲ್ಲ. ಆದ ಕಾರಣ ಅವರೆಲ್ಲರೂ ವಾಪಸ್‌ ಹೋಗಿದ್ದಾರೆ. ಈಗಿರುವಾಗ ಜು.6ರಿಂದ ಕಾರ್ಖಾನೆ ವಿದ್ಯುಕ್ತ ಕಾರ್ಯಾರಂಭಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಬ್ಬು ಕಟಾವುದಾರರೇ ಇಲ್ಲದಿರುವಾಗ ಕಾರ್ಖಾನೆಗೆ ನಿರಂತರವಾಗಿ ಕಬ್ಬು ಪೂರೈಕೆಯಾಗುವುದು ಕಷ್ಟಕರವೆನಿಸಿದೆ.

ಅಪ್ಪ ಸಾಹೇಬ್‌ ಪಾಟೀಲ ಅವರಿಗೆ ಕಾರ್ಖಾನೆಯ ಬಗ್ಗೆ ಪ್ರತಿ ಹಂತದ ಮಾಹಿತಿಯೂ ತಿಳಿದಿತ್ತು. ಒಮ್ಮೆ ಕಾರ್ಖಾನೆ ಕಬ್ಬು ಅರೆಯವಿಕೆ ವೇಳೆ ದೋಷಗಳೇನಾದರೂ ಕಂಡುಬಂದರೆ ಎಲ್ಲಿ ಸಮಸ್ಯೆಯಾಗಲಿದೆ ಎಂಬುದನ್ನು ಸುಲಭವಾಗಿ ಗುರುತಿಸುತ್ತಿದ್ದರು. ಶೀಘ್ರಗತಿಯಲ್ಲಿ ಪರಿಹಾರ ದೊರಕಿಸುತ್ತಿದ್ದರು. ಈಗ ಅವರ ಬದಲಾವಣೆಯಾಗಿದೆ. ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭವಾದ ಬಳಿಕ ತಾಂತ್ರಿಕ ಸಮಸ್ಯೆಗಳು ಎದುರಾದರೆ ಪರಿಹಾರ ಸೂಚಿಸುವವರೇ ಇಲ್ಲದಂತಾಗಿದೆ. ಮೊದಲೇ ಕಾರ್ಖಾನೆಗೆ ಕಬ್ಬಿನ ಕೊರತೆ ಇದೆ. ಈ ಕೊರತೆಯನ್ನು ನೀಗಿಸಿಕೊಂಡು ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸಲಾಗದಿದ್ದರೆ ಸರ್ಕಾರ 50 ಕೋಟಿ ಕೊಟ್ಟರೂ ಪ್ರಯೋಜನವೇನು ಎಂಬ ಪ್ರಶ್ನೆ ಎದುರಾಗಿದೆ.

ಎಂಡಿ ಹುದ್ದೆಗೆ ಚಾಮರಾಜನಗರ ಆಕ್ಸಿಜನ್‌ ಪ್ರಕರಣದಲ್ಲಿ ಸಿಲುಕಿದ್ದ ಡಿಸಿ

ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೂತನವಾಗಿ ನೇಮಕಗೊಂಡಿರುವವರು ಡಾ.ಎಂ.ಆರ್‌.ರವಿ ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿಯಾಗಿದ್ದವರು. ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ 36 ಜನರು ಮೃತಪಟ್ಟಪ್ರಕರಣದಲ್ಲಿ ಸಿಲುಕಿದ್ದವರು. ಕಳೆದೊಂದು ವರ್ಷದಿಂದ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸಿರಲಿಲ್ಲ. ಇದೀಗ ದಿಢೀರನೆ ಮೈಷುಗರ್‌ ಎಂಡಿ ಹುದ್ದೆಗೆ ನೇಮಿಸಿರುವುದು ಅಚ್ಚರಿ ಮೂಡಿಸಿದೆ. ಕಳೆದ ಬುಧವಾರದಂದೇ ಬೆಂಗಳೂರು ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಪ್ಪ ಸಾಹೇಬ್‌ ಪಾಟೀಲ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಇಲ್ಲಿಯವರೆಗೂ ಮಂಡ್ಯ ಕಾರ್ಖಾನೆಯತ್ತ ಅವರು ಮುಖ ಮಾಡಿಲ್ಲವೆಂದು ತಿಳಿದುಬಂದಿದೆ.

ಎಂಡಿ ಬದಲಾವಣೆ ಸಚಿವರಿಗೇ ಗೊತ್ತಿಲ್ಲ..!

ಮೈಷುಗರ್‌ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆ ಮಾಡಿರುವ ವಿಚಾರ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಅವರಿಗಾಗಲೀ, ಅಷ್ಟೇ ಏಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರಿಗೂ ಗೊತ್ತಿರಲಿಲ್ಲವೆಂದು ತಿಳಿದುಬಂದಿದೆ. ಜು.30ಕ್ಕೆ ಕಬ್ಬು ಅರೆಯುವಿಕೆ ಆರಂಭಿಸಲು ಆಹ್ವಾನಿಸದಿರುವ ಬಗ್ಗೆ ವಿಚಾರಿಸಲು ಅಪ್ಪಸಾಹೇಬ್‌ ಪಾಟೀಲ ಅವರಿಗೆ ಸಚಿವರು ದೂರವಾಣಿ ಕರೆ ಮಾಡಿದಾಗ, ನಾನು ಬದಲಾವಣೆಯಾಗಿದ್ದೇನೆ. ಹೊಸ ಎಂಡಿಯವರು ಬಂದಿದ್ದಾರೆ ಎಂದು ತಿಳಿಸಿದಾಗಷ್ಟೇ ಎಂಡಿ ಬದಲಾಗಿರುವುದು ಗೊತ್ತಾಗಿದೆ. ಇದರ ನಡುವೆಯೂ ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಕಾರ್ಖಾನೆಯ ತಾಂತ್ರಿಕ ನಿರ್ದೇಶಕರಾಗಿರುವಂತೆ ಅಪ್ಪ ಸಾಹೇಬ್‌ ಪಾಟೀಲ್‌ ಅವರಲ್ಲಿ ಮನವಿ ಮಾಡಿದ್ದಾರೆ. ಆದರೆ, ಅದಕ್ಕಿನ್ನೂ ಪಾಟೀಲ್‌ ಅವರು ಒಪ್ಪಿಲ್ಲವೆಂದು ತಿಳಿದುಬಂದಿದೆ.

ಕಾರ್ಖಾನೆಯೊಳಗೆ ತಾಂತ್ರಿಕಜ್ಞಾನವುಳ್ಳ ಎಂಡಿ ಅವರನ್ನು ಬದಲಾವಣೆ ಮಾಡಿ ಐಎಎಸ್‌ ಅಧಿಕಾರಿಯನ್ನು ಸರ್ಕಾರ ನೇಮಿಸಿದೆ, ಕಳೆದೊಂದು ವಾರದಿಂದ ಯಾವುದೇ ಅಧಿಕಾರಿಗಳು ಕಾರ್ಖಾನೆಯತ್ತ ಸುಳಿದಿಲ್ಲ, ಆಡಳಿತಾಧಿಕಾರಿನೂ ಇಲ್ಲ, ತಾಂತ್ರಿಕಜ್ಞಾನ ಉಳ್ಳವರೂ ಇಲ್ಲ. ನೂತವಾಗಿ ನೇಮಕಗೊಂಡಿರುವ ಎಂಡಿ ಕೂಡ ಬಂದಿಲ್ಲ. ಮೈಷುಗರ್‌ ವ್ಯಾಪ್ತಿಯ ಕಬ್ಬು ಬೇರೆ ಬೇರೆ ಖಾಸಗಿ ಕಾರ್ಖಾನೆಗಳಿಗೆ ಸರಬರಾಜಾಗುತ್ತಿದೆ. ಇದರಿಂದ ಕಬ್ಬು ಕೊರತೆಯಾಗುವ ಆತಂಕವಿದೆ.

- ಸುನಂದಾ ಜಯರಾಂ, ರೈತ ನಾಯಕಿ

ಕಾರ್ಖಾನೆಯಲ್ಲಿ ತಾಂತ್ರಿಕ ನಿಪುಣರಿಲ್ಲದಿದ್ದರೆ ಎಷ್ಟುಕೋಟಿ ಕೊಟ್ಟು ಏನು ಪ್ರಯೋಜನ. ಅಪ್ಪ ಸಾಹೇಬ್‌ ಪಾಟೀಲ್‌ ಅವರನ್ನು ದಿಢೀರ್‌ ಬದಲಾವಣೆ ಮಾಡುವ ಅಗತ್ಯವೇನಿತ್ತು. ಕಾರ್ಖಾನೆ ಆರಂಭದ ಸಮಯದಲ್ಲಿ ಈ ಬದಲಾವಣೆ ಬೆಳವಣಿಗೆ ಸರಿಯಾಗಿಲ್ಲ. ತಾಂತ್ರಿಕ ನೈಪುಣ್ಯತೆ ಇರುವವರನ್ನು ತೆಗೆದು ಐಎಎಸ್‌ ಅಧಿಕಾರಿಯನ್ನು ತಂದು ಕೂರಿಸಿದರೆ ಉಪಯೋಗವಿಲ್ಲ. ಕಬ್ಬು ಅರೆಯುವಿಕೆ ಶುರುವಾಗಿ ಸಮಸ್ಯೆಗಳು ಎದುರಾದರೆ ಪರಿಹರಿಸುವವರು ಯಾರು?

- ಎಸ್‌.ಕೃಷ್ಣ, ಅಧ್ಯಕ್ಷರು, ಮೈಷುಗರ್‌ ಒಪ್ಪಿಗೆದಾರರ ಸಂಘ

click me!