
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಇನ್ನು ಯಾವುದೇ ಸೀಸನ್ ಆದರೂ ದೇಹವನ್ನು ಹೈಡ್ರೇಟ್ ಆಗಿಡುವುದು ಅಗತ್ಯಗತ್ಯ. ಇದಕ್ಕಾಗಿ ಜನರು ಸಾಮಾನ್ಯವಾಗಿ ಆಹಾರದಲ್ಲಿ ಹಣ್ಣಿನ ಜ್ಯೂಸ್, ಮಜ್ಜಿಗೆ ಮತ್ತು ಎಳನೀರನ್ನು ಬಳಸುತ್ತಾರೆ. ಕೆಲವರಿಗೆ ಎಳನೀರು ಅಂದ್ರೆ ತುಂಬಾ ಇಷ್ಟ. ಇದು ಇಷ್ಟದ ಪ್ರಶ್ನೆಯಲ್ಲ, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕಂಡುಬರುವ ವಿಟಮಿನ್ ಸಿ, ಇ, ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.
ಆದರೆ ಎಳನೀರು ಕೆಲವು ಜನರಿಗೆ ಹಾನಿಯನ್ನುಂಟುಮಾಡಬಹುದು. ಹೌದು, ಇದರಲ್ಲಿರುವ ಪೊಟ್ಯಾಶಿಯಂ ಕೆಲವು ಜನರಿಗೆ ಹಾನಿಯನ್ನುಂಟುಮಾಡಬಹುದು. ಎಳನೀರು ಯಾರಿಗೆ ಹಾನಿಯನ್ನುಂಟುಮಾಡಬಹುದು ಮತ್ತು ನಾವೆಲ್ಲಾ ಎಷ್ಟು ಎಳನೀರು ಕುಡಿಯುವುದು ಸರಿ ಎಂದು ನೋಡೋಣ ಬನ್ನಿ...
ಮೂತ್ರಪಿಂಡ ಸಂಬಂಧಿತ ಕಾಯಿಲೆ
ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿರುವವರು ಎಳನೀರನ್ನು ಕುಡಿಯಬಾರದು. ಎಳನೀರಿನಲ್ಲಿರುವ ಪೊಟ್ಯಾಶಿಯಂ ಅನ್ನು ಮೂತ್ರಪಿಂಡ (Kidney)ಗಳು ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಮೂತ್ರಪಿಂಡದ ಕಾಯಿಲೆಯಿಂದಾಗಿ, ರೋಗಿಗಳಲ್ಲಿ ಈಗಾಗಲೇ ಪೊಟ್ಯಾಶಿಯಂ ಮತ್ತು ಸೋಡಿಯಂ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಎಳನೀರಿನಿಂದಾಗಿ ಹೈಪರ್‌ಕಲೇಮಿಯಾ (Hyperkalemia) ಅಪಾಯ ಹೆಚ್ಚಾಗುತ್ತದೆ. ಇದು ಹೃದಯ ಬಡಿತ ಮತ್ತು ನರ್ವಸ್ ಸಮಸ್ಯೆ ಹೆಚ್ಚಿಸುತ್ತದೆ.
ಮಧುಮೇಹ ರೋಗಿಗಳು
ಮಧುಮೇಹ ಇರುವವರು ಎಳನೀರನ್ನು ಕುಡಿಯಬಾರದು. ಎಳನೀರಿನಲ್ಲಿ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಮತ್ತು ಕಾರ್ಬೋಹೈಡ್ರೇಟ್‌ಗಳಿದ್ದು, ಸಕ್ಕರೆ ಮಟ್ಟ ಹೆಚ್ಚಾಗುವ ಅಪಾಯವಿದೆ.
ವಯಸ್ಸಾದ ಜನರು
ವಯಸ್ಸಾದವರು ಪ್ರತಿದಿನ ಎಳನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಇರುವುದರಿಂದ, ಇದನ್ನು ಹೆಚ್ಚು ಕುಡಿಯುವುದರಿಂದ ದೇಹದಲ್ಲಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಾಗಬಹುದು, ಇದು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.
ಅಲರ್ಜಿ ಸಮಸ್ಯೆಗಳು
ಅಲರ್ಜಿ ಸಂಬಂಧಿತ ಸಮಸ್ಯೆಗಳಿರುವ ಜನರು ಎಳನೀರು ಕುಡಿಯುವುದನ್ನು ತಪ್ಪಿಸಬೇಕು. ಇದು ಚರ್ಮದ ಮೇಲೆ ತುರಿಕೆ, ಸುಡುವಿಕೆ ಅಥವಾ ಕೆಂಪು ಬಣ್ಣಕ್ಕೆ ಕಾರಣವಾಗಬಹುದು.
ಅಧಿಕ ರಕ್ತದೊತ್ತಡದ ದೂರು
ಅಧಿಕ ರಕ್ತದೊತ್ತಡ ಇರುವವರು ಮತ್ತು ಅದಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವವರು ಎಳನೀರನ್ನು ಕುಡಿಯಬಾರದು. ಇದು ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸುವ ಅಪಾಯವನ್ನು ಹೆಚ್ಚಿಸುತ್ತದೆ.
ಪ್ರಮಾಣ ನೋಡಿಕೊಳ್ಳುವುದು ಸಹ ಮುಖ್ಯ
ಬೇಸಿಗೆಯಲ್ಲಿ ಹೆಚ್ಚಿನ ಜನರು ಪ್ರತಿದಿನ ಎಳನೀರನ್ನು ಕುಡಿಯುತ್ತಾರೆ, ಆದರೆ ಮೇಲೆ ತಿಳಿಸಿದ ಜನರು ಅದನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದನ್ನು ತಪ್ಪಿಸಬೇಕು. ನೀವು ಬಿಸಿಲಿನಲ್ಲಿ ಹೊರಗೆ ಇದ್ದರೆ ಅಥವಾ ನೀವು ಹೆಚ್ಚು ಬೆವರುತ್ತಿದ್ದರೆ, ಅರ್ಧ ಗ್ಲಾಸ್ ಎಳನೀರನ್ನು ಕುಡಿಯಬಹುದು.
ಪೊಟ್ಯಾಶಿಯಂ ಹೆಚ್ಚಾಗುವುದರ ಪರಿಣಾಮ
ಹೆಚ್ಚಿನ ಪೊಟ್ಯಾಶಿಯಂ ಮಟ್ಟವನ್ನು ವೈದ್ಯಕೀಯವಾಗಿ ಹೈಪರ್‌ಕಲೇಮಿಯಾ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು ಹೃದಯದ ಕಾರ್ಯನಿರ್ವಹಣೆಯ ಸಾಮರ್ಥ್ಯಕ್ಕೆ ಅಡ್ಡಿಪಡಿಸಬಹುದು. ಇದು ಅಸಹಜ ಹೃದಯ ಬಡಿತ ಉಂಟುಮಾಡಬಹುದು ಅಥವಾ ಕೆಲವು ಸಮಸ್ಯೆಗಳಿರುವ ಜನರಲ್ಲಿ ಗಂಭೀರ ತೊಡಕುಗಳನ್ನು ಉಂಟುಮಾಡಬಹುದು.
ಎಳನೀರಿನ ಪ್ರಯೋಜನಗಳು
*ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ.
*ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಕೆಲಸ ಮಾಡುತ್ತದೆ.
*ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
*ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
*ಚರ್ಮವನ್ನು ಆರೋಗ್ಯವಾಗಿಡಲು ಸಹಕಾರಿ.
*ಕೂದಲನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
*ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
(ಹಕ್ಕುತ್ಯಾಗ: ಸಲಹೆಯನ್ನು ಒಳಗೊಂಡ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.