Nagaland Civilian Killings :ನಾಗಾಲ್ಯಾಂಡ್‌ನಲ್ಲಿ ಉಗ್ರಗಾಮಿಗಳೆಂದು ಭದ್ರತಾ ಪಡೆಗಳಿಂದಲೇ 13 ನಾಗರಿಕರ ಹತ್ಯೆ

By Suvarna NewsFirst Published Dec 5, 2021, 10:47 AM IST
Highlights

ನಾಗಾಲ್ಯಾಂಡ್‌ನಲ್ಲಿ ಭದ್ರತಾ ಪಡೆಗಳಿಂದಲೇ 13 ನಾಗರಿಕರ ಹತ್ಯೆ
ಉಗ್ರಾಗಾಮಿಗಳೆಂದು ತಪ್ಪಾಗಿ ತಿಳಿದು ದಾಳಿ ನಡೆಸಿದ ಭದ್ರತಾ ಪಡೆ
ಮೃತರೆಲ್ಲರೂ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು
 

ಗುವಾಹಟಿ(ಡಿ.5): ನಾಗಾಲ್ಯಾಂಡ್‌ನಲ್ಲಿ ಭದ್ರತಾ ಪಡೆಗಳಿಂದಲೇ 13 ನಾಗರಿಕರು ಹತ್ಯೆಗೀಡಾಗಿದ್ದು, ಘಟನೆಯನ್ನು ಖಂಡಿಸಿ ನಾಗಲ್ಯಾಂಡ್‌ನಾದ್ಯಂತ ಭದ್ರತಾ ಪಡೆಗಳ ವಿರುದ್ಧ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ನಾಗಲ್ಯಾಂಡ್‌ನ ಮೊನ್‌ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ. ಭದ್ರತಾ ಪಡೆಗಳು ಹೊಂಚು ಹಾಕಿ ನಡೆಸಿದ ಈ ದಾಳಿಯಲ್ಲಿ 13 ನಾಗರಿಕರು ಹತ್ಯೆಯಾಗಿದ್ದಾರೆ ಎಂದು ಸರ್ಕಾರೇತರ ಮೂಲಗಳಿಂದ ಮಾಹಿತಿ ಸಿಕ್ಕಿದೆ. 

ಪ್ಯಾರಾ ಕಮಾಂಡೋಗಳೆಂದು ಹೇಳಲಾದ ಭದ್ರತಾ ಸಿಬ್ಬಂದಿ, ಸಂತ್ರಸ್ತರನ್ನು ಉಗ್ರಗಾಮಿಗಳೆಂದು ತಪ್ಪಾಗಿ ಗ್ರಹಿಸಿ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯು ಡಿಸೆಂಬರ್ 4, 2021 ರ ಶನಿವಾರ ಸಂಜೆ ನಡೆದಿದ್ದು, ಮೃತರೆಲ್ಲರೂ ಪಿಕ್-ಅಪ್ ವಾಹನದಲ್ಲಿ ಕಲ್ಲಿದ್ದಲು ಗಣಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಅವರು ಕಲ್ಲಿದ್ದಲು ಗಣಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. 

shootout in America: ಅಮೆರಿಕಾದಲ್ಲಿ ಗುಂಡಿನ ದಾಳಿಗೆ ಕೇರಳದ ತರುಣಿ ಬಲಿ

ಘಟನೆಗೆ ಸಂಬಂಧಿಸಿದಂತೆ ಮೋನ್‌ ಜಿಲ್ಲೆ(Mon District)ಯ ನ್ಯಾಯಾಧೀಶರು, ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಮತ್ತು ನಾಗರಿಕ ಆಡಳಿತದ ಇತರ ಹಿರಿಯ ಅಧಿಕಾರಿಗಳ್ಯಾರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ದುರಂತದಲ್ಲಿ ಶನಿವಾರ ಸಂಜೆ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಇನ್ನೂ ಏಳು ಮಂದಿ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲೆಯ ಕೊನ್ಯಾಕ್ ಬುಡಕಟ್ಟು (Konyak tribe)ಸಮುದಾಯದ ಮುಖಂಡರು ತಿಳಿಸಿದ್ದಾರೆ.

ಹದಿಮೂರು ನಾಗರಿಕರು ಹತ್ಯೆಗೀಡಾಗಿದ್ದಾರೆ. ಮತ್ತು 11 ನಾಗರಿಕರು ಗಾಯಗೊಂಡಿದ್ದಾರೆ. ಇಬ್ಬರು ನಾಗರಿಕರು ನಾಪತ್ತೆಯಾಗಿದ್ದಾರೆ ಎಂದು  ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿದ ಹೆಸರು ಹೇಳಲು ಇಚ್ಚಿಸದ ಬುಡಕಟ್ಟು ಸಮುದಾಯದ ಮುಖಂಡರೊಬ್ಬರು  ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ಘಟನೆಗೆ ಕಾರಣರಾದ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮಗೆ  ನ್ಯಾಯ ಸಿಗದಿದ್ದರೆ,  ಸಂತ್ರಸ್ತರ ಕುಟುಂಬಸ್ಥರು  ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಅಲ್ಲದೇ ನಾವು ನ್ಯಾಯಕ್ಕಾಗಿ ಎಲ್ಲಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕು ಸಂಘಟನೆ(international human rights organisations)ಗಳ ಮೊರೆ ಹೋಗುತ್ತೇವೆ ಎಂದು ಅವರು ಹೇಳಿದ್ದಾರೆ. 

Michigan Shootout: ಶಾಲಾ ಬಾಲಕನಿಂದ ಫೈರಿಂಗ್‌, 3 ವಿದ್ಯಾರ್ಥಿಗಳು ಬಲಿ, ಶಿಕ್ಷಕ ಸೇರಿ 8 ಮಂದಿಗೆ ಗಾಯ!

ಸಂತ್ರಸ್ತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ತರಲಾಗಿದ್ದು, ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೃತಪಟ್ಟ ಸಂತ್ರಸ್ಥರ ಗ್ರಾಮದಿಂದ  15 ಕಿ.ಮೀ. ದೂರದಲ್ಲಿ ಕಲ್ಲಿದ್ದಲು ಗಣಿ ಇದ್ದು, ಇವರು ಪ್ರತಿ ಶನಿವಾರ ಮನೆಗೆ ಬರುತ್ತಿದ್ದರು.  ಭಾನುವಾರವನ್ನು ಕುಟುಂಬ ಸದಸ್ಯರೊಂದಿಗೆ ಕಳೆದು ಸೋಮವಾರ ಬೆಳಗ್ಗೆ ಮತ್ತೆ ಕರ್ತವ್ಯಕ್ಕೆ  ಹಾಜರಾಗುತ್ತಿದ್ದರು. ”ಎಂದು ಕೊನ್ಯಾಕ್ ಸಮುದಾಯದ ನಾಯಕರೊಬ್ಬರು ಹೇಳಿದರು.

ಘಟನೆ ಖಂಡಿಸಿ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ENPO) ರಾಜ್ಯದ ರಾಜಧಾನಿ ಕೊಹಿಮಾ ಬಳಿಯ ಕಿಸಾಮಾದಲ್ಲಿ ನಡೆಯಲಿರುವ ವಾರ್ಷಿಕ ಹಾರ್ನ್‌ಬಿಲ್ ಉತ್ಸವದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಆರು ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ (ENPO) ತನ್ನ ಪ್ರದೇಶದಲ್ಲಿ ರಕ್ತಪಾತದ ವಿರುದ್ಧ ಮೊದಲೇ ನಿರ್ಣಯವನ್ನು ಅಂಗೀಕರಿಸಿತ್ತು. "ನಮ್ಮ ಜನರು ಕೊಲ್ಲಲ್ಪಟ್ಟಿರುವ ಈ ಸಂದರ್ಭದಲ್ಲಿ ನಾವು ಉತ್ಸವದಲ್ಲಿ ಹೇಗೆ ನೃತ್ಯ ಮಾಡಲು ಸಾಧ್ಯ ಎಂದು ಕೊನ್ಯಾಕ್ ಸಮುದಾಯದ ನಾಯಕರು ಕೇಳಿದ್ದಾರೆ.

ಈಶಾನ್ಯ ರಾಜ್ಯದ ಅಷ್ಟಭುಜಗಳು ಎನಿಸುವ 8 ರಾಜ್ಯಗಳ ಪೈಕಿ ನಾಗಲ್ಯಾಂಡ್ ತನ್ನ ಪರಂಪರೆ, ಸಂಸ್ಕೃತಿ, ವೈವಿಧ್ಯ ಉಡುಗೆ ತೊಡುಗೆಯಿಂದಾಗಿ ಎಲ್ಲಕಿಂತಲೂ ವಿಭಿನ್ನವಾದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ನಾಡು. ಅಲ್ಲಿನ ಪರಂಪರೆ, ನೃತ್ಯ,ಕ್ರೀಡೆ,ನರ್ತನ, ಸಮರ ನೈಪುಣ್ಯ ಇವೆಲ್ಲವೂಗಳನ್ನು ದೇಶದ ಇತರ ಪ್ರಜೆಗಳಿಗೂ ಪರಿಚಯಿಸುವ ಹಾಗೂ ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸರ್ಕಾರ ಅಲ್ಲಿ ಹಾರ್ನ್‌ಬಿಲ್‌ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಆದರೆ ನಿನ್ನೆಯ ಘಟನೆಗಳು ಈ ಸಂಭ್ರಮದ ಮೇಲೆ ಕರಿ ನೆರಳು ಚೆಲ್ಲಿದ್ದು, ಅಲ್ಲಿನ ಜನರಲ್ಲಿ ಸಂಭ್ರಮದಿಂದ ನಲಿಯುವ ಬದಲು ಶೋಕದಿಂದ ಮುದುಡುವಂತೆ ಮಾಡಿದೆ.

click me!