ಬೆಂಗಳೂರಿಗರ ಬಹುಬೇಡಿಕೆಯ ಸಬರ್ಬನ್‌ ರೈಲಿಗೆ ಕೇಂದ್ರ ಸಂಪುಟ ಅಸ್ತು

By Kannadaprabha NewsFirst Published Oct 8, 2020, 7:50 AM IST
Highlights

ಹಾದಿ ಸುಗಮ: ಉಪನಗರ ರೈಲು ಯೋಜನೆ ಪರಿಷ್ಕೃತ ಡಿಪಿಆರ್‌ಗೆ ಅನುಮೋದನೆ| ಕೇಂದ್ರ ಸರ್ಕಾರ 2020-21ನೇ ಸಾಲಿನ ಬಜೆಟ್‌ನಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿತ್ತು| 

ಬೆಂಗಳೂರು(ಅ.08): ರಾಜಧಾನಿಯ ಬಹುಬೇಡಿಕೆಯ ‘ಬೆಂಗಳೂರು ಉಪನಗರ ರೈಲು ಯೋಜನೆ’ಯ ಪರಿಷ್ಕೃತ ಡಿಪಿಆರ್‌ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆದರೆ, ರಾಜರಾಜೇಶ್ವರಿನಗರ ಉಪಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಧಿಕೃತ ಘೋಷಣೆ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.

ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಎಂದೇ ಭಾವಿಸಲಾಗಿರುವ ಈ ಯೋಜನೆ ಅನುಷ್ಠಾನಕ್ಕೆ ಈವರೆಗೆ ಎದುರಾಗಿದ್ದ ಬಹುತೇಕ ಅಡೆತಡೆಗಳು ಪರಿಹಾರವಾಗಿವೆ. ಕೇಂದ್ರ ಸರ್ಕಾರ 2020-21ನೇ ಸಾಲಿನ ಬಜೆಟ್‌ನಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿತ್ತು. ಆದರೆ, ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ) ಅನುಮೋದನೆ ಬಾಕಿತ್ತು. ಇದೀಗ ಸಮಿತಿ ಅನುಮೋದನೆ ನೀಡಿರುವುದರಿಂದ ಅನುಷ್ಠಾನ ಕಾರ್ಯದ ಚಾಲನೆ ಹಾದಿ ಸುಗಮವಾಗಿದೆ.

ಈ ಉಪ ನಗರ ರೈಲು ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಯೋಗದಲ್ಲಿ ಸ್ಪೆಷಲ್‌ ಪರ್ಪಸ್‌ ವೆಹಿಕಲ್‌(ಎಸ್‌ಪಿವಿ) ಮಾದರಿಯಲ್ಲಿ ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ-ರೈಡ್‌) ನೇತೃತ್ವದಲ್ಲಿ ಅನುಷ್ಠಾನಗೊಳ್ಳಲಿದೆ. ಈ ಹಿಂದೆ ರೈಟ್ಸ್‌ ಸಂಸ್ಥೆ 18,600 ಕೋಟಿ ರು. ವೆಚ್ಚದ 148 ಕಿ.ಮೀ. ಉದ್ದ ರೈಲು ಮಾರ್ಗದ ಯೋಜನೆ ಡಿಪಿಆರ್‌ಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿತ್ತು. ಆದರೆ, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಯೋಜನಾ ವೆಚ್ಚವನ್ನು 16 ಸಾವಿರ ಕೋಟಿ ರು.ಗೆ ಇಳಿಕೆ ಮಾಡಿ, ಕೇಂದ್ರಕ್ಕೆ ಪರಿಷ್ಕೃತ ಡಿಪಿಆರ್‌ ಕಳುಹಿಸಲಾಗಿತ್ತು. ಇದೀಗ ಈ ಪರಿಷ್ಕೃತ ಡಿಪಿಆರ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ಸಿಕ್ಕಿದೆ.

ಉಪನಗರ ರೈಲು ಅನುಷ್ಠಾನಕ್ಕೆ 1400 ಕೋಟಿ ರು. : ಶೀಘ್ರ ಅನುಮೋದನೆ

ಪಿಪಿಪಿ ಮಾದರಿ:

ಕೆ-ರೈಡ್‌ ಸಂಸ್ಥೆಯ ಪರಿಷ್ಕೃತ ಡಿಪಿಆರ್‌ನಲ್ಲಿ ಬೋಗಿಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪಡೆದುಕೊಳ್ಳುವ ಬಗ್ಗೆ ಪ್ರಸ್ತಾಪಿಸಿತ್ತು. 148 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ ಸೇವೆ ನೀಡಲು ಒಟ್ಟು 306 ಹವಾ ನಿಯಂತ್ರಿತ ಬೋಗಿಗಳ ಅಗತ್ಯವಿದೆ. ಆ ಬೋಗಿಗಳನ್ನು ಪಿಪಿಪಿ ಮಾದರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಪಡೆಯುವುದರಿಂದ ಯೋನಾ ವೆಚ್ಚ 18,600 ಕೋಟಿ ರು. ಪೈಕಿ 2,850 ಕೋಟಿ ರು. ಉಳಿತಾಯವಾಗಲಿದೆ ಎಂದು ತಿಳಿಸಿತ್ತು.

ಶೇ.60 ರಷ್ಟು ಸಾಲ:

ಎಸ್‌ಪಿವಿ ಮಾದರಿ ಅನ್ವಯ ಯೋಜನೆ ಅನುಷ್ಠಾನಕ್ಕೆ ತಗುಲುವ 16 ಸಾವಿರ ಕೋಟಿ ರು. ವೆಚ್ಚದ ಪೈಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇ.40ರಷ್ಟುಯೋಜನಾ ವೆಚ್ಚ ಭರಿಸಲು ಒಪ್ಪಿಗೆ ಸೂಚಿಸಿವೆ. ಉಳಿದ ಶೇ.60ರಷ್ಟುವೆಚ್ಚವನ್ನು ಯೋಜನೆ ಅನುಷ್ಠಾನದ ಉಸ್ತುವಾರಿ ವಹಿಸಿರುವ ಕೆ-ರೈಡ್‌ ಸಂಸ್ಥೆಯು ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯಬೇಕಾಗುತ್ತದೆ.

355.28 ಹೆಕ್ಟೇರ್‌ ಭೂಮಿ

ಬೆಂಗಳೂರು ಉಪ ನಗರ ರೈಲು ಯೋಜನೆ ಅನುಷ್ಠಾನಕ್ಕೆ 355.28 ಹೆಕ್ಟೇರ್‌ ಭೂಮಿ ಅಗತ್ಯವಿದೆ. ಮಾರ್ಗ ನಿರ್ಮಾಣ, ವಿಸ್ತರಣೆ, ನಿಲ್ದಾಣಗಳ ನಿರ್ಮಾಣ ಸೇರಿ ಇನ್ನಿತರ ಕಾರ್ಯಗಳಿಗೆ ಈ ಭೂಮಿ ಬಳಕೆಯಾಗಲಿದೆ. ಈ ಪೈಕಿ 250 ಹೆಕ್ಟೇರ್‌ ಭೂಮಿ ರೈಲ್ವೆ ಇಲಾಖೆಗೆ ಸೇರಿದ್ದಾಗಿದೆ. ಉಳಿದಂತೆ ರಾಜ್ಯ ಸರ್ಕಾರದ 34.69 ಹೆಕ್ಟೇರ್‌ ಮತ್ತು ಖಾಸಗಿಯವರಿಗೆ ಸೇರಿದ 70.59 ಹೆಕ್ಟೇರ್‌ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಬೇಕು. ಅದರಲ್ಲಿ ಸರ್ಕಾರಿ ಭೂಮಿ ಹೊರತುಪಡಿಸಿ, ಖಾಸಗಿ ಒಡೆತನದ ಭೂಸ್ವಾಧೀನಕ್ಕಾಗಿ 2,129 ಕೋಟಿ ರು. ವೆಚ್ಚವಾಗಲಿದೆ ಎಂದು ಯೋಜನೆಯ ಡಿಪಿಆರ್‌ನಲ್ಲಿ ಅಂದಾಜಿಸಲಾಗಿದೆ.

ಪ್ರಮುಖ ಕಾರಿಡಾರ್‌ಗಳು

* ಸಿಟಿ ರೈಲು ನಿಲ್ದಾಣ-ದೇವನಹಳ್ಳಿ 41.40 ಕಿ.ಮೀ.
* ಬೈಯಪನಹಳ್ಳಿ ಟರ್ಮಿನಲ್‌-ಚಿಕ್ಕಬಾಣಾವಾರ 25 ಕಿ.ಮೀ.
* ಕೆಂಗೇರಿ-ವೈಟ್‌ಫೀಲ್ಡ್‌ 35.52 ಕಿ.ಮೀ.
* ಹೀಲಲಿಗೆ ನಿಲ್ದಾಣ-ರಾಜನಕುಂಟೆ 46.24 ಕಿ.ಮೀ.

25 ಲಕ್ಷ ಮಂದಿಗೆ ಅನುಕೂಲ

ಉಪ ನಗರ ರೈಲು ಯೋಜನೆ ಅನುಷ್ಠಾನದಿಂದ ನಗರದ ಸಂಚಾರ ದಟ್ಟಣೆಗೆ ದೊಡ್ಡ ಪರಿಹಾರ ಸಿಕ್ಕಂತಾಗುತ್ತದೆ. ಸುಮಾರು 25 ಲಕ್ಷ ಮಂದಿಗೆ ನಿತ್ಯ ಈ ರೈಲಿನ ಉಪಯೋಗ ಪಡೆದುಕೊಳ್ಳಲ್ಲಿದ್ದಾರೆ. ಭವಿಷ್ಯದಲ್ಲಿ ತುಮಕೂರು, ರಾಮನಗರ, ಬಂಗಾರಪೇಟೆಗೂ ಮಾರ್ಗ ವಿಸ್ತರಿಸಲು ಅವಕಾಶವಿದೆ. ಇದರಿಂದ ಲಕ್ಷಾಂತರ ಮಂದಿಗೆ ಉತ್ತಮ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ.

click me!