ಭಾರತ- ಏನಾಗಿತ್ತು? ಏನಾಗಿದೆ?: ಗುರಿ ಸಾಧನೆಯ ಇಣುಕು ನೋಟ!

By Suvarna NewsFirst Published Jan 1, 2020, 9:14 AM IST
Highlights

ಅಭಿವೃದ್ಧಿ, ಬಡತನ ನಿರ್ಮೂಲನೆ, ಆಹಾರ ಹೀಗೆ ವಿವಿಧ 10 ಕ್ಷೇತ್ರಗಳಲ್ಲಿ ಭಾರತದ ಸ್ಥಿತಿ ಹೇಗಿತ್ತು? ಈಗ ಹೇಗಿದೆ?| ಇಲ್ಲಿದೆ ಗಿರಿ ಸಾಧನೆಯ ಒಂದು ಇಣುಕು ನೋಟ

ಅಭಿವೃದ್ಧಿ

10 ವರ್ಷಗಳ ಹಿಂದೆ ಭಾರತ ಈ ದಶಕದಲ್ಲಿ ಪ್ರತಿ ವರ್ಷ ಸರಾಸರಿ ಶೇ.೮ರಿಂದ ೮.೫ರಷ್ಟು ಜಿಡಿಪಿ ಬೆಳವಣಿಗೆ ದರ ದಾಖಲಿಸಬೇಕೆಂದು ಸಂಕಲ್ಪ ಮಾಡಿತ್ತು. ಅದು 2010ರಿಂದ 2013ರವರೆಗೆ ಸಾಧ್ಯವಾಗಲಿಲ್ಲ. ನಂತರದ 4 ವರ್ಷ ಈ ದರದಲ್ಲಿ ಅಭಿವೃದ್ಧಿ ಸಾಧಿಸುವುದು ಸಾಧ್ಯವಾಯಿತು. ಈಗ ಮತ್ತೆ ಜಿಡಿಪಿ ಬೆಳವಣಿಗೆ ಕುಂಠಿತವಾಗಿದೆ. ಸರಾಸರಿ ತೆಗೆದುಕೊಂಡರೆ ತಕ್ಕಮಟ್ಟಿಗೆ ಮಾತ್ರ ಅಭಿವೃದ್ಧಿಯಾಗಿದೆ.

ಬಡತನ ನಿರ್ಮೂಲನೆ

2020ರೊಳಗೆ ಭಾರತವನ್ನು ಬಡತನದಿಂದ ಸಂಪೂರ್ಣ ಮೇಲೆತ್ತಬೇಕೆಂದು ಕೇಂದ್ರ ಸರ್ಕಾರ ಸಂಕಲ್ಪ ಮಾಡಿತ್ತು. ಈ ನಿಟ್ಟಿನಲ್ಲಿ ಅದ್ಭುತ ಪ್ರಗತಿಯಾಗಿದ್ದರೂ, ಅಂತಾರಾಷ್ಟ್ರೀಯ ಬಡತನದ ಮಾನದಂಡದ ಪ್ರಕಾರ ಇಂದಿಗೂ ೬೦% ಜನ ದಿನಕ್ಕೆ ಸುಮಾರು 210 ರು.ಗಿಂತ ಕಡಿಮೆ ಗಳಿಸುತ್ತಿದ್ದಾರೆ. ಇವರೆಲ್ಲರೂ ಬಡವರೇ. ಹೀಗಾಗಿ ಗುರಿ ಅರ್ಧಂಬರ್ಧ ಈಡೇರಿದೆ.

ಎಲ್ಲರಿಗೂ ಆಹಾರ

ದೇಶದಲ್ಲಿ ಯಾರೂ ಉಪವಾಸ ಇರಬಾರದು ಎಂದು 2020 ರೊಳಗೆ ಎಲ್ಲರಿಗೂ ಆಹಾರ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಜಾಗತಿಕ ಸಮೀಕ್ಷೆಗಳ ಪ್ರಕಾರ 20 ಕೋಟಿ ಭಾರತೀಯರು ಇಂದಿಗೂ ಹಸಿದು ಮಲಗುತ್ತಾರೆ. 2019ರಲ್ಲಿ ಬಿಡುಗಡೆಯಾದ ಗ್ಲೋಬಲ್ ಹಂಗರ್ ಇಂಡೆಕ್ಸ್‌ನಲ್ಲಿ 117 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 102ನೇ ಸ್ಥಾನದಲ್ಲಿದೆ.

ಅಪೌಷ್ಟಿಕತೆ ನಿವಾರಣೆ

ಏನೆಲ್ಲಾ ಕಾರ್ಯಕ್ರಮ ಹಮ್ಮಿಕೊಂಡರೂ ಇಂದಿಗೂ ದೇಶದಲ್ಲಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಶೇ.38ರಷ್ಟು ಮಕ್ಕಳು ಕಡಿಮೆ ತೂಕ, ಅರ್ಥಾತ್ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಷ್ಟೊಂದು ಅಪೌಷ್ಟಿಕತೆ ಹೊಂದಿರುವ ಜಗತ್ತಿನ ನಾಲ್ಕು ದೇಶಗಳಲ್ಲಿ ಭಾರತವೂ ಒಂದು!

ಜೀವಿತಾವಧಿ ಹೆಚ್ಚ ಳ

2020ರೊಳಗೆ ಭಾರತೀಯರ ಜೀವಿತಾವಧಿಯನ್ನು 69 ವರ್ಷಕ್ಕೆ ಹೆಚ್ಚಿಸಬೇಕೆಂದು ಗುರಿ ನಿಗದಿಪಡಿಸಿಕೊಳ್ಳಲಾಗಿತ್ತು. 2010ರಲ್ಲಿ ಇದು 66ವರ್ಷವಿತ್ತು. ಈ ಗುರಿ ಸಂಪೂರ್ಣ ಈಡೇರಿದ್ದು, ಈಗ ಭಾರತೀಯರ ಸರಾಸರಿ ಆಯಸ್ಸು 69ಕ್ಕೆ ಏರಿಕೆಯಾಗಿದೆ.

ನಿರುದ್ಯೋಗ ನಿವಾರನೆ

ದೇಶದಲ್ಲಿರುವ ಕೆಲಸ ಮಾಡುವ ವಯಸ್ಸಿನ ಎಲ್ಲಾ ಶೇ.೬೫ರಷ್ಟು ಜನರಿಗೆ ೨೦೨೦ರೊಳಗೆ ಉದ್ಯೋಗ ಒದಗಿಸುವ ಗುರಿಯನ್ನು ೨೦೦೦ನೇ ಇಸ್ವಿಯಲ್ಲಿ ಹಾಕಿಕೊಳ್ಳಲಾಗಿತ್ತು. ಆದರೆ, ವರ್ಷದಿಂದ ವರ್ಷಕ್ಕೆ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಲೇ ಹೋಯಿತೇ ವಿನಃ ಕಡಿಮೆಯಾಗಲಿಲ್ಲ. ಈಗ ದೇಶದಲ್ಲಿ ಶೇ.23ರಷ್ಟು ಶಿಕ್ಷಿತರು ನಿರುದ್ಯೋಗಿಗಳಿದ್ದಾರೆ. ನಿರುದ್ಯೋಗದ ಪ್ರಮಾಣ 45 ವರ್ಷಗಳಲ್ಲೇ ಈಗ ಅತಿ ಹೆಚ್ಚಿದೆ. ಹೀಗಾಗಿ ಉದ್ಯೋಗ ಒದಗಿಸುವ ಗುರಿ ವಿಫಲವಾಗಿದೆ.

ಉನ್ನ ತ ಶಿಕ್ಷಣದ ಪ್ರಮಾಣ ಹೆಚ್ಚಳ

ವಿವಿಧ ಯೋಜನೆಗಳ ಮೂಲಕ ದೇಶದಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಹೈಸ್ಕೂಲ್ ಹಾಗೂ ಪಿಯುಸಿ ನಂತರ ಉನ್ನತ ಶಿಕ್ಷಣಕ್ಕೆ ಸೇರುವವರ ಸಂಖ್ಯೆ ಬಹಳ ಕಡಿಮೆಯಿದೆ. ಇದನ್ನು 2020ರೊಳಗೆ ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟಕ್ಕೆ ಏರಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಈಗಲೂ ಉನ್ನತ ಶಿಕ್ಷಣಕ್ಕೆ ಸೇರುವವರ ಸಂಖ್ಯೆ ಶೇ.23 ಮಾತ್ರ ಇದೆ. ಅಮೆರಿಕದಲ್ಲಿ ಇದು ಶೇ.57, ಬ್ರಿಟನ್ ಹಾಗೂ ಚೀನಾದಲ್ಲಿ ಶೇ.39 ಇದೆ.

ಎಲ್ಲರಿಗೂ ಆರೋಗ್ಯ ಸೇವೆ

ದೇಶದ ಎಲ್ಲರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಗಳನ್ನು 2020ರೊಳಗೆ ನೀಡಬೇಕೆಂದು ಕೇಂದ್ರ ಸರ್ಕಾರ ಗುರಿ ಹಾಕಿಕೊಂಡಿತ್ತು. ಆಯುಷ್ಮಾನ್ ಭಾರತ್ ಯೋಜನೆಯನ್ನೂ ತರಲಾಯಿತು. ಆದರೆ, ಇಂದಿಗೂ ಶೇ.80ರಷ್ಟು ಜನರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಸಿಗುತ್ತಿಲ್ಲ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಗತಿ

2020ರೊಳಗೆ ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 40 ಲಕ್ಷ ಜನರಿಗೆ ಉದ್ಯೋಗ ನೀಡಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿತ್ತು. ಅದರಂತೆ ಈಗ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಖ್ಯೆ 40 ಲಕ್ಷಕ್ಕೆ ತಲುಪಿದೆ. ಇದರ ಜೊತೆಗೆ ಐಟಿ ಸಂಬಂಧಿ ಕ್ಷೇತ್ರದಲ್ಲಿ ೮೦ ಲಕ್ಷ ಉದ್ಯೋಗಿ ಗಳು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಗುರಿ ಈಡೇರಿದೆ.

ಕೈಗೆಟಕುವ ವಿಮಾನಯಾನ

2000ನೇ ಇಸ್ವಿಯಲ್ಲಿ ದೇಶದಲ್ಲಿ ಒಂದು ವರ್ಷಕ್ಕೆ 1.4 ಕೋಟಿ ಜನ ವಿಮಾನ ಪ್ರಯಾಣ ಮಾಡುತ್ತಿದ್ದರು. ಇದನ್ನು 2020ರೊಳಗೆ ಕನಿಷ್ಠ ಹತ್ತು ಪಟ್ಟು ಹೆಚ್ಚಿಸಬೇಕು ಎಂಬ ಗುರಿಯನ್ನು ಸರ್ಕಾರ ನಿಗದಿಪಡಿಸಿಕೊಂಡಿತ್ತು. ಈಗ ದೇಶದಲ್ಲಿ ಪ್ರತಿ ವರ್ಷ ವಿಮಾನಯಾನ ಮಾಡುವವರ ಸಂಖ್ಯೆ 30 ಕೋಟಿಗೆ ಏರಿದೆ.

click me!