ಕಾಳಿ ತಟದಲ್ಲಿ ಕಾಪ್ರಿ ದೇವರ ಉತ್ಸವ: ಮದ್ಯ, ಸಿಗರೇಟು ನೈವೇದ್ಯ ಪಡೆಯುವ ದೇವರ ವಿಶಿಷ್ಟ ಜಾತ್ರೆ!

By Suvarna News  |  First Published Mar 27, 2022, 11:57 PM IST

ದೇವಳಗಳಿಗೆ ಹೂವು, ಹಣ್ಣು ಕಾಯಿ ಅರ್ಪಿಸೋದು ಸಾಮಾನ್ಯ. ಆದರೆ, ಇಲ್ಲೊಂದು ದೇವಳದಲ್ಲಿ ಬೀಡಿ, ಸಿಗರೇಟು ಹಾಗೂ ಹೆಂಡವೇ ದೇವರಿಗೆ ಅರ್ಪಣೆ. ಹಿಂದೂಗಳು ಮಾತ್ರವಲ್ಲದೇ, ಮುಸ್ಲಿಂ, ಕ್ರಿಶ್ಚಿಯನ್ನರು ಕೂಡಾ ಈ ದೇವಳಕ್ಕೆ ಭೇಟಿ ನೀಡಿ ಬೆಲ್ಲ, ಸಕ್ಕರೆ ಹಾಗೂ ಕ್ಯಾಂಡಲ್‌ಗಳನ್ನು ಹಚ್ಚಿ ಪ್ರಾರ್ಥನೆ ಮಾಡಿ ತೆರಳುತ್ತಾರೆ.


ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಮಾ.27): ದೇವಳಗಳಿಗೆ ಹೂವು, ಹಣ್ಣು ಕಾಯಿ ಅರ್ಪಿಸೋದು ಸಾಮಾನ್ಯ. ಆದರೆ, ಇಲ್ಲೊಂದು ದೇವಳದಲ್ಲಿ ಬೀಡಿ, ಸಿಗರೇಟು ಹಾಗೂ ಹೆಂಡವೇ ದೇವರಿಗೆ ಅರ್ಪಣೆ. ಹಿಂದೂಗಳು ಮಾತ್ರವಲ್ಲದೇ, ಮುಸ್ಲಿಂ, ಕ್ರಿಶ್ಚಿಯನ್ನರು ಕೂಡಾ ಈ ದೇವಳಕ್ಕೆ ಭೇಟಿ ನೀಡಿ ಬೆಲ್ಲ, ಸಕ್ಕರೆ ಹಾಗೂ ಕ್ಯಾಂಡಲ್‌ಗಳನ್ನು ಹಚ್ಚಿ ಪ್ರಾರ್ಥನೆ ಮಾಡಿ ತೆರಳುತ್ತಾರೆ. ಅಲ್ಲದೇ, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ. ಅಷ್ಟಕ್ಕೂ ಈ ದೇವಸ್ಥಾನ ಇರೋದು ಎಲ್ಲಿ ಅಂತೀರಾ.. ಈ ಸ್ಟೋರಿ ನೋಡಿ... 

Latest Videos

undefined

ಒಂದೆಡೆ ಸರತಿ ಸಾಲಿನಲ್ಲಿ ನಿಂತು ಕೋಳಿ, ಹೆಂಡ, ಬೀಡಿ, ಹೂವು ಹಣ್ಣುಗಳನ್ನು ಅರ್ಪಿಸಲು ಭಕ್ತಿಯಿಂದ ನಿಂತಿರುವ ಜನರು. ಮತ್ತೊಂದೆಡೆ ಧಗಧಗ ಉರಿಯುವ ಬೆಂಕಿಯ ಕುಂಡಕ್ಕೆ ತೆಂಗಿನ ಕಾಯಿ, ಬೀಡಿ ಹಾಗೂ ಕುಂಡದ ಸುತ್ತಾ ಅಗರಬತ್ತಿ, ಕ್ಯಾಂಡಲ್ ಹಚ್ಚುತ್ತಿರುವ ಭಕ್ತರು.‌ ಇನ್ನೊಂದೆಡೆ ದೇವರ ದರ್ಶನ ಪಡೆಯುತ್ತಾ ತಮ್ಮ ಕಷ್ಟ ಕಾರ್ಪಣ್ಯಗಳನ್ನು ತೋಡಿಕೊಳ್ಳುತ್ತಿರುವ ಜನ ಸಮೂಹ. ಈ ಎಲ್ಲಾ ದೃಶ್ಯಗಳು ಕಂಡುಬಂದದ್ದು ಕಾರವಾರ ನಗರದ ಕಾಳಿ ನದಿ ಸಂಗಮದಲ್ಲಿರುವ ಕಾಪ್ರಿ ದೇವರ ಜಾತ್ರಾ ಮಹೋತ್ಸವದಲ್ಲಿ. ಕೊರೊನಾ ಕಾಟದಿಂದ ಎರಡು ವರ್ಷಗಳ ಕಾಲ ಬಣ್ಣ ಕಳೆದುಕೊಂಡಿದ್ದ ಖಾಪ್ರಿ ಜಾತ್ರೆ, ಈ ಬಾರಿಯಂತೂ ಎರಡು ದಿನ ಸಂಭ್ರಮದಿಂದ ಜರಗಿದೆ. ಕಾರವಾರ ಮಾತ್ರವಲ್ಲದೇ ಹೊರರಾಜ್ಯಗಳಾದ ಮಹಾರಾಷ್ಟ್ರ,ಗೋವಾ ಜನರು ಕೂಡಾ ಈ ಆಗಮಿಸಿ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ. 

Chikkamagaluru: ಘಮ್ಮಿಡುವ ಕಾಫಿ ತೋಟದ ಹಾದಿಯಲ್ಲಿ ಅರಳಿ ನಿಂತಿರುವ ಹೂ

ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಖಾಪ್ರಿ ದೇವರ ಜಾತ್ರಾ ಮಹೋತ್ಸವದ ಹಿನ್ನೆಲೆ ನೂರಾರು ಭಕ್ತರು ದೇವರಿಗೆ ಮದ್ಯ ನೈವೇದ್ಯ ಮಾಡಿ ಸಿಗರೇಟಿನ ಆರತಿ ಮಾಡುವ ಮೂಲಕವೂ ವಿಶಿಷ್ಟ ರಿತಿಯಲ್ಲಿ ಪೂಜೆ ಸಲ್ಲಿಸಿದ್ದಾರೆ.  ಮಕ್ಕಳಾಗದೇ ಇದ್ದ ದಂಪತಿಗಳು ಮಕ್ಕಳಾಗುವಂತೆ ಇಲ್ಲಿ ಹರಕೆ ಕಟ್ಟಿಕೊಂಡರೆ, ಇನ್ನು ಕೆಲವರು ಅನಾರೋಗ್ಯ ಸಮಸ್ಯೆ ಪರಿಹಾರಕ್ಕಾಗಿ, ಕುಟುಂಬದ ನೆಮ್ಮದಿಗಾಗಿ ಹರಕೆ ಕಟ್ಟಿಕೊಂಡು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಕಳೆದುಕೊಳ್ಳುತ್ತಾರೆ‌‌. ತಮ್ಮ ಇಷ್ಟಾರ್ಥ ಪ್ರಾಪ್ತಿಯಾದ ಬಳಿಕ ಕ್ಷೇತ್ರಕ್ಕೆ ಕೋಳಿ, ಕುರಿ, ಹೆಂಡ, ಸಿಗರೇಟ್, ಬೀಡಿಗಳು ಸೇರಿದಂತೆ ಹಣ್ಣು ಕಾಯಿ ಅರ್ಪಿಸುತ್ತಾರೆ‌‌. ಅಲ್ಲದೇ, ಮಕ್ಕಳಿಗೆ ತುಲಾಭಾರ ನೆರವೇರಿಸೋದು ಕೂಡಾ ನಡೆದುಕೊಂಡು ಬಂದಿದೆ. 

ಇನ್ನು ಖಾಪ್ರಿ ದೇವರಿಗೆ ತನ್ನದೇ ಆದ ಇತಿಹಾಸವಿದೆ. ಒಂದು ಕಥೆಯ ಪ್ರಕಾರ, ಆಫ್ರಿಕಾ ಮೂಲದ‌ ವ್ಯಕ್ತಿಯೋರ್ವ 300 ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನು ತಂದು ಪೂಜಿಸುತ್ತಿದ್ದನಂತೆ. ಅದಾದ ನಂತರ ಆತ ಕಣ್ಮರೆಯಾಗಿದ್ದು, ಇಲ್ಲಿನ ಪರಸಪ್ಪ ಮನೆತನದವರು ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ. ಬಳಿಕ ಕನಸ್ಸಿನಲ್ಲಿ ದೇವರು ಬಂದು ತನಗೆ ಕೋಳಿ, ಸಾರಾಯಿ ನೈವೇದ್ಯ ಮಾಡು ಅಂತಾ ಕೇಳಿಕೊಂಡಿದ್ದರಿಂದ ದೇವಸ್ಥಾನವನ್ನು ಕಟ್ಟಿ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ. ಇನ್ನೊಂದು ಕಥೆಯ ಪ್ರಕಾರ,‌ ಈಸ್ಟ್ ಇಂಡಿಯಾ ಕಂಪೆನಿ ಆಳ್ವಿಕೆ ಸಮಯದಲ್ಲಿ ಕಾಪ್ರಿ ಎಂಬ ವಿದೇಶಿ ವ್ಯಕ್ತಿ ಗುಲಾಮನಾಗಿ ಭಾರತಕ್ಕೆ ಬಂದಿದ್ದನಂತೆ. ಆತ ಬ್ರಿಟಿಷರಿಂದ ಎಲ್ಲಾ ರೀತಿಯ ಕಷ್ಟ, ತೊಂದರೆಗಳನ್ನು ಸಹಿಸಿ ಅವುಗಳನ್ನು ನಿವಾರಿಸಿ ಗೆದ್ದು ಜೀವಿಸಿದನು. 

Chamarajanagar: ಪಡ್ನಾ-ಲಿಖ್ನಾ ಅಭಿಯಾನದಲ್ಲಿ ಭಾರೀ ಗೋಲ್‌ಮಾಲ್

ಕಾರವಾರ ಭಾಗದಲ್ಲಿ ಬಡವರಿಗೆ ಸಹಾಯ ಮಾಡುತ್ತಾ ಅವರ ಸಂಕಷ್ಟ ನಿವಾರಿಸುತ್ತಿದ್ದನಂತೆ. ಈತನಿಗೆ ಬೀಡಿ, ಸಿಗರೇಟು, ಕೋಳಿ, ಕುರಿ ಮಾಂಸ ಬಲು ಪ್ರೀತಿ. ಹೀಗಾಗಿ ಈತನ ಬಳಿ ಸಂಕಷ್ಟ ತೋಡಿಕೊಂಡು ಬರುವವರು ಈತನಿಗೆ ಕಾಣಿಕೆಯಾಗಿ ಇವುಗಳನ್ನು ನೀಡುತಿದ್ದರು. ಆತ ಕ್ರೈಸ್ತ ಧರ್ಮದವನಾದರೂ ಕೂಡ ಎಲ್ಲಾ ಧರ್ಮವನ್ನು ಅನುಸರಿಸುತ್ತಿದ್ದನಂತೆ. ಅವನಲ್ಲಿ ದೈವೀ ಶಕ್ತಿಯಿತ್ತು ಎನ್ನುವ ನಂಬಿಕೆಯಿತ್ತು. ಹಾಗಾಗಿ ಸುತ್ತಮುತ್ತಲಿನ ಜನರು ದೇವರಂತೆ ಆತನನ್ನು ಕಾಣುತ್ತಿದ್ದರು. ಆತ ತನ್ನ ಭಕ್ತರಿಗೆ ದೇವಸ್ಥಾನವನ್ನು ಕಟ್ಟಿಸುವಂತೆ ಕೇಳಿಕೊಂಡರಂತೆ. ಅದರಂತೆ ದೇವಸ್ಥಾನ ಕಟ್ಟಿಸಲಾಯಿತು ಎನ್ನಲಾಗುತ್ತದೆ. ಮತ್ತೊಂದು ಕಥೆಯಂತೆ, ಸಂತನೋರ್ವ ಈ ಕ್ಷೇತ್ರಕ್ಕೆ ಬಂದು ದೇವರನ್ನು ಪ್ರತಿಷ್ಠಾಪಿಸಿದ್ದ. ಅದು ಕಾಲಾನಂತರ ಪರಸಪ್ಪ ಮನೆತನದವರಿಂದ ಮರು ಪ್ರತಿಷ್ಠಾಪಿಸಲ್ಪಟ್ಟಿದೆ. 

ಒಟ್ಟಿ‌ನಲ್ಲಿ‌ ಕಾರವಾರದಲ್ಲಿರುವ ಈ ವಿಶಿಷ್ಟ ದೇವಳವು ರಾಜ್ಯದಲ್ಲಿ ಮಾತ್ರವಲ್ಲದೇ, ಹೊರ ರಾಜ್ಯದಲ್ಲೂ ಭಾರೀ ಖ್ಯಾತಿ ಪಡೆದಿದೆ. ಹೆಂಡ, ಸಾರಾಯಿ, ಬೀಡಿ, ಸಿಗರೇಟನ್ನೇ ಭಕ್ತರಿಂದ ಪ್ರೀತಿಯ ರೂಪದಲ್ಲಿ ಪಡೆಯುವ ಈ ದೇವರು ಜನರ ಕಷ್ಟ ಕಾರ್ಪಣ್ಯಗಳನ್ನು ಕಳೆದು ಇಷ್ಟಾರ್ಥ ನೆರವೇರಿಸುತ್ತಾನೆ. ಇದರಿಂದಲೇ ಕಾರವಾರ, ಗೋವಾ ಹಾಗೂ ಮಹಾರಾಷ್ಟ್ರದ ಜನರಿಗೆ ಖಾಪ್ರಿ ದೇವರು ಬಹಳಷ್ಟು ಪ್ರಿಯ.

click me!