ಇದು ಯಾವುದೇ ವ್ಯಕ್ತಿಯ ಇಲ್ಲವೇ ಬಣದ ಪರವಾಗಿ ಸಮಾವೇಶ ನಡೆಸದೆ ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಿ ಹೊಸ ಹುರುಪು ತುಂಬಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ ಸಭೆಯಲ್ಲಿದ್ದ ಮುಖಂಡರು
ಬೆಂಗಳೂರು(ನ.28): ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ತೀವ್ರಗೊಳ್ಳುತ್ತಿದೆ. ವಕ್ಫ್ ನೋಟಿಸ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಜಾಗೃತಿ ಅಭಿಯಾನಕ್ಕೆ ತಿರುಗೇಟು ನೀಡುವ ಸಂಬಂಧ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ಮಾಜಿ ಸಚಿವರು, ಶಾಸಕರ ಬಣ ಮುಂದಾಗಿದೆ. ಇದಕ್ಕೆ ಪೂರಕವಾಗಿ 29ರಿಂದ ರಾಜ್ಯ ಪ್ರವಾಸ ಕೈಗೊಂಡು, ಬಳಿಕ ಸಮಾವೇಶ ದಿನಾಂಕ ಅಂತಿಮಗೊಳಿಸಲಿದೆ.
ಬುಧವಾರ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಮಾಜಿ ಸಚಿವರಾಧ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್, ಮಾಜಿ ಶಾಸಕರಾದ ಸಂಪಂಗಿ, ಎಂ.ಡಿ.ಲಕ್ಷ್ಮಿ ನಾರಾಯಣ, ತಿಪ್ಪರಾಜು, ಬಸವರಾಜ್ ಸಭೆ ನಡೆಸಿ ಸಮಾವೇಶದ ಬಗ್ಗೆ ಚರ್ಚಿಸಿದರು.
ಕಮಲ ಕೋಟೆಯಲ್ಲಿ ಧಗಧಗಿಸುತ್ತಿದೆ ಭಿನ್ನಮತದ ಬೆಂಕಿ..!
ಇದು ಯಾವುದೇ ವ್ಯಕ್ತಿಯ ಇಲ್ಲವೇ ಬಣದ ಪರವಾಗಿ ಸಮಾವೇಶ ನಡೆಸದೆ ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಿ ಹೊಸ ಹುರುಪು ತುಂಬಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಸಭೆಯಲ್ಲಿದ್ದ ಮುಖಂಡರು ತಿಳಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಕೆಲವರು ಪಕ್ಷಕ್ಕಿಂತ ತಾವೇ ದೊಡ್ಡವರೆಂದು ಬಿಂಬಿಸಿಕೊಂಡು ನಾಲ್ಕಾರು ಜನರ ಮೂಲಕ ಅಭಿಯಾನ ನಡೆಸುತ್ತಿದ್ದಾರೆ. ಇದು ಪಕ್ಷದ ಹಿತಕ್ಕಿಂತ ಸ್ವಾರ್ಥವೇ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದು ಈಗ ಪಾದಯಾತ್ರೆ ನಡೆಸುತ್ತಿರುವವರಲ್ಲ. ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಂಪೂರ್ಣವಾಗಿ ಬೆಂಬಲ ಕೊಟ್ಟಿದ್ದಾರೆ. ಆದರೆ, ಉದ್ದೇಶ ಪೂರ್ವಕವಾಗಿಯೇ ಪಕ್ಷದೊಳಗೆ ಬೆಂಬಲ ಸೂಚಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಯತ್ನಾಳ್ ಹಾಗೂ ಅವರ ತಂಡದ ವಿರುದ್ದ ಕಿಡಿಕಾರಿದರು.
ನೀವು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಟೀಕಿಸಿದರೆ ಮೋದಿ, ಮತ್ತು ಅಮಿತ್ ಶಾ ಅವರನ್ನು ಟೀಕಿಸಿದಂತೆ. ಯಡಿಯೂರಪ್ಪ ರಾಜಕೀಯಕ್ಕೆ ಬಂದಾಗ ಕೆಲವರು ಇನ್ನು ಕಣ್ಣೆ ಬಿಟ್ಟಿರಲಿಲ್ಲ. ಅಂಥವರು ಕೂಡ ನಾಲ್ಕು ಮಂದಿ ಕಟ್ಟಿಕೊಂಡು ಪ್ರಚಾರಕ್ಕಾಗಿ ಅಭಿಯಾನ ಮಾಡುತ್ತಿದ್ದಾರೆ. ಇದಕ್ಕೆ ಕವಡೆ ಕಾಸಿನ ಕಿಮ್ಮಿತ್ತಿಲ್ಲ ಎಂದು ಕೆಂಡಕಾರಿದರು.
ದಾವಣಗೆರೆಯಲ್ಲಿ ನಾವು ಯಾವುದೇ ವ್ಯಕ್ತಿ ಅಥವಾ ಬಣದ ಪರವಾಗಿ ಸಮಾವೇಶ ಮಾಡುತ್ತಿಲ್ಲ. ಸಂಘಟನೆ ಪ್ರಬಲವಾಗಬೇಕು. ಕಾರ್ಯಕರ್ತರಲ್ಲಿ ನವಚೈತನ್ಯ ಮೂಡಿಸಬೇಕು ಇದುನಮ್ಮ ಉದ್ದೇಶ. ಇದಕ್ಕೆಪೂರಕವಾಗಿ ಈ ತಿಂಗಳ 29ರಂದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೈ ಗಣೇಶ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತೇವೆ. ಬಳಿಕ ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದು ಅಲ್ಲಿಂದ ಮುರು ಡೇಶ್ವರಕ್ಕೆ ತೆರಳಿ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸುತ್ತೇವೆ ಎಂದು ತಿಳಿಸಿದರು.
ಸೋಲಿಗೆ ಎದೆಗುಂದಬೇಡಿ: ಬಿಜೆಪಿ ಕಾರ್ಯಕರ್ತರಿಗೆ ವಿಜಯೇಂದ್ರ ಪತ್ರ
ಬಿ.ಸಿ. ಪಾಟೀಲ್ ಮಾತನಾಡಿ, ವಿಜಯೇಂದ್ರ ಸಾರಥ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಇದು ಕಾರ್ಯಕರ್ತರ ಒಕ್ಕೊರಲ ಅಭಿಪ್ರಾಯ. ಕೆಲವರು ಆಗಲೇ ನಮ್ಮ ಬಣದವರೇ ಮುಖ್ಯಮಂತ್ರಿಯಾಗಲಿ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರ ಆಸೆ ಈಡೆರುವುದಿಲ್ಲ ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ಹರಿಹಾಯ್ದರು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಯಡಿಯೂರಪ್ಪ ರಾಜಕಾರಣಕ್ಕೆ ಬಂದಾಗ ಇವರು ಕಣ್ಣೆ ಬಿಟ್ಟಿರಲಿಲ್ಲ. ಕೇವಲ ನಾಲೈದು ಜನರು ಸೇರಿ ರಾಜ್ಯಾಧ್ಯಕ್ಷರನ್ನು ಇಳಿಸುತ್ತೇವೆ ಎಂದು ಹೋದರೆ ಅದು ಅವರ ಭ್ರಮೆ ಎಂದು ಟೀಕಿಸಿದರು.
• ಕಟ್ಟಾಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ವಿಜಯೇಂದ್ರ ನಿಷ್ಠರ ಸಭೆ
• ರೇಣುಕಾಚಾರ್ಯ, ಬಿ.ಸಿ. ಪಾಟೀಲ್, ಎಂ.ವೈ.ಸಂಪಂಗಿ, ಎಂ.ಡಿ.ಲಕ್ಷ್ಮಿನಾರಾಯಣ, ತಿಪ್ಪರಾಜು, ಬಸವರಾಜ್ ಭಾಗಿ
• ಕಾಯಕರ್ತರಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಲು ದಾವಣಗೆರೆಯಲ್ಲಿ ಬೃಹತ್ ಸಮಾವೇಶ: ರೇಣುಕಾಚಾರ್ಯ
• ಪೂರ್ವಭಾವಿಯಾಗಿ ನಾಳೆ ಕೋಲಾರದ ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಭೇಟಿ
. ಬಳಿಕ ಮೈಸೂರಿನಲ್ಲಿ ಚಾಮುಂಡೇಶ್ವರಿ, ಮುರುಡೇಶ್ವ ರದಲ್ಲಿ ಶಿವನ ದರ್ಶನ • ನಂತರ ಎಸ್.ಎ.ರವೀಂದ್ರ ನಾಥ್ ಅಧ್ಯಕ್ಷತೆಯಲ್ಲಿ ದಾವಣ ಗೆರೆ ಸಮಾವೇಶಕ್ಕೆ ಸಿದ್ಧತೆ ಸಭೆ