ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರ ಸಾವಿಗೆ ಕಳಪೆ ಐವಿ ದ್ರಾವಣ ಕಾರಣ ಎನ್ನಲಾಗಿದೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸರಬರಾಜು ಮಾಡಿದ್ದ ಗ್ಲೂಕೋಸ್‌ನಿಂದಲೇ ಸಾವು ಸಂಭವಿಸಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು (ನ.29): ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಾಲು ಸಾಲು ಬಾಣಂತಿಯರ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈಗ ಬಳ್ಳಾರಿ ಮಾತ್ರವಲ್ಲ ಇಡೀ ರಾಜ್ಯದ ಬಾಣಂತಿಯರಿಗೆ ಅಪಾಯ ಕಾದಿದ್ಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಬಾಣಂತಿಯರಿಗೆ ನೀಡಿದ್ದ ಗ್ಲೂಕೋಸ್‌ನಿಂದಲೇ ಅವರು ಸಾವು ಕಂಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ಸಾವು ಕಂಡ ನಾಲ್ವರು ಬಾಣಂತಿಯರಿಗೆ ನೀಡಲಾಗಿದ್ದ ಕಳಪೆ ಐವಿ ದ್ರಾವಣವೇ ಕಾರಣ ಎನ್ನಲಾಗಿದ್ದು, ಇದರ ಬೆನ್ನಲ್ಲಿಯೇ ಆಸ್ಪತ್ರೆಯಲ್ಲಿ ಐವಿ ಫ್ಲ್ಯೂಡ್ಸ್ ನೀಡೋದನ್ನು ಸ್ಥಗಿತ ಮಾಡಲಾಗಿದೆ. ತನಿಖಾ ವರದಿಯಲ್ಲಿ ಕಳಪೆ ದ್ರಾವಣ ಬಗ್ಗೆ ಉಲ್ಲೇಖವಾಗಿದೆ. ಕಳಪೆ ಗ್ಲೂಕೋಸ್ನಿಂದ ಬಾಣಂತಿಯರ ಸಾವಾಗಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ.
ಈ ಐವಿ ಫ್ಲ್ಯೂಡ್ಸ್‌ಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (KSMSCL) ಸರಬರಾಜು ಮಾಡಿತ್ತು. ನಾಲ್ವರು ಬಾಣಂತಿಯರಿಗೆ ಸಾವಿಗೆ ಕೆಎಸ್ಎಂಎಸ್ ಸಿಎಲ್ ನೀಡಿದ್ದ ಔಷಧಿ ಕಾರಣವೇ ಎನ್ನುವ ಅನುಮಾನ ಬಂದಿದೆ. ಸಿಜರೀನ್ ಬಳಿಕ ಐವಿ ಫ್ಲೂಯಿಡ್ ಹಾಗೂ ಎನ್‌ಎಸ್ ಎಲ್ ಗ್ಲೂಕೋಸ್ ಅನ್ನು ವೈದ್ಯರು ಹಾಕಿದ್ದರು. ಇವುಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಸರಬರಾಜು ಮಾಡಲಾಗಿತ್ತು.
ನವೆಂಬರ್ 9ರಂದು 10ಕ್ಕೂ ಹೆಚ್ಚು ಮಹಿಳೆಯರ ಸಿಸರೀನ್ ಮಾಡಲಾಗಿತ್ತು. ಹೆರಿಗೆ ಬಳಿಕ ಎಲ್ಲಾರಿಗೂ ಗ್ಲೂಕೋಸ್ ಹಾಕಲಾಗಿತ್ತು, ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗಿತ್ತು. ಮೊದಲಿಗೆ ನಂದಿನಿ ಹಾಗೂ ಲಲಿತಮ್ಮ ಸಾವಾಗಿತ್ತು. ಕೂಡಲೇ ಇನ್ನುಳಿದ ಬಾಣಂತಿಯರನ್ನ ಬಿಮ್ಸ್ ಗೆ ರವಾನೆ ಮಾಡಲಾಗಿತ್ತು. ನಂತರ ವಾರದೊಳಗೆ ಇನ್ನಿಬ್ಬರು ಬಾಣಂತಿ ರೋಜಮ್ಮ ಮುಸ್ಕಾನ್ ಸಾವಾಗಿತ್ತು.
ಬೆಳಗಾವಿ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು?, ಬಿಮ್ಸ್ ಎದುರು ಕುಟುಂಬಸ್ಥರಿಂದ ಪ್ರತಿಭಟನೆ
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಕಳಿಸಿದ್ದ ಗ್ಲೂಕೋಸ್‌ಗಳೇ ಇದಕ್ಕೆ ಕಾರಣ ಎಂದು ಅಧಿಕಾರಿ ವಲಯ ಹೇಳುತ್ತಿದೆ. ಪಶ್ಚಿಮ ಬಂಗಾಳ ಮೂಲದ ಒಂದು ಖಾಸಗಿ ಮೆಡಿಕಲ್ ಸಪ್ಲೆ ಕಂಪನಿಯಿಂದ ಈ ಗ್ಲೂಕೋಸ್ ಖರೀದಿಸಲಾಗಿತ್ತು ಎನ್ನಲಾಗಿದೆ. ಒಮ್ಮೆ ಈ ಪಶ್ಚಿಮ ಬಂಗಾಳ ಮೂಲದ ಮೆಡಿಸಿನ್ ಸಪ್ಲೆ ಕಂಪನಿಯನ್ನ ಬ್ಲಾಕ್ ಲೀಸ್ಟ್ ಗೆ ಹಾಕಲಾಗಿತ್ತು. ಈ ಕಂಪನಿ ನೀಡಿದ ಮೆಡಿಸಿನ್ ಪಡೆದು ತುಮಕೂರಿನಲ್ಲೂ ಹಲವರು ಸಾವಿಗೀಡಾಗಿದ್ದರು ಅನ್ನೋ ವರದಿಗಳಿವೆ. ಈಗ ಅದೇ ಕಂಪನಿಯ ಮೆಡಿಸಿನ್ ನಿಂದಲೇ ಬಳ್ಳಾರಿಯ ಬಾಣಂತಿ ಯರ ಸಾವಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು; ಹಸುಗೂಸು ಮಗುವಿನೊಂದಿಗೆ ಕುಟುಂಬಸ್ಥರು ಪ್ರತಿಭಟನೆ
ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಗ್ಲೂಕೋಸ್ ಸಹಿತ ಇಂಟ್ರಾವೀನಸ್ (ಐವಿ) ದ್ರಾವಣ ಕಾರಣ ಎಂದು ತನಿಖಾ ವರದಿ ಹೇಳಿದೆ. ಬಾಣಂತಿಯರ ಸಾವಿನ ಬೆನ್ನಲ್ಲಿಯೇ ಈ ಕುರಿತು ತನಿಖೆ ನಡೆಸಲು ತಂಡವನ್ನು ನೇಮಕ ಮಾಡಲಾಗಿತ್ತು. ಈ ತಂಡ ಈಗ ವರದಿಯನ್ನು ನೀಡಿದೆ. ಹೆರಿಗೆಯ ವೇಳೆ ಗರ್ಭಿಣಿಯರಿಗೆ ಶಸ್ತ್ರ ಚಿಕಿತ್ಸೆ ವೇಳೆ ನೀಡಿದ ದ್ರಾವಣ (ಗ್ಲೂಕೋಸ್) ಕಳಪೆಯಾಗಿತ್ತು ಎಂದು ವರದಿ ನೀಡಿದೆ. ದ್ರಾವಣದ ಬಗ್ಗೆ ದೂರು ಬಂದಿರುವುದರಿಂದ ಇಂಟ್ರಾವೀನಸ್ ದ್ರಾವಣ ಬಳಕೆ ಮಾಡದಂತೆ ಇಡೀ ರಾಜ್ಯಾದ್ಯಂತ ಸೂಚನೆ ನೀಡಲಾಗಿದೆ. ಗ್ಲೋಕಸ್ ಬಳಸದಂತೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ರಾಜ್ಯದ ಎಲ್ಲ ಡಿಎಚ್ ಒಗಳಿಗೆ ಪತ್ರ ಬರೆದಿದೆ.
ಶಸ್ತ್ರ ಚಿಕಿತ್ಸೆವೇಳೆ ಈ ಕಳಪೆ ಐವಿ ದ್ರಾವಣದಿಂದ ದೇಹದಲ್ಲಿ ಆಗುವ ದಿಢೀರ್ ಬದಲಾವಣೆ, ಅಡ್ಡ ಪರಿಣಾಮಗಳಿಂದ ಸಾವಾಗಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿನ ಸಾವಿನ ಬಗ್ಗೆ ತನಿಖೆ ನಡೆಸಲು ಡಾ. ಸಿ.ಸವಿತಾ, ಡಾ.ಬಿ.ಭಾಸ್ಕರ್, ಡಾ.ಟಿ.ಆರ್. ಹರ್ಷ ಅವರನ್ನು ತನಿಖೆಗೆ ನೇಮಿಸಲಾಗಿತ್ತು. ತನಿಖಾ ವರದಿಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದ್ದು, ಸರಣಿ ಸಾವಿಗೆ ಐವಿ ಗ್ರೂಕೋಸ್ ಕಾರಣ ಎಂದು ವರದಿ ನೀಡಿದೆ.
ಏನಿದು ಈ ದ್ರಾವಣ: ರೋಗಿ ಹಾಗೂ ಆಶಕ್ತರ ದೇಹದಲ್ಲಿ ನೀರು, ಸಕ್ಕರೆ ಮತ್ತು ಕ್ಷಾರ ಅಂಶ ಕಾಪಾಡಲು ರಕ್ತನಾಳದ ಮೂಲಕ ದೇಹಕ್ಕೆ ಸೇರಿಸಲಾಗುತ್ತದೆ. ನಿರ್ಜಲೀಕರಣದಿಂದ ಬಳಲುತ್ತಿರೋರಿಗೆ ಚಿಕಿತ್ಸೆ ನೀಡಲು ಈ ದ್ರಾವಣವನ್ನೇ ಬಳಸಲಾಗುತ್ತದೆ. ನೀರು, ಗೂಕೋಸ್ (ಸಕ್ಕರೆ) ಮತ್ತು ಪೋಟ್ಯಾಷಿಯಂ, ಸೋಡಿಯಂ ಮತ್ತು ಕ್ಲೋರೈಡ್ ನಂತಹ ಎಲೆಕ್ಟೋಲೈಟ್ ಗಳನ್ನು ಈ ದ್ರಾವಣ ಹೊಂದಿರುತ್ತದೆ. ವಾಕರಿಕೆ, ವಾಂತಿ ಮತ್ತು ಅತಿಸಾರ ನಿಯಂತ್ರಿಸಿ ರೋಗಿಯನ್ನು ಆರೋಗ್ಯ ಸ್ಥಿತಿಯಲ್ಲಿ ಇಡಲು ಈ ದ್ರಾವಣ ಸಹಕಾರಿಯಾಗುತ್ತದೆ.