ಮಗಳ ಹತ್ಯೆ ಘಟನೆ ಬಳಿಕ ಅನಾಮಧೇಯ ವ್ಯಕ್ತಿಗಳು ನಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿದ್ದಾರೆ ಎಂದು ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಆತಂಕ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ (ಏ.25): ಮಗಳ ಹತ್ಯೆ ಘಟನೆ ಬಳಿಕ ಅನಾಮಧೇಯ ವ್ಯಕ್ತಿಗಳು ನಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿದ್ದಾರೆ ಎಂದು ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮಗಳ ಹತ್ಯೆ ಪ್ರಕರಣದ ತನಿಖೆಯನ್ನ ಸಿಎಂ ಸಿದ್ದರಾಮಯ್ಯ ಸಿಐಡಿಗೆ ವಹಿಸಿದ್ದಾರೆ. ಸಿಐಡಿ ಅಧಿಕಾರಿಗಳು ನಮ್ಮ ಮನೆಗೆ ಬಂದು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮಿಂದ ಕೆಲ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆಗೆ ನಮ್ಮ ಸಹಕಾರ ಕೇಳಿದ್ದಾರೆ. ಹತ್ಯೆ ಘಟನೆಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ಮಾಡ್ತಿರೋದಾಗಿ ತಿಳಿಸಿದ್ದಾರೆ ಎಂದರು.
ಹುಬ್ಬಳ್ಳಿ: ನೇಹಾ ತಂದೆಗೆ ಧೈರ್ಯ ತುಂಬಿ, ನಿಮ್ಮ ಜೊತೆ ನಾವಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ
ಈಗಾಗಲೇ ಆರೋಪಿಯನ್ನು ಕರೆತಂದು ವಿಚಾರಣೆ ಮಾಡಿದ್ದಾರೆ. ಸದ್ಯ ತನಿಖೆಯ ವಿವರಗಳನ್ನು ಬಹಿರಂಗಪಡಿಸದಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಿಐಡಿ ವರದಿ ಕೊಟ್ಟಾಗ ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದರು.
Breaking: ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ
ಇನ್ನು ನೇಹಾ ಹಿರೇಮಠ ಹತ್ಯೆ ಬಳಿಕ ಪ್ರತಿದಿನ ಹೇಳಿಕೆ ಬದಲಿಸುತ್ತಿರುವ ಆರೋಪ ಸಂಬಂಧ ಪ್ರತಿಕ್ರಿಯಿಸಿದ ನಿರಂಜನ, ನಾನು ಆ ರೀತಿಯ ಹೇಳಿಕೆ ಕೊಟ್ಟಿಲ್ಲ. ಮಗಳ ಹತ್ಯೆ ನಡೆದ ದಿನ ಇದ್ದ ನಿಲುವೇ ಇವತ್ತೂ ಇದೆ. ಮಗಳ ಹತ್ಯೆ ನಂತರ ಅನೇಕರು ಬಂದು ಸಾಂತ್ವನ ಹೇಳುತ್ತಿದ್ದಾರೆ, ಧೈರ್ಯ ತುಂಬುತ್ತಿದ್ದಾರೆ. ಇದರ ನಡುವೆ ಕೆಲವೊಂದು ಅನುಮಾನಸ್ಪಾದ ಸನ್ನಿವೇಶಗಳು ಕಂಡುಬಂದಿವೆ. ಹತ್ಯೆಯಾದ 5ನೇ ದಿನ ಸಂತಾಪದ ನೆಪದಲ್ಲಿ ಒಬ್ಬರು ವಿಡಿಯೋ ಮಾಡಿಕೊಂಡು ಹೋಗಿದ್ದಾರೆ. ಮಗಳನ್ನು ಹತ್ಯೆ ಮಾಡುವ ಮುನ್ನ ಆರೋಪಿ ಬಿಡ್ನಾಳದಲ್ಲಿ ಅನುಮಾನಾಸ್ಪದವಾಗಿ ಅಡ್ಡಾಡಿದ್ದ ಎಂದು ತಿಳಿದುಬಂದಿದೆ. ಇವತ್ತು ಕೆಲ ವ್ಯಕ್ತಿಗಳು ಯಾವುದೋ ಸಂಚು ಹಾಕಿದ್ದಾರೆ ಅಂತಾ ಅನುಮಾನ ಬಂದಿದೆ. ನಮಗೆ ಭದ್ರತೆ ಕೊಡುವುದಾಗಿ ಆಯುಕ್ತರು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಭದ್ರತೆಯನ್ನೂ ಒದಗಿಸಿದ್ದಾರೆ ಎಂದು ತಿಳಿಸಿದರು.