ಅನರ್ಹತೆ ನಿರ್ಧಾರ ಅಧಿಕಾರ ಸ್ಪೀಕರ್‌ಗೆ ಬೇಡ : ಸುಪ್ರೀಂ

By Kannadaprabha NewsFirst Published Jan 22, 2020, 11:38 AM IST
Highlights

ಸಂಸದ-ಶಾಸಕರ ಅನರ್ಹತೆಯನ್ನು ನಿರ್ಧರಿಸುವ ಹೊಣೆಯನ್ನು ಸ್ಪೀಕರ್‌ ಬದಲಿಗೆ ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದ ಕಾಯಂ ನ್ಯಾಯಾಧಿಕರಣಕ್ಕೆ ವಹಿಸುವ ಬಗ್ಗೆ ಸುಪ್ರೀಂಕೋರ್ಟ್ 

ನವದೆಹಲಿ [ಜ.22]:  ‘ಸಭಾಧ್ಯಕ್ಷರು ಕೂಡ ಒಂದು ರಾಜಕೀಯ ಪಕ್ಷಕ್ಕೆ ಸೇರಿದವರಾಗಿರುತ್ತಾರೆ. ಹೀಗಾಗಿ ಸಂಸದ-ಶಾಸಕರ ಅನರ್ಹತೆಯನ್ನು ನಿರ್ಧರಿಸುವ ಹೊಣೆಯನ್ನು ಸ್ಪೀಕರ್‌ ಬದಲಿಗೆ ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದ ಕಾಯಂ ನ್ಯಾಯಾಧಿಕರಣಕ್ಕೆ ವಹಿಸುವ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರಲು ಸಂಸತ್ತು ಗಂಭೀರ ಚಿಂತನೆ ನಡೆಸಬೇಕು’ ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ಸಲಹೆ ನೀಡಿದೆ.

ಮಣಿಪುರದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದ ಸಚಿವ ಶ್ಯಾಮಕುಮಾರ್‌ ಅವರ ಅನರ್ಹತೆ ಕೋರಿ ಇಬ್ಬರು ಕಾಂಗ್ರೆಸ್‌ ಶಾಸಕರು ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸ್ಪೀಕರ್‌ ವಿಳಂಬ ಮಾಡುತ್ತಿರುವ ಕಾರಣ, ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾ ರೋಹಿನ್ಟನ್‌ ನಾರಿಮನ್‌ ನೇತೃತ್ವದ ತ್ರಿಸದಸ್ಯ ಪೀಠ, ಈ ಮಹತ್ವದ ಸಲಹೆಯನ್ನು ಸಂಸತ್ತಿಗೆ ನೀಡಿದೆ.

‘ಸ್ಪೀಕರ್‌ ಕೂಡ ಒಂದು ರಾಜಕೀಯ ಪಕ್ಷಕ್ಕೆ ಸೇರಿರುತ್ತಾರೆ. ಅಲ್ಲದೆ, ಇತ್ತೀಚಿನ ಕೆಲವು ಪ್ರಕರಣಗಳನ್ನು ಗಮನಿಸಿದಾಗ ಸ್ಪೀಕರ್‌ ಅವರ ಸ್ವಾತಂತ್ರ್ಯದ ಬಗ್ಗೆ ಪದೇ ಪದೇ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಹಾಗಾಗಿ ಶಾಸಕ-ಸಂಸದರ ಅನರ್ಹತೆಯನ್ನು ಸ್ಪೀಕರ್‌ ಬದಲಿಗೆ ಸ್ವತಂತ್ರ ಸಂಸ್ಥೆಗೆ ವಹಿಸುವುದು ಸೂಕ್ತ. ಇದು ಇಂದಿನ ತುರ್ತು ಅಗತ್ಯ’ ಎಂದು ಪೀಠ ಹೇಳಿತು.

ಸಿಎಎ ವಿರುದ್ಧ ಕಾನೂನು ಸಮರಕ್ಕೆ 320 ಕ್ವಿಂಟಲ್‌ ಭತ್ತ ಕೊಟ್ಟ ರೈತರು!.

3 ತಿಂಗಳಲ್ಲಿ ಅನರ್ಹತೆ ನಿರ್ಧರಿಸಬೇಕು:  ‘ಒಂದು ವೇಳೆ ನಿಯಮಬಾಹಿರವಾಗಿ ಪಕ್ಷಾಂತರ ಮಾಡಿದರೆ ಶಾಸಕ/ಸಂಸದರು ಒಂದು ದಿನ ಕೂಡ ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ. ಇಂಥ ಸಂದರ್ಭದಲ್ಲಿ ಅನರ್ಹತೆ ಅರ್ಜಿಗಳನ್ನು ಸಭಾಧ್ಯಕ್ಷರು ಅನಿರ್ದಿಷ್ಟಅವಧಿಗೆ ಬಾಕಿ ಇಟ್ಟುಕೊಂಡು ಕೂಡದೇ ಕಾಲಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಸ್ಪೀಕರ್‌ ಅವರು 3 ತಿಂಗಳೊಳಗೆ ಇಂಥ ಅರ್ಜಿಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ’ ಎಂದು ಹೇಳಿತು.

ಗಡಿವಿವಾದ: ಸುಪ್ರೀಂ ತೀರ್ಪಿಗೆ ಬದ್ಧ ಎಂದ ಸಂಜಯ ರಾವುತ್‌!...

ಇನ್ನು ಮಣಿಪುರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪೀಠ, ‘ಮಣಿಪುರ ವಿಧಾನಸಭಾಧ್ಯಕ್ಷರು ಸಚಿವ ಶ್ಯಾಮಕುಮಾರ್‌ ಅನರ್ಹತೆಗೆ ಸಲ್ಲಿಸಲಾಗಿರುವ ಅರ್ಜಿಗಳನ್ನು 4 ವಾರದಲ್ಲಿ ವಿಲೇವಾರಿ ಮಾಡಬೇಕು. ಒಂದು ವೇಳೆ 4 ವಾರದಲ್ಲಿ ಇತ್ಯರ್ಥವಾಗದೇ ಹೋದರೆ, ಅನರ್ಹತೆ ಕೋರಿ ಅರ್ಜಿ ಸಲ್ಲಿಸಿರುವ ಇಬ್ಬರು ಕಾಂಗ್ರೆಸ್‌ ಶಾಸಕರು ಪುನಃ ಸುಪ್ರೀಂ ಕೋರ್ಟ್‌ಗೆ ಬರಬಹುದು’ ಎಂದು ನ್ಯಾ. ನಾರಿಮನ್‌ ಹೇಳಿದರು.

ಇತ್ತೀಚೆಗೆ ಕರ್ನಾಟಕ ವಿಧಾನಸಭೆಯಲ್ಲಿ ಕೂಡ ಇಂಥದ್ದೇ ವಿವಾದ ಸೃಷ್ಟಿಯಾಗಿತ್ತು. ಸ್ಪೀಕರ್‌ ಅವರು ತಮ್ಮ ರಾಜೀನಾಮೆ ಪರಿಗಣಿಸದೇ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಇತರ ಶಾಸಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

click me!