ದೇವಸ್ಥಾನದ ಕಟ್ಟೆಯ ಮೇಲೆ ಸರಿಸಮನಾಗಿ ಕುಳಿತಿದ್ದರಿಂದ ಯುವಕನ ಹತ್ಯೆ| ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮೃತ ಯುವಕನ ತಂದೆ| ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್.ಗ್ರಾಮದಲ್ಲಿ ನಡೆದ ಘಟನೆ|ಹತ್ಯೆ ಪ್ರಕರಣಕ್ಕೆ ಈಗ ಮಹತ್ವದ ತಿರುವು|
ವಿಜಯಪುರ(ಆ.29): ದಲಿತ ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಪ್ರಕರಣ ಈಗ ತಿರುವು ಪಡೆದುಕೊಂಡಿದೆ. ದೇವಸ್ಥಾನದ ಕಟ್ಟೆಯ ಮೇಲೆ ಸರಿಸಮನಾಗಿ ಕುಳಿತಿದ್ದರಿಂದ ತನ್ನ ಮಗನನ್ನು ಆರೋಪಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಹತ್ಯೆಯಾದ ಯುವಕನ ತಂದೆ ಪ್ರಕರಣ ದಾಖಲಿಸಿದ್ದಾರೆ. ಆ.12ರಂದು ಬೆಳಗ್ಗೆ 11.30ಕ್ಕೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್.ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ದಲಿತ ಯುವಕ ಅನಿಲ ಶರಣಪ್ಪ ಇಂಗಳಗಿ (28) ಹತ್ಯೆಯಾದವನು.
ಮೊದಲಿಗೆ ಇದು ಹಣಕಾಸಿನ ವ್ಯವಹಾರಕ್ಕೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಮೃತನ ತಂದೆ ನೀಡಿರುವ ದೂರು ಹೀಗಿದೆ. ನನ್ನ ನಾಲ್ಕನೇ ಮಗ ಅನಿಲ ಇಂಗಳಗಿ ಹತ್ಯೆಯಾಗುವ ಎರಡು ಮೂರು ದಿನಗಳ ಮುಂಚಿತವಾಗಿ ದೇವಸ್ಥಾನದ ಕಟ್ಟೆಯೊಂದರಲ್ಲಿ ಸರಿಸಮನಾಗಿ ಕುಳಿತುಕೊಂಡಿದ್ದಾನೆ. ಈತ ನಮ್ಮ ಸರಿಸಮನಾಗಿ ಕುಳಿತುಕೊಂಡಿದ್ದಾನೆ ಎಂದು ಹೇಳಿ ಸಿದ್ದು ಬಿರಾದಾರ, ಸಂತೋಶ ಹಿರ್ಲಾಕುಂಡ ಎಂಬಿಬ್ಬರು ಕಣ್ಣಿಗೆ ಖಾರದ ಪುಡಿ ಎರಚಿ, ದಾಳಿ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಈಗಾಗಲೇ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
undefined
ಆಲಮಟ್ಟಿ ಜಲಾಶಯಕ್ಕೆ ಸಿಎಂರಿಂದ ಬಾಗಿನ ಅರ್ಪಣೆ
ಆರೋಪಿ ಬಂಧನಕ್ಕೆ ಸಿದ್ದು ಅಗ್ರಹ
ಸಿಂದಗಿಯಲ್ಲಿ ನಡೆದಿರುವ ದಲಿತ ಯುವಕನ ಹತ್ಯೆ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮವಾಗಬೇಕು. ಸರ್ಕಾರವು ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡಿದರೆ ಮುಖವಾಡ ಬಯಲು ಮಾಡಲು ಬೀದಿಗೆ ಇಳಿಯಬೇಕಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ದಲಿತ ಯುವಕನ ಹತ್ಯೆ ಹೇಯ ಹಾಗೂ ಮನುಷ್ಯ ಸಮಾಜ ತಲೆ ತಗ್ಗಿಸುವ ಕೃತ್ಯ. ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ತಕ್ಷಣ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಚಾಲನೆ ನೀಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
‘ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದರೆ ಮುಖವಾಡ ಬಯಲು ಮಾಡಲು ಬೀದಿಗೆ ಇಳಿಯಬೇಕಾಗುತ್ತದೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಹಾಗೂ ಮೀಸಲಾತಿಯನ್ನು ವಿರೋಧಿಸುವ, ದಲಿತರನ್ನು ಕೀಳಾಗಿ ಕಾಣುವ ನಾಯಕರಿಗೆ ರಾಜ್ಯ ಬಿಜೆಪಿ ಪಕ್ಷವು ನೀಡುತ್ತಿರುವ ಬೆಂಬಲವೇ ಇಂತಹ ಕೊಲೆಗಡುಕರು ನಿರ್ಭಯವಾಗಿ ಇಂತಹ ದುಷ್ಕೃತ್ಯಕ್ಕೆ ಇಳಿಯಲು ಕಾರಣ’ ಎಂದು ಆರೋಪಿಸಿದ್ದಾರೆ.