ಕಾರವಾರ: ತುಕ್ಕು ಹಿಡಿಯುತ್ತಿದೆ ಐಎನ್‌ಎಸ್‌ ಚಾಪೆಲ್‌ ಯುದ್ಧ ನೌಕೆ

By Kannadaprabha News  |  First Published Aug 13, 2023, 10:00 PM IST

ಡೆಕ್ಲೆಟ್‌ಗೆ ಹಾಕಿದ್ದ ಎಫ್‌ಆರ್‌ಪಿ ಕಿತ್ತುಹೋಗಿದ್ದು, ಕಬ್ಬಿಣದ ಭಾಗ ತುಕ್ಕು ಹಿಡಿಯಲು ಆರಂಭಿಸಿದೆ. ಮಳೆಯಾದಲ್ಲಿ ನೌಕೆಯ ಒಳಗೂ ಮಳೆಯ ನೀರು ಸೋರಿಕೆ ಆಗುತ್ತಿದೆ. ಹೀಗಾಗಿ ತಾಡಪಲ್‌ ಮುಚ್ಚಲಾಗಿದ್ದು, ಇದು ನೌಕೆಯ ಅಂದವನ್ನು ಕೆಡಿಸಿದೆ.


ಕಾರವಾರ(ಆ.13): ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಇರುವ ಐಎನ್‌ಎಸ್‌ ಚಾಪೆಲ್‌ ಯುದ್ಧ ನೌಕೆ ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯಲು ಆರಂಭಿಸಿದೆ. ಡೆಕ್ಲೆಟ್‌ಗೆ (ನೌಕೆಯ ಮೇಲ್ಭಾಗ) ಹಾಕಿದ್ದ ಎಫ್‌ಆರ್‌ಪಿ (ಫೈಬರ್‌ ರೇನ್‌ಫೋರ್ಸಡ್‌ ಪ್ಲಾಸ್ಟಿಕ್‌) ಕಿತ್ತುಹೋಗಿದ್ದು, ಕಬ್ಬಿಣದ ಭಾಗ ತುಕ್ಕು ಹಿಡಿಯಲು ಆರಂಭಿಸಿದೆ. ಮಳೆಯಾದಲ್ಲಿ ನೌಕೆಯ ಒಳಗೂ ಮಳೆಯ ನೀರು ಸೋರಿಕೆ ಆಗುತ್ತಿದೆ. ಹೀಗಾಗಿ ತಾಡಪಲ್‌ ಮುಚ್ಚಲಾಗಿದ್ದು, ಇದು ನೌಕೆಯ ಅಂದವನ್ನು ಕೆಡಿಸಿದೆ.

ಮಳೆ ನೀರಿನ ಸೋರಿಕೆ ತಡೆಯಲು ನೌಕೆಗಳಿಗೆ ಎಫ್‌ಆರ್‌ಪಿ ಹಾಗೂ ಜಿಆರ್‌ಪಿ (ಗ್ಲಾಸ್‌ ರೇನ್‌ಫೆäರ್ಸಡ್‌ ಪ್ಲಾಸ್ಟಿಕ್‌) ಎರಡು ತರಹದ ಕೋಟಿಂಗ್‌ ಬರುತ್ತದೆ. ಸೇನೆಯಿಂದ ನಿವೃತ್ತಿ ಪಡೆದ ನೌಕೆಗಳಿಗೆ ಸಾಮಾನ್ಯವಾಗಿ ಎಫ್‌ಆರ್‌ಪಿ ಕೋಟಿಂಗ್‌ ಹಾಗೂ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಜಿಆರ್‌ಪಿ ಕೋಟಿಂಗ್‌ ಮಾಡಲಾಗುತ್ತದೆ. ಅರಬ್ಬಿ ಸಮುದ್ರದ ಅಂಚಿನಲ್ಲೇ ಚಾಪೆಲ್‌ ಯುದ್ಧ ನೌಕೆಯನ್ನು ಇರಿಸಲಾಗಿದ್ದು, ಗಾಳಿಯಲ್ಲಿ ಲವಣಾಂಶ ಇರುವುದರಿಂದ ಕಬ್ಬಿಣದ ವಸ್ತುಗಳು ಬಹುಬೇಗನೆ ತುಕ್ಕು ಹಿಡಿಯುತ್ತದೆ.

Latest Videos

undefined

ಉತ್ತರ ಕನ್ನಡ: ಮೀನುಗಾರಿಕೆಗೆ ಕಾರ್ಮಿಕರ ಸಮಸ್ಯೆ, ಪರಿಹಾರ ನೀಡಲು ಸರ್ಕಾರಕ್ಕೆ ಮನವಿ

ಕದಂಬ ನೌಕಾನೆಲೆಯು ಚಾಪೆಲ್‌ ನೌಕೆಯ ನಿರ್ವಹಣೆ ಹೊಣೆಹೊತ್ತಿದೆ. ಆದರೆ ಈ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲ. ಪ್ರತಿನಿತ್ಯ ಅಂದಾಜು 100ಕ್ಕೂ ಅಧಿಕ ಜನರು ಈ ನೌಕೆ ವೀಕ್ಷಣೆಗೆ ಆಗಮಿಸುತ್ತಾರೆ. ಆದರೂ ಈ ನೌಕೆಯ ನಿರ್ವಹಣೆ ಬಗ್ಗೆ ಗಮನ ನೀಡುತ್ತಿಲ್ಲ. ಎಫ್‌ಆರ್‌ಪಿ ಬಳಿಕ ಸಾಮಾನ್ಯ ಬಣ್ಣ ಬಳಿಯುವುದರಿಂದ ಬಿಸಲು, ಮಳೆಗೆ ಬೇಗನೆ ಹಾಳಾಗುತ್ತದೆ. ಇದರ ಬದಲು ಎಫಾಕ್ಸಿ ಬಣ್ಣವನ್ನು ಬಳಕೆ ಮಾಡಿದರೆ ನೌಕೆಯ ಸಂರಕ್ಷಣೆಗೆ ಹೆಚ್ಚಿನ ಅನುಕೂಲ ಆಗಲಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಮಳೆ ನೀರಿನ ಸೋರಿಕೆ ಕಳೆದ ಹಲವಾರು ವರ್ಷದಿಂದ ಆಗುತ್ತಿದೆ. ಸೇನೆಯಿಂದ ನಿವೃತ್ತಿ ಹೊಂದಿದ ಈಗ ಟೊಪ್ರೋವ್‌ ಯುದ್ಧ ವಿಮಾನ ಸಂಗ್ರಹಾಲಯ ಕೂಡಾ ಕಾರವಾರದಲ್ಲಿ ಸ್ಥಾಪಿಸಲು ನೌಕಾನೆಲೆಯ ಜತೆಗೆ ಜಿಲ್ಲಾಡಳಿತ ಒಪ್ಪಂದ ಮಾಡಿಕೊಂಡಿದೆ. ಇರುವ ಒಂದು ನೌಕೆಯನ್ನೇ ನಿರ್ವಹಣೆ ಮಾಡದೇ ತುಕ್ಕು ಹಿಡಿಯುತ್ತಿದ್ದು, ಯುದ್ಧ ವಿಮಾನ ಬಂದರೆ ನಿರ್ವಹಣೆ ಸಾಧ್ಯವೇ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಇಲ್ಲಿನ ಚಾಪೆಲ್‌ ಯುದ್ಧ ನೌಕೆ ವಸ್ತು ಸಂಗ್ರಹಾಲಯದಲ್ಲಿ ನೌಕಾ ಸೈನಿಕರ ದಿನಚರಿ, ವಿವಿಧ ಶಸ್ತ್ರಾಸ್ತ್ರಗಳ ಬಗ್ಗೆ ಪ್ರತಿಕೃತಿ ಇಡಲಾಗಿದೆ. ಜತೆಗೆ ಚಾಪೆಲ್‌ ನೌಕೆಯ ಇತಿಹಾಸ, ಭಾರತೀಯ ನೌಕಾ ಸೇನೆಯಲ್ಲಿ ಚಾಪೆಲ್‌ ವಹಿಸಿದ ಪಾತ್ರ ಮೊದಲಾದವುಗಳ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಗುತ್ತದೆ. 29 ವರ್ಷಗಳ ಕಾಲ ಭಾರತೀಯ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಐಎನ್‌ಎಸ್‌ ಚಾಪೆಲ್‌ ಯುದ್ಧ ನೌಕೆಯನ್ನು 2005ರಲ್ಲಿ ಡಿ-ಕಮಿಷನ್‌ ಮಾಡಲಾಯಿತು. ನಂತರ 2006ರಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

click me!