ಶಾಹೀನ್‌ ಬಾಗ್‌ನಲ್ಲಿ 80 ದಿನದಿಂದ ಏನು ನಡೆಯುತ್ತಿದೆ?

By Kannadaprabha NewsFirst Published Mar 2, 2020, 4:31 PM IST
Highlights

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರೋಧಿ ಹೋರಾಟಗಾರ ಗುಂಪುಗಳ ನಡುವೆ ಕೋಮುಘರ್ಷಣೆ ಸದ್ಯ ಅಲ್ಪ ಮಟ್ಟಿಗೆ ತಣ್ಣ​ಗಾ​ಗಿದೆ. ಆದರೆ, ಇನ್ನೊಂದೆಡೆ ಅದೇ ನಗರದ ಶಾಹೀನ್‌ ಬಾಗ್‌ ಎಂಬಲ್ಲಿ ನಡೆಯುತ್ತಿರುವ ಸಿಎಎ ವಿರುದ್ಧದ ಶಾಂತಿಯುತ ಪ್ರತಿಭಟನೆಗೆ 80 ದಿನಗಳು ತುಂಬಿವೆ. 

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರೋಧಿ ಹೋರಾಟಗಾರ ಗುಂಪುಗಳ ನಡುವೆ ಕೋಮುಘರ್ಷಣೆ ಸದ್ಯ ಅಲ್ಪ ಮಟ್ಟಿಗೆ ತಣ್ಣ​ಗಾ​ಗಿದೆ.

ಆದರೆ, ಇನ್ನೊಂದೆಡೆ ಅದೇ ನಗರದ ಶಾಹೀನ್‌ ಬಾಗ್‌ ಎಂಬಲ್ಲಿ ನಡೆಯುತ್ತಿರುವ ಸಿಎಎ ವಿರುದ್ಧದ ಶಾಂತಿಯುತ ಪ್ರತಿಭಟನೆಗೆ 80 ದಿನಗಳು ತುಂಬಿವೆ. ಹೋರಾಟಗಾರರು ದೆಹಲಿಯ ಪ್ರಮುಖ ರಸ್ತೆಯಲ್ಲೇ ಕುಳಿತಿರುವುದರಿಂದ ಜನಸಂಚಾರಕ್ಕೆ ವ್ಯಾಪಕ ತೊಂದರೆಯಾಗುತ್ತಿದೆ.

ಅವರನ್ನು ಹೇಗಾದರೂ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಸುಪ್ರೀಂಕೋರ್ಟ್‌ ಕೂಡ ಮಧ್ಯಸ್ಥಿಕೆ ಆರಂಭಿಸಿದೆ. ಶಾಹೀನ್‌ ಬಾಗ್‌ನಲ್ಲಿ ನಡೆಯುತ್ತಿರುವುದು ಹಲವು ಕಾರಣಗಳಿಂದಾಗಿ ವಿಶಿಷ್ಟಸ್ವರೂಪದ ಪ್ರತಿಭಟನೆಯಾಗಿದ್ದು, ಅಲ್ಲಿ ಏನು ನಡೆಯುತ್ತಿದೆ ಎಂಬುದರ ವಿವರ ಇಲ್ಲಿದೆ.
 

ಏನಿದು ಶಾಹೀನ್‌ ಬಾಗ್‌?

ಶಾಹೀನ್‌ ಬಾಗ್‌ ಎಂಬುದು ದಕ್ಷಿಣ ದಿಲ್ಲಿಯ ಓಕ್ಲಾಪ್ರಾಂತ್ಯದ ತುತ್ತತುದಿಯ ಒಂದು ಬಡಾವಣೆ. 2019ರ ಡಿಸೆಂಬರ್‌ ಮಧ್ಯಭಾಗದಿಂದ ಶಾಹೀನ್‌ ಬಾಗ್‌ನಲ್ಲಿ ಮಹಿಳೆಯರ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ, ಇವುಗಳನ್ನು ರದ್ದು ಪಡಿಸಬೇಕೆಂಬ ಬೇಡಿಕೆ ಇಟ್ಟು ಸಾವಿರಾರು ಜನರು ರಸ್ತೆ ತಡೆದು ಪ್ರತಿಭಟಿಸುತ್ತಿದ್ದಾರೆ.

ದೆಹಲಿ ಮತ್ತು ನೋಯ್ಡಾವನ್ನು ಸಂಪರ್ಕಿಸುವ 2.5 ಕಿ.ಮೀ. ಪ್ರದೇಶದಲ್ಲಿ ಧರಣಿ ಕುಳಿತಿದ್ದಾರೆ. ಬಹುತೇಕರು ಬುರ್ಖಾ ಹಿಜಾಬ್‌ ಧರಿಸಿದ್ದರೆ, ಕೆಲವರು ಒಂದು ತಿಂಗಳ ಪುಟ್ಟಕಂದಮ್ಮಗಳನ್ನೂ ಪ್ರತಿಭಟನೆಯಲ್ಲಿ ಕೂರಿಸಿಕೊಂಡು ಮುಷ್ಕರ ನಡೆಸುತ್ತಿದ್ದಾರೆ.

ಈ ಪ್ರತಿಭಟನೆಗೆ ದೆಹಲಿಯ ವೃತ್ತಿಪರರು, ವಿದ್ಯಾರ್ಥಿಗಳು ಸ್ವಯಂಘೋಷಿತ ಬೆಂಬಲ ನೀಡುತ್ತಾ, ಅವರೇ ಪ್ರತಿಭಟನಾಕಾರರಿಗೆ ಆಹಾರ, ಮೆಡಿಸಿನ್‌, ನೀರು ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ.

ಪ್ರತಿಭಟನೆ ಆರಂಭ ಆಗಿದ್ದು ಯಾವಾಗ?

ಸದ್ಯ ದೆಹಲಿಯಲ್ಲಿ ಸದ್ದು ಮಾಡುತ್ತಿರುವ ಶಾಹೀನ್‌ ಬಾಗ್‌ ಪ್ರತಿಭಟನೆ ಆರಂಭವಾಗಿದ್ದು, 2019 ಡಿಸೆಂಬರ್‌ 14ರಂದು. ಮುಸ್ಲಿಂ ಪ್ರಾಬಲ್ಯ ಪ್ರದೇಶವಾದ ಶಾಹೀನ್‌ ಭಾಗ್‌ನ 10-15 ಸ್ಥಳೀಯ ಮಹಿಳೆಯರು ಕಲಿಂದಿ ಕುಂಜ್‌ ರಸ್ತೆಯನ್ನು ತಡೆದು ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದಾದ ಮಾರನೇ ದಿನವೇ ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಪ್ರತಿಭಟನೆ ನಡೆಸಿದ್ದರು.

ಈ ವೇಳೆ ದೆಹಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಶಾಹೀನ್‌ ಬಾಗ್‌ಗೆ ಈ ವಿಶ್ವ ವಿದ್ಯಾಲಯ ಹತ್ತಿರದಲ್ಲಿದ್ದು, ಇಲ್ಲಿನ ಹಲವು ವಿದ್ಯಾರ್ಥಿಗಳು ಜಾಮಿಯಾ ವಿವಿಯಲ್ಲಿ ಕಲಿಯುತ್ತಿದ್ದಾರೆ.

ಹಾಗಾಗಿ ಜಾಮಿಯಾ ವಿದ್ಯಾರ್ಥಿಗಳ ಮೇಲಿನ ಪೊಲೀಸ್‌ ದೌರ್ಜನ್ಯವು ಮತ್ತಷ್ಟುಕಿಡಿ ಹೊತ್ತಿಸಿತು. ಹಾಗಾಗಿ ಕೆಲವು ಸ್ಥಳೀಯ ನಿವಾಸಿಗಳು, ಪೊಲೀಸ್‌ ದೌರ್ಜನ್ಯವನ್ನೂ ವಿರೋಧಿಸಿ ಮೊದಲ ಬಾರಿಗೆ ರಸ್ತೆ ತಡೆ ನಡೆಸಿದರು. ಅಲ್ಲಿಂದ ಧರಣಿ ಆರಂಭವಾಯಿತು.

ಏಕೆ ಈ ಜಾಗ ಬಹಳ ಮುಖ್ಯ?

ಶಾಹೀನ್‌ಬಾಗ್‌ ಎಂಬ ಪ್ರದೇಶವಿರುವುದು ದೆಹಲಿಯ ಜಿ.ಡಿ.ಬಿರ್ಲಾ ರಸ್ತೆಯಲ್ಲಿ. ಇದು ದಕ್ಷಿಣ ದೆಹಲಿಯನ್ನು ನೊಯ್ಡಾಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ. ದೆಹಲಿಯ ಹೊರವಲಯದಲ್ಲಿರುವ ಪ್ರಮುಖ ವಾಣಿಜ್ಯ ನಗರಿಯಾಗಿರುವ ನೊಯ್ಡಾಕ್ಕೆ ಪ್ರತಿದಿನ ಲಕ್ಷಾಂತರ ಜನರು ಸಂಚರಿಸುತ್ತಾರೆ. ಪ್ರತಿನಿತ್ಯ ಇಲ್ಲಿ ಸುಮಾರು 1 ಲಕ್ಷ ವಾಹನಗಳು ಓಡಾಡುತ್ತವೆ.

ಇನ್ನೊಂದು ಕಡೆ ಜಸೋಲಾ ವಿಹಾರ್‌, ನೆಹ್ರೂ ಪ್ಲೆಸ್‌, ಓಕ್ಲಾ ಔದ್ಯಮಿಕ ಬಡಾವಣೆಗಳೂ ಇವೆ. ಆದರೆ ಮುಷ್ಕರದ ಪರಿಣಾಮ ಬಹುತೇಕ 2 ತಿಂಗಳಿನಿಂದ ಹೆದ್ದಾರಿ ಬಂದ್‌ ಆಗಿದೆ. ಈ ರಸ್ತೆ ಬಂದ್‌ ಆಗಿರುವುದರಿಂದ ಅರ್ಧಕ್ಕರ್ಧ ದೆಹಲಿ ನರಳುತ್ತಿದೆ.

ರಸ್ತೆ ಬಂದ್‌ ಮಾಡಿದ್ದು ಯಾರು?

ಪ್ರತಿಭಟನಾಕಾರರು ಶಾಹೀನ್‌ಬಾಗ್‌ನಲ್ಲಿ ಮಾತ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಬಂದ್‌ ಆಗಿರುವುದು 2.5 ಕಿ.ಮೀ. ಉದ್ದದ ರಸ್ತೆ. ಇದನ್ನು ಬಂದ್‌ ಮಾಡಿರುವುದು ಪೊಲೀಸರು. ಏಕೆಂದರೆ ಒಮ್ಮೆ ವಾಹನ ಸವಾರರು ಒಳಗೆ ಪ್ರವೇಶಿಸಿದರೆ ಪ್ರತಿಭಟನಾಕಾರರು ಸಾವಿರಾರು ಸಂಖ್ಯೆಯಲ್ಲಿ ಸದಾಕಾಲ ಧರಣಿ ನಡೆಸುವ ಸ್ಥಳವನ್ನು ಹಾದುಹೋಗಲು ಸಾಧ್ಯವಾಗುವುದಿಲ್ಲ. ಆಗ ಟ್ರಾಫಿಕ್‌ ಜಾಂ ಉಂಟಾಗುತ್ತದೆ.

ಇಡೀ ಪ್ರದೇಶ ಹೋರಾಟಗಾರರ ನಿಯಂತ್ರಣದಲ್ಲಿ!

ಜಿ.ಡಿ.ಬಿರ್ಲಾ ಮಾರ್ಗಕ್ಕೆ ಹತ್ತಾರು ಕಡೆ ಬ್ಯಾರಿಕೇಡ್‌ ಹಾಕಿ ವಾಹನ ಸಂಚಾರ ಬಂದ್‌ ಮಾಡಿರುವುದು ಪೊಲೀಸರಾದರೂ ಈಗ ಆ ಎಲ್ಲಾ ಬ್ಯಾರಿಕೇಡ್‌ಗಳನ್ನು ಪ್ರತಿಭಟನಾಕಾರರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಆ್ಯಂಬುಲೆನ್ಸ್‌ಗಳು ಮತ್ತು ಶಾಲಾ ವಾಹನಗಳ ಸಂಚಾರಕ್ಕೆ ಅವರು ಅವಕಾಶ ನೀಡುತ್ತಿದ್ದಾರೆ.

ಪ್ರತಿಭಟನೆಯ ಜಾಗದಲ್ಲಿ ಏನೇನಿದೆ?

ಪ್ರತಿಭಟನಾಕಾರರು ಶಹೀನ್‌ಬಾಗ್‌ನಲ್ಲಿ ಹಲವಾರು ಟೆಂಟ್‌ಗಳನ್ನು ಹಾಕಿಕೊಂಡಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು, ಅಂಗವಿಕಲರು ಹೀಗೆ ಎಲ್ಲರೂ ಅಲ್ಲೇ ಇಡೀ ದಿನ ಹಾಗೂ ರಾತ್ರಿ ಕಾಲ ಕಳೆಯುತ್ತಾರೆ. ಧರಣಿಗೆ ಕುಳಿತುಕೊಳ್ಳುವ ಜಾಗದ ಪಕ್ಕದಲ್ಲಿ ತಾತ್ಕಾಲಿಕವಾದ ದೊಡ್ಡ ಕಿಚನ್‌ ಇದೆ. ಅಲ್ಲೇ ಅಡುಗೆ ತಯಾರಿಸಲಾಗುತ್ತದೆ. ಅದರ ಪಕ್ಕದ ಇನ್ನೊಂದು ಟೆಂಟ್‌ನಲ್ಲಿ ಊಟ ಮಾಡಲು ಸ್ಥಳ ಮೀಸಲಿಡಲಾಗಿದೆ. ಈ ಜಾಗದ ಪಕ್ಕದಲ್ಲಿ ಭಾರತದ ನಕ್ಷೆಯ ದೊಡ್ಡ ಪ್ರತಿಕೃತಿಯೊಂದನ್ನು ನಿಲ್ಲಿಸಲಾಗಿದೆ.

ಅದರಲ್ಲಿ ‘ನಾವು ಭಾರತೀಯರು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಅನ್ನು ವಿರೋಧಿಸುತ್ತೇವೆ’ ಎಂದು ಬರೆಯಲಾಗಿದೆ. ಪ್ರತಿಭಟನಾ ಸ್ಥಳದಲ್ಲಿ ರಾಷ್ಟ್ರಧ್ವಜ ಹಾರಿಸಲಾಗಿದೆ. ಗಾಂಧಿ ಹಾಗೂ ಅಂಬೇಡ್ಕರ್‌ರ ಚಿತ್ರಗಳನ್ನು ಇಡಲಾಗಿದೆ. ಪ್ರತಿಭಟನಾ ಸ್ಥಳದಲ್ಲೇ ಕ್ರಾಂತಿಕಾರಿ ವಿಚಾರಗಳು ಇರುವ ಪುಸ್ತಕಗಳನ್ನು ಹೊಂದಿದ ಒಂದು ‘ರೀಡ್‌ ಆಫರ್‌ ರೆವಲ್ಯೂಶನ್‌’ ಎಂಬ ಪುಟ್ಟಲೈಬ್ರರಿಯೂ ಇದೆ. ಪೋಡಿಯಂಗೆ ಹೋಗ​ಲೇಂದೇ ಪ್ರತ್ಯೇಕ ಪ್ಯಾಸೇಜ್‌ ಇದೆ. ಪ್ರತಿ​ಭ​ಟನೆಗೆ ಕುಳಿ​ತ​ವ​ರಲ್ಲೇ ಒಬ್ಬರ ನೇತೃ​ತ್ವ​ದಲ್ಲಿ ದಿನಾ ಸಭೆ ನಡೆ​ಯು​ತ್ತದೆ.

ಮಹಿ​ಳೆ​ಯರು ಕುಳಿತ ಜಾಗಕ್ಕೆ ಪುರು​ಷ​ರಿಗೆ ಪ್ರವೇಶ ಇಲ್ಲದ ಕಾರಣ ಪುರು​ಷರು ರೋಪ್‌ ಆಚೆಗೆ ನಿಂತಿ​ರು​ತ್ತಾರೆ. ಪ್ರತಿ​ಭ​ಟ​ನೆ​ಯಲ್ಲಿ ಭಾಗಿ​ಯಾದ ಎಲ್ಲರೂ ಉಪ​ನ್ಯಾ​ಸ​ಕಾ​ರ​ರ ಮಾತು​ಗ​ಳನ್ನು ಶಾಂತಿ​ಯಿಂದ ಕೇಳಿ​ಸಿ​ಕೊ​ಳ್ಳು​ತ್ತಾರೆ, ಹಾಡು ಹಾಡು​ತ್ತಾ​ರೆ, ಇಂಕ್ವಿ​ಲಾಬ್‌ ಜಿಂದಾ​ಬಾದ್‌, ಅಜಾದಿ ಘೋಷಣೆ ಕೂಗು​ತ್ತಾ​ರೆ. ಹಗಲು ಟೆಂಟ್‌ಗಳಲ್ಲಿಕೂತಿರುವ ಮುಷ್ಕರ ನಿರತರು, ರಾತ್ರಿ ರಸ್ತೆಗಿಳಿಯುತ್ತಾರೆ.

6 ಗಂಟೆಗೆ ಕ್ಯಾಂಡಲ್‌ ಲೈಟ್‌ ಚಳ​ವಳಿ ಜಮಿಯಾ ಮಿಲಿಯಾ ವಿವಿ​ಯಿಂದ ಆರಂಭ​ವಾಗಿ ಶಾಹೀನ್‌ ಬಾಗ್‌​ವ​ರೆಗೆ ತಲು​ಪು​ತ್ತ​ದೆ. ದಿಲ್ಲಿಯ ಇತರ ಕಡೆಗಳ ಪೌರತ್ವ ವಿರೋಧಿ ಪ್ರತಿಭಟನಾಕಾರರೂ ಇಲ್ಲಿಬಂದು ಸೇರುತ್ತಾರೆ. ಇಡೀ ಪ್ರದೇ​ಶವೇ ಹಬ್ಬ​ದಂತೆ ಕ್ಯಾಂಡಲ್‌ ದೀಪ​ಗ​ಳಿಂದ ಅಲಂಕೃ​ತ​ವಾ​ಗಿ​ರು​ತ್ತದೆ.

ಸುಪ್ರೀಂಕೋರ್ಟ್‌ ಮಧ್ಯಸ್ತಿಕೆ

ಶಾಹೀನ್‌ ಬಾಗ್‌ ಪ್ರತಿಭಟನೆ ವಿರುದ್ಧ ಹಲವರು ಕೋರ್ಟ್‌ ಮೆಟ್ಟಿಲೇರಿದ್ದರು. ಈ ಕುರಿತಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುವುದು ಜನರ ಮೂಲಭೂತ ಹಕ್ಕು. ಆದರೆ ಸಾರ್ವಜನಿಕ ರಸ್ತೆಯನ್ನು ಮುಚ್ಚುವುದು ಕಳವಳಕಾರಿ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿತ್ತು.

ಹಾಗಾಗಿ ಶಾಹೀನ್‌ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಸುಪ್ರೀಂಕೋರ್ಟ್‌ ಆಸಕ್ತಿ ತೋರಿ, ಈ ಸಂಬಂಧ ಮೂವರನ್ನು ಮಧ್ಯಸ್ಥಿಕೆಗೆ ನೇಮಿಸಿತ್ತು.

ಮಧ್ಯಸ್ಥಿಕೆಗೆ ನೇಮಿಸಿದ್ದ ರಾಮಚಂದ್ರನ್‌ ಪ್ರತಿಭಟನಾಕಾರರ ಬೇಡಿಕೆಯನ್ನು ಸುಪ್ರೀಂಕೋರ್ಟ್‌ ಮುಂದೆ ತರುವ ಭರವಸೆ ನೀಡಿದ ಕಾರಣ ಕುಂಜ್‌ ಮತ್ತು ನೊಯ್ಡಾ ನಡುವಣ ಮಾರ್ಗವನ್ನು ಫೆಬ್ರವರಿ 22ರಂದು ಪ್ರತಿಭಟನಾಕಾರರು ಬಾಗ​ಶಃ ತೆರವುಗೊಳಿಸಿದ್ದರು.

ಸಂಘಟಕರು ಯಾರು?

ಈ ಮುಷ್ಕರಕ್ಕೆ ನಿರ್ದಿಷ್ಟಸಂಘಟಕರು ಇಲ್ಲ, ನಿರ್ದಿಷ್ಟನಾಯಕರೂ ಇಲ್ಲ. ಹಲವು ಸಂಘಟನೆಗಳು ಸೇರಿಕೊಂಡು ‘ಸಂವಿಧಾನ ಸುರಕ್ಷಾ ಸಮಿತಿ’ ರಚಿಸಿಕೊಂಡು ಅದರಡಿ ಸತ್ಯಾಗ್ರಹ ನಡೆಸುತ್ತಿವೆ. ಸ್ಥಳೀಯ ಮುಸ್ಲಿಂ ಮಹಿಳೆಯರೇ ಈಗ ನೇತೃತ್ವ ವಹಿಸಿದ್ದಾರೆ. ವಿಶೇಷ ಎಂದರೆ ಪ್ರಮುಖ ನಾಯಕರು ಅಥವಾ ಪ್ರಮುಖ ರಾಜಕೀಯ ಪಕ್ಷಗಳ್ಯಾವೂ ಪ್ರತಿಭಟನೆಯಲ್ಲಿ ನೇರವಾಗಿ ಪಾಲ್ಗೊಂಡಿಲ್ಲ.

ಮುಷ್ಕರ ಮಾಡುತ್ತಿರುವವರಲ್ಲಿ ಹೆಚ್ಚಿನವರು ಮುಸ್ಲಿಂ ಮಹಿಳೆಯರು. ಪುರುಷರ ಸಂಖ್ಯೆ ಅತ್ಯಲ್ಪ. ಆದರೆ ಪ್ರತಿಭಟನೆಗೆ ಬೆಂಬಲವಾಗಿ ರೋಹಿತ್‌ ವೇಮುಲಾ ತಾಯಿ, ಉಮರ್‌ ಖಲೀದ್‌, ಜಿಗ್ನೇಶ್‌ ಮೇವಾನಿ ಮುಂತಾದವರು ಭೇಟಿ ನೀಡಿದ್ದರು. ಹಾಗೆಯೇ ಬ್ಯಾರಿಕೇಡ್‌ ಪ್ರದೇಶಕ್ಕೆ ಕಾಂಗ್ರೆಸ್‌ ಮುಖಂಡ ಮಣಿಶಂಕರ್‌ ಅಯ್ಯರ್‌, ಶಶಿ ತರೂರ್‌, ಸಾಮಾಜಿಕ ಹೋರಾಟಗಾರ ಚಂದ್ರಶೇಖರ್‌ ಆಜಾದ್‌, ಸೆಲೆಬ್ರಿಟಿ ಮಹಮ್ಮದ್‌ ಜೀಶಾನ್‌ ಆಯುಬ್‌, ಅನುರಾಗ್‌ ಕಶ್ಯಪ್‌ ಕೂಡ ಭೇಟಿ ನೀಡಿದ್ದರು.

ಮುಸ್ಲಿಂ ಪ್ರಾಬಲ್ಯ ಪ್ರದೇಶ

ಶಾಹೀನ್‌ ಬಾಗ್‌ ದಕ್ಷಿಣ ದೆಹಲಿಯ ಒಂದು ಸಣ್ಣ ಬಡಾವಣೆ. ಈ ಪ್ರದೇಶ ರೂಪುಗೊಂಡಿದ್ದು 1980ರ ದಶಕದಲ್ಲಿ. 1985ರ ವರೆಗೂ ಇಲ್ಲಿ ಗುಜರಾತಿನ ಗುಜ್ಜರ್‌ ಜನಾಂಗ ನೆಲೆಸಿತ್ತು. ಈ ಪ್ರದೇಶ ಸುತ್ತ ಮುಸ್ಲಿಂ ಸಮುದಾಯ ನೆಲೆಸಿತ್ತು. ಅಯೋಧ್ಯೆಯಲ್ಲಿ ವಿವಾದಿತ ಕಟ್ಟ​ಡ ಕೆಡವಿದ ಸಂದರ್ಭದಲ್ಲಿ ಭಯಭೀತರಾದ ಈ ಸಮುದಾಯದ ಜನರು ಶಾಹೀನ್‌ ಬಾಗ್‌ಗೆ ಬಂದು ನೆಲೆಸಿದರು.

ಕಾಲಾನಂತರದಲ್ಲಿ ಇಲ್ಲಿದ್ದ ಹಿಂದುಗಳು ತಮ್ಮ ಜಮೀನು ಮಾರಿ ಬೇರೆ ಕಡೆಗೆ ವಲಸೆ ಹೋದರು. ಹಿಂದುಗಳು, ಸಿಖ್ಖರು ಮುಸ್ಲಿಮರು ಎಲ್ಲರೂ ಈ ಭೂಮಿ ಖರೀದಿಸಿದ್ದರು. ಆದರೆ 1990 ರ ನಂತರ ಈ ಪ್ರದೇಶ ಮುಸ್ಲಿಂ ಪ್ರಾಬಲ್ಯದ ಬಡಾವಣೆಯಾಯಿತು.

ಆಗ ಅದಕ್ಕೆ ಶಾಹೀನ್‌ ಬಾಗ್‌ ಎಂದು ಹೆಸರಿಡಲಾಯಿತು. ಪರ್ಷಿಯನ್‌ ಭಾಷೆಯಲ್ಲಿ ಶಹೀನ್‌ ಎಂದರೆ ಹದ್ದು. ಇಲ್ಲಿರುವ ಹೆಚ್ಚಿನವರು ಕೆಳಮಧ್ಯಮ ಹಾಗೂ ಕೆಳವರ್ಗದವರು, ಅಸಂಘಟಿತ ಕಾರ್ಮಿಕ ವರ್ಗದವರು. ಇವರು ನೆಲೆಸಿರುವ ಮನೆಗಳಿಗೆ ಸರಿಯಾದ ದಾಖಲೆ ಪತ್ರಗಳೂ ಇಲ್ಲ.

 

click me!