ಗ್ಯಾಂಗ್‌ಸ್ಟರ್‌ನ್ನು ಪ್ರೀತಿಸುವಂತೆ ನಾಟಕವಾಡಿ, ಖೆಡ್ಡಾಗೆ ಕೆಡವಿ ಎನ್‌ಕೌಂಟರ್ ಮಾಡಿಸಿದ್ದ ಮಾಡೆಲ್ ಬರ್ಬರ ಹತ್ಯೆ!

By Vinutha PerlaFirst Published Jan 4, 2024, 2:38 PM IST
Highlights

ಆಕೆ ಗ್ಯಾಂಗ್‌ಸ್ಟರ್‌ನ್ನು ಪ್ರೀತಿಸುವಂತೆ ನಾಟಕವಾಡಿ ಖೆಡ್ಡಾಗೆ ಕೆಡವಿದ ಕಿಲಾಡಿ. ಆತನ ಗರ್ಲ್‌ಫ್ರೆಂಡ್ ಆಗಿದ್ದು, ಪೊಲೀಸರಿಗೆ ಆತನಿರುವ ಸ್ಥಳದ ಮಾಹಿತಿ ನೀಡಿ ಎನ್‌ಕೌಂಟರ್ ಮಾಡಿಸಿದ್ದಳು. ಈಗ ಹೊಟೇಲ್‌ ಒಂದರಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾಳೆ..

ನವದೆಹಲಿ: ಮುಂಬೈನಲ್ಲಿ ನಡೆದ ಗ್ಯಾಂಗ್‌ಸ್ಟರ್‌ ಹತ್ಯೆಯ ಆರೋಪಿಯಾಗಿದ್ದ ಮಾಜಿ ಮಾಡೆಲ್ ದಿವ್ಯಾ ಪಹುಜಾ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಹರಿಯಾಣದ ಗುರುಗ್ರಾಮ್‌ನಲ್ಲಿ ಮಂಗಳವಾರ ತಡರಾತ್ರಿ 27 ವರ್ಷದ ಮಾಡೆಲ್ ದಿವ್ಯಾ ಪಹುಜಾ ಅವರನ್ನು ಹೋಟೆಲ್‌ನಲ್ಲಿ ಕೊಲೆ ಮಾಡಲಾಗಿದೆ.  ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದ ಕೆಲವೇ ತಿಂಗಳುಗಳಲ್ಲಿ ಗುರುಗ್ರಾಮ್‌ನ ಹೋಟೆಲ್‌ನಲ್ಲಿ ಈಕೆಯನ್ನು ಗುಂಡಿಕ್ಕಿಸಾಯಿಸಲಾಗಿದೆ. ಪೊಲೀಸರ ಪ್ರಕಾರ, ಐವರು ಮಂಗಳವಾರ ರಾತ್ರಿ ದಿವ್ಯಾಳನ್ನು ಹೋಟೆಲ್‌ಗೆ ಕರೆದೊಯ್ದು ತಲೆಗೆ ಗುಂಡು ಹಾರಿಸಿದ್ದಾರೆ. ಆಕೆಯ ಮೃತದೇಹವನ್ನು ಹೋಟೆಲ್‌ನಿಂದ ಕಾರಿನಲ್ಲಿ ತೆಗೆದುಕೊಂಡು ಹೋಗಿ ಎಸೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕಿತ ಆರೋಪಿಗಳು ಶವದೊಂದಿಗೆ ಹೊಟೇಲ್ ಆವರಣದಿಂದ ಹೊರಟು ಬಿಎಂಡಬ್ಲ್ಯು ಕಾರಿನೊಳಗೆ ಇಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಟೇಲ್‌ ಕಾರಿಡಾರ್‌ನಲ್ಲಿ ಬೆಡ್‌ಶೀಟ್‌ನಲ್ಲಿ ಸುತ್ತಿ ಶವವನ್ನು ಎಳೆದುಕೊಂಡು ಬರಲಾಗಿದೆ. ವರದಿಗಳ ಪ್ರಕಾರ ದಿವ್ಯ ಪಹುಜಾ ಹೊಸ ವರ್ಷದ ಪಾರ್ಟಿ ಮಾಡಲೆಂದು ಹೊಟೇಲ್‌ಗೆ ಆಗಮಿಸಿದ್ದರು.

Latest Videos

ಅಕ್ರಮ ಸಂಬಂಧದ ತವರಾಗುತ್ತಿದೆಯೇ ಬೆಂಗಳೂರು: 2023ರಲ್ಲಿ ನಡೆದ 207 ಕೊಲೆಗಳಲ್ಲಿ ಅಕ್ರಮ ಸಂಬಂಧದ್ದೇ ಹೆಚ್ಚು!

ಅಶ್ಲೀಲ ಫೋಟೋಸ್ ಇಟ್ಕೊಂಡು ಹಣ ವಸೂಲಿ ಮಾಡ್ತಿದ್ದ ದಿವ್ಯ ಪಹುಜಾ
ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ ಪ್ರಮುಖ ಆರೋಪಿ ಹೊಟೇಲ್ ಮಾಲೀಕ ಅಭಿಜೀತ್ ಸಿಂಗ್ ತಾನು ಹೋಟೆಲ್ ಸಿಟಿ ಪಾಯಿಂಟ್ ಮಾಲೀಕ ಎಂದು ತಿಳಿಸಿದ್ದಾನೆ. ತನ್ನ ಕೆಲವು ಅಶ್ಲೀಲ ಚಿತ್ರಗಳು ದಿವ್ಯಾ ಪಹುಜಾ ಬಳಿ ಇತ್ತು. ಈ ಫೋಟೋಗಳನ್ನು ಇಟ್ಟುಕೊಂಡು ಆಕೆ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಆಗಾಗ ಹಣ ತೆಗೆದುಕೊಳ್ಳುತ್ತಿದ್ದಳು. ಜನವರಿ 2ರಂದು ದಿವ್ಯಾಳನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ ಫೋಟೋ ಡಿಲೀಟ್ ಮಾಡುವಂತೆ ಹೇಳಿಕೊಂಡಿದ್ದೆ. ಮೊಬೈಲ್ ಪಾಸ್ ವರ್ಡ್ ಕೇಳಿದಾಗ ಹೇಳಲಿಲ್ಲ. ಇದರಿಂದ ಕೋಪಗೊಂಡ ಗುಂಡು ಹಾರಿಸಿದ್ದಾಗಿ ಹೇಳಿದ್ದಾನೆ.

ದಿವ್ಯಾ ಸಾವಿನ ನಂತರ ಇಬ್ಬರು ಹೋಟೆಲ್ ಉದ್ಯೋಗಿಗಳಾದ ಹೇಮರಾಜ್ ಮತ್ತು ಓಂ ಪ್ರಕಾಶ್ ಜೊತೆಗೂಡಿ ಶವವನ್ನು ಬಿಎಂಡಬ್ಲ್ಯು ಕಾರಿನಲ್ಲಿ ಹಾಕಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಇದಾದ ಬಳಿಕ ಮತ್ತಿಬ್ಬರು ಸಹಚರರನ್ನು ಕರೆಸಿ ಶವ ವಿಲೇವಾರಿ ಮಾಡಲು ಕಾರನ್ನು ನೀಡಲಾಗಿತ್ತು. ಮೃತದೇಹದೊಂದಿಗೆ ಪರಾರಿಯಾಗಿರುವವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ರೂಂನಲ್ಲಿ ತಂಗಿದ್ದ 27ರ ಹರೆಯದ ಮಾಡೆಲ್ ಹತ್ಯೆ, ಹೊಟೆಲ್ ಮಾಲೀಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!

ಪ್ರಕರಣದ ಹಿನ್ನಲೆ:
ಫೆಬ್ರವರಿ 7,2016ರಂದು ಮುಂಬೈ ಹೋಟೆಲ್‌ನಲ್ಲಿ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಹತ್ಯೆಗೆ ಸಂಬಂಧಿಸಿದಂತೆ ದಿವ್ಯ ಪಹುಜಾರನ್ನು ಬಂಧಿಸಲಾಗಿತ್ತು. ಪೋಲೀಸರ ಪ್ರಕಾರ, ಸಂದೀಪ್ ಗಡೋಲಿ ತನ್ನ ಗೆಳತಿ ಪಹುಜಾಳ ಮೋಸದ ಬಲೆಗೆ ಬಿದ್ದಿದ್ದನು. ದಿವ್ಯಾ ಮೋಸ ಮಾಡಿ ಆತನನ್ನು ಕರೆಸಿ ಖೆಡ್ಡಾಕ್ಕೆ ಕೆಡವಿದ್ದಳು. ಇದರ ಪರಿಣಾಮವಾಗಿ ನಡೆದ ಎನ್‌ಕೌಂಟರ್ ಸಂದೀಪ್ ಗೆಡೋಲಿ ಸಾವಿಗೆ ಕಾರಣವಾಯಿತು.

ಬಿಂದರ್ ಗುಜ್ಜರ್ ಎಂಬಾತ ಸಂದೀಪ್ ಗಡೋಲಿ ಪ್ರತಿಸ್ಪರ್ಧಿ ಗ್ಯಾಂಗ್‌ನ ಲೀಡರ್ ಆಗಿದ್ದನು. ಸಂದೀಪ್ ಗಡೋಲಿಯ ಹತ್ಯೆಯನ್ನು ಯೋಜಿಸಲು ಹರಿಯಾಣ ಪೊಲೀಸ್ ಅಧಿಕಾರಿಗಳೊಂದಿಗೆ ಸಹಕರಿಸಿದ್ದನು ಎಂದು ಪೊಲೀಸರು ತಿಳಿಸಿದ್ದರು. ಎನ್‌ಕೌಂಟರ್‌ನ ಸಮಯದಲ್ಲಿ ಗುಜ್ಜರ್ ಜೈಲಿನಲ್ಲಿದ್ದನು. ಆದರೆ ಅವನು ತನ್ನ ಸಹೋದರ ಮನೋಜ್‌ನ ಸಹಾಯದಿಂದ ಸಂಚು ರೂಪಿಸಿದನು. ದಿವ್ಯಾ ಪಹುಜಾವನ್ನು ಹನಿ ಟ್ರ್ಯಾಪ್‌ನಂತೆ ಬಳಸಿಕೊಂಡನು ಎಂದು ಮುಂಬೈ ಪೊಲೀಸರು ತಿಳಿಸಿದ್ದರು. ಸಂದೀಪ್ ಗಡೋಲಿ ಎನ್‌ಕೌಂಟರ್ ಆದ ಸುಮಾರು ಏಳು ವರ್ಷಗಳ ನಂತರ ದಿವ್ಯಾಗೆ ಕಳೆದ ವರ್ಷ ಜೂನ್‌ನಲ್ಲಿ ಹೈಕೋರ್ಟ್ ಜಾಮೀನು ನೀಡಿತ್ತು. 

ಗ್ಯಾಂಗ್‌ಸ್ಟರ್ ಜೊತೆ ಮಾಡೆಲ್‌ಗೆ ಇದ್ದ ಲಿಂಕ್ ಏನು?
ದಿವ್ಯಾ ಪಹುಜಾ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿಯ ಮಾಜಿ ಗೆಳತಿ. 2018ರಲ್ಲಿ, ಬಿಕಾಂ ವ್ಯಾಸಂಗ ಆರಂಭಿಸಿದ ದಿವ್ಯಾ ಇದೇ ಸಂದರ್ಭದಲ್ಲಿ ಮಾಡೆಲಿಂಗ್ ಪ್ರಾರಂಭಿಸಿದಳು. ದಿವ್ಯಾ ಅವರ ತಂದೆ ಅಂಗವಿಕಲರಾಗಿದ್ದು, ಅವರು ತರಕಾರಿ ಮತ್ತು ಹಣ್ಣು ಮಾರಾಟ ಮಾಡುತ್ತಿದ್ದಾರೆ. ಆಕೆಗೊಬ್ಬ ಕಿರಿಯ ಸಹೋದರಿಯೂ ಇದ್ದಾಳೆ.

ಫೆಬ್ರವರಿ 7,2016 ರಂದು, ಮುಂಬೈನ ಅಂಧೇರಿಯಲ್ಲಿ ಸಂದೀಪ್ ಹೋಟೆಲ್‌ನಲ್ಲಿದ್ದಾರೆ ಎಂಬ ಸುದ್ದಿ ಹರಿಯಾಣ ಪೊಲೀಸರಿಗೆ ಸಿಕ್ಕಿತು. ಇದಾದ ನಂತರ ಪೊಲೀಸರು ಅಲ್ಲಿಗೆ ತಲುಪಿದ್ದು, ಸಂದೀಪ್ ಎನ್ ಕೌಂಟರ್ ಮಾಡಿದ್ದರು. ಸಂದೀಪ್‌ ಹೊಟೇಲ್‌ನಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದು, ದಿವ್ಯಾ ಅನ್ನೋದನ್ನು ಪೊಲೀಸರು ತಿಳಿಸಿದ್ದರು. ದರೋಡೆಕೋರ ಸಂದೀಪ್ ಗಡೋಲಿ ಅವರನ್ನು ಎನ್‌ಕೌಂಟರ್ ಮಾಡುವಾಗ ದಿವ್ಯಾ ಮುಂಬೈನ ಅದೇ ಹೋಟೆಲ್‌ನಲ್ಲಿ ಇದ್ದರು. ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಎನ್‌ಕೌಂಟರ್ ಪ್ರಕರಣದ ಪ್ರಮುಖ ಸಾಕ್ಷಿಯೂ ಆಗಿದ್ದಳು.

click me!