ಪ್ರವಾಹ ಪೀಡಿತರ ಪ್ರಾಣ ರಕ್ಷಣೆಗೆ ಒದಗಿದ ರಾವಸಾಹೇಬ, ಧನಂಜಯ

By Kannadaprabha NewsFirst Published Dec 24, 2019, 3:07 PM IST
Highlights

ಇವರು ನೀರಿಗಿಳಿದರು. ಪ್ರವಾಹಕ್ಕೆ ಎದುರಾಗಿ ಈಜಿದರು. ನಡುಗುಡ್ಡೆಯಲ್ಲಿದ್ದ ನೂರಾರು ಮಂದಿಯ ರಕ್ಷಣೆ ಮಾಡಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ರಾವಸಾಹೇಬ ಅಂಬಿ ಮತ್ತು ಅವರ ಪುತ್ರ ಧನಂಜಯ ಅಂಬಿ ಅವರ ಧೈರ್ಯ, ಶೌರ್ಯಕ್ಕೆ ಕನ್ನಡಪ್ರಭ, ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ.

ಶ್ರೀ ಶೈಲ ಮಠದ

ಬೆಂಗಳೂರು [ಡಿ.24]: ಅಂ ಬಿಗ ನಾ ನಿನ್ನ ನಂಬಿದೆ... ಎಂಬ ಪುರಂದರದಾಸರ ದಾಸವಾಣಿಯಂತೆ ಕೃಷ್ಣಾ ನದಿತೀರದ ನೂರಾರು ಗ್ರಾಮಸ್ಥರು ಅಕ್ಷರಶಃ ಅಂಬಿಗನನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಪ್ರತಿವರ್ಷ ಅತಿವೃಷ್ಟಿ, ಪ್ರವಾಹ ಬಂದ ಸಂದರ್ಭದಲ್ಲಿ ಕೃಷ್ಣಾ ನದಿತೀರದ ಗ್ರಾಮಸ್ಥರು ಹಾಗೂ ಜಾನುವಾರುಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ರಕ್ಷಣೆ ಕಾರ್ಯ ಮಾಡುತ್ತ ಬಂದಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ರಾವ ಸಾಹೇಬ ಅಂಬಿ ಮತ್ತು ಅವರ ಕುಟುಂಬದ ಸದಸ್ಯರೇ ಈ ಕಾಯಕ ಮಾಡಿಕೊಂಡು ಬಂದವರು. ಅಂಬಿ ಕುಟುಂಬಕ್ಕೆ ಗಂಗವ್ವನ (ನದಿ) ಮೇಲೆ ಅಪಾರ ನಂಬಿಕೆ. ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿದರೂ ಅಂತಹ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನ, ಜಾನುವಾರುಗಳನ್ನು ರಕ್ಷಣೆ ಮಾಡುತ್ತ ಬಂದಿದ್ದಾರೆ, ಅದು ಕೂಡ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ. ಹೀಗಾಗಿ ಇಲ್ಲಿನ ಮಂದಿಗೆ ಇವರನ್ನು ಕಂಡರೆ ಅಪಾರಪ್ರೀತಿ, ವಿಶ್ವಾಸ.

ನೆರೆ ಬಂದ ತಕ್ಷಣ ನೆರವಿಗಿಳಿದರು :  ಕೃಷ್ಣಾ ತೀರದಲ್ಲಿ ಪ್ರದೇಶದ ತೋಟದ ಮನೆಗಳತ್ತ ತಮ್ಮ ದೋಣಿಗಳ ಮೂಲಕ ಸಂಚರಿಸಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ನೆರೆ ಸಂತ್ರಸ್ತರನ್ನು ಸುರಕ್ಷಿತವಾಗಿ ತಂದು ದಡ ಮುಟ್ಟಿಸುತ್ತಾರೆ. ಇತ್ತೀಚೆಗಷ್ಟೇ ಆಗಸ್ಟ್ ತಿಂಗಳಲ್ಲಿ ಬಂದ ಪ್ರವಾಹದ ವೇಳೆ ಕೃಷ್ಣಾ ನದಿ ತೀರದ ತೋಟದ ಮನೆಗಳೆಲ್ಲವೂ ನಡುಗಡ್ಡೆಗಳಾಗಿದ್ದವು. ಜನರು ಅತಂತ್ರರಾಗಿದ್ದರು. ಜಾನುವಾರುಗಳು ಕಂಗಾಲಾಗಿದ್ದವು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿಬ್ಬಂದಿ ಸೇನಾ ರಕ್ಷಣಾ ಕಾರ್ಯಾಚರಣೆಗೆ ಮುನ್ನವೇ ಕಾರ್ಯಾಚರಣೆಗಿಳಿದ ಅಂಬಿಗರು ನೂರಾರು ಕುಟುಂಬಗಳನ್ನು ತಮ್ಮ ದೋಣಿ ಮೂಲಕ ದಡ ತಲುಪಿಸಿ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು.

ರಾವಸಾಹೇಬ ಅಂಬಿ ಆ್ಯಂಡ್ ಸನ್ ಸಾಧನೆ : ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಬಳಿಯ ಪೇರಲತೋಟದ ಪ್ರದೇಶದಲ್ಲಿ ನೂರಾರು ಜನ ವಾಸವಾಗಿದ್ದರು. ಕೃಷ್ಣಾ ನದಿ ಪ್ರವಾಹದ ನೀರು ಕಬ್ಬಿನ ಗದ್ದೆಯೊಳಗೆ ನುಗ್ಗಿತ್ತು. ನೋಡ ನೋಡುತ್ತಿದ್ದಂತೆಯೇ ಪ್ರವಾಹದ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಲೇ ಇತ್ತು. ಮನೆಗಳೆಲ್ಲವೂ ಜಲಾವೃತಗೊಂಡಿದ್ದವು. ರಸ್ತೆ ಸಂಪರ್ಕವೂ ಇರಲಿಲ್ಲ. ಜನರೆಲ್ಲರೂ ಅತಂತ್ರರಾಗಿ ಮುಂದೇನು ಎಂಬ ಚಿಂತೆಯಲ್ಲಿ ತೊಡಗಿದ್ದಾಗ ಅವರ ಪಾಲಿಗೆ ಕಾಪಾಡುವ ಶ್ರೀಕೃಷ್ಣನ ರೀತಿ ಬಂದವರೇ ರಾವಸಾಹೇಬ ಅಂಬಿ ಮತ್ತು ಅವರ ಮಗ ಧನಂಜಯ ಅಂಬಿ. ತಮ್ಮ ದೋಣಿಯನ್ನು ಜನರ ಬಳಿ ತೆಗೆದುಕೊಂಡು ಹೋಗಿ, ತೋಟದಲ್ಲಿ ವಾಸವಾಗಿದ್ದ ಜನರನ್ನು ದೋಣಿಯಲ್ಲಿ ಹತ್ತಿಸಿಕೊಂಡರು. 20 ಜನರಿದ್ದ ದೋಣಿಯನ್ನು ಇಬ್ಬರೇ ಹುಟ್ಟು ಹಾಕುತ್ತ ಸುರಕ್ಷಿತಸ್ಥಳಕ್ಕೆ ಕರೆತಂದಿದ್ದಾರೆ.

ಇವರೇ ನಮ್ಮ ಪಾಲಿನ ದೇವರು :ಅಂಬಿಗರಾದ ರಾವಸಾಹೇಬ ಅಂಬಿ ನೇತೃತ್ವದಲ್ಲಿ ಅಂಬಿಗರು ತಮ್ಮ ಪ್ರಾಣದ ಹಂಗು ತೊರೆದು ಇಡೀ ದಿನ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದರು. ಇದರಲ್ಲಿ ಬಾಣಂತಿಯರು, ಗರ್ಭಿಣಿಯರು, ಮಕ್ಕಳು, ವೃದ್ಧರು ಎಲ್ಲರೂ ಇದ್ದರು. ಇವರ ಸೇವಾ ಕಾರ್ಯವನ್ನು ಕೃಷ್ಣಾ ನದಿ ತೀರದ ಜನರು ಈಗಲೂ ಸ್ಮರಿಸುತ್ತಾರೆ. ಅವರೇ ನಮ್ಮ ಪಾಲಿನ ದೇವರು ಎಂದು ಹೆಮ್ಮೆಯಿಂದ ಹೇಳುತ್ತಾರೆ. ನದಿ ತೀರದ ಗ್ರಾಮಸ್ಥರಿಗೆ ಅಂಬಿಗರೇ ಆಪತ್ಬಾಂಧವರಾಗಿದ್ದಾರೆ. ತಮ್ಮ ಜೀವನವನ್ನೇ ಪಣಕ್ಕಿಟ್ಟು ನೂರಾರು ಜನರ ಪ್ರಾಣ ರಕ್ಷಣೆ ಮಾಡುವ ಅಂಬಿಗರಿಗೆ ಲೈಫ್ ಜಾಕೆಟ್‌ಗಳಿಲ್ಲ. ಯಾಂತ್ರಿಕ ದೋಣಿಗಳೂ ಇಲ್ಲ. ಮಾನವಚಾಲಿತ ಮರದ ಬೋಟುಗಳೇ ಅಂಬಿಗರಿಗೆ 
ಆಧಾರವಾಗಿವೆ.

ಕಷ್ಟ ಬಂದಾಗೆಲ್ಲಾ ನೆರವಿಗೆ ಹಾಜರ್ : ಈ ಹಿಂದೆಯೂ ಕೃಷ್ಣಾ ನದಿ ಪ್ರವಾಹ ಬಂದಾಗಲೆಲ್ಲ ಅಂಬಿಗರಾದ ರಾವಸಾಹೇಬ ಅಂಬಿ ಮತ್ತು ಅವರ ಮಗ ಧನಂಜಯ ಅಂಬಿ ತಮ್ಮ ಕಾರ್ಯಾಚರಣೆ ಮೂಲಕ ನದಿ ತೀರದ ಜನರ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ. ಈ ಬಾರಿ ಕೂಡ ತಮ್ಮ ದೋಣಿ ಮೂಲಕ ಕಾರ್ಯಾಚರಣೆ ಮಾಡಿ ಸುಮಾರು 400 ಜನರನ್ನು ಹಾಗೂ 400 ಜಾನುವಾರುಗಳ ಪ್ರಾಣ ರಕ್ಷಣೆ ಮಾಡಿದ್ದಾರೆ. ಇವರ ಈ ಶೌರ್ಯಕ್ಕೆ ಜನತೆ ಕೃತಜ್ಞರಾಗಿದ್ದಾರೆ. ಬದುಕುಳಿದವರು ಇವರ ಸ್ಮರಣೆ ಮಾಡುವುದನ್ನು ಮಾತ್ರ ಮರೆತಿಲ್ಲ.

ಹೋರಾಟದ ಕಿಚ್ಚು ತೋರಿದ ಸಾಧಕರಿಗೆ ಶೌರ್ಯ ಪ್ರಶಸ್ತಿ: ಚಿತ್ರ ಸಂಪುಟ..

ತಂಗಿ ರಕ್ಷಣೆಗೆ ಬಂದವರು ಊರನ್ನೇ ರಕ್ಷಿಸಿದ ರಾವಸಾಹೇಬ ಅಂಬಿ ಮೂಲತಃ ಮಹಾರಾಷ್ಟ್ರ ರಾಜ್ಯದ ರಾಜಾಪುರ ನಿವಾಸಿ. ರಾವಸಾಹೇಬ ಅವರ ಸಹೋದರಿಯನ್ನು ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ, 40 ವರ್ಷಗಳ ಹಿಂದೆಯೇ ತಂಗಿಯ ಗಂಡ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಂಗಿಯ ರಕ್ಷಣೆಗೆ ಖೇಮಲಾಪುರಕ್ಕೆ ಆಗಮಿಸಿದರು ರಾವಸಾಹೇಬ ಅಂಬಿ. ತಮ್ಮ ಬದುಕಿನ ಬಂಡಿ ಸಾಗಿಸಲು ಕಳೆದ 40 ವರ್ಷಗಳಿಂದ ಖೇಮಲಾಪುರ ಗ್ರಾಮದ ಬಳಿ ಕೃಷ್ಣಾ ನದಿ ಬಳಿ ದೋಣಿ ನಡೆಸುವ ಕಾಯಕ ಮಾಡುತ್ತ ಬಂದಿದ್ದಾರೆ. ತಂಗಿಯ ರಕ್ಷಣೆಗೆ ಆಗಮಿಸಿದ ರಾವಸಾಹೇಬ ಊರಿನ ಗ್ರಾಮಸ್ಥರನ್ನೇ ರಕ್ಷಣೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಸಲಿಗೆ ರಾಯಬಾಗ ತಾಲೂಕಿನ ಖೇಮಲಾಪುರ ಹಾಗೂ ಅಥಣಿ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ಮಧ್ಯೆ ಹರಿದಿರುವ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ಇಲ್ಲ. ನದಿಯ ಈ ದಡದಿಂದ ಆ ದಡಕ್ಕೆ ಹೋಗಲು ದೋಣಿಯೇ ಆಸರೆ. ಜಿಲ್ಲಾಡಳಿತ ಗ್ರಾಮಕ್ಕೆ ನೀಡಿರುವ ದೋಣಿಯನ್ನು ಓಡಿಸುತ್ತಾ ಜೀವನ ಸಾಗಿಸುತ್ತಿರುವ ಅಂಬಿರಾವ, ಪ್ರವಾಹ ವೇಳೆ ಜನರು ಅಷ್ಟೇ ಅಲ್ಲದೇ ಜಾನುವಾರು ಸಹ ರಕ್ಷಣೆ ಮಾಡಿದ್ದಾರೆ. ಅಂಬಿ ಕುಟುಂಬದ ಸದಸ್ಯರು ಕೃಷ್ಣಾ ನದಿ ತೀರದ ಗ್ರಾಮಸ್ಥರ ಪಾಲಿಗೆ ದೇವರು.

click me!