ತನಿಖೆಗೂ ಮುನ್ನವೇ ತುಪ್ಪದಲ್ಲಿ ಪ್ರಾಣಿ ಕೊಬ್ಬು ಇತ್ತೆಂದು ಹೇಳಿದ್ದೇಕೆ? ಆಂಧ್ರ ಸಿಎಂಗೆ ಸುಪ್ರೀಂ ತರಾಟೆ

By Kannadaprabha News  |  First Published Oct 1, 2024, 10:44 AM IST

ಜುಲೈನಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಕುರಿತು ಸೆಪ್ಟೆಂಬರ್‌ನಲ್ಲಿ ಪ್ರಶ್ನಿಸಲಾಗಿದೆ. ದೂರು ನೀಡುವ ಮೊದಲೇ ಮಾಧ್ಯಮದ ಎದುರು ಪ್ರಶ್ನಿಸಿದ್ದು ಯಾಕೆ ಎಂಬ ಕೆಲ ಮಹತ್ವದ ವಿಚಾರಗಳನ್ನು ನಾಯ್ಡು ಅವರನ್ನು ಕೋರ್ಟ್ ಪ್ರಶ್ನಿಸಿದೆ.


ನವದೆಹಲಿ: ‘ಹಿಂದಿನ ಜಗನ್‌ ಸರ್ಕಾರದ ಅವಧಿಯಲ್ಲಿ ತಿರುಮಲ ವೆಂಕಟೇಶ್ವರನ ಲಡ್ಡು ಪ್ರಸಾದದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಹಾಕಲಾಗಿತ್ತು’ ಎಂಬ ಹೇಳಿಕೆ ನೀಡಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್‌, ‘ತುಪ್ಪದಲ್ಲಿ ನಿಜವಾಗಿಯೂ ಪ್ರಾಣಿಗಳ ಕೊಬ್ಬು ಹಾಕಲಾಗಿತ್ತೇ ಇಲ್ಲವೇ ಎಂಬುದಕ್ಕೆ ನಿರ್ಣಾಯಕ ಸಾಕ್ಷ್ಯಗಳಿಲ್ಲ. ಮೇಲಾಗಿ ನೀವೇ ತನಿಖೆಗೆ ಆದೇಶ ನೀಡಿದ್ದೀರಿ. ಆದರೆ ಅದಕ್ಕೂ ಮುನ್ನವೇ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇತ್ತು ಎಂದು ಹೇಗೆ ಹೇಳಿದಿರಿ? ಕನಿಷ್ಠ ಪಕ್ಷ ದೇವರನ್ನಾದರೂ ರಾಜಕೀಯದಿಂದ ದೂರವಿಡಿ’ ಎಂದು ಚಾಟಿ ಬೀಸಿದೆ.

ಇದಲ್ಲದೆ, ಆಂಧ್ರ ಸರ್ಕಾರದ ಸೂಚನೆ ಮೇರೆಗೆ ಆರಂಭವಾಗಿರುವ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿರುವ ಕೋರ್ಟ್‌, ‘ಅನ್ಯ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಬೇಕೇ ತಿಳಿಸಿ’ ಎಂದು ಕೇಂದ್ರ ಸರ್ಕಾರದ ವಕೀಲರಾದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರಿಂದ ಅಭಿಪ್ರಾಯ ಕೋರಿ ಅ.3ಕ್ಕೆ ವಿಚಾರಣೆ ಮುಂದೂಡಿದೆ.

Tap to resize

Latest Videos

undefined

ಲಡ್ಡು ವಿವಾದದ ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯ ತನಿಖೆ ನಡೆಯಬೇಕು ಎಂದು ರಾಜಕಾರಣಿ ಸುಬ್ರಮಣಿಯನ್‌ ಸ್ವಾಮಿ ಹಾಗೂ ಇತರ ಕೆಲವರು ಸಲ್ಲಿಸಿರುವ ಅರ್ಜಿಗಳ ಗುಚ್ಛದ ವಿಚಾರಣೆ ಕೈಗೆತ್ತಿಕೊಂಡ ನ್ಯಾ। ಬಿ.ಆರ್‌. ಗವಾಯಿ ಹಾಗೂ ನ್ಯಾ। ಕೆ.ವಿ. ವಿಶ್ವನಾಥನ್‌ ಅವರ ಪೀಠ, ‘ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಲ್ಯಾಬ್‌ ವರದಿ ಜುಲೈ 17ಕ್ಕೇ ಬಂದಿದೆ. ಆದರೆ ಈ ಬಗ್ಗೆ ಚಂದ್ರಬಾಬು ಅವರು ಸೆ.18ರಂದು (2 ತಿಂಗಳ ಬಳಿಕ) ಹೇಳಿಕೆ ನೀಡಿದರು ಹಾಗೂ ಎಸ್‌ಐಟಿ ತನಿಖೆ ನಡೆಯಬೇಕು ಎಂದು ಸೆ.25ಕ್ಕೆ ಆದೇಶಿಸಿದರು. ತನಿಖೆಗೆ ಆದೇಶಿಸುವ ಮುನ್ನವೇ ಸಾಂವಿಧಾನಿಕ ಹುದ್ದೆಯಲ್ಲಿರುವ ಅವರು ಇಂಥ ಹೇಳಿಕೆ ನೀಡುವ ಅಗತ್ಯವೇನಿತ್ತು? ಇಂಥ ಹೇಳಿಕೆಯಿಂದ ಕೋಟ್ಯಂತರ ಜನರ ಭಾವನೆಗೆ ಧಕ್ಕೆ ಆಗಿದೆ’ ಎಂದು ತರಾಟೆಗೆ ತೆಗೆದುಕೊಂಡಿತು.

‘ಲಡ್ಡು ತಯಾರಿಸಲು ಖರೀದಿಸಿದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇತ್ತು ಎಂದು ನಾಯ್ಡು ಆರೋಪಿಸಿದ್ದಾರೆ. ಆದರೆ ಆ ತುಪ್ಪವನ್ನೇ ಲಡ್ಡುವಿನಲ್ಲಿ ಬಳಸಲಾಗಿದೆ ಎಂಬುದಕ್ಕೆ ನಿರ್ಣಾಯಕ ಸಾಕ್ಷ್ಯವಿಲ್ಲ. ಒಂದು ವೇಳೆ ಈ ಬಗ್ಗೆ ಅನುಮಾನವಿದ್ದರೆ ಅದನ್ನು ಖಚಿತಪಡಿಸಲು ಮೈಸೂರು ಅಥವಾ ಗಾಜಿಯಾಬಾದ್‌ನ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಿ ಏಕೆ ಖಚಿತಪಡಿಸಿಕೊಳ್ಳಲಿಲ್ಲ ಕಲಬೆರಕೆ ಆಗಿದೆ ಎನ್ನಲಾದ ತುಪ್ಪದ ಕೆಲ ನಮೂನೆಯನ್ನು ಮಾತ್ರ ಟೆಸ್ಟ್‌ಗೆ ಕಳಿಸಲಾಗಿದೆ. ತುಪ್ಪದ ಎಲ್ಲ ಟ್ಯಾಂಕರ್‌ಗಳನ್ನೂ ಪರೀಕ್ಷೆಗೆ ಒಳಪಡಿಸಿಲ್ಲ.

4 ಗೋಡೆ ಮಧ್ಯೆ ಬೈಬಲ್‌ ಓದುವೆ, ಎಲ್ಲ ಧರ್ಮ ಗೌರವಿಸುವೆ- ನನ್ನ ಭೇಟಿ ತಡೆಯಲು ಧರ್ಮದ ವಿಷಯ ಪ್ರಸ್ತಾಪ: ಜಗನ್‌

ಟಿಟಿಡಿಯ ಈಗಿನ ಸಿಇಒ ಅವರು ಮಾಧ್ಯಮಕ್ಕೆ ಹೇಳಿಕೆ ನೀಡಿ, ‘ಜುಲೈನಲ್ಲಿ ಟೆಸ್ಟ್‌ಗೆ ಒಳಪಡಿಸಲಾದ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಸಿಲ್ಲ’ ಎಂದಿದ್ದಾರೆ. ಸಿಎಂ ಹೇಳಿಕೆಗೂ ಅವರ ಹೇಳಿಕೆಗೂ ವೈರುಧ್ಯವಿದೆ. ಹೀಗಿದ್ದಾಗ, ಈಗಿನ ಮಟ್ಟಿಗೆ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಇರುವ ಬಗ್ಗೆ ಹಾಗೂ ಅದನ್ನು ಲಡ್ಡುವಿನಲ್ಲಿ ಬಳಸಲಾಗಿದೆಯೇ ಎಂಬ ಬಗ್ಗೆ ಯಾವುದೇ ನಿರ್ಣಾಯಕ ಸಾಕ್ಷ್ಯವಿಲ್ಲ. ಯಾವುದೇ ತಾರ್ಕಿಕ ನಿರ್ಣಯಕ್ಕೆ ಬರುವ ಮುನ್ನವೇ ಕೋಟ್ಯಂತರ ಜನರ ಭಾವನೆಗಳ ಮೇಲೆ ಪರಿಣಾಮ ಬೀರುವಂತಹ ಹೇಳಿಕೆ ನೀಡುವುದು ಸೂಕ್ತವಲ್ಲ. ಕನಿಷ್ಠಪಕ್ಷ ದೇವರನ್ನು ರಾಜಕೀಯದಿಂದ ದೂರವಿಡಬೇಕೆಂದು ನಾವು ನಿರೀಕ್ಷಿಸುತ್ತೇವೆ’ ಎಂಬ ತೀಕ್ಷ್ಣ ಅಭಿಪ್ರಾಯಗಳನ್ನು ಪೀಠ ವ್ಯಕ್ತಪಡಿಸಿತು ಹಾಗೂ ಅ.3ಕ್ಕೆ ವಿಚಾರಣೆ ಮುಂದೂಡಿತು.

ರಾಜ್ಯದಲ್ಲಿ ಹಿಂದಿನ ವೈ.ಎಸ್. ಜಗನ್ ಮೋಹನ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ನಾಯ್ಡು ಈ ತಿಂಗಳ ಮಧ್ಯದಲ್ಲಿ ಹೇಳಿಕೊಂಡಿದ್ದರು, ಇದು ಭಾರಿ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು. ಆದರೆ ಜಗನ್‌ ಅವರು, ‘ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ‘ಹೇಯ ಆರೋಪ’ ದಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದ್ದರು.

‘ನಾಯ್ಡು ಪಾಪ ಪರಿಹಾರ’ಕ್ಕೆ ಜಗನ್‌ ಪಕ್ಷದಿಂದ ‘ಪ್ರಾಯಶ್ಚಿತ್ತ ಪೂಜೆ’

click me!