ಮನುಷ್ಯನನ್ನು ಜಾಗತಿಕವಾಗಿ ಕಾಡಿಸುತ್ತಿರುವ ಸೋಂಕುಗಳ ಪೈಕಿ ಹೆಪಟೈಟಿಸ್ ಪ್ರಮುಖವಾಗಿದೆ. ಅನೈರ್ಮಲ್ಯ, ಅಸುರಕ್ಷಿತ ಲೈಂಗಿಕ ಸಂಪರ್ಕವೇ ಈ ಸೋಂಕು ಹರಡಲು ಪ್ರಮುಖ ಕಾರಣ. ಇದರಲ್ಲೂ ಐದು ಬಗೆಯ ಸೋಂಕುಗಳಿದ್ದು, ಇವೆಲ್ಲವೂ ಲಿವರ್ ಕೋಶಕ್ಕೆ ಹಾನಿ ಮಾಡುವುದರಿಂದ ಎಚ್ಚರಿಕೆ ವಹಿಸಬೇಕು. ಪ್ರತಿವರ್ಷ ಲಕ್ಷಾಂತರ ಜನ ಇದಕ್ಕೆ ಬಲಿಯಾಗುತ್ತಾರೆ.
ಮನುಷ್ಯನ ದೇಹ ಹಲವು ರೀತಿಯ ಸೋಂಕುಗಳಿಗೆ ತುತ್ತಾಗುತ್ತದೆ. ಆಗಾಗ ಬಾಹ್ಯವಾಗಿ ಕಾಡುವ ಸೋಂಕುಗಳು ಹಲವಾದರೆ, ದೇಹದೊಳಗೆ ಆಂತರಿಕವಾಗಿಯೂ ಕೆಲವು ಸೋಂಕುಗಳು ಉಂಟಾಗುತ್ತವೆ. ಅವು ತೀವ್ರವಾಗಿ ಕಾಡಿ ಪ್ರಾಣಕ್ಕೂ ಎರವಾಗಬಹುದು. ಅಂತಹ ಹಲವು ಸೋಂಕುಗಳಲ್ಲಿ ಹೆಪಟೈಟಿಸ್ ಸೋಂಕು ಸಹ ಒಂದು. ಅಸಲಿಗೆ, ಲಿವರ್ ನಲ್ಲಿ ಉಂಟಾಗುವ ಉರಿಯೂತ ಇದು. ಸಾಮಾನ್ಯವಾಗಿ ವೈರಲ್ ಸೋಂಕಿನಿಂದ ಉಂಟಾಗುತ್ತದೆ. ಕೆಲ ರೀತಿಯ ವಿಷಕಾರಿ ಪದಾರ್ಥ, ಔಷಧ ಹಾಗೂ ಆಲ್ಕೋಹಾಲ್ ನಿಂದಲೂ ಉಂಟಾಗಬಹುದು. ಪ್ರತಿವರ್ಷ ಜುಲೈ 28ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ. ಈ ಸೋಂಕಿನ ಬಗ್ಗೆ ಅರಿವು ಮೂಡಿಸಿ ಜನರನ್ನು ಸುರಕ್ಷಿತರನ್ನಾಗಿಸುವುದು ಪ್ರಮುಖ ಉದ್ದೇಶ. ಹೆಪಟೈಟಿಸ್ ನಲ್ಲಿ ಪ್ರಮುಖವಾಗಿ ಐದು ಬಗೆಯ ವೈರಸ್ ಗಳನ್ನು ನೋಡಬಹುದು. ಹೆಪಟೈಟಿಸ್ ಎ, ಬಿ, ಸಿ, ಡಿ, ಇ ಎನ್ನುವ 5 ಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಪ್ರತಿಯೊಂದೂ ವೈರಸ್ ತನ್ನದೇ ರೀತಿಯಲ್ಲಿ ಅಪಾಯಕಾರಿಯಾಗಿದೆ ಹಾಗೂ ಬೇರೆ ಬೇರೆ ವಿಧಾನದಲ್ಲಿ ಹರಡುತ್ತದೆ ಎಂದರೆ ಹೆಪಟೈಟಿಸ್ ಸೋಂಕು ಎಷ್ಟು ಗಂಭೀರವಾದುದು ಎನ್ನುವ ಅರಿವಾಗಬಹುದು.
ಹೆಪಟೈಟಿಸ್ ಸೋಂಕು (Hepatitis Infection) ಉಂಟಾದಾಗ ಲಿವರ್ (Liver) ನಲ್ಲಿ ಉರಿಯೂತವಾಗಿ (Inflammation) ಕೋಶಗಳು (Cells) ನಿಧಾನವಾಗಿ ನಶಿಸಲು ಆರಂಭವಾಗುತ್ತವೆ. ರಕ್ತಕ್ಕೆ ಎಂಜೈಮುಗಳನ್ನು ಬಿಡುಗಡೆ ಮಾಡುವ ಕೋಶಗಳು ಸಾವಿಗೀಡಾಗುತ್ತವೆ. ಇದರ ಮೂಲಕವೇ ಹೆಪಟೈಟಿಸ್ ಸೋಂಕನ್ನು ಪತ್ತೆ ಮಾಡಲಾಗುತ್ತದೆ. ಸೋಂಕಿನಿಂದ ಚೇತರಿಸಿಕೊಳ್ಳುವ ಸಮಯದಲ್ಲಿ ಸತ್ತ ಕೋಶಗಳ ಬದಲಿಗೆ ಹೊಸ ಕೋಶಗಳು ಹುಟ್ಟಿಕೊಳ್ಳುತ್ತವೆ. ಈ ಪ್ರಕ್ರಿಯೆಯಲ್ಲಿ ಲಿವರ್ ಅಥವಾ ಯಕೃತ್ತು ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲೇ ಸಾಮಾನ್ಯವಾಗಿ ಜಾಂಡೀಸ್ (Jaundice) ಅಥವಾ ಅಸಹಜ ಹೆಪ್ಪುಗಟ್ಟುವಿಕೆಯಂತಹ (Clotting) ಸಮಸ್ಯೆ ಕಂಡುಬರುತ್ತದೆ. ಹಾಗಿದ್ದರೆ ಯಾವ ಹೆಪಟೈಟಿಸ್ ಸೋಂಕು ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂದು ನೋಡೋಣ.
undefined
ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಉಂಟಾಗುತ್ತೆ ಅನ್ನೋದು ನಿಜಾನ?
• ಹೆಪಟೈಟಿಸ್ ಎ
ಈ ಸೋಂಕು ಸ್ವಚ್ಛತೆ (Poor Sanitation) ಇಲ್ಲದ ಕಡೆ ಸಾಮಾನ್ಯ. ಕಲುಷಿತ ನೀರು ಅಥವಾ ಆಹಾರದಿಂದ (Contaminate Water, Food) ಬರುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಸಾಮೀಪ್ಯವಿದ್ದಾಗ, ಸ್ವಚ್ಛತೆ ಇಲ್ಲದ ಸ್ಥಳಗಳಲ್ಲಿ ಸಂಚರಿಸಿದಾಗ ಕಂಡುಬರುತ್ತದೆ. ಶೇ.90ರಷ್ಟು ಜನರಲ್ಲಿ 4-6 ವಾರಗಳಲ್ಲಿ ಸೋಂಕು ಕಡಿಮೆಯಾಗುತ್ತದೆ. ಶೇ.10ರಷ್ಟು ಜನರಲ್ಲಿ ಲಿವರ್ ಫೆಲ್ಯೂರ್ (Failure) ಸಹ ಉಂಟಾಗುತ್ತದೆ.
• ಹೆಪಟೈಟಿಸ್ ಬಿ
ಹೆಪಟೈಟಿಸ್ ಸೋಂಕುಗಳ ಪೈಕಿ ಗಂಭೀರವಾದುದು ಇದೇ ಸೋಂಕು. ಹೆಪಟೈಟಿಸ್ ಬಿ ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ (Sexual Contact) ಏರ್ಪಟ್ಟಾಗ, ಸೋಂಕಿತ ವ್ಯಕ್ತಿಯ ರಕ್ತ ಸೋಕಿದ ಬ್ಲೇಡ್, ಇಂಜೆಕ್ಷನ್, ರೇಜರ್, ಟೂತ್ ಬ್ರಶ್ ಬಳಕೆ ಮಾಡಿದಾಗ ಹರಡುತ್ತದೆ. ತಾಯಿಯಿಂದ ಮಗುವಿಗೆ ಬರುತ್ತದೆ. ಲಿವರ್ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್ ಗೂ ಇದು ಕಾರಣವಾಗಬಲ್ಲದು. ಈ ಸೋಂಕು ಜಾಗತಿಕವಾಗಿ ಬಹುದೊಡ್ಡ ಪ್ರಮಾಣದಲ್ಲಿದೆ.
• ಹೆಪಟೈಟಿಸ್ ಸಿ
ಈ ಸೋಂಕು ಸಹ ಲೈಂಗಿಕ ಕ್ರಿಯೆ ಹಾಗೂ ಸೋಂಕಿತ ವ್ಯಕ್ತಿಯ ರಕ್ತ (Blood) ಹಾಗೂ ದೇಹದ ಯಾವುದೇ ದ್ರವಗಳ (Body Fluid) ಸಂಪರ್ಕಕ್ಕೆ ಬಂದಾಗ ಉಂಟಾಗುತ್ತದೆ. ತಾಯಿಯಿಂದ ಮಗುವಿಗೆ ಹರಡುತ್ತದೆ.
Health Tips: ಮಿದುಳಿಗೂ ಫ್ಲಾಸಿಂಗಾ? ಬೇಡವಾದ ವಿಚಾರ ತೆಗೆದು ಹಾಕೋ ರೀತಿ ಇದು
• ಹೆಪಟೈಟಿಸ್ ಡಿ
ಈಗಾಗಲೇ ಹೆಪಟೈಟಿಸ್ ಬಿ ಸೋಂಕಿಗೆ ತುತ್ತಾದವರಲ್ಲಿ ಮಾತ್ರ ಈ ಸೋಂಕು ಉಂಟಾಗುತ್ತದೆ. ಇದು ಸಹ ಹೆಪಟೈಟಿಸ್ ಬಿ ಮಾದರಿಯಲ್ಲೇ ಹರಡುತ್ತದೆ.
• ಹೆಪಟೈಟಿಸ್ ಇ
ಈ ಸೋಂಕು ಕಲುಷಿತ ನೀರು ಮತ್ತು ಆಹಾರದಿಂದ ಉಂಟಾಗುತ್ತದೆ. ನೈರ್ಮಲ್ಯವಿಲ್ಲದ ಸ್ಥಳಗಳಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ.
ಈ ಎಲ್ಲ ರೀತಿಯ ಹೆಪಟೈಟಿಸ್ ಸೋಂಕಿನಿಂದ ಬಚಾವಾಗಲು ಲಸಿಕೆ ಪಡೆದುಕೊಳ್ಳುವುದು ಉತ್ತಮ. ಸ್ವಚ್ಛತೆಯ ನಿರ್ವಹಣೆಯಿಂದ ಸೋಂಕಿನಿಂದ ಬಚಾವಾಗಬಹುದು. ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಆದ್ಯತೆ ನೀಡುವುದು ಅಗತ್ಯ.