ಕೆರೆ ಹೂಳೆತ್ತೋಕು ಕಪ್ಪ ಕಾಣಿಕೆ ಕೊಡ್ಬೇಕಾ?

By Suvarna News  |  First Published Jul 18, 2020, 2:07 PM IST

ರೈತರೇ ಸ್ವಯಂ ಪ್ರೇರಿತವಾಗಿ ಹೂಳು ಎತ್ತಿ ತಮ್ಮ ಜಮೀನಿಗೆ ಒಯ್ಯುತ್ತೇವೆಂದರೆ ಅಧಿಕಾರಿಗಳು ತಡೆ ಹಾಕುತ್ತಿರುವ ಸಂಗತಿ ಹಿರಿಯೂರು ತಾಲೂಕಿನಲ್ಲಿ ಮಾರ್ದನಿಸುತ್ತಿದೆ. ಕೆರೆ ಹೂಳು ಎತ್ತಲು ಕಪ್ಪ ಕಾಣಿಕೆ ಕೊಡಬೇಕಾ ಎಂಬ ಪ್ರಶ್ನೆ ರೈತರದ್ದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಚಿತ್ರದುರ್ಗ(ಜು.18): ಕೆರೆಯಲ್ಲಿನ ಹೂಳು ಎತ್ತಿದರೆ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆ ಮೂಲಕ ಅನುದಾನ ಕಾಯ್ದಿರಿಸಿ ಹೂಳು ತೆಗೆಸುತ್ತಿದೆ. ಆದರೆ ರೈತರೇ ಸ್ವಯಂ ಪ್ರೇರಿತವಾಗಿ ಹೂಳು ಎತ್ತಿ ತಮ್ಮ ಜಮೀನಿಗೆ ಒಯ್ಯುತ್ತೇವೆಂದರೆ ಅಧಿಕಾರಿಗಳು ತಡೆ ಹಾಕುತ್ತಿರುವ ಸಂಗತಿ ಹಿರಿಯೂರು ತಾಲೂಕಿನಲ್ಲಿ ಮಾರ್ದನಿಸುತ್ತಿದೆ. ಕೆರೆ ಹೂಳು ಎತ್ತಲು ಕಪ್ಪ ಕಾಣಿಕೆ ಕೊಡಬೇಕಾ ಎಂಬ ಪ್ರಶ್ನೆ ರೈತರದ್ದಾಗಿದೆ. ಮರಳು ದಂಧೆಯ ಸ್ವರೂಪದಲ್ಲಿಯೇ ಕೆರೆ ಹೂಳು ಎತ್ತುವ ವಿಷಯದಲ್ಲಿಯೂ ಕಮಿಷನ್‌ ದಂಧೆ ಹಿರಿಯೂರಲ್ಲಿ ತಲೆ ಎತ್ತಿದೆಯಾ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.

ಹಿರಿಯೂರು ತಾಲೂಕಿನ ಐವತ್ತಕ್ಕೂ ಹೆಚ್ಚು ಕೆರೆಗಳ ಪೈಕಿ ಶೇಕಡ 75 ರಷ್ಟುಸಣ್ಣ ನೀರಾವರಿ ಇಲಾಖೆಯ ಸುಪರ್ದಿಗೆ ಬಂದರೆ ಉಳಿದವು ಜಿಲ್ಲಾ ಪಂಚಾಯ್ತಿ ನಿರ್ವಹಣೆಗೆ ಒಳಪಡುತ್ತವೆ. ಉದ್ಯೋಗ ಖಾತ್ರಿ ಮೊದಲಾದ ಕಾಮಗಾರಿಗಳ ವಿಷಯದಲ್ಲಿ ಎಲ್ಲ ಕೆರೆಗಳಲ್ಲಿಯೂ ಹೂಳೆತ್ತಲು ಅವಕಾಶವಿದೆಯೆನ್ನುವುದು ಬಿಟ್ಟರೆ ಪ್ರಸ್ತುತ ಹಿರಿಯೂರು ತಾಲೂಕಿನ ವಿವಿಧ ಕೆರೆಗಳಲ್ಲಿ ತುಂಬಿರುವ ಹೂಳನ್ನು ರೈತರೇ ಎತ್ತಿ ತಮ್ಮ ತೋಟ, ಗದ್ದೆ, ಹೊಲಗಳಿಗೆ ತುಂಬಿಕೊಳ್ಳುತ್ತಿದ್ದಾರೆ. ಯಾವ ಉದ್ದೇಶಕ್ಕಾಗಿ ಕಂದಾಯ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದಕ್ಕೆ ತಡೆ ಒಡ್ಡುತ್ತಿದ್ದಾರೆಂಬುದು ಯಕ್ಷ ಪ್ರಶ್ನೆಯಾಗಿದೆ.

Latest Videos

undefined

ಹೂಳೆತ್ತಲು ಮುಗಿಬಿದ್ದ ರೈತರು

ಸತತ ಬರಗಾಲದಿಂದ ತತ್ತರಿಸಿ ಹೋಗಿದ್ದ ಹಿರಿಯೂರು ತಾಲೂಕಿನಲ್ಲಿ ಕಳೆದ ವರ್ಷ ಬಿದ್ದ ಉತ್ತಮ ಮಳೆಯಿಂದಾಗಿ ಹಾಗೂ ವಿವಿ ಸಾಗರಕ್ಕೆ ಭದ್ರೆ ನೀರು ಹರಿದಿದ್ದರಿಂದ ರೈತರ ಕೃಷಿ, ತೋಟಗಾರಿಕಾ ಚಟುವಟಿಕೆಗಳು ಗರಿಗೆದರಿದ್ದವು. ಕನಿಷ್ಠ ಇನ್ನೂ ಎರಡೂ ಮೂರು ವರ್ಷ ಅಂತರ್ಜಲ ಬತ್ತಲಾರದು ಎಂಬ ನಿರೀಕ್ಷೆಯಲ್ಲಿದ್ದ ರೈತರು ತಮ್ಮ ಅಡಕೆ, ತೆಂಗು, ಬಾಳೆ ಮೊದಲಾದ ತೋಟಗಳು ಹಾಗೂ ಗದ್ದೆಗಳಿಗೆ ಫಲವತ್ತಾದ ಕೆರೆಯ ಹೂಳನ್ನು ತುಂಬಿಸುತ್ತಿದ್ದಾರೆ.

ಸಾವಿರಾರು ಲೋಡ್‌ ಹೂಳನ್ನು ರೈತರು ಸ್ವಂತ ಖರ್ಚಿನಿಂದ ತೆಗೆದು ಈ ಕೆಲಸಕ್ಕೆ ಜೆಸಿಬಿ, ಟ್ರಾಕ್ಟರ್‌ ಗಳನ್ನು ಬಳಸಿಕೊಂಡಿದ್ದರು. ಈ ರೀತಿಯ ಸಾಮೂಹಿಕ ಹೂಳು ತೆಗೆಯುವಿಕೆಯಿಂದಾಗಿ ಕೆರೆಗಳು ಕೂಡ ಒಂದು ರೂಪಾಯಿ ಖರ್ಚಿಲ್ಲದೆ ಪುನಶ್ಚೇತನ ಪಡೆದುಕೊಂಡು ಹೂಳಿನ ಸಮಸ್ಯೆಯಿಂದ ಭಾಗಶಹ ಮುಕ್ತಿ ಹೊಂದುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ರೈತರಿಗೆ ಕಿರುಕುಳ

ಆದರೆ ಈಗ ಏಕಾಏಕಿ ರೈತರು ಸ್ವಂತ ಖರ್ಚಿನಿಂದ ಹೂಳೆತ್ತುವ ಕೆಲಸಕ್ಕೆ ಕಲ್ಲುಹಾಕಿರುವ ಕಂದಾಯ ಇಲಾಖೆಯ ಅಧಿಕಾರಿಗಳು ವಿನಾಕಾರಣ ರೈತರಿಗೆ ಕಿರುಕುಳ ನೀಡುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಟ್ರಾಕ್ಟರ್‌ ಹೊಂದಿಲ್ಲದ ರೈತರು ಸಹಜವಾಗಿ ಜೆಸಿಬಿ ಮತ್ತು ಟ್ರಾಕ್ಟರ್‌ ಗಳಿಗೆ ಇಂತಿಷ್ಟುಬಾಡಿಗೆ ನಿಗದಿ ಮಾಡಿದ್ದಾರೆ. ಇದೇ ಅಂಶವೇ ಕಂದಾಯ ಅಧಿಕಾರಿಗಳ ಕಣ್ಣು ಕೆಂಪಗಾಗಲು ಕಾರಣವಾಗಿದೆ ಎನ್ನಲಾಗಿದೆ. ಜೆಸಿಬಿ, ಟ್ರಾಕ್ಟರ್‌ ಮಾಲೀಕರಿಂದ ಇಂತಿಷ್ಟುಪಾಲು ತಮಗೂ ಸಲ್ಲಿಕೆಯಾಗಬೇಕೆಂಬ ಡಿಮ್ಯಾಂಡ್‌ ಇಡುತ್ತಿದ್ದಾರೆಂದು ಹೆಸರು ಹೇಳಲು ಇಚ್ಛಿಸದ ರೈತರು ದೂರುತ್ತಿದ್ದಾರೆ.

ಸರ್ಕಾರ ನರೇಗಾ ಹಣ ಹಾಗೂ ಸಣ್ಣ ನೀರಾವರಿ, ಜಿಪಂ ವಿಶೇಷ ಯೋಜನೆಯ ಹಣ ಹೂಳೆತ್ತುವುದಕ್ಕೆ ಮೀಸಲಿರುವಾಗ ಇವ್ಯಾವೂ ಬೇಡ ನಾವು ಉಚಿತವಾಗಿ ಹೂಳು ಎತ್ತಿ ಹೊಲ, ಗದ್ದೆ, ತೋಟಗಳಿಗೆ ಹೊಡೆದುಕೊಳ್ಳುತ್ತೇವೆಂದು ಮುಂದೆ ಬರುತ್ತಿರುವ ರೈತರಿಗೆ ಕಂದಾಯ ಇಲಾಖೆಯ ಅಧಿಕಾರಿಗಳ ಅರ್ಥವಿಲ್ಲದ ನಡೆ ಆಕ್ರೋಶಕ್ಕೆ ಕಾರಣವಾಗಿದೆ.

1.5 ಕೋಟಿ ರು ಕ್ರಿಯಾಯೋಜನೆ

ಸಣ್ಣ ನೀರಾವರಿ ಇಲಾಖೆಯ ವತಿಯಿಂದ ತಾಲೂಕಿನ ಇಕ್ಕನೂರು, ಧರ್ಮಪುರ, ಈಶ್ವರಗೆರೆ, ಗೂಳ್ಯ, ಸೂಗೂರು, ಭರಂಗಿರಿ, ಐಮಂಗಲ, ಮುಂಗುಸವಳ್ಳಿ, ಬೀರೆನಹಳ್ಳಿ, ಕೂನಿಕೆರೆ, ಎಂ.ಡಿ.ಕೋಟೆ ಕೆರೆಗಳಲ್ಲಿ ಹೂಳೆತ್ತಲು ಒಂದುವರೆ ಕೋಟಿ ರುಪಾಯಿ ಕ್ರಿಯಾ ಯೋಜನೆ ಸಿದ್ಧಗೊಂಡಿದ್ದು ಅನುದಾನ ಬಿಡುಗಡೆಯಾಗಿ ಕೆಲಸ ಆರಂಭಿಸಬೇಕಿದೆ. ಈ ಯೋಜನೆಗಳು ನಾಮಕೆವಾಸ್ತೆಗೆ ಹೂಳೆತ್ತಿದಂತೆ ಮಾಡಿ ಭೋಗಸ್‌ ಬಿಲ… ಮಾಡಲಾಗುತ್ತದೆಯೆಂದು ಸಾರ್ವಜನಿಕ ಆರೋಪ ಮೊದಲಿನಿಂದಲೂ ಇದೆ.

ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸುಮ್ಮನಿದ್ದರೂ ತಮ್ಮದಲ್ಲದ ಕಾರ್ಯಕ್ಷೇತ್ರಕ್ಕೆ ಹೋಗಿ ಅಧಿಕಾರ ಚಲಾಯಿಸಿ ರೈತರ ಸ್ವಯಂ ಹೂಳೆತ್ತುವ ಕೆಲಸಕ್ಕೆ ಖುದ್ಧು ಕಂದಾಯ ಅಧಿಕಾರಿಗಳೇ ಅಡ್ಡಗಾಲಾಗಿರುವುದು ಯಾವ ಕಾರಣಕ್ಕೆ ಎಂಬ ಪ್ರಶ್ನೆಗೆ ಸ್ಪಷ್ಟತೆಗಳು ಕಾಣಿಸುತ್ತಿಲ್ಲ.

ಕಳೆದ 20 ದಿನಗಳಿಂದ ಗ್ರಾಮದ ಕೆಲ ರೈತರು ತಮ್ಮ ಹೊಲ,ಗದ್ದೆ, ತೋಟಗಳಿಗೆ ಕೆರೆಯ ಹೂಳನ್ನು ಟ್ರಾಕ್ಟರುಗಳಲ್ಲಿ ತುಂಬಿ ಹೊಲಕ್ಕೆ ಹೊಡೆಸಿಕೊಂಡರು. ಈ ಹಿನ್ನೆಲೆಯಲ್ಲಿ ನಾವು ಕೂಡ ನಮ್ಮ ಹೊಲಕ್ಕೆ ಮಣ್ಣು ಹೊಡೆದುಕೊಳ್ಳಲು ಹೋದಾಗ ತಹಸೀಲ್ದಾರರು ಬಂದು ಅಡ್ಡಿ ಪಡಿಸಿದರು. ಈ ಸಂಬಂಧ ಶಾಸಕರ ಬಳಿ ದೂರು ಹೇಳಿಕೊಂಡಾಗ ಅಷ್ಟಾಗಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ - ಚೆಲುವರಾಜು, ಗೌನಹಳ್ಳಿ ಗ್ರಾಮದ ರೈತ

click me!