ಘೋಷಾ ಆಸ್ಪತ್ರೆ ಮಹತ್ಕಾರ್ಯ, ಶ್ಲಾಘನೀಯ| ಮೊದಲ ಅಲೆ ಸಂದರ್ಭದಲ್ಲಿ 220ಕ್ಕೂ ಹೆಚ್ಚು ಡೆಲಿವರಿ| ಗರ್ಭಿಣಿಯರೆಲ್ಲರೂ ಸದಾ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು| -6 ತಿಂಗಳ ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿ ಗಂಭೀರ ಉಸಿರಾಟದ ತೊಂದರೆಯಾದರೆ ಸಮಸ್ಯೆ|
ಬೆಂಗಳೂರು(ಮೇ.03): ಶಿವಾಜಿನಗರದ ಎಚ್‌ಎಸ್‌ಐಎಸ್ ಘೋಷ ಆಸ್ಪತ್ರೆಯಲ್ಲಿ ಕಳೆದ 34 ದಿನಗಳಲ್ಲಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ 106 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಆಗಿದೆ. ಕೋವಿಡ್-19ರ ಸಾವು-ನೋವುಗಳ ಸುದ್ದಿಯ ಮಧ್ಯೆ ಹೊಸ ಭರವಸೆಯ ಸುದ್ದಿ ಇದಾಗಿದೆ.
ಘೋಷಾ ಆಸ್ಪತ್ರೆಯು ಕೋವಿಡ್ ಪೀಡಿತ ಗರ್ಭಿಣಿ ಮಹಿಳೆಯರಿಗೆಂದೇ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಇಲ್ಲಿ ಮೊದಲ ಅಲೆಯ ಸಂದರ್ಭದಲ್ಲಿಯೂ 220ಕ್ಕಿಂತ ಹೆಚ್ಚು ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಲಾಗಿತ್ತು.
ಈ ಯಶಸ್ಸಿಗೆ ವೈದ್ಯರು, ನರ್ಸ್‌ಗಳು, ಗ್ರೂಪ್ ’ಡಿ’ ಸಿಬ್ಬಂದಿ ಸೇರಿದಂತೆ ಎಲ್ಲರೂ ಕಾರಣಕರ್ತರು. ಪಿಪಿಇ ಕಿಟ್ ಧರಿಸಿಕೊಂಡು, ಹೆರಿಗೆ, ಸಿಸೇರಿಯನ್ ಮಾಡುವುದು, ಆಮ್ಲಜನಕ ಕೊಡುವುದು ಎಲ್ಲವೂ ಸಾಹಸದ ಕೆಲಸವೇ ಸರಿ. ನಮ್ಮ ಕೋವಿಡ್ ಯೋಧರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ತುಳಸಿ ದೇವಿ ಹೇಳುತ್ತಾರೆ.
undefined
ಕೋವಿಡ್ ಬಾಧಿತರಲ್ಲಿ ಉಸಿರಾಟದ ಸಮಸ್ಯೆ ಆಗುತ್ತದೆ. ಗರ್ಭಿಣಿಯರಲ್ಲಿ ಉಸಿರಾಟದ ತೊಂದರೆ ಆದಾಗ ಅದನ್ನು ನಿರ್ವಹಿಸುವುದು ಕಷ್ಟ. ಆದರೂ ನಮ್ಮ ವೈದ್ಯರು, ನರ್ಸ್‌ಗಳು ಚಾಕಚಕ್ಯತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಡಾ. ತುಳಸಿದೇವಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಕೊರೋನಾ ರಣಕೇಕೆ: ತಿಂಗಳಾದ್ರೂ ಹೆರಿಗೆಯಾದ ಪತ್ನಿ, ಮಗುವನ್ನೂ ನೋಡದ ಅಧಿಕಾರಿ..!
ಗರ್ಭಿಣಿಯರಲ್ಲಿ 37-38 ವಾರಕ್ಕೆ ಅಥವಾ ಹೆರಿಗೆಯ ದಿನಾಂಕಕ್ಕಿಂತ ಎರಡು ವಾರ ಮೊದಲು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲು ಹೇಳುತ್ತೇವೆ. ಅಲ್ಲಿ ಪಾಸಿಟಿವ್ ಬಂದರೆ ಗರ್ಭಿಣಿಯರು ಆತಂಕಕ್ಕೆ ಒಳಗಾಗಬೇಡಿ. ಹೋಮ್ ಐಸೋಲೆಷನ್‌ನಲ್ಲಿದ್ದು ಕೋವಿಡ್ ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಸಲಹೆ ನೀಡುತ್ತಾರೆ.
ಸೋಂಕು ಪತ್ತೆಯಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ದಾಖಲಾದರೆ ಅತ್ಯಗತ್ಯವಾಗಿ ಬೆಡ್ ಬೇಕಾಗಿರುವ ರೋಗಿಗೆ ತೊಂದರೆ ಆಗುತ್ತದೆ. ನಮ್ಮದು 70 ಹಾಸಿಗೆಗಳ ಆಸ್ಪತ್ರೆ. ಇಲ್ಲಿ 10-15 ಮಂದಿ ಸೋಂಕು ಪತ್ತೆಯಾದ ತಕ್ಷಣ ಬಂದು ದಾಖಲಾದರೂ ಸಮಸ್ಯೆ ಆಗುತ್ತದೆ. ಆದ್ದರಿಂದ ಸೋಂಕು ಪತ್ತೆಯಾದರೂ ಹೆರಿಗೆಯ ಸಮಯಕ್ಕೆ ಆಸ್ಪತ್ರೆಗೆ ಬಂದರೆ ಸಾಕು ಎಂದು ತಿಳಿಸುತ್ತಾರೆ.
5-6 ತಿಂಗಳ ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿ ಗಂಭೀರ ಉಸಿರಾಟದ ತೊಂದರೆಯಾದರೆ ಸಮಸ್ಯೆ ಆಗುತ್ತದೆ. ಆಗ ನಾವು ಪ್ರೋನ್ ವ್ಯಾಯಾಮ (ಬೆನ್ನು ಮೇಲೆ ಮಾಡಿ ದಿಂಬನ್ನು ಎದೆಯ ಕೆಳಗೆ ಇಟ್ಟು ಹೊಟ್ಟೆಗೆ ಭಾರ ಹಾಕಿ ಉಸಿರಾಟ ಮಾಡುವುದು) ಮಾಡುವುದು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ತಾಯಿ-ಮಗು ಇಬ್ಬರಿಗೂ ಆಪಾಯ ಇರುತ್ತದೆ. ಕೊನೆಗೆ ತಾಯಿಯನ್ನು ಉಳಿಸಿಕೊಳ್ಳಲು ಗರ್ಭಪಾತ ಮಾಡಬೇಕಾದ ಅನಿವಾರ್ಯ ಸ್ಥಿತಿ ಸೃಷ್ಟಿಯಾಗುತ್ತದೆ. ಆದ್ದರಿಂದ ಗರ್ಭಿಣಿಯರೆಲ್ಲರೂ ಸದಾ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವೈದ್ಯರು ಹೇಳುತ್ತಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona