ಭಾರತದ ವೈಭೋಗವನ್ನು ಎತ್ತಿ ಹಿಡಿಯುವಲ್ಲಿ ಶಿಲ್ಪಕಲೆ ಪ್ರಮುಖ ಪಾತ್ರವಹಿಸಿದೆ. ಭಾರತ ಶಿಲ್ಪಕಲೆಗೆ ಕರ್ನಾಟಕವು ಮುಖಟಪ್ರಾಯವಾದ ಕೊಡುಗೆ ನೀಡಿದೆ. ಶಿಲ್ಪಕಲೆಯಲ್ಲಿ ಕರ್ನಾಟಕವು ಇಡೀ ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿದೆ ಎಂದರೇ ತಪ್ಪಾಗಲಾರದು. ಇದಕ್ಕೆ ಅಮರಶಿಲ್ಪಿ ಜಕಣಾಚಾರಿ ಕಾರಣ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ವೀರಣ್ಣ ಎಂ. ಅರ್ಕಸಾಲಿ ತಿಳಿಸಿದರು.
ಮೈಸೂರು (ಜ.02) : ಭಾರತದ ವೈಭೋಗವನ್ನು ಎತ್ತಿ ಹಿಡಿಯುವಲ್ಲಿ ಶಿಲ್ಪಕಲೆ ಪ್ರಮುಖ ಪಾತ್ರವಹಿಸಿದೆ. ಭಾರತ ಶಿಲ್ಪಕಲೆಗೆ ಕರ್ನಾಟಕವು ಮುಖಟಪ್ರಾಯವಾದ ಕೊಡುಗೆ ನೀಡಿದೆ. ಶಿಲ್ಪಕಲೆಯಲ್ಲಿ ಕರ್ನಾಟಕವು ಇಡೀ ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿದೆ ಎಂದರೇ ತಪ್ಪಾಗಲಾರದು. ಇದಕ್ಕೆ ಅಮರಶಿಲ್ಪಿ ಜಕಣಾಚಾರಿ ಕಾರಣ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ವೀರಣ್ಣ ಎಂ. ಅರ್ಕಸಾಲಿ ತಿಳಿಸಿದರು.
ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಹಲವಾರು ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರು ಕೆತ್ತಿದ ದೇವಾಲಯಗಳು ನಮ್ಮ ಕರ್ನಾಟಕದ ಇತಿಹಾಸವನ್ನು ಹಾಗೂ ವೈಭವವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಪ್ರಪಂಚದ ಇತಿಹಾಸದಲ್ಲಿ ಒಂದು ಸ್ಥಾನವನ್ನು ದೊರಕಿಸಿಕೊಟ್ಟಿದೆ ಎಂದರು.
undefined
ಜಕಣಾಚಾರಿ ಅವರು ಕೆತ್ತಿದ ಹಲವಾರು ಶಿಲ್ಪಗಳು ಕಂಗೊಳಿಸುತ್ತಿದ್ದು, ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳು ವಿಶೇಷವಾದಂತಹ ಶಿಲ್ಪ ಸೌಂದರ್ಯವನ್ನು, ಶಿಲ್ಪಕಲಾ ಕೌಸಲ್ಯವನ್ನು ನೀಡುತ್ತಾ ಕರ್ನಾಟಕದ ಶಿಲ್ಪಕಲಾ ಇತಿಹಾಸದಲ್ಲಿ ಒಂದು ಕೀರ್ತಿಯ ಕಳಸವಾಗಿ ಆ ಕ್ಷೇತ್ರಗಳು ಮೆರೆಯುತ್ತಿದೆ ಎಂದು ಅವರು ಹೇಳಿದರು.
ಜಕಣಾಚಾರಿ ಜೀವಿಸಿದ್ದು ಸತ್ಯ. ಅವರು ತುಮಕೂರಿನ ಕೆದಾಳು ಗ್ರಾಮದಲ್ಲಿ ನೆಲೆಸಿ ಮುಂದೆ ಹೊಯ್ಸಳರ ಆಶ್ರಯ ಪಡೆದ ಶ್ರೇಷ್ಠ ಕಲಾವಿದ ಹಾಗೂ ಶಿಲ್ಪಿ. ಅವರ ಬಗ್ಗೆ ಹಲವಾರು ಸತ್ಯಗಳು ಬೆಳಕಿಗೆ ಬರಬೇಕಿದ್ದು, ಅವರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ಆಗಬೇಕಿದೆ ಎಂದು ಅವರು ತಿಳಿಸಿದರು.
ಬೃಹದಾಕಾರದ ಮೂರ್ತಿ ಸ್ಥಾಪಿಸಿ
ಬೇಲೂರು, ಹಳೇಬೀಡು ಶಿಲ್ಪಕಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಧುನಿಕ ಜಗತ್ತಿನ ಕಲ್ಪನೆಯನ್ನು ಸಹಸ್ರಾರು ವರ್ಷಗಳ ಹಿಂದೆಯೇ ಅಂದಿನ ಕಾಲದ ಶಿಲ್ಪಿಗಳು ತಮ್ಮ ಕೆತ್ತನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಶಿಲಾಬಾಲಿಕೆಯರಿಗೆ ಕೇಶ ಸಿಂಗಾರ, ಆಭರಣ, ಪಾದರಕ್ಷೆ ಸೇರಿದಂತೆ ದೂರದೃಷ್ಟಿ, ಸೃಜನಶೀಲತೆಯಿಂದ ಕೆತ್ತಿದ್ದಾರೆ ಎಂದರು.
ಜಕಣಾಚಾರಿ ಅವರ ಹೆಸರು ಶಾಶ್ವತವಾಗಿ ಅಮರವಾಗಬೇಕೆಂದರೆ ಅವರು ನಿರ್ಮಿಸಿರುವಂತಹ ಬೇಲೂರು, ಹಳೇಬೀಡು ದೇವಸ್ಥಾನಗಳ ಮುಂಭಾಗದಲ್ಲಿ ಜಕಣಾಚಾರಿ ಅವರ ಬೃಹದಾಚಾಕದ ಕಂಚಿನ ಮೂರ್ತಿ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಈ ಹಿಂದೆಯೂ ಸಾಕಷ್ಟುಬಾರಿ ರಾಜ್ಯ ಸರ್ಕಾರಕ್ಕೆ, ಸಂಬಂಧಪಟ್ಟಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಮುಖ್ಯಮಂತ್ರಿಗಳು ಪ್ರತಿಮೆ ಸ್ಥಾಪಿಸುವ ಸಂಬಂಧ ಸೂಕ್ತ ಕ್ರಮ ವಹಿಸಬೇಕು ಎಂದು ಅವರು ಕೋರಿದರು.
ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಮೇಯರ್ ಶಿವಕುಮಾರ್ ಉದ್ಘಾಟಿಸಿದರು. ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ, ಉಪ ಮೇಯರ್ ಡಾ.ಜಿ. ರೂಪ, ಮೈಲ್ಯಾಕ್ ಅಧ್ಯಕ್ಷ ಆರ್. ರಘು, ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಜಕಣಾಚಾರಿ ಸಂಸ್ಮರಣಾ ಸಮಿತಿ ಅಧ್ಯಕ್ಷ ಕೆಂಪರಾಜು, ಸದಸ್ಯರಾದ ಪುಟ್ಟಸೋಮಾಚಾರ್, ಸುರೇಶ್, ಶಿವಕುಮಾರ್, ಮಹೇಶ್, ಮಂಜು ಇದ್ದರು.
ಮುಂದಿನ ದಿನಗಳಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಪ್ರತಿ ವರ್ಷ ಜಿಲ್ಲೆಯ 5 ಜನ ಶಿಲ್ಪಕಲಾ ಕಲಾವಿದರನ್ನು ಗುರುತಿಸಿ ಗೌರವಿಸಬೇಕು. ಆ ಮೂಲಕ ಕರ್ನಾಟಕ ಶಿಲ್ಪ ಕಲಾವಿದರಿಗೆ ಪ್ರೇರಣೆ ನೀಡುವ ಕೆಲಸ ಆಗಬೇಕಿದೆ. ಶಿಲ್ಪಕಲಾ ಕಲಾವಿದರಿಗೆ ಅಗತ್ಯವಾಗಿರುವ ಕಲ್ಲುಗಳು ಸಿಗುತ್ತಿಲ್ಲ. ಹೀಗಾಗಿ, ಕಲಾವಿದರಿಗೆ ಸರ್ಕಾರದಿಂದ ಗುರುತಿನ ಚೀಟಿ ನೀಡುವ ಮೂಲಕ ರಕ್ಷಣೆ ಕಲ್ಪಿಸಬೇಕಿದೆ. ಕಲ್ಲುಗಳನ್ನು ಸಾಗಿಸಲು ಅವಕಾಶ ಕಲ್ಪಿಸಿ ಶಿಲ್ಪಕಲೆ ಕಲಾವಿದರನ್ನು ಬೆಳೆಸಬೇಕಿದೆ.
- ವೀರಣ್ಣ ಎಂ. ಅರ್ಕಸಾಲಿ, ಮಾಜಿ ಅಧ್ಯಕ್ಷ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ
-- ಪಾಲಿಕೆಯಿಂದ ವಿಶ್ವಕರ್ಮ ಸಮುದಾಯಕ್ಕೆ ವಿಶೇಷ ಪ್ರೋತ್ಸಾಹ ಧನ: ಮೇಯರ್ ಭರವಸೆ-
ಮೈಸೂರು ಮಹಾ ನಗರಪಾಲಿಕೆಯ ಈ ಸಾಲಿನ ಬಜೆಟ್‌ನಲ್ಲಿ ವಿಶ್ವಕರ್ಮ ಸಮುದಾಯಕ್ಕೆ ವಿಶೇಷ ಪ್ರೋತ್ಸಾಹ ಧನ ಕಲ್ಪಿಸಲಾಗುವುದು ಎಂದು ಮೇಯರ್ ಶಿವಕುಮಾರ್ ಭರವಸೆ ನೀಡಿದರು. ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹೆಬ್ಬಾಳಿನ ಒಂದು ವೃತ್ತಕ್ಕೆ ಜಕಣಾಚಾರಿ ಹೆಸರನ್ನು ನಾಮಕರಣ ಮಾಡಲು ಚರ್ಚೆ ನಡೆಯುತ್ತಿದ್ದು, ಪಾಲಿಕೆ ಸಭೆಯಲ್ಲಿ ಅಧಿಕೃತವಾಗಿ ಚರ್ಚಿಸಿ ನಾಮಕರಣ ಮಾಡಲಾಗುವುದು ಎಂದು ಹೇಳಿದರು.