ಹೂವಿನ ಮೇಲೆ ಕೊರೋನಾ ಕರಿನೆರಳು: ನಿಲ್ಲದ ರೈತರ ಸಂಕಷ್ಟ..!

By Kannadaprabha NewsFirst Published Apr 15, 2020, 9:57 AM IST
Highlights
ಬಾಡಿತು ಚೆಂಡು ಹೂವು ಬೆಳೆದವರ ಬದುಕು| ಹೂ ಕೃಷಿ ನಂಬಿ ಬದುಕು ನಡೆಸಿದ್ದ ರೈತರ ಮೇಲೆ ಈಗ ಕೊರೋನಾ ಕರಿನೆರಳು| ಸರ್ಕಾರದ ಲಾಕ್‌ಡೌನ್‌ನಿಂದ ಕಂಗಾಲಾದ ರೈತರು| 
 
ಸಿದ್ದಯ್ಯ ಹಿರೇಮಠ 

ಕಾಗವಾಡ(ಏ.15):
ಪುಷ್ಪ ಕೃಷಿ ಮೇಲೆ ಕೊರೋನಾ ಕರಿನೆರಳು ತೀವ್ರವಾಗಿದ್ದು, ವರ್ಷವಾದರೂ ಪುಷ್ಪ ಬೆಳೆದ ರೈತರು ಚೇತರಿಸಿಕೊಳ್ಳದಂತಹ ಪೆಟ್ಟು ಬಿದ್ದಿದೆ. ಹೂ ಕೃಷಿ ನಂಬಿ ಬದುಕು ನಡೆಸಿದ್ದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ 10 ವರ್ಷಗಳಿಂದ ಹೂವು ಬೆಳೆದು ವಿದೇಶಗಳಿಗೆ ರಫ್ತು ಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಶಿರಗುಪ್ಪಿ ರೈತರು ಪ್ರಸಕ್ತ ವರ್ಷ ಭೀಕರವಾಗಿ ಎದುರಾಗಿರುವ ಕೊರೋನಾ ಮಹಾಮಾರಿಯಿಂದ ಬಳಲುವಂತಾಗಿದೆ. ಸರ್ಕಾರದ ಲಾಕ್‌ಡೌನ್‌ನಿಂದ ತಮ್ಮ ನೂರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆದ ಹೂವಿನ ಬೆಳೆಯನ್ನು ಸಾಗಿಸದೇ ಕಂಗಾಲಾಗಿದ್ದಾರೆ.

ಶತಮಾನದ ಹಿಂದೆಯೇ ಸ್ಪ್ಯಾನಿಸ್‌ಫ್ಲ್ಯೂಗೆ ಅಥಣಿಯಲ್ಲಿ ಲಾಕ್‌ಡೌನ್‌!

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮವು ಕೃಷ್ಣಾ ನದಿಯಿಂದ ಕೇವಲ 2 ಕಿಮೀ ಅಂತರದಲ್ಲಿದೆ. ಈ ಗ್ರಾಮ ವ್ಯಾಪ್ತಿಯ ಸಂಪೂರ್ಣ ಜಮೀನು ನೀರಾವರಿ ಸೌಲಭ್ಯ ಹೊಂದಿವೆ. ಇಲ್ಲಿಯ ರೈತರು ತೋಟಗಾರಿಕೆ ಬೆಳೆಗಳನ್ನು ಹೆಚ್ಚಾಗಿ ಬೆಳೆದು ಆದಾಯ ಹೆಚ್ಚಿಸಿಕೊಂಡಿದ್ದಾರೆ. ಕಳೆದ 25 ವರ್ಷಗಳಿಂದ ಗ್ರಾಮದ ರೈತರು ದ್ರಾಕ್ಷಿ, ಪಪ್ಪಾಯಿ, ಬಾಳೆಹಣ್ಣು, ಕಲ್ಲಂಗಡಿ, ಸ್ವೀಟ್‌ಕಾರ್ನ್‌, ಪೇರು, ಡ್ರ್ಯಾಗನ್‌ ಫ್ರೂಟ್‌ ಮತ್ತು ವಿವಿಧ ಬಗೆಯ ಹೂವು ಹೀಗೆ ಅನೇಕ ಬೆಳೆ ಬೆಳೆದು, ವಿದೇಶಗಳಿಗೆ ರಫ್ತ್ತು ಮಾಡುತ್ತಿದ್ದಾರೆ.

ಸುಮಾರು 150 ಎಕರೆ ಪ್ರದೇಶದಲ್ಲಿ ಚೆಂಡು ಹೂ ಸೇರಿದಂತೆ ವಿವಿಧ ಹೂವು ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ವರ್ಷಕ್ಕೆ ಸುಮಾರು .7ರಿಂದ .8 ಕೋಟಿ ವಹಿವಾಟು ನಡೆಯುತ್ತಿದೆ. ರೈತರು ಪ್ರತಿವರ್ಷ ಪ್ರತಿ ಎಕರೆಗೆ ಲಕ್ಷಾಂತರ ರು. ಆದಾಯ ಗಳಿಸುತ್ತಿದ್ದಾರೆ. ಆದರೆ ಈಗ ಹೊರ ರಾಜ್ಯಗಳಿಗೆ ಕಳಿಸುವಂತಿಲ್ಲ. ಜಿಲ್ಲೆಯಲ್ಲಿ ದೇವಸ್ಥಾನಗಳು ಬಂದ್‌ ಆಗಿವೆ. ಸಮಾರಂಭಗಳು ನಡೆಯುತ್ತಿಲ್ಲ. ಇದರಿಂದ ಹೂವು ಮಾರಾಟವಾಗದೆ ರೈತರು ಸಂಕಷ್ಟದಲ್ಲಿದ್ದಾರೆ.

ರೈತರು ತಮ್ಮ ನೂರಾರು ಎಕರೆ ಜಮೀನಿನಲ್ಲಿ ಸ್ವಸ್ತಿಕ್‌, ಚಕ್ರಿ, ಆರೆಂಜ್‌ ಪ್ಲಸ್‌, ಓಮಿನಿ ತಳಿಯ ಚೆಂಡುಹೂವನ್ನು ಬೆಳೆದು, ಇನ್ನೇನು ಮುಂಬೈ ಮಾರುಕಟ್ಟೆಗೆ ಸಾಗಿಸುವಷ್ಟರಲ್ಲಿ ಕೊರೋನಾ ಮಹಾಮಾರಿಯ ಭೀತಿಯಿಂದ ದೇಶವು ಸಂಪೂರ್ಣ ಲಾಕ್‌ಡೌನ್‌ ಆಯಿತು. ಇದರಿಂದಾಗಿ ಸಾವಿರಾರು ಕ್ವಿಂಟಲ್‌ ಹೂ ಹೊಲದಲ್ಲೇ ಬಾಡಿತು.

ಪ್ರತಿ ಎಕರೆಗೆ ಸಸಿಗಳು, ಗೊಬ್ಬರ, ಕ್ರಿಮಿನಾಶಕ ಹೀಗೆ 50 ರಿಂದ 60 ಸಾವಿರ ಖರ್ಚು ಮಾಡಿ ಚೆಂಡು ಹೂವು ಬೆಳೆದು ಪ್ರತಿ ಐದು ದಿನಗಳಿಗೊಮ್ಮೆ ಕಟಾವು ಮಾಡುತ್ತಾ ಮೂರು ತಿಂಗಳ ಕಾಲ ಹೂವು ಬೆಳೆ ಬರುತ್ತಿರುತ್ತದೆ. ಎಕರೆಗೆ ಕೂಲಿ ಸೇರಿಸಿ 1 ಲಕ್ಷದಿಂದ 1.5 ಲಕ್ಷದವರೆಗೆ ಖರ್ಚು ಮಾಡಿ, ಎಕರೆಗೆ 1 ಟನ್‌ ಹೂವು ಉತ್ಪಾದನೆಯಾಗುತ್ತದೆ. ಮುಂಬೈ ಮಾರುಕಟ್ಟೆಗೆ ಈ ಹೂವನ್ನು ಸಾಗಿಸಿ ಕನಿಷ್ಠ 50 ಪ್ರತಿ ಕಿಲೋ ದಿಂದ ಗರಿಷ್ಠ 80ರವರೆಗೆ ಮಾರಾಟವಾಗುತ್ತದೆ. ಅಲ್ಲದೇ ಸರಾಸರಿ 50ರ ಬೆಲೆಗೆ ಮಾರಿದರೂ ರೈತರು ಪ್ರತಿ ಎಕರೆಗೆ 2 ರಿಂದ 4ಲಕ್ಷ ಆದಾಯ ನಿರೀಕ್ಷಿಸಬಹುದು. ಈ ವರ್ಷವೂ ಪ್ರತಿ ವರ್ಷದಂತೆಯೇ ನಿರೀಕ್ಷೆ ಇಟ್ಟುಕೊಂಡು ಚೆಂಡು ಹೂವನ್ನು ಬೆಳೆದಿದ್ದು, ಬೆಳೆ ಸಹ ಫಲವತ್ತಾಗಿದೆ. ಆದರೆ ಮಾರುಕಟ್ಟೆವ್ಯವಸ್ಥೆ ಇಲ್ಲದ್ದಕ್ಕೆ ಈ ವರ್ಷ ಕನಿಷ್ಠ ಪಕ್ಷ ಎಕರೆಗೆ 2 ರಿಂದ 3 ಲಕ್ಷದವರೆಗೆ ನಷ್ಟವಾಗಿದೆ ಎಂದು ಚೆಂಡುಹೂ ಬೆಳೆದ ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ನಾನು ಕಳೆದ 15 ವರ್ಷಗಳಿಂದಲೂ ನನ್ನ 10 ಎಕರೆ ಜಮೀನಿನಲ್ಲಿ ವಿವಿಧ ತೋಟಗಾರಿಕೆ ಬೆಳೆ ಬೆಳೆಯುತ್ತಾ ಬಂದಿದ್ದೇನೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಬಂದ ಮಹಾಪೂರದಲ್ಲಿ 2 ಎಕರೆ ಹೂವಿನ ಬೆಳೆಯು ಸಂಪೂರ್ಣ ನಾಶವಾಗಿತ್ತು. ಆದರೂ ಧೃತಿಗೆಡದೇ ಮತ್ತೆ 2.5 ಎಕರೆ ಜಮೀನಿನಲ್ಲಿ ಚೆಂಡುಹೂವು ಬೆಳೆದಿದ್ದು, ಈಗ ಮಾರುಕಟ್ಟೆಗೆ ಸಾಗಿಸಲಾಗದೆ ಹೊಲದಲ್ಲಿಯೇ ಬಿಡುವಂತಾಗಿದೆ. ಇದರಿಂದ ಒಂದೇ ವರ್ಷದಲ್ಲಿ ಎರಡು ಬಾರಿ ಲಕ್ಷಾಂತರ ರು. ಹಾನಿಯಾಗಿದೆ ಎಂದು ಶಿರಗುಪ್ಪಿ ಗ್ರಾಮದ ಹೂವು ಬೆಳದ ರೈತ ಶ್ರೀಮಂತ ಸುಳಕೂಡೆ ಹೇಳಿದ್ದಾರೆ.  
 
click me!