ರೇಪ್‌ಗಳಿಗೆ ಪೋಷಕರೇ ನೇರ ಹೊಣೆ: ಬಿಜೆಪಿ ಶಾಸಕನ ವಿವಾದ!

By Suvarna NewsFirst Published Oct 5, 2020, 1:13 PM IST
Highlights

ಉತ್ತರ ಪ್ರದೇಶದ ಹಾಥ್ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣ|  ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ| ರೇಪ್‌ಗಳಿಗೆ ಪೋಷಕರೇ ನೇರ ಹೊಣೆ

ಬಲಿಯಾ(ಅ.05): ಉತ್ತರ ಪ್ರದೇಶದ ಹಾಥ್ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿರುವಾಗಲೇ, ಇಲ್ಲಿನ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ‘ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮತ್ತು ಹತ್ಯೆಗೆ ಪೋಷಕರೇ ನೇರ ಹೊಣೆ. ತಂದೆ-ತಾಯಿ ತಮ್ಮ ಹೆಣ್ಣುಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ಕಲಿಸಿಕೊಟ್ಟರೆ ಹೀಗಾಗುವುದಿಲ್ಲ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಾಥ್ರಸ್‌ ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ‘ಸರ್ಕಾರವಾಗಲೀ, ಆಯುಧಗಳಿಂದಾಗಲೀ ಇಂಥ ಅಪರಾಧಗಳನ್ನು ತಡೆಗಟ್ಟುವುದು ಸಾಧ್ಯವಿಲ್ಲ. ಎಲ್ಲ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ಕಲಿಸಿಕೊಡಬೇಕು. ಒಳ್ಳೆಯ ಆಡಳಿತ ಮತ್ತು ಒಳ್ಳೆಯ ಮೌಲ್ಯಗಳಿಂದ ದೇಶವನ್ನು ಸುಂದರವನ್ನಾಗಿಸಬಹುದು’ ಎಂದಿದ್ದಾರೆ.

ವಿವಾದಾದತ್ಮಕ ಹೇಳಿಕೆಗಳಿಂದ ಹೆಸರಾಗಿರುವ ಸುರೇಂದ್ರ ಸಿಂಗ್‌, ಈ ಹಿಂದೆ ಸರ್ಕಾರಿ ಅಧಿಕಾರಿಗಳನ್ನು ವೇಶ್ಯೆಯರಿಗೆ ಹೋಲಿಸಿದ್ದರು.

ಹತ್ರಾಸ್ ರೇಪ್ ಕೇಸ್: ಏನಿದು ಪ್ರಕರಣ?:

ಯುವತಿ ಸೆ.14ರಂದು ದನಕ್ಕೆ ಮೇವು ತರಲೆಂದು ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿ ಮೇಲ್ಜಾತಿಯ ನಾಲ್ಕು ಮಂದಿ ದುಪ್ಪಟ್ಟವನ್ನು ಕುತ್ತಿಗೆಗೆ ಸುತ್ತಿ ಎಳೆದೊಯ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಯುವತಿಯ ಬೆನ್ನುಮೂಳೆಗೆ ಬಲವಾದ ಪೆಟ್ಟುಬಿದ್ದು ತೀವ್ರವಾಗಿ ಗಾಯಗೊಂಡಿದ್ದಳು. ಮಗಳ ಚೀರಾಟವನ್ನು ಕೇಳಿಸಿಕೊಂಡ ತಾಯಿ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಳು. ಈ ವೇಳೆ ಪೊಲೀಸರು ಅತ್ಯಾಚಾರ ದೂರು ಸ್ವೀಕರಿಸದೇ ಅಮಾನವೀಯವಾಗಿ ನಡೆದುಕೊಂಡಿದ್ದರು. ಬಳಿಕ ಸೆ.22ರಂದು ಕಾಟಾಚಾರಕ್ಕೆ ಯುವತಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದರು ಎಂದು ದೂರಲಾಗಿದೆ.

ತೀವ್ರ ಹಲ್ಲೆಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿಗೆ ಆರಂಭದಲ್ಲಿ ಅಲಿಗಢ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್‌ ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸೆ.29ರಂದು ಯುವತಿ ಸಾವಿಗೀಡಾಗಿದ್ದಳು. ಆ ಬಳಿಕ ಯುವತಿಯ ಮೃತದೇಹವನ್ನುಕುಟುಂಬಕ್ಕೂ ನೀಡದೇ ಹಾಥ್ರಸ್‌ಗೆ ತಂದು ಪೊಲೀಸರು ರಾತ್ರೋರಾತ್ರಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಈ ಘಟನೆಯ ಬಳಿಕ ಅತ್ಯಾಚಾರ ಸಂತ್ರಸ್ತ ಯುವತಿಯ ಸಾವಿನ ಪ್ರಕರಣ ದೇಶದ ಗಮನ ಸೆಳೆದಿತ್ತು.

click me!