Chhattisgarh: ಚುನಾವಣೆಗೂ ಮುನ್ನ ಸೇನಾಪಡೆಯ ಭರ್ಜರಿ ಬೇಟೆ, ಟಾಪ್‌ ಕಮಾಂಡರ್‌ ಸೇರಿ 18 ನಕ್ಸಲರ ಹತ್ಯೆ!

By Santosh NaikFirst Published Apr 16, 2024, 6:31 PM IST
Highlights

2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯ ದಿನಗಳು ಹತ್ತಿರವಾಗುತ್ತಿರುವ ನಡುವೆ ಛತ್ತೀಸ್‌ಗಢದ ಕಂಕೇರ್‌ನಲ್ಲಿ ಭಾರತದ ಸೇನಾಪಡೆಗಳು ಭರ್ಜರಿ ಬೇಟೆ ನಡೆಸಿದ್ದು, 18 ನಕ್ಸಲರ ಹತ್ಯೆ ಮಾಡಿದೆ.

ರಾಯ್‌ಪುರ (ಏ.16): ಏಪ್ರಿಲ್ 19 ರಂದು ದೇಶದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಗೂ ಮುನ್ನವೇ ಛತ್ತೀಸ್ ಗಢದ ಕಂಕೇರ್‌ನಲ್ಲಿ  ಭಾರೀ ಪ್ರಮಾಣದ ಎನ್ ಕೌಂಟರ್ ನಡೆದಿದೆ. ಪೊಲೀಸರು ಮತ್ತು ನಕ್ಸಲೀಯರ ನಡುವಿನ ಎನ್‌ಕೌಂಟರ್‌ನಲ್ಲಿ ಮೂವರು ಯೋಧರು ಗಾಯಗೊಂಡಿರುವ ಸುದ್ದಿ ಇದೆ. ಛೋಟೆ ಬೇಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾದ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಯುತ್ತಿದ್ದು, ಗಾಯಗೊಂಡ ಸೈನಿಕರನ್ನು ಕಾಡಿನಿಂದ ಸ್ಥಳಾಂತರಿಸಲು ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದೆ. ಈ ಎನ್‌ಕೌಂಟರ್‌ನಲ್ಲಿ ನಕ್ಸಲೀಯ ಕಮಾಂಡರ್ ಶಂಕರ್ ರಾವ್ ಕೂಡ ಹತರಾಗಿದ್ದಾರೆ, ಇದುವರೆಗೆ 18 ಮೃತದೇಹಗಳು ಪತ್ತೆಯಾಗಿದ್ದು, ಅಪಾರ ಸಂಖ್ಯೆಯ ಸ್ವಯಂಚಾಲಿತ ರೈಫಲ್‌ಗಳು ಪತ್ತೆಯಾಗಿವೆ. ಮಾಹಿತಿ ಪ್ರಕಾರ, ಈ ಎನ್‌ಕೌಂಟರ್‌ನಲ್ಲಿ 3 ಪೊಲೀಸರು ಗಾಯಗೊಂಡಿದ್ದಾರೆ.

ಎನ್‌ಕೌಂಟರ್‌ನಲ್ಲಿ 18 ನಕ್ಸಲೀಯರು ಹತರಾಗಿದ್ದಾರೆ ಎಂದು ಎಸ್‌ಪಿ ಕಲ್ಯಾಣ್ ಅಲಿಸೆಲಾ ಖಚಿತಪಡಿಸಿದ್ದಾರೆ. ಟಾಪ್ ನಕ್ಸಲೈಟ್ ಕಮಾಂಡರ್ ಶಂಕರ್ ರಾವ್ ಕೂಡ ಹತರಾಗಿದ್ದಾರೆ ಎಂದು ತಿಳಿಸಿದ್ದು, ಶಂಕರ್‌ ರಾವ್‌ನ ತಲೆಗೆ 25 ಲಕ್ಷ ರೂಪಾಯಿ ಬಹುಮಾನವನ್ನು ಸರ್ಕಾರ ನಿಗದಿ ಮಾಡಿತ್ತು.  7 ಎಕೆ 47 ರೈಫಲ್‌ಗಳ ಜೊತೆಗೆ 1 ಐಎನ್‌ಎಸ್‌ಎಎಸ್ ರೈಫಲ್ ಮತ್ತು 3 ಎಲ್‌ಎಂಜಿ ಕೂಡ ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಏಪ್ರಿಲ್ 16 ರಂದು ಕಂಕೇರ್‌ನ ಬಿನಗುಂದ ಗ್ರಾಮದಲ್ಲಿ ಬಿಎಸ್‌ಎಫ್ ಮತ್ತು ಡಿಆರ್‌ಜಿ ತಂಡಗಳು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿದ್ದರು. ಈ ವೇಳೆ ಸಿಪಿಐ ಮಾವೋವಾದಿ ಕಾರ್ಯಕರ್ತರು ಬಿಎಸ್ಎಫ್ ಪಡೆಯ ಮೇಲೆ ಗುಂಡು ಹಾರಿಸಿದ್ದಾರೆ. ಬಿಎಸ್‌ಎಫ್‌ ಪಡೆ ಇವರ ವಿರುದ್ದ ಪ್ರತಿದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಬ್ಬ ಬಿಎಸ್‌ಎಸ್‌ ಸಿಬ್ಬಂದಿ ಕಾಲಿಗೆ ಗುಂಡು ತಗುಲಿದೆ. ಅವರು ಅಪಾಯದಿಂದ ಪಾರಾಗಿದ್ದು, ಇನ್ನೂ ಇಬ್ಬರು ಗಾಯಗೊಂಡಿದ್ದಾರೆ. ಈ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಇದುವರೆಗೆ 18 ಹತರಾದ ನಕ್ಸಲೀಯರ ಶವಗಳು, 7 ಎಕೆ 47 ರೈಫಲ್‌ಗಳು ಮತ್ತು 3 ಲಘು ಮೆಷಿನ್ ಗನ್‌ಗಳನ್ನು ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಛತ್ತೀಸ್‌ಗಢ ಎರಡನೇ ಅತಿ ಹೆಚ್ಚು ನಕ್ಸಲೀಯ ಪೀಡಿತ ರಾಜ್ಯವಾಗಿದೆ. ಗೃಹ ಸಚಿವಾಲಯದ ಪ್ರಕಾರ, ಛತ್ತೀಸ್‌ಗಢದ 14 ಜಿಲ್ಲೆಗಳು - ಬಲರಾಂಪುರ್, ಬಸ್ತಾರ್, ಬಿಜಾಪುರ, ದಾಂತೇವಾಡ, ಧಮತರಿ, ಗರಿಯಾಬಂದ್, ಕಂಕೇರ್, ಕೊಂಡಗಾಂವ್, ಮಹಾಸಮುಂಡ್, ನಾರಾಯಣಪುರ, ರಾಜನಂದಗಾಂವ್, ಸುಕ್ಮಾ, ಕಬೀರ್ಧಾಮ್ ಮತ್ತು ಮುಂಗೇಲಿ ನಕ್ಸಲ್ ಪೀಡಿತವಾಗಿವೆ. ಅಂಕಿಅಂಶಗಳ ಪ್ರಕಾರ ಕಳೆದ ಹಲವು ತಿಂಗಳಿನಿಂದ ಛತ್ತೀಸ್‌ಗಢದಲ್ಲಿ ನಕ್ಸಲೀಯರ ದಾಳಿ ಕಡಿಮೆಯಾಗುತ್ತಿಲ್ಲ. ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ ಮುನ್ನೂರ ಐವತ್ತಕ್ಕೂ ಹೆಚ್ಚು ನಕ್ಸಲೀಯರ ದಾಳಿಗಳು ನಡೆಯುತ್ತವೆ. ಇವುಗಳಲ್ಲಿ ಪ್ರತಿ ವರ್ಷ ಸರಾಸರಿ 45 ಯೋಧರು ಹುತಾತ್ಮರಾಗುತ್ತಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ: ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಸಶಸ್ತ್ತ ಮೀಸಲು ಪಡೆಗಳ ನಿಯೋಜನೆ!

ಒಂದು ವರ್ಷದಲ್ಲಿ 300ಕ್ಕೂ ಹೆಚ್ಚು ನಕ್ಸಲೀಯರ ದಾಳಿ: ಕಳೆದ ವರ್ಷ ಮಾರ್ಚ್‌ನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಗೃಹ ಸಚಿವಾಲಯವು ಛತ್ತೀಸ್‌ಗಢದಲ್ಲಿ ನಕ್ಸಲೀಯರ ದಾಳಿಯ ಅಂಕಿಅಂಶಗಳನ್ನು ಮಂಡಿಸಿತ್ತು. ಇದರ ಪ್ರಕಾರ, 2022 ರಲ್ಲಿ ರಾಜ್ಯದೊಳಗೆ 305 ನಕ್ಸಲೀಯರ ದಾಳಿಗಳು ನಡೆದಿವೆ. ಇದಕ್ಕೂ ಮೊದಲು, ಸರ್ಕಾರವು ಸಂಸತ್ತಿನಲ್ಲಿ ಕಳೆದ ವರ್ಷ ಫೆಬ್ರವರಿ 2023 ರವರೆಗೆ (ಕೇವಲ ಎರಡು ತಿಂಗಳಲ್ಲಿ) ಛತ್ತೀಸ್‌ಗಢದಲ್ಲಿ ನಕ್ಸಲೀಯರ ದಾಳಿಯಲ್ಲಿ 7 ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿತ್ತು. ಅಂಕಿಅಂಶಗಳ ಪ್ರಕಾರ, 2013 ಮತ್ತು 2022 ರ ನಡುವಿನ 10 ವರ್ಷಗಳಲ್ಲಿ ಛತ್ತೀಸ್‌ಗಢದಲ್ಲಿ 3447 ನಕ್ಸಲೈಟ್ ದಾಳಿಗಳು ನಡೆದಿವೆ. ಈ ದಾಳಿಯಲ್ಲಿ 418 ಸೈನಿಕರು ಹುತಾತ್ಮರಾಗಿದ್ದರೆ, ಭದ್ರತಾ ಪಡೆಗಳು 663 ನಕ್ಸಲೀಯರನ್ನು ಕೊಂದಿದ್ದಾರೆ.

Breaking: ಛತ್ತೀಸ್‌ಗಢದ ಬಿಜಾಪುರದಲ್ಲಿ ನಕ್ಸಲ್‌ ದಾಳಿ, ಮೂವರು ಸೈನಿಕರು ಹುತಾತ್ಮ, 14 ಮಂದಿಗೆ ಗಾಯ!

click me!