PFI Ban: ಇನ್ನು ಶುರು ಕಾನೂನು ಹೋರಾಟ, ಪಿಎಫ್‌ಐ ಮುಂದೆ ಇರೋ ದಾರಿ ಏನು?

By Santosh NaikFirst Published Sep 28, 2022, 2:37 PM IST
Highlights

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಸೇರಿದಂತೆ ಒಂಬತ್ತು ಸಂಘಟನೆಗಳನ್ನು ನಿಷೇಧಿಸಿದೆ. ನಿಷೇಧದ ಕುರಿತು ಅಧಿಸೂಚನೆಯನ್ನು ನ್ಯಾಯಮಂಡಳಿಗೆ ಕಳುಹಿಸಲಾಗುವುದು ಎಂದು ಕಾನೂನು ಪ್ರಕ್ರಿಯೆ ತಜ್ಞರು ಹೇಳಿದ್ದಾರೆ, ಅದರ ಕಾನೂನುಬದ್ಧತೆಯನ್ನು ಪರಿಗಣಿಸಿದ ನಂತರ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ.
 

ನವದೆಹಲಿ (ಸೆ. 28):ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸೇರಿದಂತೆ ಅದರ ಎಂಟು ಮಿತ್ರ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ, ಆದರೆ ಪಿಎಫ್‌ಐ ಎನ್ನುವ ವಿಷಜಂತುವನ್ನು ಕೊಲ್ಲಲು ಇಷ್ಟು ಮಾತ್ರ ಸಾಕಾಗುವುದಿಲ್ಲ.ಬಹುರೂಪಿ ಭಯೋತ್ಪಾದಕ ಸಂಘಟನೆಗಳ ಮೇಲೆ ಕಣ್ಣಿಟ್ಟಿರುವುದಲ್ಲದೆ, ನಿಷೇಧವನ್ನು ಸಮರ್ಥಿಸಿಕೊಳ್ಳುವಲ್ಲಿ ಕಾನೂನು ತಂತ್ರವನ್ನೂ ಸರ್ಕಾರ ಎದುರಿಸಬೇಕಾಗುತ್ತದೆ. ಈ ಸಂಘಟನೆಗಳು ಕೆಲವೇ ದಿನಗಳಲ್ಲಿ ನಿಷೇಧದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಅದಕ್ಕಾಗಿ ಸರ್ಕಾರದ ಅಧಿಸೂಚನೆಯನ್ನು ಅಮೂಲಾಗ್ರವಾಗಿ ಪರಿಶೀಲನೆ ಮಾಡುವ ಹಂತದಲ್ಲಿದೆ. ಕೇಂದ್ರ ಗೃಹ ಸಚಿವಾಲಯವು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಪಿಎಫ್‌ಐ ಸೇರಿದಂತೆ ಒಂಬತ್ತು ಸಂಘಟನೆಗಳನ್ನು ಬ್ಯಾನ್‌ ಮಾಡಿದೆ. ನಿಷೇಧಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ನ್ಯಾಯಮಂಡಳಿಗೆ ಕಳುಹಿಸಲಾಗುವುದು ಎಂದು ಕಾನೂನು ಪ್ರಕ್ರಿಯೆ ತಜ್ಞರು ಹೇಳಿದ್ದಾರೆ. ಅದರ ಕಾನೂನುಬದ್ಧತೆಯನ್ನು ಪರಿಗಣಿಸಿದ ನಂತರ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಯುಎಪಿಎ ಸೆಕ್ಷನ್ 4ರ ಅಡಿಯಲ್ಲಿ 30 ದಿನಗಳ ಒಳಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ನ್ಯಾಯಮಂಡಳಿಗೆ ಕೇಂದ್ರ ಸರ್ಕಾರವು ಈ ಅಧಿಸೂಚನೆಯನ್ನು ಕಳುಹಿಸುವ ಅಗತ್ಯವಿದೆ. ಇದು ದೇಶಾದ್ಯಂತ ಪಿಎಫ್‌ಐ ಮತ್ತು ಅದರ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಎನ್‌ಐಎ, ಇಡಿ ಮತ್ತು ರಾಜ್ಯ ಪೊಲೀಸರು ದಾಖಲಿಸಿರುವ ಎಲ್ಲಾ ಪ್ರಕರಣಗಳ ವಿವರಗಳನ್ನು ಒಳಗೊಂಡಿರುತ್ತದೆ.


ಗೃಹ ವ್ಯವಹಾರಗಳ ಸಚಿವಾಲಯವು ಪಿಎಫ್‌ಐ ಕುರಿತು ವಿವರವಾದ ಟಿಪ್ಪಣಿಯನ್ನು ಯುಎಪಿಎ ನ್ಯಾಯಮಂಡಳಿಗೆ ಸಲ್ಲಿಸಬಹುದು. ಈ ಸಂಘಟನೆಯು ಹೇಗೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಮತ್ತು ಅದು ಹೇಗೆ ದೇಶದ ಜನರಲ್ಲಿ ದ್ವೇಷವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎನ್ನುವುದನ್ನು ತಿಳಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಬಂಧಗಳು, ಕಾನೂನುಬಾಹಿರ ಚಟುವಟಿಕೆಗಳು ಮತ್ತು ಕಾನೂನುಗಳ ಉಲ್ಲಂಘನೆಗಳ ಪುರಾವೆಗಳನ್ನು ನ್ಯಾಯಮಂಡಳಿಯ ಮುಂದೆ ಇಡಲಾಗುತ್ತದೆ.

ಪಿಎಫ್‌ಐಗೆ ನೋಟಿಸ್‌ ನೀಡಲಿದೆ ನ್ಯಾಯಮಂಡಳಿ: ಈ ವಿಷಯವನ್ನು ನ್ಯಾಯಮಂಡಳಿಗೆ (Unlawful Activities Prevention Tribunal ) ತಿಳಿಸಿದಾಗ, ಅದು ಲಿಖಿತವಾಗಿ ಪ್ರತಿಕ್ರಿಯಿಸುವಂತೆ ಪಿಎಫ್‌ಐಗೆ ಶೋಕಾಸ್ ನೋಟಿಸ್ ನೀಡಲಿದೆ. ಸಂಘಟನೆಯನ್ನು ಏಕೆ ನಿಷೇಧಿಸಬಾರದು ಎಂದೂ ಪ್ರಶ್ನೆ ಮಾಡಲಾಗುತ್ತದೆ. ಎರಡೂ ಪಕ್ಷಗಳ ವಾದಗಳ ಆಧಾರದ ಮೇಲೆ, ಪಿಎಫ್‌ಐ ಅನ್ನು ಕಾನೂನುಬಾಹಿರವೆಂದು ಘೋಷಿಸಲು ಸಾಕಷ್ಟು ಪುರಾವೆಗಳಿವೆಯೇ ಎಂದು ನಿರ್ಧರಿಸಲು ನ್ಯಾಯಮಂಡಳಿಯು ವಿಚಾರಣೆಯನ್ನೂ ನಡೆಸಬಹುದು.

PFI Ban: ಮುಸ್ಲಿಂ ಮೂಲಭೂತವಾದಿ ಸಂಘಟನೆಯ ರಕ್ತಸಿಕ್ತ ಇತಿಹಾಸ..!

ಸಾಕ್ಷಿ ಆಧರಿಸಿ ಕ್ರಮ ಎಂದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ:
ಈ ನಡುವೆ, ಪಿಎಫ್‌ಐ ವಿರುದ್ಧ ತನಿಖೆ ಮತ್ತು ಕ್ರಮವು ಸಾಕ್ಷ್ಯಾಧಾರಗಳನ್ನು ಆಧರಿಸಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಹೇಳಿದ್ದಾರೆ. ನಿಷೇಧದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಿಎಫ್‌ಐ ಅಪಾಯಕಾರಿ ಅಲ್ಲದಿದ್ದರೆ, ಅದನ್ನು ಏಕೆ ನಿಷೇಧಿಸಲಾಗಿದೆ? ಇದನ್ನು ನೀವು ಅರ್ಥ ಮಾಡಿಕೊಂಡರೆ ಉತ್ತರ ಸಿಗುತ್ತದೆ ಎಂದಿದ್ದಾರೆ.

PFI Ban: ಪಿಎಫ್‌ಐ ಬ್ಯಾನ್‌ ಆಯ್ತು, ಎಸ್‌ಡಿಪಿಐ ಕಥೆ ಏನು?

ನಿಷೇಧವಾಗಿರುವ ಸಂಘಟನೆಗಳು: ಪಿಎಫ್‌ಐ (PFI), ರಿಹಾಬ್‌ ಫೌಂಡೇಷನ್‌ ಇಂಡಿಯಾ ( Rehab India Foundation), ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (Campus Front Of India), ನ್ಯಾಷನಲ್‌ ವುಮೆನ್ಸ್‌ ಫ್ರಂಟ್‌ (National Women's Front), ಆಲ್‌ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ (All India Imams Council), ಜೂನಿಯರ್ ಫ್ರಂಟ್‌ (Junior Front), ಎಂಪವರ್‌ ಇಂಡಿಯಾ ಫೌಂಡೇಷನ್‌ (Empower India Foundation), ರಿಹಾಬ್‌ ಫೌಂಡೇಷನ್‌ ಕೇರಳ (Rehab Foundation Kerala), ನ್ಯಾಷನಲ್‌ ಕಾನ್ಫೆಡರೇಷನ್‌ ಆಫ್‌ ಹ್ಯೂಮನ್‌ ರೈಟ್ಸ್‌ ಆರ್ಗನೈಜೇಷನ್‌ (National Confederation of Human Rights Organization) ಸಂಘಟನೆಯನ್ನು ಬ್ಯಾನ್‌ ಮಾಡಲಾಗಿದೆ.

click me!