Live in Relationship : ಭಾರತ ಇಷ್ಟೂ ಮುಂದುವರೆದಿದ್ದರೂ ಕೂಡ ಲಿವ್ ಇನ್ ರಿಲೇಶನ್’ಶಿಪ್ ಎಂದರೆ ಇಂದಿಗೂ ಕೂಡ ಮೂಗು ಮುರಿಯುವ ಈ ಸಮಯದಲ್ಲಿ ರಾಜಸ್ಥಾನದ ಈ ಬುಡಕಟ್ಟು ಜನಾಂಗವೊಂದರಲ್ಲಿ ಮದುವೆಗೂ ಮುನ್ನ ಜೊತೆಗಿರುವ ಸಂಪ್ರದಾಯವೇ ಇದೆ.
ನಮ್ಮ ದೇಶದ ಲೆಕ್ಕವಿಲ್ಲದಷ್ಟು ಭಾಗಗಳಲ್ಲಿ ವಿವಿಧ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಪ್ರತಿಯೊಬ್ಬರ ಜೀವನಶೈಲಿ ಭಿನ್ನ. ಕೆಲವು ಬುಡಕಟ್ಟು ಜನಾಂಗದವರು ತಮ್ಮದೇ ಆದ ಆಯ್ಕೆಯ ಸಂಗಾತಿಯನ್ನು ಮದುವೆಯಾಗುವ ಪದ್ಧತಿಯನ್ನು ಹೊಂದಿದ್ದರೆ, ಇನ್ನು ಕೆಲವು ಜನಾಂಗದವರು ಮದುವೆಯಿಲ್ಲದೆ ಒಟ್ಟಿಗೆ ವಾಸಿಸುವ ಸಂಪ್ರದಾಯವನ್ನು ಹೊಂದಿದ್ದಾರೆ. ಲಿವ್-ಇನ್ ಸಂಬಂಧಗಳನ್ನು ಇಷ್ಟಪಡುವ ಮತ್ತು ಮಕ್ಕಳ ಜನನದ ನಂತರವೇ ಮದುವೆಯಾಗಲು ನಿರ್ಧರಿಸುವ ಕೆಲವು ಬುಡಕಟ್ಟು ಜನಾಂಗಗಳೂ ಇವೆ. ಅಂತಹ ಒಂದು ಬುಡಕಟ್ಟು ರಾಜಸ್ಥಾನದ ಗರಾಸಿಯಾ ಬುಡಕಟ್ಟು ಸಮುದಾಯ.
27
ಗರಾಸಿಯಾ ಬುಡಕಟ್ಟು ಸಮುದಾಯ
ಈ ಬುಡಕಟ್ಟು ಜನಾಂಗವು ತನ್ನ ಜೀವನಶೈಲಿಯಿಂದಾಗಿ ಭಾರತೀಯ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಗರಾಸಿಯಾ ಬುಡಕಟ್ಟು ಸಮುದಾಯವು ರಾಜಸ್ಥಾನ ರಾಜ್ಯದೊಳಗೆ ಮಾತ್ರವಲ್ಲದೆ ಹೊರಗಿನಿಂದಲೂ ಗಮನ ಸೆಳೆದಿದೆ. ಈ ಸಮುದಾಯವನ್ನು ರಾಜಸ್ಥಾನದ ಮೂರನೇ ಅತಿದೊಡ್ಡ ಬುಡಕಟ್ಟು ಗುಂಪು ಎಂದು ಪರಿಗಣಿಸಲಾಗಿದೆ. ಈ ಸಮುದಾಯದಲ್ಲಿ ಸಿರೋಹಿಯ ಕೊಟ್ರಾ ಮತ್ತು ಅಬು ರೋಡ್ ತಹಸಿಲ್‌ಗಳು, ಪಾಲಿ ಜಿಲ್ಲೆಯ ಬಾಲಿ ಮತ್ತು ದೇಸುರಿ ತಹಸಿಲ್‌ಗಳು ಮತ್ತು ಉದಯಪುರದ ಗೋಗುಂಡಾ ಮತ್ತು ಖೇರ್ವಾರಾ ತಹಸಿಲ್‌ಗಳು ಸೇರಿವೆ.
37
ಗರಾಸಿಯಾ ಬುಡಕಟ್ಟಿನ ಇತಿಹಾಸ
'ಗರಾಸಿಯಾ' ಎಂಬ ಪದವು ಸಂಸ್ಕೃತ ಪದ 'ಗ್ರಾಸ್' ನಿಂದ ಬಂದಿದೆ. ಅಲಾವುದ್ದೀನ್ ಖಿಲ್ಜಿಯಿಂದ ಸೋಲಿಸಲ್ಪಟ್ಟ ನಂತರ, ರಜಪೂತರು ಭಿಲ್ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದ ಬೆಟ್ಟದ ಪ್ರದೇಶಗಳಿಗೆ ಓಡಿಹೋದರು ಎಂದು ಇತಿಹಾಸ ಹೇಳುತ್ತದೆ. ಗರಾಸಿಯಾ ಬುಡಕಟ್ಟುಗಳು ಭಿಲ್ ಬುಡಕಟ್ಟುಗಳನ್ನು ವಶಪಡಿಸಿಕೊಂಡು ಗರಾಸಿಯಾ ಬುಡಕಟ್ಟು ಸಮುದಾಯ ಎಂದು ಕರೆಯಲ್ಪಟ್ಟರು.
ಗರಾಸಿಯಾ ಬುಡಕಟ್ಟಿನ ಅತ್ಯಂತ ಇಂಟ್ರೆಸ್ಟಿಂಗ್ ಅಂಶವೆಂದರೆ ಅವರು ಮದುವೆಗೆ ಮುಂಚೆಯೇ ಲಿವ್-ಇನ್ ರಿಲೇಶನ್’ಶಿಪ್ ನಲ್ಲಿರುವ ಸಂಪ್ರದಾಯವನ್ನು ಅನುಸರಿಸುತ್ತಾರೆ. ವಾರ್ಷಿಕ ಗೌರ್ ಮೇಳವು ಬುಡಕಟ್ಟು ಜನಾಂಗದವರಿಗೆ ಒಂದು ಪ್ರಮುಖ ಹಬ್ಬವಾಗಿದೆ, ಅಲ್ಲಿ ಜನ ತಾವು ಆಯ್ಕೆ ಮಾಡಿದ ಸಂಗಾತಿಗಳೊಂದಿಗೆ ಓಡಿಹೋಗುತ್ತಾರೆ. ಅವರು ಹಿಂದಿರುಗಿದ ನಂತರ, ವರನ ಕುಟುಂಬವು ವಧುವಿನ ಕುಟುಂಬಕ್ಕೆ ಒಂದು ಮೊತ್ತವನ್ನು ಪಾವತಿಸಬೇಕು; ನಂತರ ಅವರು ಮದುವೆಯಾಗಿ ಒಟ್ಟಿಗೆ ವಾಸಿಸುತ್ತಾರೆ. ಈ ಬುಡಕಟ್ಟಿನ ಮತ್ತೊಂದು ವೈಶಿಷ್ಟ್ಯ ಅಂದ್ರೆ ಇಲ್ಲಿನ ಮಹಿಳೆಯರು ಮತ್ತೊಂದು ಜಾತ್ರೆಯಲ್ಲಿ ಹೊಸ ಲಿವ್-ಇನ್ ಸಂಗಾತಿಯನ್ನು ಹುಡುಕಬಹುದು. ಈ ಜನಾಂಗದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸ್ಥಾನಮಾನ ಹೊಂದಿದ್ದು, ಎಲ್ಲಾ ವಿವಾಹ ವೆಚ್ಚಗಳನ್ನು ಪುರುಷನು ಭರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ.
57
ಮಗುವಿನ ಜನನದ ನಂತರ ಮದುವೆ
ಈ ಬುಡಕಟ್ಟಿನ ಮತ್ತೊಂದು ವಿಶಿಷ್ಟ ಎಂದರೆ ಮಹಿಳೆಯರು ತಮ್ಮ ಆಯ್ಕೆಯ ಸಂಗಾತಿಯನ್ನು ಆರಿಸಿಕೊಂಡು ಅವರೊಂದಿಗೆ ವಾಸಿಸುತ್ತಾರೆ, ಮಕ್ಕಳನ್ನು ಪಡೆದ ನಂತರ ಮತ್ತು ತಮ್ಮ ಸಂಗಾತಿಯೊಂದಿಗೆ ಸಂತೋಷದಿಂದ ಇದ್ದ ಬಳಿಕವಷ್ಟೇ ಅವರು ಮದುವೆಯಾಗುತ್ತಾರೆ. ಅವರು ಯಾವುದೇ ಅಸಮಾಧಾನವನ್ನು ಅನುಭವಿಸಿದರೆ, ಯಾವುದೇ ಹಿಂಜರಿಕೆಯಿಲ್ಲದೆ ಸಂಬಂಧವನ್ನು ಮುರಿಯಬಹುದು. ಏಕೆಂದರೆ ಈ ಬುಡಕಟ್ಟಿನಲ್ಲಿ ಮಹಿಳೆಯರು ಉನ್ನತ ಸ್ಥಾನಮಾನವನ್ನು ಹೊಂದಿದ್ದಾರೆ. ಹಾಗಾಗಿ ಇಲ್ಲಿ, ಮಹಿಳೆಯರ ವಿರುದ್ಧ ಯಾವುದೇ ಅತ್ಯಾ*ಚಾರ ಅಥವಾ ಹಿಂಸಾಚಾರದ ಘಟನೆಗಳು ನಡೆಯುವುದಿಲ್ಲ. ಇದಲ್ಲದೆ, ಅವರು ಒಟ್ಟಿಗೆ ವಾಸಿಸುವಾಗ ಮಕ್ಕಳನ್ನು ಹೊಂದಿಲ್ಲದಿದ್ದರೆ, ಅವರು ಇನ್ನೊಬ್ಬ ಸಂಗಾತಿಯನ್ನು ಸಹ ಹುಡುಕಬಹುದು.
67
ಜೀವನೋಪಾಯಕ್ಕಾಗಿ ಕೃಷಿ
ಗರಾಸಿಯಾ ಬುಡಕಟ್ಟು ಸಮುದಾಯವು ತಮ್ಮ ಜೀವನೋಪಾಯವನ್ನು ಉಳಿಸಿಕೊಳ್ಳಲು, ಬೆಳೆಗಳನ್ನು ಬೆಳೆಯುತ್ತಾರೆ. ಅವರ ಆಹಾರ ಪದ್ಧತಿಗಳು ರಾಜ್ಯದ ಇತರ ಕೃಷಿ ಬುಡಕಟ್ಟು ಸಮುದಾಯಗಳ ಅಭ್ಯಾಸಗಳನ್ನು ಪ್ರತಿಬಿಂಬಿಸುತ್ತವೆ. ಎಲ್ಲಾ ಗರಾಸಿಯಾ ಕುಟುಂಬಗಳು ಬೆಳೆಯುವ ಪ್ರಧಾನ ಆಹಾರವೆಂದರೆ ಮೆಕ್ಕೆಜೋಳ. ಅವರು ತಮ್ಮ ಆಹಾರದಲ್ಲಿ ಅಕ್ಕಿ, ರಾಗಿ ಮತ್ತು ಗೋಧಿಯನ್ನು ಸಹ ಸೇರಿಸುತ್ತಾರೆ. ಇನ್ನು ಈ ಜನರು ಹೆಚ್ಚಾಗಿ ಸಸ್ಯಾಹಾರಿಗಳು ಮತ್ತು ಯಾವುದೇ ಮದ್ಯದ ಚಟವನ್ನು ಹೊಂದಿರುವುದಿಲ್ಲ.
77
ಫ್ಯಾಷನ್‌ನಲ್ಲಿಯೂ ಮುಂದು
ಗರಾಸಿಯಾ ಬುಡಕಟ್ಟು ಸಮುದಾಯವು ಧರಿಸುವ ಉಡುಪುಗಳು ಸಾಕಷ್ಟು ಸ್ಟೈಲಿಶ್ ಆಗಿರುತ್ತವೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ವಿಭಿನ್ನ ಶೈಲಿಯ ಡ್ರೆಸ್ಸಿಂಗ್ ಮಾಡುತ್ತಾರೆ. ಬೆಳ್ಳಿ ಆಭರಣಗಳು ಸಾಮಾನ್ಯ ಫ್ಯಾಷನ್ ವಸ್ತುವಾಗಿದೆ. ಗರಾಸಿಯಾ ಸಮುದಾಯದ ಮಹಿಳೆಯರು ಸಾಮಾನ್ಯವಾಗಿ ಝುಲ್ಕಿ, ಫ್ಲೇರ್ಡ್ ಘಾಗ್ರಾಗಳು ಮತ್ತು ಓಧಾನಿಗಳನ್ನು ಧರಿಸುತ್ತಾರೆ. ಪುರುಷರು ಸಫಾ ಅಥವಾ ಪೊಟಿಯು ಎಂದೂ ಕರೆಯಲ್ಪಡುವ ಕೆಂಪು ಅಥವಾ ಬಿಳಿ ಪೇಟಗಳಿಗೆ ಹೆಸರುವಾಸಿಯಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.