ಮಿತಿ ಮೀರಿದ ಕೊರೋನಾ: 'ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸೋಂಕು ಉಲ್ಬಣ'

By Kannadaprabha News  |  First Published Apr 26, 2021, 8:35 AM IST

ಸೋಂಕಿತರ ಸಂಪರ್ಕದಲ್ಲಿ ಇರೋರ ಪತ್ತೆ, ಕ್ವಾರಂಟೈನ್, ಟೆಸ್ಟ್‌ಗೆ ಉದಾಸೀನ| ಕೋವಿಡ್‌ ವರದಿ ನೀಡಲೂ ವಿಳಂಬ| ಜನರ ಆಕ್ರೋಶ| ಮೊದಲ ಅಲೆಯ ವೇಳೆ ಇದ್ದ ಕಾಳಜಿ 2ನೇ ಅಲೆಯಲ್ಲಿ ಮಾಯ| ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ ನಾಗರಿಕರು| 


ಬೆಂಗಳೂರು(ಏ.26): ಕೋವಿಡ್‌ ಎರಡನೇ ಅಲೆ ವೇಳೆ ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವುದು, ಅವರನ್ನು ಮನೆಯಿಂದ ಹೊರಬರದಂತೆ ನೋಡಿಕೊಳ್ಳುವ ಕಾರ್ಯವನ್ನೇ ಬಿಬಿಎಂಪಿ ಮರೆತಿದ್ದು, ಬೆಂಗಳೂರಲ್ಲಿ ಸೋಂಕು ಮಿತಿ ಮೀರಿ ಹರಡುತ್ತಿರುವುದಕ್ಕೆ ಇದೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಒಂದೆಡೆ ಪರೀಕ್ಷೆಗೆ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ, ಮತ್ತೊಂದೆಡೆ ವಾರ ಕಳೆದರೂ ಬಾರದ ಕೋವಿಡ್‌ ವರದಿ. ವರದಿ ಬರುವಷ್ಟರಲ್ಲಿ ಶಂಕಿತ ಸೋಂಕಿತನ ಆರೋಗ್ಯ ಸ್ಥಿತಿಯಲ್ಲಿ ಏರುಪೇರು. ವರದಿ ಬಂದ ಬಳಿಕ ಬೆಡ್‌ ಸಿಗದೆ ಅಲೆಯುವ ಸ್ಥಿತಿ. ಇದೆಲ್ಲದರ ನಡುವೆ ಸೋಂಕಿತರು ತಮ್ಮ ಕುಟುಂಬ ಸದಸ್ಯರಿಂದ ಹಿಡಿದು ಸಾರ್ವಜನಿಕವಾಗಿ ಮುಕ್ತವಾಗಿ ಓಡಾಡುತ್ತಿದ್ದಾರೆ. ಅವರ ಪ್ರಾಥಮಿಕ ಸಂಪರ್ಕಿತರಾಗಲಿ, ದ್ವಿತೀಯ ಹಂತದ ಸಂಪರ್ಕಿತರನ್ನಾಗಲಿ ಗುರುತಿಸುವ ಕೆಲಸವೇ ಆಗುತ್ತಿಲ್ಲ. ಇನ್ನು ಅವರು ಕ್ವಾರಂಟೈನ್‌ ಆಗುವ ಪ್ರಮೇಯವೇ ಉದ್ಭವಿಸುವುದಿಲ್ಲ.

Latest Videos

undefined

ಕೊರೋನಾ ಇದೆಯಾ? ಇವರನ್ನು ಸಂಪರ್ಕಿಸಿ

ಅವರಲ್ಲೂ ಸೋಂಕಿತರಾದವರು ಇತರರಿಗೆ ಸೋಂಕು ಹರಡಿಕೊಂಡು ಓಡಾಡುತ್ತಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ನಿತ್ಯ ವರದಿಯಾಗುತ್ತಿರುವ ಸೋಂಕಿತರ ಸಂಖ್ಯೆ 20 ಸಾವಿರ ದಾಟಿದೆ ಎಂದು ನಗರದ ನಾಗರಿಕರು ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೋವಿಡ್‌ ಮೊದಲ ಅಲೆ ವೇಳೆ ಪ್ರತಿ ಗಲ್ಲಿ, ಮನೆಯ ಸೋಂಕಿತರನ್ನು ಪತ್ತೆ ಹಚ್ಚಿ ಅವರ ಪ್ರಾಥಮಿಕ ಸಂಪರ್ಕಿತರು ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ನಿರ್ಧಿಷ್ಟದಿನಗಳ ಕಾಲ ಕ್ವಾರಂಟೈನ್‌ನಲ್ಲಿರುವಂತೆ ಹಾಗೂ ಅವರಿಗೂ ಕೋವಿಡ್‌ ಪರೀಕ್ಷೆ ನಡೆಸುವ ಕೆಲಸವನ್ನು ಮಾಡಲಾಗುತ್ತಿತ್ತು. ಆದರೆ, ಈಗ ಈ ನಿಯಮಗಳೆಲ್ಲವೂ ಕೇವಲ ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗೆ ಸೀಮಿತವಾಗಿವೆ. ಬಿಬಿಎಂಪಿ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಇದರಿಂದ ನಗರದ ಗಲ್ಲಿ ಗಲ್ಲಿ, ಮನೆ ಮನೆಗೂ ಕೋವಿಡ್‌ ವ್ಯಾಪಿಸುತ್ತಿದೆ ಎಂದು ಬೆಂಗಳೂರು ನಗರ ನಾಗರಿಕರ ವೇದಿಕೆ ಸದಸ್ಯ ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲ ಅಲೆ ವೇಳೆ ಸೋಂಕು ದೃಢಪಟ್ಟವರ ಮನೆ ಬಾಗಿಲಿಗೆ ಬಂದು ಸೋಂಕಿತರನ್ನು ಕರೆದೊಯ್ಯುವ, ಸುತ್ತಮುತ್ತಲ ಮನೆಯವರಿಗೆ ಮಾಹಿತಿ ನೀಡಿ ಎಚ್ಚರದಿಂದಿರಲು ಸೂಚಿಸಲಾಗುತ್ತಿತ್ತು. ಸಂಪರ್ಕಿತರು ಮನೆಯಲ್ಲಿರದೆ ಹೊರಬಂದರೆ ದಂಡ, ಶಿಕ್ಷೆ ಸೇರಿದಂತೆ ಬೇರೆ ಬೇರೆ ಕ್ರಮಗಳ ಎಚ್ಚರಿಕೆಯನ್ನೂ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಸೋಂಕು ದೃಢಪಟ್ಟು ವಾರ, ಹದಿನೈದು ದಿನ ಆದರೂ ಯಾರೂ ಸಂಪರ್ಕಿಸುವುದಿಲ್ಲ. ಇನ್ನು ಸಂಪರ್ಕಿತರನ್ನು ಕೇಳೋರೇ ಇಲ್ಲ. ಮೊದಲ ಅಲೆಯಲ್ಲಿ ನಗರದಲ್ಲಿ ನಿತ್ಯ ನಾಲ್ಕೈದು ಸಾವಿರ ಪ್ರಕರಣಗಳು ವರದಿಯಾಗಲು ಐದಾರು ತಿಂಗಳಾದರೆ, 2ನೇ ಅಲೆಯಲ್ಲಿ ಬಿಬಿಎಂಪಿ ನಿರ್ಲಕ್ಷ್ಯದಿಂದ ಎರಡೇ ತಿಂಗಳಲ್ಲಿ 20 ಸಾವಿರ ದಾಟಿದೆ ಎಂದು ರಾಜರಾಜೇಶ್ವರಿ ನಗರ ನಿವಾಸಿ ಸಂತೋಷ್‌ ಆಕ್ರೋಶ ವ್ಯಕ್ತಪಡಿಸುತ್ತಾರೆ.
 

click me!