ಮಂಡ್ಯ: 40 ಗ್ರಾಮಗಳಿಗೆ ‘ಕರುಣಾಳು’ ಬೆಳಕು, ಬೀದಿದೀಪಗಳಿಗೆ ಟೈಮರ್‌ ಸ್ವಿಚ್‌

By Kannadaprabha NewsFirst Published Dec 23, 2019, 2:41 PM IST
Highlights

ವಿದ್ಯುತ್‌ ಉಳಿತಾಯ ಮತ್ತು ವಿದ್ಯುತ್‌ ಸಮಸ್ಯೆ ನೀಗಿಸುವ ಸಲುವಾಗಿ ಜಿಲ್ಲೆಯಲ್ಲಿ 40 ಹಳ್ಳಿಗಳಲ್ಲಿ ಮಾದರಿ ವಿದ್ಯುತ್‌ ನೀಡುವ ಬೆಳಕು ಯೋಜನೆ ಅನುಷ್ಠಾನಗೊಳಿಸುವ ಕಾಮಗಾರಿಗೆ ಸದ್ದಿಲ್ಲದೆ ಚಾಲನೆ ನೀಡಲಾಗಿದೆ.

ಮಂಡ್ಯ(ಡಿ.23): ವಿದ್ಯುತ್‌ ಉಳಿತಾಯ ಮತ್ತು ವಿದ್ಯುತ್‌ ಸಮಸ್ಯೆ ನೀಗಿಸುವ ಸಲುವಾಗಿ ಜಿಲ್ಲೆಯಲ್ಲಿ 40 ಹಳ್ಳಿಗಳಲ್ಲಿ ಮಾದರಿ ವಿದ್ಯುತ್‌ ನೀಡುವ ಬೆಳಕು ಯೋಜನೆ ಅನುಷ್ಠಾನಗೊಳಿಸುವ ಕಾಮಗಾರಿಗೆ ಸದ್ದಿಲ್ಲದೆ ಚಾಲನೆ ನೀಡಲಾಗಿದೆ.

ವಿದ್ಯುತ್‌ ಉಳಿತಾಯ ಜೊತೆಗೆ ಯಾವುದೇ ವಿದ್ಯುತ್‌ ಸಮಸ್ಯೆಗಳಿಲ್ಲದ ರೀತಿಯಲ್ಲಿ ಗ್ರಾಮಗಳನ್ನು ಪರಿವರ್ತಿಸುವ ವಿಶಿಷ್ಠ ಯೋಜನೆಯಿದು. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ಜಿಲ್ಲೆಯ 40 ಗ್ರಾಮಗಳಲ್ಲಿ ಯೋಜನೆ ಅನುಷ್ಠಾನಗೊಳಿಸುವ ಹೊಣೆ ಹೊತ್ತಿದೆ. ಬಹುತೇಕ ಗ್ರಾಮಗಳಲ್ಲಿ ಬೀದಿ ದೀಪಗಳಿಗೆ ಆಟೋಮ್ಯಾಟಿಕ್‌ ಟೈಮರ್‌ ಸ್ವಿಚ್‌ ಅಳವಡಿಕೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಪಡಿಸುವ ಕಾಮಗಾರಿ ಭರದಿಂದ ಸಾಗಿವೆ.

4 ತಿಂಗಳು ಗರಿಷ್ಠ ಮಟ್ಟ ಕಾಯ್ದುಕೊಂಡ KRS ಹೊಸ ದಾಖಲೆ..!

ಜಿಲ್ಲೆಯಲ್ಲಿ ಹತ್ತಾರು ವರ್ಷಗಳ ಹಿಂದೆ ಅಳವಡಿಸಿದ ವಿದ್ಯುತ್‌ ಲೈನ್‌ಗಳು (ವಾಹಕ), ಹಳೆಯ ಟಿಸಿಗಳು, ಶಿಥಿಲಗೊಂಡ ಕಂಬಗಳು ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು. ಜತೆಗೆ, ಬೀದಿದೀಪಗಳ ನಿರ್ವಹಣೆ ಸಮಸ್ಯೆಯಿಂದ ವಿದ್ಯುತ್‌ ಪೋಲಾಗುತ್ತಿತ್ತು. ಇದರಿಂದ ವಿದ್ಯುತ್‌ ಬಳಕೆಯ ಪ್ರಮಾಣವೂ ಹೆಚ್ಚಾಗಿತ್ತು. ಇದನ್ನು ತಡೆಗಟ್ಟಿ, ವಿದ್ಯುತ್‌ ಉಳಿತಾಯ ಮಾಡುವ ನಿಟ್ಟಿನಲ್ಲಿ ಬೆಳಕು ಯೋಜನೆ ಜಾರಿಗೊಳಿಸಲಾಗಿದೆ.

ಅನುದಾನದ ಲಭ್ಯತೆ ಹೇಗೆ?

ಈ ಯೋಜನೆಗೆ ಕೇಂದ್ರದ ಅನುದಾನದಿಂದ ಜಿಲ್ಲೆಯ 5 ಗ್ರಾಮಗಳು, ರಾಜ್ಯ ಸರ್ಕಾರದ ಅನುದಾನದಿಂದ ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಲಾ 5ರಂತೆ 35 ಗ್ರಾಮಗಳನ್ನು ​ಬೆಳಕು ಯೋಜನೆ ಒಳಗೆ ತರಲಾಗುವುದು. ಸಂಸದರ ನಿಧಿ ಕಾಮಗಾರಿಗಳು ಶೇ.42.86 ಹಾಗೂ ಶಾಸಕರ ನಿಧಿಯ ಕಾಮಗಾರಿಗಳು ಶೇ.65.55ರಷ್ಟುಪೂರ್ಣಗೊಂಡಿವೆ. ವರ್ಷಾಂತ್ಯದ ವೇಳೆಗೆ ಯೋಜನೆ ಸಂಪೂರ್ಣ ಅನುಷ್ಠಾನಗೊಳ್ಳಲಿದ್ದು, ಗ್ರಾಮೀಣ ಭಾಗದ ಜನರು ಬೆಳಕು ಕಾಣಲಿದ್ದಾರೆ ಎಂದು ಸೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.

ಗುಣಮಟ್ಟದ ವಿದ್ಯುತ್‌ ಸರಬರಾಜು:

ಬೆಳಕು ಯೋಜನೆಯಲ್ಲಿ ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ವಿದ್ಯುತ್‌ ಸಿಗಬೇಕು ಎಂಬುದು ಯೋಜನೆಯ ಆಶಯಗಳಲ್ಲೊಂದು. ಉದಾಹರಣೆಗೆ ಹಳೆಯ/ಕಬ್ಬಿಣದ/ಶಿಥಿಲಗೊಂಡ ಕಂಬಗಳು, ವಿದ್ಯುತ್‌ ತಂತಿಗಳು ಜೋತು ಬಿದ್ದಿರುವುದು, ಟ್ರಾನ್ಸ್‌ಫಾರ್ಮರ್‌ ಸಮಸ್ಯೆ ಸೇರಿದಂತೆ ನಾನಾ ವಿದ್ಯುತ್‌ ಸಮಸ್ಯೆಗಳಿಂದ ಗ್ರಾಮಗಳನ್ನು ಮುಕ್ತಗೊಳಿಸುವುದು ಯೋಜನೆಯಲ್ಲಿ ಅಡಗಿದೆ.

ಜ.3ರಂದು ತುಮಕೂರಿಗೆ ಪ್ರಧಾನಿ ನಮೋ

ಈ ನಿಟ್ಟಿನಲ್ಲಿ ಶಿಥಿಲ/ಹಳೆಯ ಕಂಬಗಳ ಬದಲಾವಣೆ, ಮಧ್ಯಂತರ ಕಂಬಗಳ ಅಳವಡಿಕೆ, ಹೆಚ್ಚುವರಿ ಟಿಸಿಗಳ ಅಳವಡಿಕೆ, ಶಿಥಿಲ ಕಂಡಕ್ಟರ್‌(ವಾಹಕ) ಬದಲಾವಣೆ, ಸವೀರ್‍ಸ್‌ ಮೇನ್‌ ವೈರ್‌ ಬದಲಾವಣೆ, 2/3 ವೈರ್‌ಗಳು ವಿದ್ಯುತ್‌ ಮಾರ್ಗಗಳನ್ನು 5 ವೈರ್‌ಗಳ ಮಾರ್ಗಕ್ಕೆ ಮೇಲ್ದರ್ಜೆಗೇರಿಸುವುದು, ಎನರ್ಜಿ ಎಫಿಷಿಯನ್ಸಿ ಬಲ್‌್ಬಗಳ(ವಿದ್ಯುತ್‌ ಉಳಿತಾಯ ಬಲ್ಬ್‌) ಅಳವಡಿಕೆ ಮಾಡಲಾಗುವುದು. ಜಿಲ್ಲೆಯಲ್ಲಿ ಬೆಳಕು ಕಾಮಗಾರಿಯೂ ಆರಂಭವಾಗಿದೆ. ಈಗಾಗಲೇ ಕೆಲಸ ನಡೆದಿರುವ ಸ್ಥಳಗಳಲ್ಲಿ ಕೇಂದ್ರ ಸರಕಾರದಿಂದ 3ನೇ ವ್ಯಕ್ತಿಯ ತಪಾಸಣೆ ಹಾಗೂ ರಾಜ್ಯ ಸರಕಾರದಿಂದ ಟೆಕ್ನಿಕಲ್‌ ಆಡಿಟ್‌ ಅಂಡ್‌ ಕ್ವಾಲಿಟಿ ಕಂಟ್ರೋಲ್‌(ಟಿಎಕ್ಯೂಸಿ) ತಂಡದಿಂದ ತಪಾಸಣೆ ಮಾಡಿಸಲಾಗುವುದು.

ಬೆಳಕು ಮೂಡಿಸಲು .16 ಕೋಟಿ ವೆಚ್ಚ

  • ಒಂದು ಗ್ರಾಮಕ್ಕೆ 40 ಲಕ್ಷ ರು.ನಂತೆ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಕೋಟಿ ರು.ನಂತೆ 35 ಗ್ರಾಮಗಳಿಗೆ ರಾಜ್ಯ ಸರಕಾರದಿಂದ 14 ಕೋಟಿ ರು., ಕೇಂದ್ರದಿಂದ 2 ಕೋಟಿ ರು. ಸೇರಿದಂತೆ ಒಟ್ಟು 16 ಕೋಟಿ ರು. ಬಿಡುಗಡೆಯಾಗಿದೆ. ಸೆಸ್ಕ್‌ನ ಕೇಂದ್ರ ಕಚೇರಿಯಿಂದಲೇ ರಾಜ್ಯಮಟ್ಟದಲ್ಲಿ ಟೆಂಡರ್‌ ನಡೆಸಿ, ಗುತ್ತಿಗೆದಾರ ಕಂಪನಿಗಳಿಗೆ ಕಾಮಗಾರಿ ನೀಡಲಾಗಿದೆ.
  • ಜಿಲ್ಲೆಯ 40 ಗ್ರಾಮಗಳಲ್ಲೂ ಬೀದಿ ದೀಪಗಳ ನಿರ್ವಹಣೆಗಾಗಿ ಆಟೋಮ್ಯಾಟಿಕ್‌ ಟೈಮರ್‌ ಸ್ವಿಚ್‌ ಅಳವಡಿಸಲಾಗುತ್ತಿದೆ. ಈ ವ್ಯವಸ್ಥೆಯಡಿ ಸಂಜೆ 6ಕ್ಕೆ ಆನ್‌ ಆಗುವ ಬೀದಿದೀಪಗಳು ಬೆಳಗ್ಗೆ 7ಕ್ಕೆ ಆಫ್‌ ಆಗುತ್ತವೆ. ಪ್ರತಿ ಹಳ್ಳಿಯಲ್ಲಿ 4-5ರಂತೆ ಈ ಸ್ವಿಚ್‌ಗಳನ್ನು ಹಾಕಲಾಗುತ್ತಿದೆ.
  • ಸಾಮಾನ್ಯವಾಗಿ ಬೀದಿ ದೀಪಗಳ ಅಳವಡಿಕೆ, ಅದರ ನಿರ್ವಹಣೆ ಸೆಸ್ಕ್‌ ವ್ಯಾಪ್ತಿಯಲ್ಲಿಲ್ಲ. ಬೀದಿದೀಪಗಳನ್ನು ಆಯಾಯ ಸ್ಥಳೀಯ ಸಂಸ್ಥೆಗಳು ನಿರ್ವಹಿಸುತ್ತವೆ. ಅದರಂತೆ ಹಳ್ಳಿಗಳಲ್ಲಿ ಬೀದಿ ದೀಪದ ಜವಾಬ್ದಾರಿ ಗ್ರಾಪಂಗಳದ್ದೇ ಆದರೆ, ಬೆಳಕು ಯೋಜನೆಯಡಿ ಆ ಗ್ರಾಮಗಳಲ್ಲಿ ಬೀದಿದೀಪವನ್ನು ಅಳವಡಿಸಿ, ಅವುಗಳಿಗೆ ಆಟೋ ಟೈಮರ್‌ ಅಳವಡಿಸಲಾಗುತ್ತಿದೆ.
  • ಜಿಲ್ಲೆಯ 40 ಗ್ರಾಮಗಳಲ್ಲಿ ಬೆಳಕು ಯೋಜನೆಯ ಶೇ.65ಕ್ಕಿಂತಲೂ ಹೆಚ್ಚು ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.

ಕತ್ತಲೆಯಿಂದ ಬೆಳಕಿನೆಡೆಗೆ ಬಂದಿರುವ ಗ್ರಾಮಗಳು

  • ಮಂಡ್ಯ: ಮಾರಗೌಡನಹಳ್ಳಿ, ಮದ್ದೂರು - ಬ್ಯಾಡರಹಳ್ಳಿ, ಮಳವಳ್ಳಿ - ಹಿಟ್ಟಿನಹಳ್ಳಿಕೊಪ್ಪಲು, ಪಾಂಡವಪುರ - ಹಿರೇಮರಳಿ, ಶ್ರೀರಂಗಪಟ್ಟಣ - ಕೆಆರ್‌ಎಸ್‌, ಕೆ.ಆರ್‌.ಪೇಟೆ - ಹರಳಹಳ್ಳಿ, ನಾಗಮಂಗಲ - ತಗ್ಗಹಳ್ಳಿ. ಈ ಎಲ್ಲಾ ಗ್ರಾಮಗಳಿಗೆ ಕೇಂದ್ರದ ಅನುದಾನ ಲಭ್ಯವಾಗಲಿದೆ.
  • ಮಂಡ್ಯ: ಹಲ್ಲೇಗೆರೆ, ಕನ್ನಲಿ, ಸೂನಗಹಳ್ಳಿ, ಕನ್ನಟ್ಟಿ, ಕೀಲಾರ.
  • ಮದ್ದೂರು: ನಗರಕೆರೆ, ಮಾದರಹಳ್ಳಿ, ಯಡಗನಹಳ್ಳಿ, ಅರುವನಹಳ್ಳಿ, ತೊರೆಶೆಟ್ಟಹಳ್ಳಿ
  • ಮಳವಳ್ಳಿ: ಪಂಡಿತಹಳ್ಳಿ , ತಮ್ಮಡಹಳ್ಳಿ , ಹುಲ್ಲಂಬಳ್ಳಿ, ಕೊನ್ನಾಪುರ, ಸುಜ್ಜಲೂರು.
  • ಪಾಂಡವಪುರ: ಮಾಣಿಕ್ಯನಹಳ್ಳಿ, ಲಕ್ಷ್ಮೇಸಾಗರ, ಕನಗನಮರಡಿ, ಕೆನ್ನಾಳು, ರಾಗಿಮುದ್ದನಹಳ್ಳಿ.
  • ಶ್ರೀರಂಗಪಟ್ಟಣ: ಅರಕೆರೆ, ಮಹದೇವಪುರ, ದರಸಗುಪ್ಪೆ, ಬೆಳಗೊಳ, ಬಾಬುರಾಯನಕೊಪ್ಪಲು.
  • ಕೆ.ಆರ್‌.ಪೇಟೆ: ಸೋಮನಹಳ್ಳಿ, ಬೂಕನಕೆರೆ, ತೆಂಡೇಕೆರೆ, ಹಿರಕಳಲೆ, ಕೈಗೋನಹಳ್ಳಿ.
  • ನಾಗಮಂಗಲ: ಚಿಣ್ಯ, ಬಿಂಡಿಗನವಿಲೆ, ದೇವಲಾಪುರ, ತುಪ್ಪದಮಡು, ಕೌಡ್ಲೆ.
click me!