ನಗರಕ್ಕೆ ಮತ್ತೊಂದು ಎಲಿವೇಟೆಡ್‌ ಕಾರಿಡಾರ್‌?

By Kannadaprabha NewsFirst Published Dec 12, 2019, 11:58 AM IST
Highlights

ನಗರಕ್ಕೆ ಮತ್ತೊಂದು ಎಲಿವೇಟೆಡ್‌ ಕಾರಿಡಾರ್‌?| 102 ಕಿ.ಮೀ. ಉದ್ದದ .25,500 ಕೋಟಿ ಅಂದಾಜು ವೆಚ್ಚದ ಯೋಜನೆ| ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧಾರ| ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ ಬದಲು ಕೆ.ಆರ್‌.ಪುರದಿಂದ ಗೊರಗುಂಟೆ ಪಾಳ್ಯದ ವರೆಗೆ ಎತ್ತರಿಸಿದ ರಸ್ತೆ| ಶೀಘ್ರ ಆರಂಭ ಸಾಧ್ಯತೆ

ಲಿಂಗರಾಜು ಕೋರಾ

ಬೆಂಗಳೂರು[ಡಿ.12]: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆ ಮಾಡುವ ಉದ್ದೇಶದಿಂದ ಹಿಂದಿನ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ .25,500 ಕೋಟಿ ಅಂದಾಜು ವೆಚ್ಚದಲ್ಲಿ ರೂಪಿಸಿದ್ದ 102 ಕಿ.ಮೀ. ಉದ್ದದ ‘ಎಲಿವೇಟೆಡ್‌ ಕಾರಿಡಾರ್‌’ ಯೋಜನೆಯನ್ನು ಕೈಗೆತ್ತಿಕೊಳ್ಳಲು ಹಾಲಿ ಬಿಜೆಪಿ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಆದರೆ, ಮೈತ್ರಿ ಸರ್ಕಾರದ ಅವಧಿಯಲ್ಲಿ ಮೊದಲ ಹಂತದಲ್ಲಿ ಆರಂಭಿಸಲು ಉದ್ದೇಶಿಸಿದ್ದ ಹೆಬ್ಬಾಳದಿಂದ ಸಿಲ್‌್ಕಬೋರ್ಡ್‌ ವರೆಗಿನ (ಉತ್ತರ ದಕ್ಷಿಣ ಕಾರಿಡಾರ್‌) ಯೋಜನೆ ಬದಲು, ಕೆ.ಆರ್‌.ಪುರದಿಂದ ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯದ ವರೆಗಿನ (ಪೂರ್ವ ಪಶ್ಚಿಮ ಕಾರಿಡಾರ್‌-1) ಯೋಜನೆಯನ್ನು ಶೀಘ್ರ ಪ್ರಾರಂಭಿಸಲು ಬಿಜೆಪಿ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆಯು ಸಿದ್ಧಪಡಿರುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೂಡ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ಖಚಿತಪಡಿಸಿವೆ.

ಈ ಹಿಂದೆ ಮೈತ್ರಿ ಸರ್ಕಾರ ಹೆಬ್ಬಾಳದಿಂದ ಸಿಲ್ಕ್ಬೋರ್ಡ್‌ ಜಂಕ್ಷನ್‌ ವರೆಗಿನ .7226 ಕೋಟಿ ವೆಚ್ಚದ 26 ಕಿ.ಮೀ. ಉದ್ದದ ಉತ್ತರ ದಕ್ಷಿಣ ಕಾರಿಡಾರ್‌ ಯೋಜನೆಗೆ ಟೆಂಡರ್‌ ಆಹ್ವಾನಿಸಿತ್ತು. ಮೂರು ಪ್ಯಾಕೇಜ್‌ಗಳ ಟೆಂಡರ್‌ಗೆ ಹಲವು ಕಂಪನಿಗಳು ಬಿಡ್‌ ಮಾಡಿದ್ದವು. ಅಷ್ಟರಲ್ಲಿ ಯೋಜನೆಯ ಟೆಂಡರ್‌ ಅಂತಿಮಗೊಳಿಸದಂತೆ ಹೈಕೋರ್ಟ್‌ ತಡೆ ನೀಡಿತ್ತು. ಒಂದು ವೇಳೆ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸಿದ್ದರೂ ಕಾಮಗಾರಿ ಕೈಗೆತ್ತಿಕೊಳ್ಳಬಾರದು ಎಂದು ಸೂಚಿಸಲಾಗಿತ್ತು. ಹಾಗಾಗಿ ಯೋಜನೆ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಬಿಡ್‌ ಮಾಡಿರುವ ಕಂಪನಿಗೆ ಟೆಂಡರ್‌ ಅಂತಿಮಗೊಳಿಸಿದ್ದರೂ, ಆದೇಶ ನೀಡಿರಲಿಲ್ಲ.

ಎಲಿವೇಟೆಡ್‌ ರಸ್ತೆ ಕೈ ಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಇದೀಗ, ಬಿಜೆಪಿ ಸರ್ಕಾರ ಮೊದಲ ಹಂತದಲ್ಲಿ ಕೆ.ಆರ್‌.ಪುರದಿಂದ ಕಂಟೋನ್ಮೆಂಟ್‌ ಮಾರ್ಗವಾಗಿ ಗೊರಗುಂಟೆಪಾಳ್ಯ ವರೆಗಿನ .6245 ಕೋಟಿ ವೆಚ್ಚದ 20 ಕಿ.ಮೀ. ಉದ್ದದ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದೆ. ಇದಕ್ಕೆ ಹೊಸದಾಗಿ ಟೆಂಡರ್‌ ಕರೆಯಬೇಕಾಗುತ್ತದೆ. ಹೈಕೋರ್ಟ್‌ ತಡೆ ನೀಡಿರುವ ಟೆಂಡರ್‌ ಮಾರ್ಗ ಬೇರೆ ಆಗಿರುವುದರಿಂದ ಪ್ರಸ್ತುತ ಮತ್ತೊಂದು ಹಂತದ ಮಾರ್ಗಕ್ಕೆ ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಸಮಸ್ಯೆ ಆಗುವುದಿಲ್ಲ. ಜತೆಗೆ, ಹೈಕೋರ್ಟ್‌ಗೂ ಯೋಜನೆಯ ಮಹತ್ವ ಮನವರಿಕೆ ಮಾಡಿಕೊಟ್ಟು ಅನುಮತಿ ಪಡೆಯಲಾಗುವುದು ಎಂದು ಕೆಆರ್‌ಡಿಸಿಎಲ್‌ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೋಜನೆ ವಿರೋಧಿಸಿದ್ದ ನಾಗರಿಕ ಸಂಘಟನೆಗಳು, ಸಾರ್ವಜನಿಕರು ಮತ್ತು ಹೈಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ತಂದಿರುವ ನಮ್ಮ ಬೆಂಗಳೂರು ಫೌಂಡೇಷನ್‌ (ಎನ್‌ಬಿಎಫ್‌) ಮತ್ತು ಸಿಟಿಜನ್‌ ಆ್ಯಕ್ಷನ್‌ ಫೋರಂ ಅನ್ನು (ಸಿಎಎಫ್‌) ವಿಶ್ವಾಸಕ್ಕೆ ತೆಗೆದುಕೊಂಡು, ಯೋಜನೆಯಿಂದ ಉಂಟಾಗುವ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಸೂಕ್ತ ಪರಿಹಾರ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಹಾನಿಯಾಗದಂತೆ ಕ್ರಮ ಕೈಗೊಂಡು ಯೋಜನೆ ಆರಂಭಿಸಲು ಸರ್ಕಾರ ಆಲೋಚಿಸಿದೆ. ಈ ಸಂಬಂಧ ಎಲ್ಲ ಸಂಘಟನೆಗಳು, ಪರಿಸರ ವಾದಿಗಳು, ಸಾರ್ವಜನಿಕರ ಸಭೆ ಕರೆದು ಚರ್ಚಿಸಲು ತೀರ್ಮಾನಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.

ಯೋಜನೆಗೆ ವಿರೋಧ ವ್ಯಕ್ತವಾಗಿತ್ತು

25,500 ಕೋಟಿ ಮೊತ್ತದಲ್ಲಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ರೂಪಿಸಿ ಏಳು ಹಂತಗಳಲ್ಲಿ ಪೂರ್ಣಗೊಳಿಸಲು ಅಗತ್ಯ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಆದರೆ, ಯೋಜನೆಗೆ ನಗರದ ವಿವಿಧ ನಾಗರಿಕ ಸಂಘಟನೆಗಳು, ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿತ್ತು. ಇನ್ನು ಕೆಲ ಸಂಘಟನೆಗಳು ಕೋರ್ಟ್‌ ಮೆಟ್ಟಿಲೇರಿ ಟೆಂಡರ್‌ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದವು. ಇದು 2012ರ ಅಂಕಿ ಅಂಶಗಳ ಆಧಾರದಲ್ಲಿ ರೂಪಿಸಿರುವ ಯೋಜನೆ. ಯೋಜನೆಗೆ ಹತ್ತಾರು ವರ್ಷ ಬೇಕು. ಅಷ್ಟೊತ್ತಿಗೆ ವಾಹನಗಳ ಸಂಖ್ಯೆ ಇನ್ನಷ್ಟುಹೆಚ್ಚಾಗಲಿದೆ. ಸಂಚಾರದ ದಟ್ಟಣೆ ಸಮಸ್ಯೆಗೆ ಪರಿಹಾರವಾಗುವುದಿಲ್ಲ. ಯೋಜನೆಗಾಗಿ 3800 ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ನಗರದ ಪರಿಸರ ಮತ್ತಷ್ಟುಹಾಳಾಗಲಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಬಳಿಕ ಸರ್ಕಾರ ಯೋಜನೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೂ ಪೂರಕವಾಗಿ ಬಸ್‌ ಶೆಲ್ಟರ್‌ಗಳನ್ನು ನಿರ್ಮಿಸಿ ಪ್ರಯಾಣಿಕರು ಹತ್ತಿ ಇಳಿಯಲು ರಾರ‍ಯಂಪ್‌ಗಳನ್ನು ನಿರ್ಮಿಸುವುದಾಗಿ ಹೇಳಿತ್ತು.

ಈ ಎಲ್ಲಾ ಕಾರಣಗಳಿಂದ ನಗರದ ಸಂಚಾರ ದಟ್ಟಣೆ ನಿವಾರಣೆಗೆ ಮಹತ್ವಾಕಾಂಕ್ಷಿ ಯೋಜನೆ ಎಂದೇ ಅಂದಿನ ಸರ್ಕಾರ ಘೋಷಿಸಿದ್ದ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ನಂತರ ವಿವಾದಿತ ಯೋಜನೆಯಾಗಿ ಮಾರ್ಪಟ್ಟಿತ್ತು. ಹಾಗಾಗಿ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಕೈಬಿಡಬಹುದಾ? ಎಂಬ ಬಗ್ಗೆ ಕುತೂಹಲ ಮೂಡಿಸಿತ್ತು. ಈ ಮಧ್ಯೆ, ಯೋಜನೆಗೆ ಮೈತ್ರಿ ಸರ್ಕಾರದ ಬಜೆಟ್‌ನಲ್ಲಿ ಮೀಸಲಿಟ್ಟಿರುವ .1000 ಕೋಟಿ ಅನುದಾನದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಅಭಿವೃದ್ಧಿಗೆ ಮೀಸಲಾದ ಎಸ್‌ಸಿಪಿ-ಟಿಎಸ್‌ಪಿ ಅನುದಾನದಲ್ಲಿ 250 ಕೋಟಿ ರು. ಹಣ ತೆಗೆದು ಸೇರಿಸಲಾಗಿದೆ. ಇದಕ್ಕೆ ಕಾನೂನಲ್ಲಿ ಅವಕಾಶ ಇಲ್ಲ. ಹಾಗಾಗಿ ಸಮಗ್ರ ಚರ್ಚೆ ಮಾಡಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ಹೇಳಿದ್ದರು.

3 ಯೋಜನೆಯ ಮರು ಪರಿಶೀಲನೆ

ಇದೀಗ ಬಿಜೆಪಿ ಸರ್ಕಾರ ಕೆಲ ಸಣ್ಣಪುಟ್ಟಬದಲಾವಣೆಗಳೊಂದಿಗೆ ಕೆಆರ್‌ಡಿಸಿಎಲ್‌ ನಿಂದಲೇ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದೆ. ಈ ಸಂಬಂಧ ಬಿಎಂಆರ್‌ಸಿಎಲ್‌ನಿಂದ ಸಿದ್ಧಪಡಿಸಿರುವ ಸಮಗ್ರ ಸಾರಿಗೆ ಯೋಜನೆ(ಸಿಎಂಪಿ)ಯಲ್ಲಿ ಮೆಟ್ರೋ ಯೋಜನೆಗೆ ಅಡ್ಡಲಾಗುವ ಉತ್ತರ ದಕ್ಷಿಣ ಕಾರಿಡಾರ್‌, ಪೂರ್ವ ಪಶ್ಚಿಮ ಕಾರಿಡಾರ್‌-2 ಮತ್ತು ಹೆಚ್ಚುವರಿ ಕಾರಿಡಾರ್‌ ಯೋಜನೆಯ ಮರುಪರಿಶೀಲಿಸುವ ಅಗತ್ಯವಿದೆ ಎಂದು ಉಲ್ಲೇಖಿಸುವ ಮೂಲಕ ಈ ಮೂರು ಯೋಜನೆಗಳಲ್ಲಿ ಬದಲಾವಣೆಯ ಮುನ್ಸೂಚನೆ ನೀಡಿದೆ.

ಎಲಿವೇಟೆಡ್‌ ಕಾರಿಡಾರ್‌ ಯೋಜನೆ ವಿವರ

ಕಾರಿಡಾರ್‌ಗಳ ಹೆಸರು ಪಥಗಳ ವಿವರ ಉದ್ದ(ಕಿ.ಮೀ.ಗಳಲ್ಲಿ) ವೆಚ್ಚ (ಕೋಟಿ ರು.ಗಳಲ್ಲಿ)

ಹೆಬ್ಬಾಳ- ಸೆಂಟ್ರಲ್‌ ಸಿಲ್‌್ಕಬೋರ್ಡ್‌ (ಉತ್ತರ ದಕ್ಷಿಣ ಕಾರಿಡಾರ್‌-1) 6/4ಲೇನ್‌ 26.89 7224

ಕೆ.ಆರ್‌.ಪುರ- ಗೊರಗುಂಟೆಪಾಳ್ಯ (ಪೂರ್ವ ಪಶ್ಚಿಮ ಕಾರಿಡಾರ್‌-1) 4ಲೇನ್‌ 20.95 6245

ವರ್ತೂರು ಕೋಡಿ- ಮೈಸೂರು ರಸ್ತೆ (ಪೂರ್ವ ಪಶ್ಚಿಮ ಕಾರಿಡಾರ್‌-2) 4ಲೇನ್‌ 29.48 7,083

ಸೇಂಟ್‌ ಜಾನ್‌ ಆಸ್ಪತ್ರೆ- ಅಗರ (ಸಂಪರ್ಕ ಕಾರಿಡಾರ್‌-1) 4ಲೇನ್‌ 4.48 826

ಹಲಸೂರು- ಡಿಸೋಜ ವೃತ್ತ (ಸಂಪರ್ಕ ಕಾರಿಡಾರ್‌-2) 4ಲೇನ್‌ 2.80 733

ವೀಲರ್ಸ್‌ ಜಂಕ್ಷನ್‌- ಕಲ್ಯಾಣ ನಗರ ಹೊರ ವರ್ತುಲ ರಸ್ತೆ (ಸಂಪರ್ಕ ಕಾರಿಡಾರ್‌-3) 4ಲೇನ್‌ 6.46 1,633

ರಾಮಮೂರ್ತಿನಗರ- ಐಟಿಪಿಎಲ್‌ (ಹೆಚ್ಚುವರಿ ಕಾರಿಡಾರ್‌) 4ಲೇನ್‌ 10.99 1,731

ಬೆಂಗಳೂರು ರಸ್ತೆಗಳಿಗೆ ಎದುರಾಗಿದೆ ಮತ್ತೊಂದು ಕಂಟಕ

click me!