ಮುಂಡ ಮಧ್ಯಪ್ರದೇಶದಲ್ಲಿ, ರುಂಡ ಬೆಂಗಳೂರಿನಲ್ಲಿ ಪತ್ತೆ!

By Kannadaprabha NewsFirst Published Oct 17, 2020, 7:58 AM IST
Highlights

ಮುಂಡ ಮಧ್ಯಪ್ರದೇಶದಲ್ಲಿ, ರುಂಡ ಬೆಂಗಳೂರಿನಲ್ಲಿ ಪತ್ತೆ!| ಬೇತುಲ್‌ನಲ್ಲಿ ರೈಲಿಗೆ ಸಿಲುಕಿದ ವ್ಯಕ್ತಿ| ಮುಂಡ ಮಾತ್ರ ಹಳಿ ಪಕ್ಕ ಬಿತ್ತು| ರುಂಡ ರೈಲು ಎಂಜಿನ್‌ಗೆ ಸಿಲುಕಿತು| 1300 ಕಿ.ಮೀ. ದೂರದ ಬೆಂಗಳೂರು ತಲುಪಿದ ರುಂಡ!

ಬೇತುಲ್‌(ಅ.17): ಮಧ್ಯಪ್ರದೇಶದ ಬೇತುಲ್‌ನ ರೈಲ್ವೆ ಹಳಿ ಸಮೀಪ 15 ದಿನದ ಹಿಂದೆ ವ್ಯಕ್ತಿಯೊಬ್ಬನ ರುಂಡವಿಲ್ಲದ ಮುಂಡ (ದೇಹ) ಪತ್ತೆ ಆಗಿತ್ತು. ಈಗ ರುಂಡವು ಬೇತುಲ್‌ನಿಂದ 1300 ಕಿ.ಮೀ. ದೂರದ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ರುಂಡವು ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ನಲ್ಲಿ ಸಿಲುಕಿಕೊಂಡಿತ್ತು. ಅದು ಬೆಂಗಳೂರಿನಲ್ಲಿದ್ದ ಎಂಜಿನ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಸತ್ತ ವ್ಯಕ್ತಿಯ ದೇಹ ಅ.3ರಂದು ಬೇತುಲ್‌ ಸನಿಹದ ಮಚ್ನಾ ಸೇತುವೆ ಸನಿಹ ಪತ್ತೆಯಾಗಿತ್ತು. ಆದರೆ ರುಂಡ ಇರಲಿಲ್ಲ. ಪೊಲೀಸರು ತನಿಖೆ ನಡೆಸಿದಾಗ ನವದೆಹಲಿ-ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಈತನ ಮೇಲೆ ಹರಿದುಹೋಗಿತ್ತು ಎಂದು ತಿಳಿದುಬಂತು.

ಇದರ ನಡುವೆಯೇ ಅ.4ರಂದು ಬೆಂಗಳೂರು ತಲುಪಿದ್ದ ರೈಲಿನ ಎಂಜಿನ್‌ನಲ್ಲಿ ರುಂಡವೊಂದು ಪತ್ತೆ ಆಗಿತ್ತು. ಇದರ ಫೋಟೋವನ್ನು ಬೆಂಗಳೂರು ರೈಲ್ವೆ ಪೊಲೀಸರು ಎಲ್ಲ ಕಡೆ ರವಾನಿಸಿದ್ದರು. ಕೊನೆಗೆ ಈ ರುಂಡವು ಅಕ್ಟೋಬರ್‌ 3ರಂದು ಬೇತುಲ್‌ನಲ್ಲಿ ಪತ್ತೆಯಾದ ದೇಹದ್ದಾಗಿತ್ತು ಎಂದು ಖಚಿತಪಟ್ಟಿದೆ.

ಇದು ಬೇತುಲ್‌ನ ರವಿ ಮರ್ಕಂ (28) ಎಂಬುವನ ಮೃತದೇಹ. ಈತನದ್ದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎಂಬುದು ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ರವಿಯ ಕುಟುಂಬ ಬಡವ ಆಗಿರುವ ಕಾರಣ ರುಂಡ ನೋಡಲು ಬೆಂಗಳೂರಿಗೆ ಹೋಗಲು ಆಗಲಿಲ್ಲ. ಹಾಗಾಗಿ ಬೆಂಗಳೂರು ಪೊಲೀಸರೇ ರುಂಡವನ್ನು ಅಲ್ಲಿಯೇ ಹೂತಿದ್ದಾರೆ. ಬಂಧುಗಳಿಗೆ ರವಿಯ ಮುಂಡ ನೀಡಲಾಗಿದ್ದು, ಅವರು ಅದರ ಅಂತ್ಯಕ್ರಿಯೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

click me!