ಗಾಂಬಿಯಾದ ಮಕ್ಕಳ ಸಾವಿಗೆ ಭಾರತ ಕೆಮ್ಮಿನ ಸಿರಪ್‌ ಲಿಂಕ್‌, WHO ವಿರುದ್ಧ ಡಿಜಿಸಿಐ ಕಿಡಿ!

Published : Dec 16, 2022, 01:28 PM ISTUpdated : Dec 16, 2022, 01:29 PM IST
ಗಾಂಬಿಯಾದ ಮಕ್ಕಳ ಸಾವಿಗೆ ಭಾರತ ಕೆಮ್ಮಿನ ಸಿರಪ್‌ ಲಿಂಕ್‌, WHO ವಿರುದ್ಧ ಡಿಜಿಸಿಐ ಕಿಡಿ!

ಸಾರಾಂಶ

ಸರ್ಕಾರವು ಪರೀಕ್ಷಿಸಿದ ಮೇಡನ್ ಫಾರ್ಮಾಕ್ಯುಟಿಕಲ್ಸ್‌ನ ಎಲ್ಲಾ ನಾಲ್ಕು ಕೆಮ್ಮು ಸಿರಪ್‌ ಮಾದರಿಗಳು ಮಾನದಂಡಗಳಿಗೆ ಅನುಗುಣವಾಗಿ ಕಂಡುಬಂದಿವೆ ಎಂದು ರಾಷ್ಟ್ರೀಯ ಔಷಧ ನಿಯಂತ್ರಕರು ವಿಶ್ವ ಆರೋಗ್ಯ ಸಂಸ್ಥೆಗೆ ಬರೆದ ಇತ್ತೀಚಿನ ಪತ್ರದಲ್ಲಿ ತಿಳಿಸಿದ್ದಾರೆ. ಅದರೊಂದಿಗೆ ತನಿಖೆಗೂ ಮುನ್ನವೇ ಈ ಸಾವಿಗೆ ಭಾರತವನ್ನು ಲಿಂಕ್‌ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದೆ.

ನವದೆಹಲಿ (ಡಿ.16): ಸರ್ಕಾರವು ಪರೀಕ್ಷಿಸಿದ ಮೇಡನ್ ಫಾರ್ಮಾಸ್ಯುಟಿಕಲ್ಸ್‌ನ ಎಲ್ಲಾ ನಾಲ್ಕು ಕೆಮ್ಮು ಸಿರಪ್ ಮಾದರಿಗಳು ಮಾನದಂಡಗಳಿಗೆ ಅನುಗುಣವಾಗಿ ಕಂಡುಬಂದಿವೆ ಎಂದು ರಾಷ್ಟ್ರೀಯ ಔಷಧ ನಿಯಂತ್ರಕರು (ಡಿಜಿಸಿಐ) ಜಿನೀವಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರತಿನಿಧಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇನ್ನೊಂದೆಡೆ ಗಾಂಬಿಯಾದಲ್ಲಿ ಆಗಿರುವ ಸಾವು ಭಾರತದಿಂದ ರವಾನೆಯಾದ ಕೆಮ್ಮಿನ ಸಿರಪ್‌ನಿಂದಳೇ ಆಗಿದೆ ಎನ್ನುವುದಕ್ಕೆ ಸ್ಪಷ್ಟವಾದ ಡೇಟಾ ಈವರೆಗೂ ಸಿಕ್ಕಿಲ್ಲ ಎಂದು ಮತ್ತೊಮ್ಮೆ ಹೇಳಿದೆ.  ಭಾರತೀಯ ಔಷಧ ತಯಾರಕ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಕೆಮ್ಮು ಸಿರಪ್‌ಗಳು ಗ್ಯಾಂಬಿಯಾದಲ್ಲಿ ಕನಿಷ್ಠ 66 ಮಕ್ಕಳ ಸಾವುಗಳಿಗೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.

ಅಕ್ಟೋಬರ್‌ 5 ರಂದು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವೈದ್ಯಕೀಯ ಉತ್ಪನ್ನಗಳ ಬ್ರೀಫಿಂಗ್‌ನಲ್ಲಿ ನಾಲ್ಕು ಕೆಮ್ಮಿನ ಸಿರಪ್‌ಗಳ ಬಗ್ಗೆ ಎಚ್ಚರಿಕೆಯನ್ನು ನೀಡಿತ್ತು. ಪ್ರೊಮೆಥಾಜಿನ್ ಓರಲ್ ಸೊಲ್ಯೂಷನ್, ಕೋಫೆಕ್ಸ್‌ಮಾಲಿನ್ ಬೇಬಿ ಕಾಫ್‌ ಸಿರಪ್, ಮಾಕೋಫ್ ಬೇಬಿ ಕಾಫ್‌ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ರವಾನಿಸಿತ್ತು. ಇದು ಮೇಡನ್‌ ಫಾರ್ಮಾದಿಂದ ತಯಾರಿಸಲ್ಪಟ್ಟಿದ್ದು, ಅದೇ ಕಂಪನಿಯಿಂದ ಗಾಂಬಿಯಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಆಗುತ್ತದೆ. ನಾಲ್ಕು ಕೆಮ್ಮು ಸಿರಪ್‌ಗಳಲ್ಲಿ ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕೋಲ್ ಎಂಬ ಎರಡು ವಿಷಕಾರಿ ಮಾಲಿನ್ಯಕಾರಕಗಳು ಕಂಡುಬಂದಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಎಚ್ಚರಿಕೆಯಲ್ಲಿ ತಿಳಿಸಿತ್ತು.

“ ಪ್ರಶ್ನೆ ಮಾಡಲಾಗಿರುವ ಈ 4 ಉತ್ಪನ್ನಗಳ ಮಾದರಿಗಳನ್ನು ಸರ್ಕಾರ ತೆಗೆದುಕೊಂಡಿದೆ ಮತ್ತು ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಸರ್ಕಾರಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿಶ್ವ ಆರೋಗ್ಯಸಂಸ್ಥೆಗೆ ತಿಳಿಸಲಾಗಿದೆ. ಸರ್ಕಾರಿ ಪ್ರಯೋಗಾಲಯದಿಂದ ಪಡೆದ ಪರೀಕ್ಷಾ ವರದಿಗಳ ಪ್ರಕಾರ, 4 ಉತ್ಪನ್ನಗಳ ಎಲ್ಲಾ ನಿಯಂತ್ರಣ ಮಾದರಿಗಳು ಮಾನದಂಡಗಳ  ರೀತಿಯಲ್ಲಿಯೇ ಇದೆ ಎನ್ನುವುದು ಕಂಡುಬಂದಿದೆ ಎಂದು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ವಿಜಿ ಸೋಮಾನಿ, ಡಬ್ಲ್ಯು ಎಚ್‌ಓದ  ನಿಯಂತ್ರಣ ಮತ್ತು ಪೂರ್ವ ಅರ್ಹತಾ ನಿರ್ದೇಶಕ ರೋಜೆರಿಯೊ ಗ್ಯಾಸ್ಪರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದಲ್ಲದೆ, ಈ ಉತ್ಪನ್ನಗಳಲ್ಲಿ ಡಿಇಜಿ ಮತ್ತು ಇಜಿ ಪತ್ತೆಯಾಗಿಲ್ಲ ಮತ್ತು ಪರೀಕ್ಷಾ ವರದಿಗಳ ಪ್ರಕಾರ ಉತ್ಪನ್ನಗಳು ಡಿಇಜಿ ಅಥವಾ ಇಜಿ  ರೀತಿಯ ವಿಷಕಾರಕ ಅಂಶಗಳನ್ನು ಹೊಂದಿಲ್ಲ ಎಂದು ಕಂಡುಬಂದಿದೆ. ಈ ವರದಿಗಳನ್ನು ಪರಿಶೀಲಿಸುತ್ತಿರುವ ಸರ್ಕಾರದ ತಾಂತ್ರಿಕ ಸಮಿತಿಗೆ ಲಭ್ಯವಾಗಿದೆ ಎಂದು ಹೇಳಿದೆ.

ಔಷಧಗಳನ್ನು ತಯಾರಿಸಲು ಬಳಸಲಾಗುವ ಪ್ರೊಪೈಲೀನ್ ಗ್ಲೈಕಾಲ್, ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ವಿಷಕಾರಕ ಅಂಶಗಳನ್ನು ಹೊಂದಿರಬಹುದು. ಎರಡು ವಿಷಕಾರಿ ರಾಸಾಯನಿಕಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಸಂಭವನೀಯ ಕಾರಣಗಳೆಂದು ಹೆಸರಿಸಿದೆ. ಮತ್ತು ತಜ್ಞರ ಪ್ರಕಾರ ಕಟ್ಟುನಿಟ್ಟಾದ ಗುಣಮಟ್ಟದ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Gambia 66 ಮಕ್ಕಳ ಸಾವಿಗೆ ಭಾರತದ ಸಿರಪ್‌ ಕಾರಣ ಶಂಕೆ: ಕೇಂದ್ರ ಸರ್ಕಾರದಿಂದ ತನಿಖೆಗೆ ಆದೇಶ

"ಔಷಧಗಳು ಮತ್ತು ಸೌಂದರ್ಯವರ್ಧಕಗಳ ಗುಣಮಟ್ಟ ನಿಯಂತ್ರಣದಲ್ಲಿ ಉತ್ಪಾದನೆಯ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಕಠಿಣ ಮೇಲ್ವಿಚಾರಣೆಗೆ ಬದ್ಧವಾಗಿದೆ" ಎಂದು ಸೋಮಾನಿ ಪತ್ರದಲ್ಲಿ ತಿಳಿಸಿದ್ದಾರೆ. ಗ್ಯಾಂಬಿಯಾದಲ್ಲಿನ ಘಟನೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಬಂದ ಎಚ್ಚರಿಕೆಗಳ ನಂತರ, ಹರಿಯಾಣ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಆವರಣದಲ್ಲಿ ಸ್ವತಂತ್ರ ತಪಾಸಣೆಯನ್ನು ನಡೆಸಲಾಗಿತ್ತು.

ಭಾರತೀಯ ಕಂಪನಿಯ ಕೆಮ್ಮಿನ ಔಷಧಿ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹೈ ಅಲರ್ಟ್‌, ನಿಮ್ಮಲ್ಲಿದ್ದರೆ ಎಚ್ಚರ ವಹಿಸಿ!

ವಿವಿಧ ಉತ್ತಮ ಉತ್ಪಾದನಾ ಅಭ್ಯಾಸಗಳನ್ನು (GMP) ಉಲ್ಲಂಘಿಸಿದ್ದಕ್ಕಾಗಿ ಮತ್ತು ನಿಯಮಗಳ ಪ್ರಕಾರ ತಯಾರಿಕೆ ಮತ್ತು ಪರೀಕ್ಷೆಯ ಸಂಪೂರ್ಣ ದಾಖಲೆಗಳನ್ನು ನೀಡದಿದ್ದಕ್ಕಾಗಿ ಭಾರತದ ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?