ಮಳೆಗಾಲ ಸಮೀಪಿಸುತ್ತಿದ್ದಂತೆ ರೈತರು ಹೊಲ ಸಿದ್ಧಪಡಿಸಿಕೊಳ್ಳುವ ಕಾಯಕದತ್ತ ಚಿತ್ತ ನೆಟ್ಟಿದ್ದಾರೆ. ಇತ್ತ ಕೃಷಿ ಇಲಾಖೆ ಅಗತ್ಯ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ಕೃಷಿ ಇಲಾಖೆ ಮುಂಜಾಗ್ರತಾ ಕ್ರಮಕೈಗೊಂಡಿದೆ.
ನಾರಾಯಣ ಹೆಗಡೆ
ಹಾವೇರಿ (ಮೇ.20) : ಮಳೆಗಾಲ ಸಮೀಪಿಸುತ್ತಿದ್ದಂತೆ ರೈತರು ಹೊಲ ಸಿದ್ಧಪಡಿಸಿಕೊಳ್ಳುವ ಕಾಯಕದತ್ತ ಚಿತ್ತ ನೆಟ್ಟಿದ್ದಾರೆ. ಇತ್ತ ಕೃಷಿ ಇಲಾಖೆ ಅಗತ್ಯ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ಕೃಷಿ ಇಲಾಖೆ ಮುಂಜಾಗ್ರತಾ ಕ್ರಮಕೈಗೊಂಡಿದೆ.
undefined
ಚುನಾವಣಾ ಗುಂಗಿನಿಂದ ಎಲ್ಲರೂ ಹೊರಬಂದು ನಿಧಾನವಾಗಿ ತಮ್ಮ ವೃತ್ತಿಯತ್ತ ಹೆಜ್ಜೆ ಇಡುತ್ತಿದ್ದಾರೆ. ರೈತರು ಚುನಾವಣೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಬಗ್ಗೆ ಚಿಂತಿತರಾಗಿದ್ದಾರೆ. ಇನ್ನು ಎರಡು ವಾರಗಳಲ್ಲಿ ಮುಂಗಾರು ಹಂಗಾಮು ಆರಂಭಗೊಳ್ಳಲಿದ್ದು, ಅಷ್ಟರೊಳಗಾಗಿ ಭೂಮಿ ಹದಗೊಳಿಸಿ ಸಿದ್ಧಪಡಿಸುವ ಕಾರ್ಯ ಆಗಬೇಕಿದೆ. ಖಡಕ್ ಬಿಸಿಲು, ಹೆಚ್ಚಿದ ತಾಪಮಾನದಿಂದ ಹೊಲಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಮುಂಜಾನೆ, ಸಂಜೆ ವೇಳೆ ಹೊಲ ಸಿದ್ಧಪಡಿಸಿಕೊಳ್ಳುವ ಕಾರ್ಯವನ್ನು ರೈತರು ಮಾಡುತ್ತಿದ್ದಾರೆ. ಭೂಮಿ ತಂಪಾಗುವಷ್ಟುಮಳೆ ಬಂದರೆ ಜಿಲ್ಲೆಯ ರೈತರು ಬಿತ್ತನೆ ಶುರು ಮಾಡಿಬಿಡುತ್ತಾರೆ. ಕಳೆದ ವರ್ಷ ಮುಂಗಾರು ಪೂರ್ವದಲ್ಲಿ ಮಳೆ ಬಿದ್ದಾಗಲೇ ಬಿತ್ತನೆ ಮಾಡಿ ನಂತರ ಮಳೆ ಕೈಕೊಟ್ಟಿದ್ದರಿಂದ ನಷ್ಟಅನುಭವಿಸಿದ್ದ ರೈತರು ಈ ಸಲ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಆದರೆ, ಮಳೆ ಬಿದ್ದ ತಕ್ಷಣ ಒಮ್ಮೆಲೇ ಬೇಡಿಕೆ ಹೆಚ್ಚುವ ಸಾಧ್ಯತೆ ಇರುವುದರಿಂದ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆಯೂ ಸಿದ್ಧತೆ ಮಾಡಿಕೊಂಡಿದೆ.
ರೈತರಿಗೆ ಮೊದಲು ವಿಮೆ ಜಾರಿ ಮಾಡಿದ್ದು ನಮ್ಮ ಸರ್ಕಾರ: ಬಿ.ಎಸ್.ಯಡಿಯೂರಪ್ಪ
25 ಸಾವಿರ ಮೆ. ಟನ್ ಗೊಬ್ಬರ ದಾಸ್ತಾನು:
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 3.32 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಇದರಲ್ಲಿ ಮೆಕ್ಕೆಜೋಳ 2.04 ಲಕ್ಷ ಹೆಕ್ಟೇರ್, ಹತ್ತಿ 46700 ಹೆಕ್ಟೇರ್, ಭತ್ತ 33 ಸಾವಿರ ಹೆಕ್ಟೇರ್, ಶೇಂಗಾ 19519 ಹೆಕ್ಟೇರ್, ಸೋಯಾಬಿನ್ 14400 ಹೆಕ್ಟೇರ್, ಹೆಸರು, ತೊಗರಿ ಸೇರಿದಂತೆ ಸುಮಾರು 10 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಿದೆ. ಇದಕ್ಕಾಗಿ ಅಗತ್ಯ ಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಸದ್ಯಕ್ಕೆ 12845 ಟನ್ ಯೂರಿಯಾ, 115 ಟನ್ ಎಂಒಪಿ, 7625 ಟನ್ ಕಾಂಪ್ಲೆಕ್ಸ್, 354 ಟನ್ ಎಸ್‌ಎಸ್‌ಪಿ ಸೇರಿದಂತೆ ಒಟ್ಟು 25698 ಮೆ.ಟನ್ ಗೊಬ್ಬರ ದಾಸ್ತಾನಿದೆ. ರೈತರ ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಸಾಧಾರಣ ಮಳೆಯಾಗುತ್ತಿದ್ದಂತೆ ಸೋಯಾಬಿನ್ ಬಿತ್ತನೆಗೆ ರೈತರು ಮುಂದಾಗುತ್ತಾರೆ. ಆದರೆ, ಈ ರೀತಿ ಆತುರ ಮಾಡದೇ ಮಳೆ ನೋಡಿಕೊಂಡು ಬಿತ್ತನೆ ಮಾಡಬೇಕಿದೆ. ಒಂದು ವೇಳೆ ನಂತರ ಮಳೆ ವಿಳಂಬವಾದರೆ ಬಿತ್ತಿದ ಬೀಜ ಒಣಗಿ ನಷ್ಟವಾಗುವ ಸಾಧ್ಯತೆಯಿರುತ್ತದೆ. ಅದಕ್ಕಾಗಿ ಮಳೆಯಾದ ಮೇಲೆಯೇ ಬಿತ್ತನೆ ಆರಂಭಿಸಬೇಕು ಎಂಬುದು ಕೃಷಿ ಅಧಿಕಾರಿಗಳ ಸಲಹೆಯಾಗಿದೆ.
ಬಿತ್ತನೆ ಬೀಜಕ್ಕೆ ಬೇಡಿಕೆ:
ಮೆಕ್ಕೆಜೋಳ 12000 ಕ್ವಿಂಟಲ್, ಶೇಂಗಾ 3200 ಕ್ವಿಂಟಲ್, ಭತ್ತ 5 ಸಾವಿರ ಕ್ವಿಂಟಲ್, ಸೋಯಾಬಿನ್ 1400 ಕ್ವಿಂಟಲ್, ಜೋಳ 100 ಕ್ವಿಂಟಲ್, ತೊಗರಿ 900 ಕ್ವಿಂಟಲ್, ಹೆಸರು, ಸೂರ್ಯಕಾಂತಿ ಸೇರಿದಂತೆ 35660 ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆಗೆ ಇಲಾಖೆ ಬೇಡಿಕೆ ಸಲ್ಲಿಸಿದೆ. 19 ರೈತ ಸಂಪರ್ಕ ಕೇಂದ್ರ, 22 ಹೆಚ್ಚುವರಿ ಕೇಂದ್ರ, 12 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿದಂತೆ 52 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಈ ಸಲ ಕ್ಯೂಆರ್ ಕೋಡ್ ಇರುವ ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಮುಂದಾಗಿದೆ. ಅಕ್ರಮ ತಡೆದು ಪಾರದರ್ಶಕ ವ್ಯವಸ್ಥೆ ತರಲು ಈ ಕ್ರಮ ಅನುಸರಿಸಲಾಗುತ್ತಿದೆ.
ಕ್ಯೂಆರ್ ಕೋಡ್ ವ್ಯವಸ್ಥೆ
ರೈತ ಸಂಪರ್ಕ ಕೇಂದ್ರಗಳಲ್ಲಿ ಈ ಸಲ ಕ್ಯೂಆರ್ ಕೋಡ್ ಇರುವ ಬಿತ್ತನೆ ಬೀಜದ ಪ್ಯಾಕೇಟ್ ದಾಸ್ತಾನು ಮಾಡಲಾಗುತ್ತಿದೆ. ಬೀಜ ವಿತರಣೆ ಸಂದರ್ಭದಲ್ಲಿ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಿ ಸೀಡ್ ಎಂಐಎಸ್‌ನಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿದ ನಂತರವೇ ಬಿಲ್ ಜನರೇಟ್ ಆಗುತ್ತದೆ. ಆಧಾರ್ ಕಾರ್ಡ್ ಕೂಡ ಅಗತ್ಯವಿದ್ದು, ಯಾರದೋ ಹೆಸರಿನಲ್ಲಿ ಇನ್ನಾರೋ ಬೀಜ, ಗೊಬ್ಬರ ಖರೀದಿ ಮಾಡುವುದನ್ನು ತಡೆಯಲು ಈ ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ವೇಳೆ ಬೇರೆ ರೈತರ ಹೆಸರಿನಲ್ಲಿ ಬೀಜ, ಗೊಬ್ಬರ ಖರೀದಿಸಿದರೆ ಸಂಬಂಧಪಟ್ಟವರ ಆಧಾರ್ ಸಂಖ್ಯೆ ಸೀಡ್ ಇರುವ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ. ಹೀಗೆ ಬೀಜ, ಗೊಬ್ಬರ ವಿತರಣೆಗೆ ಕ್ರಮ ಕೈಗೊಂಡಿರುವುದರಿಂದ ಆರ್‌ಎಸ್‌ಕೆಗಳಲ್ಲಿ ವಿತರಣೆಗೆ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದ್ದು, ರೈತರು ತಾಳ್ಮೆಯಿಂದ ಸಹಕರಿಸಬೇಕು ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ.
ರೈತರಿಗೆ ಕಣ್ಣೀರು ತರಿಸಿದ ಸಣ್ಣೀರುಳ್ಳಿ ಕಳಪೆ ಬೀಜ: ಕಟಾವು ಅವಧಿ ಮುಗಿದರೂ ಬಾರದ ಬೆಳೆ
ಮುಂಗಾರು ಹಂಗಾಮಿಗಾಗಿ ಅಗತ್ಯ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಗೊಬ್ಬರ ದಾಸ್ತಾನಿದೆ. ಮಾರಾಟಗಾರರು ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟ ಮಾಡಬೇಕು. ಕಡ್ಡಾಯವಾಗಿ ರೈತರಿಗೆ ರಶೀದಿ ನೀಡಬೇಕು. ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕಿ