ಸುಪ್ರೀಂ ಚಾಟಿ ಬೆನ್ನಲ್ಲೇ ಕೇಂದ್ರದ ಮಾರ್ಗಸೂಚಿ, ಕೊರೋನಾ ಸಾವು ಮುಚ್ಚಿಡೋದು ಅಸಾಧ್ಯ!

By Suvarna NewsFirst Published Sep 12, 2021, 4:02 PM IST
Highlights

* ದೇಶಾದ್ಯಂತ ಕೊರೋನಾ ಮೂರನೇ ಅಲೆ ಏಳುವ ಭೀತಿ

* ಕೊರೋನಾ ಭೀತಿ ನಡುವೆ ಕೇಂದ್ರಕ್ಕೆ ಚಾಟಿ ಬೀಸಿದ್ದ ಸುಪ್ರೀಂ

* ಸುಪ್ರೀಂ ಆದೇಶದ ಬೆನ್ನಲ್ಲೇ ಮಾರ್ಗಸೂಚಿ ಹೊರಡಿಸಿದ ಕೇಂದ್ರ

ನವದೆಹಲಿ(ಸೆ.12): ಕೊರೋನಾದಿಂದ ಸಂಭವಿಸುವ ಮೃತರ ಸಂಖ್ಯೆ ಇನ್ನು ಮುಂದೆ ಮರೆಮಾಚುವುದು ಅಸಾಧ್ಯ. ಹೌದು ಸುಪ್ರೀಂ ಕೋರ್ಟ್‌ ಆದೇಶದ ಬಳಿಕ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮಾರ್ಗಸೂಚಿ ಜಾರಿಗೊಳಿಸಿದೆ. ಐಸಿಎಂಆರ್ ಮತ್ತು ಆರೋಗ್ಯ ಸಚಿವಾಲಯ ಮಾರ್ಗಸೂಚಿ ಸಿದ್ಧಪಡಿಸಿದೆ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದರ ಅಡಿಯಲ್ಲಿ, ಕೊರೋನಾದಿಂದ ಮೃತಪಟ್ಟವರ ಅಧಿಕೃತ ದಾಖಲೆಯನ್ನು ನೀಡಲಾಗುವುದು ಎಂದು ಹೇಳಿದೆ. ಹತ್ತು ದಿನಗಳ ಹಿಂದೆ, ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತು.

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮಾರ್ಗಸೂಚಿ ಜಾರಿ

ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಮೃತರ ಆರ್‌ಟಿ-ಪಿಸಿಆರ್ ಪರೀಕ್ಷೆ, ಮಾಲಿಕ್ಯುಲರ್ ಟೆಸ್ಟ್, ರಾಪಿಡ್ ಆಂಟಿಜನ್ ಟೆಸ್ಟ್ ಅಥವಾ ವೈದ್ಯರು ಪರಿಶೀಲನೆ ಅಥವಾ ಆಸ್ಪತ್ರೆ ಅಥವಾ ಮನೆಯಲ್ಲಿ ವೈದ್ಯರು ಪರಿಶೀಲಿಸಿ ಕೊರೋನಾದಿಂದ ಮೃತಪಟ್ಟಿದ್ದಾರಾ ಎಂಬುವುದನ್ನು ಪರಿಗಣಿಸಲಾಗುತ್ತದೆ. ಕೊರೋನಾದಿಂದ ಮೃತಪಟ್ಟಿರುವುದು ಖಚಿತಗೊಂಡ ಬಳಿಕ ರೋಗಿಗಳ ಸಾವಿನ ಕಾರಣವನ್ನು ಕೊರೋನಾ ಎಂದು ಮರಣ ಪ್ರಮಾಣಪತ್ರದಲ್ಲಿಯೂ ಉಲ್ಲೇಖಿಸಲಾಗುತ್ತದೆ.

ಈ ರೋಗಿಗಳಿಗೆ ಅನ್ವಯಿಸುವುದಿಲ್ಲ

ವಿಷ ಸೇವನೆ, ಆತ್ಮಹತ್ಯೆ, ಕೊಲೆ ಅಥವಾ ಅಪಘಾತ ಸೇರಿದಂತೆ ಇತರ ಕಾರಣಗಳಿಂದ ಸಂಭಿಸಿದ ಸಾವನ್ನು ಕೊರೋನಾ ಎಂದು ಪರಿಗಣಿಸಲಾಗುವುದಿಲ್ಲ. ಸೋಂಕಿತ ವ್ಯಕ್ತಿ ಈ ಮೇಲಿನ ಕಾರಣದಿಂದ ಸಾವನ್ನಪ್ಪಿದ್ದರೂ ಇದು ಅನ್ವಯಿಸುವುದಿಲ್ಲ.

ಇವರಿಗೆ ಸಿಗಲಿದೆ ಪ್ರಮಾಣಪತ್ರ

ಆಸ್ಪತ್ರೆಯಲ್ಲಿ ಅಥವಾ ಮನೆಯಲ್ಲಿ ಮರಣ ಹೊಂದಿದ ರೋಗಿಗಳು, ಜನನ ಮತ್ತು ಮರಣ ನೋಂದಣಿ ಕಾಯ್ದೆ 1969 (ಸೆಕ್ಷನ್ 10) ಅಡಿಯಲ್ಲಿ ವೈದ್ಯಕೀಯ ಪ್ರಮಾಣಪತ್ರದ ನಮೂನೆ 4 ಮತ್ತು 4 ಎ ಅನ್ನು ನೋಂದಾಯಿಸುವ ಸಂಸ್ಥೆಗೆ ನೀಡಿದ್ದರಷ್ಟೇ ಅವರ ಸಾವನ್ನು ಕೊರೋನಾದಿಂದ ಸಂಭವಿಸಿದೆ ಎಂದು ಪರಿಗಣಿಸಲಾಗುತ್ತದೆ.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್ ಅನ್ವಯ, ಐಸಿಎಂಆರ್ ಅಧ್ಯಯನದ ಪ್ರಕಾರ, ಕೊರೋನಾ ಸೋಂಕಿಗೆ ಒಳಗಾದ 25 ದಿನಗಳಲ್ಲಿ 95% ಸಾವುಗಳು ಸಂಭವಿಸುತ್ತವೆ. ನಿಯಮಗಳನ್ನು ಬದಲಾಯಿಸುವ ಮೂಲಕ, ಈಗ ಕೊರೋನಾ ಪರೀಕ್ಷೆಯ ದಿನಾಂಕದಿಂದ ಅಥವಾ ಕರೋನಾ ಸೋಂಕು ಪತ್ತೆಯಾದ ದಿನದಿಂದ 30 ದಿನಗಳ ಒಳಗೆ ಸಂಭವಿಸುವ ಸಾವುಗಳನ್ನು ರೋಗಿಯು ಆಸ್ಪತ್ರೆಯ ಹೊರಗೆ ಅಥವಾ ಮನೆಯಲ್ಲಿ ಮರಣ ಹೊಂದಿದರೂ, ಕೊರೋನ ಸಂಬಂಧಿತ ಸಾವು ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಆಸ್ಪತ್ರೆಯಲ್ಲಿ ಅಥವಾ ಮನೆಯಲ್ಲಿ ಕೊರೋನಾ ರೋಗಿಯು 30 ದಿನಗಳ ನಂತರ ಸಾವನ್ನಪ್ಪಿದರೆ, ಅದನ್ನು ಕೊರೋನ ಸಂಬಂಧಿತ ಸಾವು ಎಂದು ಪರಿಗಣಿಸಲಾಗುತ್ತದೆ.

click me!