ತಕ್ಕ ಆಹಾರ, ಉಸಿರು, ವ್ಯಾಯಾಮ, ವಿಶ್ರಾಂತಿಯೇ ಆರೋಗ್ಯದ ಗುಟ್ಟು

By Suvarna News  |  First Published Apr 7, 2024, 3:43 PM IST

ಕೋಟಿಗಟ್ಟಲೆ ಹಣ ಸಂಪಾದಿಸೋ ಮನುಷ್ಯ ಆರೋಗ್ಯಕ್ಕಾಗಿ ಪರದಾಡುತ್ತಿದ್ದಾನೆ. ಅಗತ್ಯವಾದ ವಿಶ್ರಾಂತಿ, ಸೂಕ್ತ ಪ್ರಮಾಣದ ಆಹಾರ, ನಿಯಮಿತ ವ್ಯಾಯಾಮ ಮತ್ತು ಪ್ರಾಣಾಯಾಮಗಳಿಂದ ಮಾತ್ರ ಆರೋಗ್ಯ ಗಳಿಸಿಕೊಳ್ಳಬಹುದು ಎನ್ನುತ್ತಾರೆ ಆರ್ಟ್ ಆಪ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್. 


- ಶ್ರೀ ಶ್ರೀ ರವಿಶಂಕರ್. ಆರ್ಟ್ ಆಫ್ ಲಿವಿಂಗ್ 

ಆರೋಗ್ಯ ಎಂದರೇನು?ರೋಗಮುಕ್ತ ಶರೀರ, ಆರಾಮದಾಯಕ ಉಸಿರಾಟ, ಒತ್ತಡ-ರಹಿತ ಮನಸ್ಸು, ಪೂರ್ವಾಗ್ರಹವಿದ ಬುದ್ಧಿ, ಗೀಳಿನಿಂದ ಮುಕ್ತವಾದ ಸ್ಮೃತಿ, ಎಲ್ಲರನ್ನೂ ಒಳಗೊಂಡಿರುವಂತಹ ಅಹಂಕಾರ ಮತ್ತು ದುಃಖದಿಂದ ವಿಮುಕ್ತವಾಗಿರುವಂತಹ ಆತ್ಮ.       

Latest Videos

undefined

ಕೇವಲ ಆರೋಗ್ಯವಾಗಿರುವ ಒಂದು ಮೊಗ್ಗು ಮಾತ್ರ ಸುಂದರವಾದ ಹೂವಾಗಿ ಅರಳಲು ಸಾಧ್ಯ. ಅದೇ ರೀತಿ, ಆರೋಗ್ಯದಿಂದಿರುವವರಿಗೆ ಮಾತ್ರ, ಅವರು ಬಯಸಿದ ಗುರಿಯನ್ನು ಸಾಧಿಸಲು ಸಾಧ್ಯ. ಆರೋಗ್ಯಕ್ಕೆ ಸಂಸ್ಕೃತದಲ್ಲಿ 'ಸ್ವಾಸ್ಥ್ಯ' ಎನ್ನುತ್ತಾರೆ. ಅಂದರೆ ತಮ್ಮ ಆತ್ಮದಲ್ಲಿ ಸ್ಥಾಪಿತರಾಗಿರುವುದು. ಪ್ರಾಚೀನ ಗ್ರಂಥಗಳು ನಮ್ಮ ದೇಹಕ್ಕೆ ಐದು ಹಂತಗಳ ಅಸ್ತಿತ್ವವಿದೆಯೆಂದು ಹೇಳುತ್ತವೆ. ಪರಿಸರ ಅಥವಾ ವಾತಾವರಣ, ನಮ್ಮ ಭೌತಿಕ ದೇಹ, ಪ್ರಾಣಶಕ್ತಿ, ನಮ್ಮ ಆಲೋಚನೆಗಳು, ನೆನಪುಗಳುಮತ್ತು ಭಾವನೆಗಳನ್ನು ಒಳಗೊಂಡಿರುವಂತಹ ಮನಸ್ಸು ಮತ್ತು ಸೂಕ್ಷ್ಮವಾಗಿರುವ ಅಂತಃಸ್ಫುರಣೆಯ ದೇಹ.             

ಸಹಜವಾದ ನಿಯಮವನ್ನು ಉಲ್ಲಂಘಿಸಿದಾಗ ಅಥವಾ ಗತದ ಸಂಸ್ಕಾರಗಳು ಬಿಡುಗಡೆಯಾದಾಗ ಅಥವಾ ಕರ್ಮದಿಂದ ದೇಹದಲ್ಲಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಕರ್ಮ ಎಂದರೆ ಚೇತನದಲ್ಲಿರುವ ಕೆಲವು ಸಂಸ್ಕಾರಗಳು. ಇವು ಏನೋ ಒಂದು ಖಾಯಿಲೆ ಪ್ರಕಟಗೊಳ್ಳಬಹುದು. ಕಾಯಿಲೆಯ ಮತ್ತೊಂದು ಕಾರಣವೆಂದರೆ ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸುವುದು. ಉದಾಹರಣೆಗೆ, ಒಂದು ನಿರ್ದಿಷ್ಟವಾದ ಸಮಯದಲ್ಲಿ ಏನೋ ಒಂದನ್ನು ತಿನ್ನಬಾರದು ಎಂದು ನಿಮಗೆ ಗೊತ್ತಿದೆ. ಆದರೂ ತಿನ್ನುತ್ತೀರಿ. ನಿಮ್ಮ ಮನಸ್ಸಿನಲ್ಲಿ ಒತ್ತಡ ಸಂಗ್ರಹವಾಗಬಾರದೆಂದೂ ಗೊತ್ತು, ಆದರೂ ವಿಪರೀತ ಕೆಲಸ ಮಾಡುತ್ತೀರಿ.  ವಿಷಯ, ವಸ್ತುಗಳನ್ನು ಅನುಭವಿಸುವ ಅಥವಾ ಆನಂದಿಸುವ ನಮ್ಮ ಸಾಮರ್ಥ್ಯ ಸೀಮಿತವಾಗಿದೆ. ಅದನ್ನು ವಿಪರೀತವಾಗಿ ಮಾಡಿದಾಗ ಖಾಯಿಲೆ ಬರುತ್ತದೆ. ಆಹಾರ ಸೇವನೆ, ವ್ಯಾಯಾಮ ಮತ್ತು ವಿಶ್ರಾಂತಿ, ಇವುಗಳ ನಡುವೆ ಅಸಮತೋಲನವಾದರೂ ಖಾಯಿಲೆ ಬೀಳಬಹುದು.                         

ಉಸಿರಿನಿಂದಲೇ ಆರೋಗ್ಯ:
ಆರೋಗ್ಯದ ವಿಷಯದಲ್ಲಿ ನಾವು ಗಮನಿಸದೇ ಇರುವಂತಹ ಒಂದು ವಿಷಯವೆಂದರೆ, ಉಸಿರು, ಪ್ರಾಣಶಕ್ತಿ ಹಾಗೂ ಯೋಗಕ್ಷೇಮದ ನಡುವಿನ ಸಂಬಂಧ. ಉಸಿರು ಜೀವನಕ್ಕೆ ಪರ್ಯಾಯ. ಧ್ಯಾನ, ಪ್ರಾಣಾಯಾಮದಿಂದ ಪ್ರಾಣ ಶಕ್ತಿಯನ್ನು ಹೆಚ್ಚಿಸುವುದು. ನಮ್ಮ ಪ್ರಾಣಶಕ್ತಿಯು ಭಾವನೆಗಳಿಗಿಂತಲೂ ಸೂಕ್ಷ್ಮ. ಅತೀ ಸೂಕ್ಷ್ಮವಾದ ಅಂಶಗಳ ಮೇಲೆ ಗಮನಿಸುವುದರಿಂದ ಸ್ಥೂಲವಾದುದನ್ನೂ ನೋಡಿಕೊಳ್ಳಬಹುದು. ನಿಮ್ಮ ಉಸಿರನ್ನು ಹಾಗೂ ಪ್ರಾಣ ಶಕ್ತಿಯನ್ನು ನಿಭಾಯಿಸಿದಾಗ ದೇಹವೂ ಬಲಿಷ್ಠವಾಗುತ್ತದೆ.     

ಭಾರತದಲ್ಲಿ ಇದೇ ಮೊದಲು ಲಿಬೆಶರ್ ಮತ್ತು ಬ್ರಾಶ್ ನೋವು ಶಮನ ತರಬೇತಿ

ದೇಹದ ಶೇ.90 ಕಲ್ಮಶಗಳು ಉಸಿರಿನ ಮೂಲಕ ಬಿಡುಗಡೆಯಾಗುತ್ತವೆ. ಆದರೆ ನಾವು ನಮ್ಮ ಶ್ವಾಸಕೋಶದ ಕೇವಲ 30 ಪ್ರತಿಶತದಷ್ಟು ಸಾಮರ್ಥ್ಯವನ್ನು ಮಾತ್ರ ವಿನಿಯೋಗಿಸುತ್ತೇವೆ‌. ಆರೋಗ್ಯದಿಂದಿರಲು ಉಸಿರಾಟ ಅತೀ ಗಹನವಾದ, ಪರಿವರ್ತನಶೀಲವಾದ ರಹಸ್ಯಗಳನ್ನು ತನ್ನಲ್ಲಿ ಹೊಂದಿದೆ‌. ಉದಾಹರಣೆಗೆ, ಪ್ರತಿಯೊಂದೂ ಭಾವನೆಯೂ ಪ್ರತಿಸ್ಪಂದಿಸುವಂತಹ ಒಂದು ನಿರ್ದಿಷ್ಟ ಉಸಿರಿನ ಲಯವನ್ನು ಹೊಂದಿರುತ್ತದೆ. ಇದು ನೇರವಾಗಿ ದೇಹದ ನಿರ್ದಿಷ್ಟ ಭಾಗಗಳ ಮೇಲೆ ‌ಪ್ರಭಾವ ಬೀರಬಲ್ಲದು. ಸಂತೋಷವಾಗಿದ್ದರೆ, ವಿಸ್ತಾರವಾದಂತಹ ಭಾವ ಸೃಷ್ಟಿಯಾಗುತ್ತದೆ. ನಾವು ದುಃಖಿಗಳಾಗಿದ್ದಾಗ ಸಂಕುಚಿತಗೊಂಡಂತಹ ಭಾವವುಂಟಾಗುತ್ತದೆ‌. ಈ ಭಾವನೆಗಳನ್ನು, ಸಂವೇದನೆಗಳನ್ನು ನಾವು ಅನುಭವಿಸಿದರೂ ಸಹ, ಇವುಗಳ ನಡುವಿನ ಸಂಬಂಧವನ್ನು ನಾವು ಗಮನಿಸುವುದೇ ಇಲ್ಲ. ನಿಮ್ಮ ಮನಸ್ಸನ್ನು ನೇರವಾಗಿ ನಿಭಾಯಿಸಲು ನಿಮ್ಮಿಂದ ಸಾಧ್ಯವಾಗದೆ ಹೋದಾಗ, ಪರೋಕ್ಷವಾಗಿ, ನಿಮ್ಮ ಉಸಿರಿನ ಮೂಲಕ ನಿಭಾಯಿಸಬಹುದು.       

ನಿಮ್ಮ ಶಕ್ತಿಯನ್ನು ಮೂಲಭೂತವಾಗಿ ನಾಲ್ಕು ಮೂಲಗಳಾದ ಆಹಾರ, ನಿದ್ದೆ ಮತ್ತು ವಿಶ್ರಾಂತಿ, ಉಸಿರು (ಇದನ್ನು ನಿರ್ದಿಷ್ಟವಾದ ಪ್ರಕ್ರಿಯೆಗಳ ಮೂಲಕ ಕಲಿಯಬಹುದು), ಸುದರ್ಶನ ಕ್ರಿಯೆಯಂತಹ ಪ್ರಕ್ರಿಯೆಗಳು ದೇಹದ ಪ್ರತಿಯೊಂದು ಕೋಶವನ್ನೂ ಶಕ್ತಿಯುತವಾಗಿಸುತ್ತದೆ. ನಂತರ, ಧ್ಯಾನದ ಮೂಲಕ ಮನಸ್ಸಿನ ಹಿತವಾದ ಸ್ಥಿತಿಯನ್ನು ಸಾಧಿಸಬಹುದು. ನಮ್ಮ ಒಳಿತಿಗಾಗಿ ಇವೆಲ್ಲವೂ ಅತ್ಯಾವಶ್ಯಕವಾದವು. ಇತ್ತೀಚಿನ ಒಂದು ಸಂಶೋಧನೆ, ಸುದರ್ಶನ ಕ್ರಿಯೆ ಹಾಗೂ ಪ್ರಾಣಾಯಾಮ ರೋಗ ನಿರೋಧಕ ವ್ಯವಸ್ಥೆ ಮೇಲೆ ಬೀರುವ ಪರಿಣಾಮವನ್ನು ತೋರಿಸಿದೆ. ಉಸಿರು ಹಾಗೂ ಮನಸ್ಸಿನ ಮೇಲೆ ಗಮನವನ್ನಿಟ್ಟರೆ, ರೋಗನಿರೋಧಕ ಶಕ್ತಿಯು ವರ್ಧಿಸುತ್ತದೆ. 

ಮೂಲ ಶಕ್ತಿ ಆಹಾರ:
ದೇಹಕ್ಕೆ ಹಾಗೂ ಮನಸ್ಸಿಗೆ ಆಹಾರವೇ ಮೂಲ ಶಕ್ತಿ. ಉಸಿರಾಟದಂತೆಯೇ, ನಮ್ಮ ದೇಹದೊಳಗೆ ಏನು ಹಾಕುತ್ತಿದ್ದೇವೆ ಎಂಬುದನ್ನೂ ನಾವು ಗಮನಿಸಬೇಕು. ನಮ್ಮಲ್ಲಿ 'ಅನ್ನದಾತ ಸುಖೀಭವ' ಎಂಬ ಪ್ರಾರ್ಥನೆಯಿದೆ. 'ನಮ್ಮ ಆಹಾರ ಬೆಳೆಯುವವರು, ನಮ್ಮ ಮನೆಗೆ ತಲುಪಿಸುವವರು ಹಾಗೂ ಅದರಿಂದ ಅಡುಗೆ ಮಾಡಿ, ಬಡಿಸುವವರು ಆರೋಗ್ಯವಾಗಿ, ಸಮೃದ್ಧರಾಗಿರಲಿ,' ಎಂಬುವುದು ಈ ಪ್ರಾರ್ಥನೆಯ ಅರ್ಥ. ರೈತರು ಅನಾರೋಗ್ಯದಿಂದಿದ್ದು, ದುಃಖಿಗಳಾದಾರೆ ದೇಶ ಸಂತೋಷವಾಗಿ, ಆರೋಗ್ಯದಿಂದ ಇರಲು ಸಾಧ್ಯವಿಲ್ಲ. 'ಅನ್ನದಂತೆಯೇ ಮನಸ್ಸು' - 'ನಾವು ಏನು ತಿನ್ನುತ್ತೇವೆಯೋ ಅದರಂತೆಯೇ ಇರುತ್ತೇವೆ,'. ಆರೋಗ್ಯಕರ ಆಹಾರ ಕೇವಲ ಒಂದು ಪದಾರ್ಥವಲ್ಲ. ಆರೋಗ್ಯಕರ ಜೀವನದ ಒಂದು ದಾರಿ. ಪ್ರಾಕೃತಿಕ ಕೃಷಿ ಆಹಾರವನ್ನು ಬೆಳೆಯುವ  ಕೇವಲ ಒಂದು ರೀತಿಯಲ್ಲ. ಅದು ಭೂಮಿಯನ್ನುಗೌರವಿಸಿ, ಪೋಷಿಸುವ ಮಾರ್ಗ. ಹೌದು. ನಮ್ಮಲ್ಲಿ 22 ಲಕ್ಷಕ್ಕೂ ಹೆಚ್ಚು ರೈತರು ಪ್ರಾಕೃತಿಕ, ರಾಸಾಯನಿಕ-ಮುಕ್ತ ಕೃಷಿಯನ್ನು ಕಲಿತು, ಅದರ ಅಭ್ಯಾಸ ನಡೆಸಿ, ಅದರಿಂದ ರೈತರಿಗೆ ಬಹಳ ಲಾಭ ದೊರಕುತ್ತದೆ ಎಂದೂ ಸಾಬೀತು ಮಾಡಿದ್ದಾರೆ. ರೈತರಿಗೆ ತಗಲುವ ವೆಚ್ಚವೂ ಕಡಿಮೆ, ಆರೋಗ್ಯಕರವಾದ ಬೆಳೆಯೂ ಬೆಳೆಯಬಹುದು. ರೈತರ ಹಾಗೂ ಗ್ರಾಹಕರ ಆರೋಗ್ಯವನ್ನೂ ಇದು ಕಾಪಾಡುತ್ತದೆ. 

ಪ್ರೀತಿ, ಲಿವ್ ಇನ್, ಸೆಕ್ಸ್ ಇತ್ಯಾದಿ; ಗುರೂಜಿಯ ಗುರುತರ ಮಾತುಗಳಿವು..

ದೇಹಕ್ಕೇಕೆ ಬೇಕು ವಿಶ್ರಾಂತಿ?
ಶಕ್ತಿಯ ನಾಲ್ಕನೆಯ ಮೂಲವೆಂದರೆ ವಿಶ್ರಾಂತಿ. ನಿಮಗಾಗಿ ಎಂದು ವರ್ಷಕ್ಕೊಂದು ವಾರ ಮೀಸಲಿಡಿ; ನಿಮ್ಮ ಕಾರಿಗೆ ಸರ್ವೀಸನ್ನು ಮಾಡಿಸುವ ರೀತಿಯಲ್ಲಿ. ಈ ಸಮಯದಲ್ಲಿ ಪ್ರಕೃತಿಯೊಡನೆ ಒಂದಾಗಿ, ಸೂರ್ಯೋದಯದೊಡನೆಯೇ ಏಳಿ, ಪ್ರಜ್ಞಾಪೂರ್ವಕವಾಗಿ ಯೋಗಾಭ್ಯಾಸ ಮಾಡಿ, ಉಸಿರಾಟದ ಪ್ರಕ್ರಿಯೆಗಳನ್ನು ಅಭ್ಯಾಸ ಮಾಡಿ. ಸೂಕ್ತ ಪ್ರಮಾಣದ ಆಹಾರ ಸೇವಿಸಿ. ಮೌನವಾಗಿರೋದ ಅಭ್ಯಾಸಿ ಮಾಡಿಕೊಳ್ಳಿ. ಸೃಷ್ಟಿಯನ್ನು ಗಮನಿಸಿ. ಮೌನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಈ ಅಭ್ಯಾಸದಿಂದ ನಮ್ಮ ಇಡೀ ವ್ಯವಸ್ಥೆಯೇ ಪುನರುಜ್ಜೀವಿತವಾಗುತ್ತದೆ. ಉತ್ಸಾಹದಿಂದ, ಸ್ಪಷ್ಟತೆಯಿಂದ ತುಂಬಿರುತ್ತೇವೆ. ನಮ್ಮ ಆಂತರ್ಯದಿಂದ ಮುಗುಳ್ನಗೆ ಹೊರಹೊಮ್ಮುತ್ತದೆ. ನಮ್ಮ ಮನಸ್ಸಿನ ಚೇತನ ಮತ್ತು ವಿಕಾರಗಳ ಮೂಲದ ಬಗ್ಗೆ ಸ್ವಲ್ಪ ತಿಳಿಯುವುದು ಸಹಾಯಕಾರಿ. ಪ್ರತಿಯೊಬ್ಬರೂ  ಮೂಲಭೂತವಾಗಿ ಒಳ್ಳೆಯವರೆ. ಒತ್ತಡ ಮತ್ತು ಅಪಾರ್ಥಗಳಿಂದ ಈ ಗುಣಗಳೆಲ್ಲವೂ ಸುಮ್ಮನೆ ಮುಚ್ಚಿ ಹೋಗಿವೆಯಷ್ಟೆ. ಅನೇಕ ವರ್ಷಗಳಿಂದ ಕತ್ತಲಾಗಿಯೇ ಇರುವ ಕೋಣೆಯನ್ನು ಒಂದು ದೀಪದಿಂದ, ಒಂದೇ ಕ್ಷಣದಲ್ಲಿ ಬೆಳಕಿನಿಂದ ತುಂಬಿ ಬಿಡುವಂತೆ ಈ ಸದ್ಗುಣಗಳ ಅನಾವರಣೆವನ್ನಷ್ಟೇ ನಾವು ಮಾಡಬೇಕು. ಇದರಿಂದ ಆರೋಗ್ಯದ ಭಾಗ್ಯ ನಮ್ಮದಾಗುತ್ತದೆ. 

click me!