* 1.25 ಕೋಟಿ ಮಂದಿ 2ನೇ ಡೋಸ್ ಪಡೆಯಲು ಅರ್ಹ
* ಸೋಂಕು ಗೆದ್ದ 10 ಲಕ್ಷ ಜನರಿಗೂ ಕೊಡಬೇಕಿದೆ ಲಸಿಕೆ
* ಮುಂದಿನ ತಿಂಗಳು ಲಸಿಕೆಗೆ ರಾಜ್ಯದಲ್ಲಿ ತೀವ್ರ ಅಭಾವ?
ಬೆಂಗಳೂರು(ಜು.16): ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆ ಪಡೆದಿರುವ 2.16 ಕೋಟಿ ಮಂದಿ ಪೈಕಿ 1.25 ಕೋಟಿ ಮಂದಿ ಮುಂದಿನ ತಿಂಗಳು ಎರಡನೇ ಡೋಸ್ ಲಸಿಕೆಗೆ (ಆಗಸ್ಟ್ 15ರ ವೇಳೆಗೆ) ಅರ್ಹತೆ ಪಡೆಯಲಿದ್ದಾರೆ. ಜತೆಗೆ 2ನೇ ಅಲೆಯಲ್ಲಿ ಸೋಂಕಿತರಾಗಿ 3 ತಿಂಗಳು ಪೂರೈಸಿರುವ 10 ಲಕ್ಷ ಮಂದಿ ಸೇರಿ 1.35 ಕೋಟಿ ಮಂದಿಗೆ ಲಸಿಕೆ ನೀಡಬೇಕಿರುವುದರಿಂದ ಲಸಿಕೆಗೆ ಭಾರಿ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿದೆ.
ಹೌದು, ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟಶೇ.58ರಷ್ಟುಮಂದಿಗೆ ಈವರೆಗೂ ಒಂದೂ ಡೋಸ್ ಲಸಿಕೆ ನೀಡಿಲ್ಲ. ಇದರ ನಡುವೆ ಈವರೆಗೆ ನೀಡಿರುವ 2.66 ಕೋಟಿ ಡೋಸ್ ಲಸಿಕೆ ಪೈಕಿ ಶೇ.23.15ರಷ್ಟು(50 ಲಕ್ಷ) ಮಂದಿ ಮಾತ್ರ ಎರಡೂ ಡೋಸ್ ಪಡೆದಿದ್ದಾರೆ.
undefined
ಹೀಗಾಗಿ, ಎರಡನೇ ಡೋಸ್ ಪಡೆಯಬೇಕಿರುವ 2.16 ಕೋಟಿ ಜನರ ಪೈಕಿ 1.25 ಕೋಟಿ ಮಂದಿ (ಕೋವ್ಯಾಕ್ಸಿನ್ ಸೇರಿ) ಆಗಸ್ಟ್ 15ರಿಂದ ಸೆಪ್ಟೆಂಬರ್ 15ರ ನಡುವೆ 2ನೇ ಡೋಸ್ ಲಸಿಕೆಗೆ ಅರ್ಹತೆ ಪಡೆಯಲಿದ್ದಾರೆ. ಜತೆಗೆ ಹೊಸದಾಗಿ ಲಸಿಕೆ ಪಡೆಯುವವರೂ ಸೇರಿದಂತೆ ತೀವ್ರ ಬೇಡಿಕೆ ಸೃಷ್ಟಿಯಾಗಲಿದ್ದು, ಸರ್ಕಾರ ಮುನ್ನೆಚ್ಚರಿಕೆ ವಹಿಸದಿದ್ದರೆ ಅಭಾವ ತೀವ್ರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ ಪಡೆಯಲು ಅರ್ಹರಿರುವ 5.11 ಕೋಟಿ ಮಂದಿ ಪೈಕಿ ಶೇ.42.21ರಷ್ಟುಮಂದಿಗೆ ಮೊದಲ ಡೋಸ್ ಲಸಿಕೆ ನೀಡಿದ್ದು, ಶೇ.9.75ರಷ್ಟುಮಂದಿಗೆ ಮಾತ್ರ ಎರಡೂ ಡೋಸ್ ಲಸಿಕೆ ನೀಡಲಾಗಿದೆ. ಮೇ ತಿಂಗಳಿಂತಲೂ ಮೊದಲೇ ಮೊದಲ ಡೋಸ್ ಪಡೆದಿರುವ 50 ಲಕ್ಷ ಮಂದಿಗೆ ಈವರೆಗೆ ಎರಡನೇ ಡೋಸ್ ಲಸಿಕೆ ನೀಡಿಲ್ಲ. ಇನ್ನು ಮೇ 1ರಿಂದ ಈಚೆಗೆ ಲಸಿಕೆ ಪಡೆದಿರುವ 1.5 ಕೋಟಿ ಮಂದಿ ಪೈಕಿ ಸುಮಾರು 1.25 ಕೋಟಿ ಜನರಿಗೆ ಮುಂದಿನ ತಿಂಗಳು ಎರಡನೇ ಡೋಸ್ ಅನಿವಾರ್ಯತೆ ಸೃಷ್ಟಿಯಾಗಲಿದೆ ಅಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಸಂಜೆ 7.40ರ ವೇಳೆಗೆ ಬರೋಬ್ಬರಿ 2.66 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಆದರೆ ಎರಡೂ ಡೋಸ್ ಲಸಿಕೆ ಪಡೆದವರ ಸಂಖ್ಯೆ 50.02 ಲಕ್ಷ ಮಾತ್ರ. ಹೀಗಾಗಿ, ಮೊದಲ ಡೋಸ್ ಹಾಗೂ ಎರಡೂ ಡೋಸ್ ಪಡೆದವರ ಸಂಖ್ಯೆಯಲ್ಲಿ ಭಾರೀ ಅಂತರ ಉಂಟಾಗಿದೆ. ಅಲ್ಲದೆ, ಎರಡನೇ ಅಲೆಯ ಕೊರೋನಾದಿಂದ ಚೇತರಿಸಿಕೊಂಡ ಬಹುತೇಕರು ಲಸಿಕೆ ಪಡೆಯಲು ಅರ್ಹತೆ ಪಡೆಯಲಿದ್ದಾರೆ. ಹೀಗಾಗಿ ಮುಂದಿನ ತಿಂಗಳಿಂದ ಲಸಿಕೆಗೆ ಮತ್ತಷ್ಟುಹಾಹಾಕಾರ ಉಂಟಾಗಲಿದೆ ಎಂದು ಮೂಲಗಳು ತಿಳಿಸಿವೆ.
ಬೇಡಿಕೆ ಹೆಚ್ಚಾಗಲಿದೆ:
ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಗಿರಿಧರ್ ಬಾಬು ಪ್ರಕಾರ, ಪ್ರಸ್ತುತ ಮಾರ್ಗಸೂಚಿ ಪ್ರಕಾರ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದ 12-16 ವಾರಗಳಲ್ಲಿ ಎರಡನೇ ಡೋಸ್ ಪಡೆಯಬೇಕು. ಹೀಗಾಗಿ ಸುಮಾರು 84 ದಿನ ಕಾಯಬೇಕು. ಹೀಗಾಗಿ ಮುಂದಿನ ತಿಂಗಳಿಂದ ಎರಡನೇ ಡೋಸ್ ನೀಡಬೇಕಿರುವುದರಿಂದ ಹೆಚ್ಚು ಬೇಡಿಕೆ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಸಮಿತಿಯ ಮತ್ತೊಬ್ಬ ಸದಸ್ಯರಾದ ಡಾ.ಸಿ.ಎನ್. ಮಂಜುನಾಥ್, ಪ್ರಸ್ತುತ ಲಸಿಕೆಯ ಪೂರೈಕೆ ಕೊರತೆ ಇದೆ. ಹೀಗಾಗಿ ಅಭಾವ ಸೃಷ್ಟಿಯಾಗಿದೆ. ಜತೆಗೆ 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಅನುಮತಿ ದೊರೆತ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಯಿತು. ಮೊದಲ ಕೆಲವು ತಿಂಗಳುಗಳ ಕಾಲ ಜನರಲ್ಲಿ ಲಸಿಕೆ ಬಗ್ಗೆ ಇದ್ದ ಭಯ ದೂರವಾಗಿ ಆಸಕ್ತಿ ಹೆಚ್ಚಾಗಿದೆ. ಎರಡನೇ ಅಲೆಯ ಸಂಕಷ್ಟದಿಂದ ಲಸಿಕೆಗೆ ಮುಗಿಬಿದ್ದಿದ್ದಾರೆ. ಹೀಗಾಗಿ ಸಹಜವಾಗಿಯೇ ಬೇಡಿಕೆ ಹೆಚ್ಚಾಗಲಿದೆ ಎಂದರು.
ಈವರೆಗೆ ನೀಡಿರುವ ಡೋಸ್
ಕೋವಿಶೀಲ್ಡ್ - 2,31,39,212
ಕೋವ್ಯಾಕ್ಸಿನ್ - 34,45,529
- 18 ವರ್ಷ ಮೇಲಟ್ಟವರು - 5.11 ಕೋಟಿ
- ಒಟ್ಟು ನೀಡಿರುವ ಲಸಿಕೆ : 2,66,50,168 ಡೋಸ್
- ಮೊದಲ ಡೋಸ್ ಪಡೆದವರು: 2,16,02,698
- 2 ಡೋಸ್ ಪಡೆದವರು: 50,02,488
ಒಟ್ಟು 2,66,50,168 ಡೋಸ್ ಲಸಿಕೆ ನೀಡಲಾಗಿದೆ. 2,16,02,698 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು, 50,02,488 ಮಂದಿಗೆ (ಶೇ.23.15) ಎರಡನೇ ಡೋಸ್ ನೀಡಲಾಗಿದೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ5.11 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಶೇ.42.21 ರಷ್ಟುಮಂದಿಗೆ ಮೊದಲ ಡೋಸ್ ಲಸಿಕೆ ಹಾಕಿದಂತಾಗಿದೆ. ಹೀಗಾಗಿ ಒಟ್ಟು ಲಸಿಕೆ ಪಡೆದವರಲ್ಲಿ ಶೇ.76.85 ರಷ್ಟುಮಂದಿಗೆ ಎರಡನೇ ಡೋಸ್ ಬಾಕಿ ಉಳಿದಿದೆ.
ಮೇ 1ರಂದು 97.55 ಲಕ್ಷ ಡೋಸ್ ಮಾತ್ರ ಲಸಿಕೆ ನೀಡಲಾಗಿತ್ತು. ಜುಲೈ 15ರ ವೇಳೆಗೆ ಈ ಸಂಖ್ಯೆ 2.66 ಕೋಟಿಗೆ ಏರಿಕೆಯಾಗಿದೆ. ಮೇ 1ಕ್ಕೂ ಮೊದಲು ಲಸಿಕೆ ಪಡೆದ 50 ಲಕ್ಷ ಮಂದಿಗೆ ಇನ್ನೂ ಎರಡನೇ ಡೋಸ್ ಲಸಿಕೆ ನೀಡಿಲ್ಲ. ಇನ್ನು ಜೂನ್ ತಿಂಗಳಲ್ಲಿ ಲಸಿಕೆ ಪಡೆದ 65 ಲಕ್ಷಕ್ಕೂ ಹೆಚ್ಚು ಮಂದಿಗೆ ಆಗಸ್ಟ್‌ನಲ್ಲಿ ಲಸಿಕೆ ನೀಡಬೇಕಿದೆ. ಅಲ್ಲದೆ, 18 ವರ್ಷ ಪೂರೈಸಿರುವ ಶೇ.58 ಮಂದಿಗೆ ಈವರೆಗೆ ಒಂದೂ ಡೋಸ್ ಲಸಿಕೆ ನೀಡಿಲ್ಲ. ಹೀಗಾಗಿ ಅಭಾವ ಸೃಷ್ಟಿಯಾಗಲಿದೆ.
10 ಲಕ್ಷಕ್ಕೂ ಹೆಚ್ಚು ಸೋಂಕಿತರಿಗೆ ಲಸಿಕೆ ಬೇಕು:
ಕಳೆದ ಎರಡು ತಿಂಗಳ ಅವಧಿಯಲ್ಲಿ 15 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಕೊರೋನಾ ಸೋಂಕು ತಗುಲಿದ 3 ತಿಂಗಳ ಬಳಿಕ ಲಸಿಕೆ ಪಡೆಯಬೇಕು. ಹೀಗಾಗಿ ಮೊದಲ ಡೋಸ್ ಪಡೆದು ಕೊರೋನಾದಿಂದ ಎರಡನೇ ಡೋಸ್ ಲಸಿಕೆ ಪಡೆಯಲು ವಿಳಂಬ ಮಾಡುತ್ತಿರುವವರು ಹಾಗೂ ಕೊರೋನಾ ಸೋಂಕಿತರಾಗಿ ಮೊದಲ ಡೋಸ್ ಪಡೆಯಲು 3 ತಿಂಗಳು ಕಳೆಯಲು ಕಾಯುತ್ತಿರುವವರಲ್ಲಿ ಬಹುತೇಕರು ಮುಂದಿನ ತಿಂಗಳು ಲಸಿಕೆ ಪಡೆಯಲು ಅರ್ಹರಾಗಲಿದ್ದಾರೆ. ಹೀಗಾಗಿ ಕನಿಷ್ಠ 10 ಲಕ್ಷ ಮಂದಿಗೆ ಲಸಿಕೆ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
- ರಾಜ್ಯದಲ್ಲಿ 2.16 ಕೋಟಿ ಮಂದಿ ಮೊದಲ ಡೋಸ್ ಪಡೆದಿದ್ದಾರೆ
- ಈ ಪೈಕಿ 1.25 ಕೋಟಿ ಜನರು ಆಗಸ್ಟ್‌ನಲ್ಲಿ 2ನೇ ಡೋಸ್‌ಗೆ ಅರ್ಹ
- 3 ತಿಂಗಳು ಪೂರೈಸಿರುವ 10 ಲಕ್ಷ ಸೋಂಕಿತರೂರೂ ಲಸಿಕೆಗೆ ಸಿದ್ಧ
- ಒಟ್ಟಾರೆ 1.35 ಕೋಟಿ ಜನರಿಗೆ ಆಗಸ್ಟಲ್ಲಿ ಸರ್ಕಾರ ಲಸಿಕೆ ನೀಡಬೇಕಿದೆ
- ಮುನ್ನೆಚ್ಚರಿಕೆ ವಹಿಸದಿದ್ದರೆ ಲಸಿಕೆಗೆ ಅಭಾವ ಕಾಡಲಿದೆ: ತಜ್ಞರ ಎಚ್ಚರಿಕೆ