Udupi: ಪ್ರವಾಹದ ನೀರಿನಲ್ಲಿ ತೆಂಗಿನಕಾಯಿ ಬೇಟೆ: ಕರಾವಳಿ ಯುವಕರ ಸಾಹಸ

By Govindaraj SFirst Published Jul 10, 2022, 4:29 PM IST
Highlights

ಜಿಲ್ಲೆಯಲ್ಲಿ ನಿರಂತರ 10 ದಿನಗಳಿಂದ ಮಳೆ ಆಗುತ್ತಿದೆ. ನದಿಪಾತ್ರ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ನದಿ ಪಾತ್ರದ ಜನಗಳು ನರೆಯಿಂದ ಕಂಗಾಲಾಗಿದ್ದಾರೆ. ಈ ಎಲ್ಲಾ ಸಂಕಟಗಳ ನಡುವೆ ಪ್ರವಾಹದ ಸಂಕಷ್ಟದಲ್ಲೂ ಸಂಪಾದನೆಯ ದಾರಿ ಕಂಡುಕೊಂಡಿದ್ದಾರೆ.

ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ (ಜು.10): ಜಿಲ್ಲೆಯಲ್ಲಿ ನಿರಂತರ 10 ದಿನಗಳಿಂದ ಮಳೆ ಆಗುತ್ತಿದೆ. ನದಿಪಾತ್ರ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ನದಿ ಪಾತ್ರದ ಜನಗಳು ನರೆಯಿಂದ ಕಂಗಾಲಾಗಿದ್ದಾರೆ. ಈ ಎಲ್ಲಾ ಸಂಕಟಗಳ ನಡುವೆ ಪ್ರವಾಹದ ಸಂಕಷ್ಟದಲ್ಲೂ ಸಂಪಾದನೆಯ ದಾರಿ ಕಂಡುಕೊಂಡಿದ್ದಾರೆ. ಹೌದು! ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಪ್ರವಾಹ ಬಂತು ಅಂದ್ರೆ, ಯುವಕರ ತಂಡ ನದಿ ತಟದಲ್ಲಿ ಒಂದು ಬಗೆಯ  ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಹರಿಯುವ ನದಿಯಲ್ಲಿ ತೇಲಿಕೊಂಡು ಬರುವ ತೆಂಗಿನಕಾಯಿಗೆ ಬಲೆ ಹಾಕುವ ಕೈಚಳಕ ತೋರುತ್ತಾರೆ. 

Latest Videos

ಪ್ರವಾಹದ ನೀರು ಅತ್ಯಂತ ವೇಗವಾಗಿ ಹರಿದು ಹೋಗುವ ಸಂದರ್ಭದಲ್ಲಿ, ನೀರಿನ ನಡುವೆ ನೂರಾರು ತೆಂಗಿನಕಾಯಿಗಳು ತೇಲಿ ಬರುವುದುಂಟು. ಹೀಗೆ ತೆಲಿಬರುವ ತೆಂಗಿನಕಾಯಿಯನ್ನು ಹಿಡಿಯುವುದೇ ಒಂದು ಸಾಹಸ. ನೆರೆಯಕಾಲದಲ್ಲಿ ಈ ಸಾಹಸ ಮಾಡಲು ಯುವಕರು ನದಿ ಪಾತ್ರದ ಪ್ರದೇಶಗಳಲ್ಲಿ ಮತ್ತು ಸೇತುವೆಯಲ್ಲಿ ಮುಗಿಬೀಳುತ್ತಾರೆ. ಮಳೆಗಾಲದಲ್ಲಿ ಮಳೆಯ ಜೊತೆ ವಿಪರೀತವಾದ ಗಾಳಿ ಕೂಡ ಬೀಸುತ್ತೆ. ನದಿ ಪ್ರದೇಶದ ಅಕ್ಕ ಪಕ್ಕ ಲಕ್ಷಾಂತರ ತೆಂಗಿನ ಮರಗಳು ಬೆಳೆದಿರುತ್ತವೆ. ವಿಪರೀತವಾದ ಗಾಳಿ ಬೀಸುವ ಸಂದರ್ಭದಲ್ಲಿ ಸಾವಿರಾರು ತೆಂಗಿನಕಾಯಿಗಳು ನದಿ ಪಾಲಾಗುತ್ತದೆ. 

ಉಡುಪಿಯ ಶ್ರೀ ಕೃಷ್ಣನಿಗೆ ಮಹಾಭಿಷೇಕ, ಜು.10ರಂದು ಮುದ್ರಾ ಧಾರಣೆ

ಹೀಗೆ ನದಿಗೆ ಬಿದ್ದ ತೆಂಗಿನ ಕಾಯಿಗಳು ನೆರೆಯ ನೀರಿನಲ್ಲಿ ಕೆಸರಿನ ನಡುವೆ ತೇಲಿ ಬರುತ್ತವೆ. ನದಿ ಪಾತ್ರದ ತಟದಲ್ಲಿ ಕುಳಿತು ಅಥವಾ ಸೇತುವೆ ಮೇಲೆ ನಿಂತು, ಆಯಕಟ್ಟಿನ ಸ್ಥಳಗಳಲ್ಲಿ ಈ ತೆಂಗಿನಕಾಯಿಯನ್ನು ಸೆರೆಹಿಡಿಯುವುದು ಸುಲಭದ ಮಾತಲ್ಲ. ಉದ್ದನೆಯ ಬಿದಿರಿನ ಕೋಲಿನ ತುದಿಗೆ ಬಲೆಯನ್ನು ಕಟ್ಟಿ, ಕೋಲನ್ನು ಹರಿಯುವ ನೀರಿಗೆ ತೇಲಿಬಿಟ್ಟು, ತೆಂಗಿನಕಾಯಿ ಸೆರೆ ಹಿಡಿಯುವುದು ಒಂದು ಅಪರೂಪದ ಸಾಹಸವೇ ಸರಿ! ಆದರೆ ಯುವಕರಿಗೆ ಈ ಕೆಲಸ ಮಾಡುವುದರಲ್ಲಿ ಅದೇನೋ ಮಜಾ. ಬೆಳಗ್ಗಿನಿಂದ ರಾತ್ರಿಯವರೆಗೂ ಬಲೆ ಹಾಕಿ ಕಾದು ಕುಳಿತು, ನೂರಾರು ತೆಂಗಿನಕಾಯಿ ಹಿಡಿದು ಸಾವಿರಾರು ರೂಪಾಯಿ ಸಂಪಾದನೆ ಮಾಡುವವರೂ ಇದ್ದಾರೆ. 

ಇನ್ನು ಇದೊಂದು ಸಾಹಸದ ಕೆಲಸ. ಅದೃಷ್ಟದ ಆಟ ಅಂದರು ತಪ್ಪಲ್ಲ. ಮಳೆಯಲ್ಲಿ ಕಾದು ಕುಳಿತುಕೊಳ್ಳುವುದು, ಗಾಳಿ ಬಂದರೂ ಕದಲದೆ ಇರುವುದು, ನೀರಿನ ರಭಸಕ್ಕೆ ಬಲೆ ಹಾಕುವುದು, ಸುಲಭದ ಮಾತಲ್ಲ, ಸ್ವಲ್ಪ ಆಯ ತಪ್ಪಿದರೂ ಸಾಕು ನೆರೆಯ ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯ ಇದೆ. ಹೆಚ್ಚಾಗಿ ಯುವಕರು ತಂಡವಾಗಿ ಕುಳಿತು ಈ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ನೆರೆ ಬರುವ ಸಂದರ್ಭದಲ್ಲಿ ದೋಣಿಯಲ್ಲಿ ಹೋಗಿ ಮೀನು ಹಿಡಿದಂತೆ ತೆಂಗಿನಕಾಯಿ ಹಿಡಿಯುವ ಹವ್ಯಾಸವೂ ಕೆಲವರಿಗಿದೆ. 

ಉಡುಪಿಯಲ್ಲಿ ನಿರಂತರ ಮಳೆ, 25 ಕೋಟಿ ರುಪಾಯಿಗೂ ಅಧಿಕ ನಷ್ಟ

ಸಂಕಷ್ಟದಲ್ಲೂ ತಮ್ಮ ಇಷ್ಟದ ಕಾರ್ಯ ಮಾಡುವ ಮೂಲಕ ಒಂದಿಷ್ಟು ಸಂಪಾದನೆ ಮಾಡುವ, ಈ ನೆರೆಕಾಲದ ತೆಂಗಿನಕಾಯಿ ಬೇಟೆ; ಕರಾವಳಿಯ ಯುವಕರ ಸಾಹಸಿ ಪ್ರವೃತ್ತಿಗೆ ಸಾಕ್ಷಿಯಾಗಿದೆ. ಲಾಭ ಇಲ್ಲದೆ ಯಾರು ಬೊಳ್ಳದಲ್ಲಿ ಹೋಗುವುದಿಲ್ಲ ಅನ್ನುವ ಆಡು ಮಾತು ಕರಾವಳಿಯಲ್ಲಿ ಪ್ರಚಲಿತವಾಗಿದೆ. ಬೊಳ್ಳ ಅಂದರೆ ನೆರೆ, ನೆರೆ ಬಂದಾಗ ನೀರಿಗೆ ಇಳಿಯುವುದರ ಹಿಂದೆ ಲಾಭದ ಲೆಕ್ಕಾಚಾರ ಇದೆ ಅನ್ನೋದು ಈ ಮಾತಿನ ಅರ್ಥ. ಹೇಳಿ ಕೇಳಿ ತೆಂಗಿನಕಾಯಿ ಉತ್ತಮ ದರ ಇದೆ. ನೆರೆ ನೀರಿನಲ್ಲಿ ಬೇಟೆಯಾಡಿದ ತೆಂಗಿನಕಾಯಿ ಮಾರಾಟ ಮಾಡಿ, ಜೀವನ ನಡೆಸುವ ಯುವಕರು ಇದ್ದಾರೆ.

click me!