ಹಿಮಾಲಯದಲ್ಲಿ ನೆಲೆಯಾಗಿರುವ ಕೇದಾರನಾಥ ದೇವಾಲಯವು (Kedarnath Temple) ಆರು ತಿಂಗಳ ಕಾಲ ಮುಚ್ಚಿದ್ದ ನಂತರ, ಮೇ 2, 2025 ರಂದು ಭಕ್ತರಿಗೆ ಮತ್ತೆ ಬಾಗಿಲು ತೆರೆಯಲಿದೆ. ಈ ದೇವಾಲಯವು ಅತ್ಯಂತ ಪವಿತ್ರ ಹಿಂದೂ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ಇದು ಚಾರ್ ಧಾಮ್ ಯಾತ್ರೆಯ ಭಾಗವಾಗಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ಇಲ್ಲಿ ಯಾತ್ರೆ ಮಾಡಲು ಬರುತ್ತಾರೆ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಕೇದಾರನಾಥ 11,968 ಅಡಿ ಎತ್ತರದಲ್ಲಿದೆ. ಇದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ನೀವು ಈ ಬಾರಿ ಕೇದಾರನಾಥಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಈ ಬಾರಿ ಕೇದಾರನಾಥ ಧಾಮದಲ್ಲಿ ರೀಲ್‌ಗಳು/ವಿಡಿಯೋಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು, ಮೊಬೈಲ್‌ಗಳು ಮತ್ತು ಕ್ಯಾಮೆರಾಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎನ್ನುವ ಬಗ್ಗೆ ನಿಮಗೆ ಗೊತ್ತಿದ್ರೆ ಉತ್ತಮ.
Photo by Alok Kumar
ಮೊಬೈಲ್ ಫೋನ್‌ಗಳು ಮತ್ತು ಕ್ಯಾಮೆರಾ ಸಂಪೂರ್ಣವಾಗಿ ನಿಷೇಧ
ಕಳೆದ ವರ್ಷ, ಕೇದಾರನಾಥ ದೇವಾಲಯದಲ್ಲಿ ಅನೇಕ ಜನರು ರೀಲ್‌ಗಳು/ವಿಡಿಯೋಗಳನ್ನು (reels and videos) ಮಾಡಿರೋದರಿಂದ ಸಮಸ್ಯೆಗಳು ಉಂಟಾಗಿದ್ದವು. ದೇವಾಲಯ ಸಮಿತಿಯ ಚಿತ್ರವನ್ನು ತಿರುಚಿರುವ ಹಲವಾರು ವೀಡಿಯೊಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಆದ್ದರಿಂದ ಈ ವರ್ಷ ದೇವಾಲಯ ಸಮಿತಿಯು ಮೊಬೈಲ್‌ಗಳು ಮತ್ತು ಕ್ಯಾಮೆರಾಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ದೇವಾಲಯದ 30 ಮೀಟರ್ ಒಳಗೆ ಮೊಬೈಲ್ ಫೋನ್‌ಗಳು ಮತ್ತು ಕ್ಯಾಮೆರಾಗಳನ್ನು (mobile phones and camera banned) ಕಟ್ಟುನಿಟ್ಟಾಗಿ ನಿಷೇಧಿಸಲಾಗುವುದು.
ರೀಲ್/ವಿಡಿಯೋ ಮಾಡುವವರಿಗೆ ಜಾಗಾನೇ ಇಲ್ಲ
ನೀವು ಕೇದಾರನಾಥ ದೇವಸ್ಥಾನದಲ್ಲಿ ರಹಸ್ಯವಾಗಿ ರೀಲ್‌ಗಳು ಮತ್ತು ವೀಡಿಯೊಗಳನ್ನು ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಆ ತಪ್ಪನ್ನು ಮಾಡಬೇಡಿ. ಕೇದಾರನಾಥ-ಬದರಿನಾಥ ಪಾಂಡ ಸೊಸೈಟಿಯು ರೀಲ್‌ಗಳು ಅಥವಾ ಯೂಟ್ಯೂಬ್ ವೀಡಿಯೊಗಳನ್ನು ಮಾಡುತ್ತಿರುವ ಭಕ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಇದರೊಂದಿಗೆ ಅವರಿಗೆ ದರ್ಶನ ನಿರಾಕರಿಸಿ ವಾಪಸ್ ಕಳುಹಿಸಲಾಗುತ್ತದೆ. ಹೊಸ ನಿಯಮಗಳ ಪ್ರಕಾರ, ಈ ವರ್ಷದಿಂದ ಭಕ್ತರು ದೇವಾಲಯದ ಒಳಗೆ ಯಾವುದೇ ಸಾಮಾಜಿಕ ಮಾಧ್ಯಮ ಸಂಬಂಧಿತ ಸಾಧನಗಳನ್ನು ಕೊಂಡೊಯ್ಯಲು ಅನುಮತಿಸಲಾಗುವುದಿಲ್ಲ.
ಯಾಕೆ ಈ ನಿಯಮ?
ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ (Kedarnath Badrinath Temple Committee) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ಪ್ರಸಾದ್ ಥಪ್ಲಿಯಾಲ್ ಮಾತನಾಡಿ, ದೇವಾಲಯದ ಸೌಂದರ್ಯ, ಭಕ್ತಿ ಮತ್ತು ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಯಾತ್ರಿಕರು ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ ಅಥವಾ ಕ್ಯಾಮೆರಾವನ್ನು ಕೊಂಡೊಯ್ಯಲು ಅನುಮತಿಸಲಾಗುವುದಿಲ್ಲ. ಜೊತೆಗೆ ರೀಲ್‌ಗಳು ಅಥವಾ ವೀಡಿಯೊಗಳನ್ನು ಮಾಡುತ್ತಿರುವ ಯಾತ್ರಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಎಲ್ಲಾ ಯಾತ್ರಿಗಳು ಸುಲಭವಾಗಿ ದರ್ಶನ ಪಡೆಯಲು ಈ ನಿಯಮವನ್ನು ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.
ಈ ಜನರು ಭಕ್ತರ ಮೇಲೆ ನಿಗಾ ಇಡುತ್ತಾರೆ.
ಯಾವುದೇ ಭಕ್ತರು ಈ ನಿಯಮಗಳನ್ನು ಉಲ್ಲಂಘಿಸುವುದು ಕಂಡುಬಂದರೆ, ಅವರ ವಿರುದ್ಧ ಕಠಿಣ ಕ್ರಮ (strict action) ಕೈಗೊಳ್ಳಲಾಗುವುದು ಎಂದು ದೇವಾಲಯ ಸಮಿತಿ ಸ್ಪಷ್ಟಪಡಿಸಿದೆ. ದೇವಾಲಯದ ಆವರಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಜಾರಿಗೊಳಿಸುವ ಜವಾಬ್ದಾರಿ ಪೊಲೀಸರು, ಐಟಿಬಿಪಿ ಸಿಬ್ಬಂದಿ ಮತ್ತು ದೇವಾಲಯದ ನೌಕರರ ಮೇಲಿರುತ್ತದೆ. ಆ ಮೂಲಕ, ಯಾರೂ ತಪ್ಪಾಗಿ ಯಾವುದೇ ರೀಲ್ ಅಥವಾ ವಿಡಿಯೋ ಮಾಡದಂತೆ ಎಲ್ಲಾ ಭಕ್ತರ ಮೇಲೆ ನಿಗಾ ಇಡುತ್ತಾರೆ.
ಭಕ್ತರ ತಪಾಸಣೆ ಮಾಡಲಾಗುತ್ತೆ
ಕೇದಾರನಾಥ ದೇವಸ್ಥಾನಕ್ಕೆ ಬರುವ ಭಕ್ತರು ಯಾವುದೇ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪ್ರದೇಶದಾದ್ಯಂತ ಕಟ್ಟುನಿಟ್ಟಿನ ತಪಾಸಣೆಗೆ (security check) ಒಳಗಾಗಬೇಕಾಗುತ್ತದೆ. ಕಳೆದ ವರ್ಷ ಕೇದಾರನಾಥ ದೇವಾಲಯದ ಸುತ್ತಮುತ್ತ ಇಂತಹ ಅನೇಕ ಘಟನೆಗಳನ್ನು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವೀಡಿಯೊಗಳನ್ನು ಸಮಿತಿಯು ನೋಡಿತ್ತು, ಇದು ದೇವಾಲಯ ಸಮಿತಿಯ ಪ್ರತಿಷ್ಠೆಗೆ ಕಳಂಕ ತರುತ್ತಿತ್ತು. ಈ ವರ್ಷ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸಮಿತಿಯು ಕಠಿಣ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ.