ಮಹಿಳೆಯರಿಗೂ ಸೇನಾ ನೇತೃತ್ವ: ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು!

By Kannadaprabha NewsFirst Published Feb 18, 2020, 7:41 AM IST
Highlights

ಮಹಿಳೆಯರಿಗೂ ಸೇನಾ ನೇತೃತ್ವ!| ಕಮಾಂಡಿಂಗ್‌ ಹುದ್ದೆಗಳಿಗೆ ನೇಮಕ| ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು| ಏನಿದರ ಪರಿಣಾಮ?

ನವದೆಹಲಿ[ಫೆ.18]: ಶತ್ರುಗಳಿಂದ ದೇಶವನ್ನು ರಕ್ಷಿಸುವ ಹೊಣೆಗಾರಿಕೆ ನಿರ್ವಹಿಸುತ್ತಿರುವ ಭಾರತೀಯ ಸಶಸ್ತ್ರ ಪಡೆಗಳಲ್ಲಿ ದಶಕಗಳಿಂದ ಇರುವ ಲಿಂಗ ಅಸಮಾನತೆಯನ್ನು ಸುಪ್ರೀಂಕೋರ್ಟ್‌ ತೊಡೆದು ಹಾಕಿದೆ. ಸೇನಾ ಪಡೆಗಳನ್ನು ಮುನ್ನಡೆಸುವ ಹೊಣೆಗಾರಿಕೆಯಾದ ಕಮಾಂಡಿಂಗ್‌ ಸ್ಥಾನವನ್ನು ಪುರುಷರ ರೀತಿಯಲ್ಲೇ ಮಹಿಳೆಯರೂ ನಿರ್ವಹಿಸುವುದಕ್ಕೆ ಅವಕಾಶ ಕಲ್ಪಿಸಿ ಐತಿಹಾಸಿಕ ತೀರ್ಪನ್ನು ಸೋಮವಾರ ಪ್ರಕಟಿಸಿದೆ. ಇದೇ ವೇಳೆ, ಮುಂದಿನ ಮೂರು ತಿಂಗಳೊಳಗೆ ಮಹಿಳೆಯರಿಗೆ ಪರ್ಮನೆಂಟ್‌ ಕಮಿಷನ್‌ (ನಿವೃತ್ತಿಯಾಗುವವರೆಗೂ ಕೆಲಸ) ಮಂಜೂರು ಮಾಡಬೇಕು. ಈಗಾಗಲೇ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಕೂಡದು ಎಂದು ಕಟ್ಟುನಿಟ್ಟಿನ ತಾಕೀತು ಮಾಡಿದೆ.

ಮಹಿಳೆಯರಿಗೆ ದೈಹಿಕವಾಗಿ ಇತಿ-ಮಿತಿಗಳಿಗೆ ಎಂಬ ಕೇಂದ್ರ ಸರ್ಕಾರದ ವಾದವನ್ನು ಕಳವಳಕಾರಿ ಎಂದು ಬಣ್ಣಿಸಿರುವ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠ, ಮಹಿಳೆಯರು ಈ ಹಿಂದೆಯೇ ದೇಶಕ್ಕೆ ಸಾಕಷ್ಟುಗೌರವ ತಂದಿದ್ದಾರೆ. ಸಶಸ್ತ್ರ ಪಡೆಗಳಲ್ಲಿರುವ ಲಿಂಗ ಅಸಮಾನತೆಗೆ ತೆರೆ ಎಳೆಯಲು ಸರ್ಕಾರದ ಮನಸ್ಥಿತಿಯಲ್ಲೇ ಬದಲಾವಣೆ ಆಗಬೇಕು. ಕಮಾಂಡ್‌ ಹುದ್ದೆಗಳನ್ನು ಮಹಿಳೆಯರಿಗೆ ನೀಡಲು ಯಾವುದೇ ಅಡ್ಡಿ ಇರಕೂಡದು ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪು ಆಲಿಸಲು ಬಂದಿದ್ದ ಹಾಲಿ ಸೇನೆಯಲ್ಲಿರುವ ಮಹಿಳಾ ಸಿಬ್ಬಂದಿ, ತೀರ್ಪು ಕೇಳಿ ಸಂಭ್ರಮ ಪಟ್ಟಿದ್ದಾರೆ. ಈ ತೀರ್ಪಿನಿಂದ ಸಶಸ್ತ್ರ ಪಡೆಗಳಲ್ಲಿರುವ ಮಹಿಳೆಯರು ಮಾತ್ರವೇ ಅಲ್ಲದೇ ದೇಶಾದ್ಯಂತ ಇರುವ ಸ್ತ್ರೀಯರ ಏಳ್ಗೆಗೆ ಅನುಕೂಲವಾಗಲಿದೆ. ಯಾರು ಅರ್ಹತೆ ಪಡೆಯುತ್ತಾರೋ ಅವರಿಗೆ ಕಮಾಂಡ್‌ ಹುದ್ದೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯರ ಪರ ವಾದ ಮಂಡಿಸಿದ ಬಿಜೆಪಿ ಸಂಸದೆ ಕೂಡ ಆಗಿರುವ ಮೀನಾಕ್ಷಿ ಲೇಖಿ, ಪುರುಷ ಸಹೋದ್ಯೋಗಿಗಳಿಗೆ ಸಶಸ್ತ್ರ ಪಡೆಗಳಲ್ಲಿ ಇದ್ದಷ್ಟೇ ಸಮಾನ ಹಕ್ಕನ್ನು ಸುಪ್ರೀಂಕೋರ್ಟ್‌ ನೀಡಿದೆ. ಈ ಆದೇಶದ ಮೂಲಕ ಮಹಿಳೆಯರ ಬಹಳ ಹಿಂದಿನ ಹಕ್ಕು ದತ್ತವಾಗಿದೆ ಎಂದು ಬಣ್ಣಿಸಿದ್ದಾರೆ.

ಪುರುಷರಷ್ಟುಸಾಮರ್ಥ್ಯ ಹೊಂದಿಲ್ಲದ ಕಾರಣ ಮಹಿಳೆಯರಿಗೆ ಕಮಾಂಡ್‌ ಹುದ್ದೆ ಅಥವಾ ಪರ್ಮನೆಂಟ್‌ ಕಮಿಷನ್‌ ನೀಡಲಾಗದು ಎಂದು ನ್ಯಾಯಾಲಯದಲ್ಲಿ ವಾದಿಸುವ ಮೂಲಕ ಕೇಂದ್ರ ಸರ್ಕಾರವು ಭಾರತೀಯ ಮಹಿಳೆಯರಿಗೆ ಅಗೌರವ ತಂದಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಏನಿದು ಪ್ರಕರಣ?:

ಸೇನೆಗೆ ಎರಡು ವಿಧದಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಒಂದು- ಶಾರ್ಟ್‌ ಸರ್ವಿಸ್‌ ಕಮಿಷನ್‌ (ಎಸ್‌ಎಸ್‌ಸಿ), ಮತ್ತೊಂದು- ಪರ್ಮನೆಂಟ್‌ ಕಮಿಷನ್‌. ಎಸ್‌ಎಸ್‌ಸಿ ಅಡಿ ನೇಮಕಾತಿ ಆದವರಿಗೆ 10 ವರ್ಷ ಹುದ್ದೆ ಇರುತ್ತದೆ. ಅದನ್ನು ಇನ್ನೂ 4 ವರ್ಷ ವಿಸ್ತರಿಸಬಹುದು. ಆದರೆ, ಪರ್ಮನೆಂಟ್‌ ಕಮಿಷನ್‌ ಅಡಿ ನೇಮಕ ಆದವರಿಗೆ ಅವರ ನಿವೃತ್ತಿ ವಯಸ್ಸಿನವರೆಗೂ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶವಿರುತ್ತದೆ. ಸೇನೆಯ 10 ವಿಭಾಗಗಳಿಗೆ ಕಳೆದ ವರ್ಷದಿಂದ ಪರ್ಮನೆಂಟ್‌ ಕಮಿಷನ್‌ ಅಡಿ ನೇಮಕವನ್ನು ರಕ್ಷಣಾ ಪಡೆಗಳು ಮಾಡಿಕೊಳ್ಳುತ್ತಿವೆ. ಆದರೆ ಒಂದು ಸೇನಾ ಪಡೆಯನ್ನು ನಿರ್ವಹಿಸುವ ಜವಾಬ್ದಾರಿಯಾದ ಕಮಾಂಡಿಂಗ್‌ ಹುದ್ದೆಗಳಿಗೆ ವಿವಿಧ ಕಾರಣಗಳನ್ನು ನೀಡಿ ಪರ್ಮನೆಂಟ್‌ ಕಮಿಷನ್‌ ನೇಮಕಾತಿ ಮಾಡಿಕೊಳ್ಳುತ್ತಿಲ್ಲ.

ಪರ್ಮನೆಂಟ್‌ ಕಮಿಷನ್‌ ಅಡಿ ನೇಮಕ ಮಾಡಿಕೊಳ್ಳಬೇಕು ಎಂದು ಈ ಹಿಂದೆಯೇ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. 2010ರಲ್ಲಿ ದೆಹಲಿ ಹೈಕೋರ್ಟ್‌, ಮಹಿಳೆಯರಿಗೆ ಪರ್ಮನೆಂಟ್‌ ಕಮಿಷನ್‌ ಮಂಜೂರು ಮಾಡುವಂತೆ ಸೂಚಿಸಿತ್ತು. ಇದರ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತಾದರೂ, ನ್ಯಾಯಾಲಯ ತಡೆ ಕೊಟ್ಟಿರಲಿಲ್ಲ. ಮಹಿಳೆಯರಿಗೆ ಶಾರೀರಿಕವಾಗಿ ಇತಿ-ಮಿತಿಗಳಿಗೆ ಎಂದು ಸರ್ಕಾರ ವಾದಿಸಿತ್ತು. ಇದೀಗ ಈ ಪ್ರಕರಣದಲ್ಲಿ ತೀರ್ಪು ಬಂದಿದ್ದು, ಕಮಾಂಡಿಂಗ್‌ ಹುದ್ದೆಯನ್ನು ನೀಡುವಂತೆ ನ್ಯಾಯಾಲಯ ತಾಕೀತು ಮಾಡಿದೆ.

ಈ ನಡುವೆ, 2014ರ ನಂತರ ನೇಮಕ ಆದವರಿಗೆ ಮಾತ್ರ ಪರ್ಮನೆಂಟ್‌ ಕಮಿಷನ್‌ ನೀಡಲಾಗುತ್ತದೆ ಎಂದು ಸರ್ಕಾರ ವಾದಿಸಿತ್ತು. ಅದನ್ನೂ ತಿರಸ್ಕರಿಸಿರುವ ಕೋರ್ಟ್‌, ಎಷ್ಟುವರ್ಷ ಸೇವೆ ಸಲ್ಲಿಸಿದ್ದಾರೆ ಎಂಬುದನ್ನು ಕೈಬಿಟ್ಟು ಎಲ್ಲ ಮಹಿಳೆಯರಿಗೂ ಪರ್ಮನೆಂಟ್‌ ಕಮಿಷನ್‌ ನೀಡಲು ಸೂಚಿಸಿದೆ.

ಏನಿದರ ಪರಿಣಾಮ?

ಸೇನೆಯಲ್ಲಿ ಹಾಲಿ ಇರುವ ನಿಯಮಗಳ ಪ್ರಕಾರ, ಕರ್ನಲ್‌ ಹುದ್ದೆವರೆಗೆ ಪ್ರತಿಭೆ ಆಧರಿತವಾಗಿ ಪುರುಷರಂತೆ ಮಹಿಳೆಯರೂ ಬಡ್ತಿ ಪಡೆಯಬಹುದು. ಒಬ್ಬ ಕರ್ನಲ್‌ 850 ಪುರುಷ ಯೋಧರು ಇರುವ ಒಂದು ಬೆಟಾಲಿಯನ್‌ ಅನ್ನು ಮುನ್ನಡೆಸಬೇಕಾಗುತ್ತದೆ. ಆದರೆ ಯೋಧರನ್ನು ಕಮಾಂಡ್‌ ಮಾಡುವ ಈ ಹುದ್ದೆಯನ್ನು ಮಹಿಳೆಯರಿಗೆ ನೀಡುತ್ತಿಲ್ಲ. ಏಕೆಂದರೆ ಇನ್‌ಫೆಂಟ್ರಿ, ಆರ್ಟಿಲರಿಯಂತಹ ಕಾಳಗದ ಹೊಣೆಗಾರಿಕೆಗೆ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿಲ್ಲ. ಇದೀಗ ಪರ್ಮನೆಂಟ್‌ ಕಮಿಷನ್‌ನಡಿ ಕಮಾಂಡಿಂಗ್‌ ಜವಾಬ್ದಾರಿಯನ್ನೂ ನೀಡಲು ನ್ಯಾಯಾಲಯ ಸೂಚಿಸಿರುವುದರಿಂದ ಸೇನಾ ಪಡೆಗಳನ್ನು ಮಹಿಳೆಯರೂ ಮುನ್ನಡೆಸುವ ಅವಕಾಶ ಪಡೆಯಲಿದ್ದಾರೆ. ಸೇನಾ ಕಾರ್ಯಾಚರಣೆಯ ನೇತೃತ್ವ ಹೊತ್ತುಕೊಳ್ಳಲಿದ್ದಾರೆ. ಭವಿಷ್ಯದಲ್ಲಿ ಸೇನೆಯ ಉನ್ನತ ಹುದ್ದೆಗೂ ಏರಲಿದ್ದಾರೆ.

click me!