ಧಾರವಾಡದಲ್ಲಿ ಶುರುವಾಗ್ತಿದೆ ದೇಸಿ ಸಂತೆ

By Web DeskFirst Published Oct 13, 2018, 4:15 PM IST
Highlights

ನಮ್ಮ ಹಳ್ಳಿಗಳಲ್ಲಾಗುವ ಸಂತೆಗಳ ಸ್ವರೂಪದ್ದೇ ದೇಸಿ ಸಂತೆಯಿದು. ಈ ಹಿಂದೆಲ್ಲ ಗ್ರಾಮಗಳಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಸಂತೆಗಳು ಕೊಳ್ಳುಗ ಹಾಗೂ ಉತ್ಪಾದಕನ ಮಧ್ಯೆ ಸಂಪರ್ಕ ಕಲ್ಪಿಸುತ್ತಿದ್ದವು. ಆಹಾರ ಪದಾರ್ಥ ಒಂದಡೆಯಿಂದ ಇನ್ನೊಂದೆಡೆಗೆ ಬರಲು ಈಗಿನಂತೆ ನೂರಾರು ಕಿ.ಮೀ. ಕ್ರಮಿಸಬೇಕಿದ್ದಿಲ್ಲ.

- ಬಸವರಾಜ ಹಿರೇಮಠ

ಧಾರವಾಡ[ಅ.13]: ಲಾಭಕ್ಕಾಗಿ ಎಲ್ಲೆಡೆ ಆಹಾರ ಕಲಬೆರಕೆ ದೊಡ್ಡ ದಂಧೆಯಾಗಿಯೇ ಬೆಳೆಯುತ್ತಿದೆ. ಜೊತೆಗೆ ಮನೆಯೂಟದ ಬದಲು ಹೋಟೆಲ್ ಊಟವೇ ಎಲ್ಲರಿಗೂ ಪ್ರಿಯವಾಗುತ್ತಿದ್ದು, ಊಟದಲ್ಲಿ ದೇಸಿಯತೆಯಂತೂ ಸಂಪೂರ್ಣ ಕಡೆಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಜನರು ಮತ್ತೇ ದೇಸಿ ಆಹಾರ ಉಣ್ಣುವ ಮೂಲಕ ಆರೋಗ್ಯವನ್ನು ಇನ್ನಷ್ಟು ಸದೃಢವಾಗಿಟ್ಟುಕೊಳ್ಳಬೇಕೆಂಬ ಆಶಯದಿಂದ ಧಾರವಾಡದ ಜನ ಸಮಾನ ಮನಸ್ಕ ಸುಸ್ಥಿರ ಕೃಷಿ ಪ್ರತಿಪಾದಕರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ದೇಸಿ ಸಂತೆ ಎಂಬ ರೈತ ಮಾರುಕಟ್ಟೆ ಸ್ಥಾಪನೆ ಮೂಲಕ ಕಲಬೆರಕೆ ಆಹಾರದಿಂದ ಶುದ್ಧ ಆಹಾರದತ್ತ ಕೊಂಡೊಯ್ಯುವ ಪ್ರಯತ್ನ ಇದಾಗಿದೆ. 

ಏನಿದು ದೇಸಿ ಸಂತೆ:
ನಮ್ಮ ಹಳ್ಳಿಗಳಲ್ಲಾಗುವ ಸಂತೆಗಳ ಸ್ವರೂಪದ್ದೇ ದೇಸಿ ಸಂತೆಯಿದು. ಈ ಹಿಂದೆಲ್ಲ ಗ್ರಾಮಗಳಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಸಂತೆಗಳು ಕೊಳ್ಳುಗ ಹಾಗೂ ಉತ್ಪಾದಕನ ಮಧ್ಯೆ ಸಂಪರ್ಕ ಕಲ್ಪಿಸುತ್ತಿದ್ದವು. ಆಹಾರ ಪದಾರ್ಥ ಒಂದಡೆಯಿಂದ ಇನ್ನೊಂದೆಡೆಗೆ ಬರಲು ಈಗಿನಂತೆ ನೂರಾರು ಕಿ.ಮೀ. ಕ್ರಮಿಸಬೇಕಿದ್ದಿಲ್ಲ. ಒಂದರ್ಥದಲ್ಲಿ ಸರಳ ಹಾಗೂ ಸುಸ್ಥಿರ ವ್ಯವಸ್ಥೆ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಂದ ಚೆಂದದ ಪ್ಯಾಕಿಂಗ್, ಆಕರ್ಷಕ ಲೇಬಲ್, ವರ್ಣರಂಜಿತ ಬ್ಯಾಗುಗಳಲ್ಲಿ ಪದಾರ್ಥಗಳನ್ನು ಪಡೆಯುವ ಕೊಳ್ಳುಬಾಕ ಪ್ರವೃತ್ತಿ ಹೆಚ್ಚಿದ ಪರಿಣಾಮವಾಗಿ ಎಲ್ಲೆಲ್ಲೂ ಐಶಾರಾಮಿ ಬಜಾರ್ ಗಳು ಜನಪ್ರಿಯವಾಗಿವೆ. ಅಲ್ಲಿ ಕಾಣುವ ಆಹಾರ ಪದಾರ್ಥಗಳ ಮೂಲ ಅಪರಿಚಿತವೇ..!

ಆಹಾರದ ಅರಿವು: ಗ್ರಾಹಕರಿಗೆ ಶುದ್ಧ ಆಹಾರದ ಅರಿವು ಮೂಡಿಸುವುದು ದೇಸಿ ಸಂತೆಯ ಪ್ರಮುಖ ಉದ್ದೇಶ. ನಮ್ಮ ಆಹಾರ ಎಲ್ಲಿಂದ ಬರುತ್ತದೆ ಎಂಬ ಸುಳಿವು ಪಡೆಯುವುದರ ಜತೆಗೆ, ಆ ಉತ್ಪಾದಕನ ಪರಿಚಯ- ಮುಖಾಮುಖಿ ಮಾಡುವುದು ನಮ್ಮ ಆಶಯ. ಉತ್ಪಾದಕನಿಗಿಂತ ಹೆಚ್ಚು ಲಾಭ ಗಿಟ್ಟಿಸುವ ಮಧ್ಯವರ್ತಿಗಳನ್ನು ಈ ವ್ಯವಸ್ಥೆಯಿಂದ ದೂರವಿಟ್ಟು, ರೈತರೇ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಇಲ್ಲಿ ಮಾರಾಟ ಮಾಡಲಿದ್ದಾರೆ ಎಂಬುದು ಸುಸ್ಥಿರ ಅಭಿವೃದ್ದಿ ಕಾರ್ಯಕರ್ತ ಡಾ. ಪ್ರಕಾಶ ಭಟ್ ಹೇಳಿಕೆ.

ಸಂತೆಯಲ್ಲಿ ಏನೇನಿದೆ: 
ರೈತರು ಹಾಗೂ ರೈತ ಗುಂಪುಗಳು ಉತ್ಪಾದಿಸುವ ದೇಸಿ ತಳಿ ಅಕ್ಕಿಗಳು, ವಿವಿಧ ಬಗೆಯ ಬೇಳೆಕಾಳು, ಪೋಷಕಾಂಶಗಳ ಆಗರವಾದ ಸಿರಿಧಾನ್ಯಗಳು, ತಾಜಾ ತರಕಾರಿ- ಹಣ್ಣುಗಳು, ಮೌಲ್ಯವರ್ಧಿತ ತಿಂಡಿ ತಿನಿಸುಗಳು, ಸಾಂಬಾರು ಪದಾರ್ಥ, ಮನೆಯಲ್ಲೇ ಬೆಳೆಯಬಹುದಾದ ನಾಟಿ ತರಕಾರಿ ಬೀಜಗಳು ಹಾಗೂ ಕೃಷಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ದೇಸಿ ಸಂತೆಯಲ್ಲಿ ಇರಲಿದೆ. ಇದರ ಜತೆಗೆ, ಆಗಾಗ್ಗೆ ಸುರಕ್ಷಿತ ಆಹಾರದ ಕುರಿತ ಚರ್ಚೆ, ಮೌಲ್ಯವರ್ಧನೆ, ಪಾಕ ತರಬೇತಿ, ಸಾಂಪ್ರದಾಯಿಕ ತಿನಿಸುಗಳ ತಯಾರಿಕೆ ಪ್ರಾತ್ಯಕ್ಷಿಕೆಯೂ ಆಯೋಜನೆಯಾಗಲಿದೆ ಎನ್ನುವುದು ವಿಶೇಷ.

ವಾರಕ್ಕೊಮ್ಮೆ ಸಂತೆ: 
ಈ ದೇಸಿ ಸಂತೆಯು ವಾರಕ್ಕೊಮ್ಮೆ ಮಾತ್ರ ನಡೆಯಲಿದೆ. ಧಾರವಾಡ ಬಯಲು ಸೀಮೆ ಹಾಗೂ ಮಲೆನಾಡು ಹೊಂದಿದ ಪ್ರದೇಶ. ಆದ್ದರಿಂದ ಎರಡು ಬಗೆಯ ಆಹಾರ ಪದ್ಧತಿಗಳು ಇಲ್ಲಿವೆ. ಈ ಸಂತೆಯಲ್ಲಿ ಬಯಲು ಸೀಮೆಯ ಉತ್ಪಾದನೆಗಳು ಹಾಗೂ ಮಲೆನಾಡಿನ ಉತ್ಪಾದನೆಗಳು ಲಭ್ಯ. ಜೋಯಿಡಾದ ಗೆಣಸು, ಕುಮಟಾದ ಈರುಳ್ಳಿ, ಶಿರಸಿಯ ಹಲಸು, ವಿಜಯಪುರದ ಜೋಳ ಹೀಗೆ ಆಯಾ ಭಾಗದ ವಿಶೇಷ ಆಹಾರ ಧಾನ್ಯಗಳಿರುತ್ತವೆ. ಆಹಾರ ಧಾನ್ಯಗಳನ್ನು ಬೆಳೆದ ರೈತರೇ ಖುದ್ದಾಗಿ ಮಾರಾಟ ಮಾಡುತ್ತಾರೆ. ಹೀಗಾಗಿ ಗ್ರಾಹಕನಿಗೆ ರೈತನ ನೇರ ಸಂಬಂಧ ಬೆಳೆಯಲಿದೆ ಎನ್ನುವುದು ದೇಸಿ ಸಂತೆಯ ಚಿಂತನೆ. 
ಊಟ ಅಥವಾ ಉಪಾಹಾರ ಬರೀ ಹೊಟ್ಟೆ ತುಂಬಿಸಿಕೊಳ್ಳಲು ಮಾತ್ರ ಸೀಮಿತಗೊಳಿಸಿ, ತಟ್ಟೆಯಲ್ಲಿರುವ ಅನ್ನದ ಮೂಲ ಅರಿಯದ ಜಾಣ ನಡೆ ಈಗಿನ ಜನರದ್ದಾಗಿದೆ. ಶುದ್ಧ ಆಹಾರ, ಸ್ಥಳೀಯ ಮಾರುಕಟ್ಟೆ, ಫುಡ್ ಮೈಲೇಜ್ ಎಂಬಿತ್ಯಾದಿ ಪದಗಳು ಇದೀಗ ಬೇರೆ ದೇಶಗಳಲ್ಲಿ ಮಹತ್ವ ಪಡೆದುಕೊಳ್ಳುತ್ತಿದ್ದರೆ, ಆ ಪದಗಳ ಸೃಷ್ಟಿಗೆ ಕಾರಣವಾದ ಮಲ್ಲಿಯೇ ಕಲಬೆರಕೆ ಆಹಾರ ಉತ್ಪಾದನೆ ಆಗುತ್ತಿರುವುದು ತೀರಾ ಆತಂಕದ ಸಂಗತಿ. ಈ ಹಿನ್ನೆಲೆಯಲ್ಲಿ ಶುರುವಾಗುತ್ತಿರುವ ದೇಸಿ ಸಂತೆ ಎಷ್ಟರ ಮಟ್ಟಿಗೆ ರೈತರು ಹಾಗೂ ಗ್ರಾಹಕರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ಕಾದು ನೋಡಬೇಕಿದೆ.

ನಾಳೆ ದೇಸಿ ಸಂತೆಗೆ ಚಾಲನೆ
ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿಯ ದೇಸಿ ಅಂಗಡಿಯಲ್ಲಿ ದೇಸಿ ಸಂತೆ ಅ. 14ರಿಂದ ಆರಂಭಗೊಳ್ಳಲಿದ್ದು, ಆಹಾರ ತಜ್ಞ ಲೇಖಕ ಡಾ.ಕೆ.ಸಿ. ರಘು ಹಾಗೂ ವೈದ್ಯ, ಕೃಷಿಕ ಡಾ. ಸಂಜೀವ ಕುಲಕರ್ಣಿ ಸಂತೆಗೆ ಚಾಲನೆ ನೀಡಲಿದ್ದಾರೆ. ಸಹಜ ಸಮೃದ್ಧ ಸಂಸ್ಥೆ ನಿರ್ದೇಶಕ ಜಿ. ಕೃಷ್ಣಪ್ರಸಾದ,ರಾಪಿಡ್ ಸಂಸ್ಥೆಯ ವಾಣಿ ಪುರೋಹಿತ ಭಾಗವಹಿಸಲಿದ್ದಾರೆ. ಈ ದೇಸಿ ಸಂತೆಗೆ ನಿರ್ವಹಣಾ ಸಮಿತಿ ಮಾಡಿಕೊಂಡಿದ್ದು ಡಾ. ಪ್ರಕಾಶ ಭಟ್ ಸೇರಿದಂತೆ ಆಹಾರ ತಜ್ಞರಾದ ಶಕುಂತಲಾ ಮಾಸೂರ, ಶಿವರಾಜ ಹುನಗುಂದ, ಸುಬ್ರಾಯ ಹೆಗಡೆ, ಸುನಂದಾ ಭಟ್, ರಂಗನಾಥ ಮೂಲಿಮನಿ, ಸುರೇಶ ಘಟನಟ್ಟಿ, ಗೌರಿಶಂಕರರ ಕರೋಶಿ, ಆನಂದತೀರ್ಥ ಪ್ಯಾಟಿ ಇದ್ದಾರೆ.
 

click me!