ಬೆಂಗಳೂರು ಮೂಲದ ಸಂಗೀತಗಾರ ಬೆನ್ನಿ ಪ್ರಸಾದ್, ಕೇವಲ 6 ವರ್ಷಗಳಲ್ಲಿ 245 ದೇಶಗಳನ್ನು ಸುತ್ತಿ ವಿಶ್ವ ದಾಖಲೆ ಬರೆದಿದ್ದಾರೆ. ಬಾಲ್ಯದಲ್ಲಿ ತೀವ್ರ ಅನಾರೋಗ್ಯ ಮತ್ತು ಖಿನ್ನತೆಯಿಂದ ಬಳಲುತ್ತಿದ್ದ ಅವರು, ಸಂಗೀತದ ಮೂಲಕ ತಮ್ಮ ಬದುಕನ್ನು ಬದಲಿಸಿಕೊಂಡು ಇಡೀ ಜಗತ್ತಿಗೆ ಸ್ಫೂರ್ತಿಯಾಗಿದ್ದಾರೆ.
ಕನ್ನಡಿಗರಿಗೆ ವಿವಿಧ ದೇಶಗಳನ್ನು ಪರಿಚಯ ಮಾಡಿಕೊಡುವ ಡಾ.ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್, ಫ್ಲೈಯಿಂಗ್ ಪಾಸ್‌ಪೋರ್ಟ್ ಖ್ಯಾತಿಯ ಆಶಾ ಅಂಡ್ ಕಿರಣ್, ಗ್ಲೋಬಲ್ ಕನ್ನಡಿಗ ಖ್ಯಾತಿಯ ಮಹಾಬಲ ರಾಮ್ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್‌ಗಳು ದೇಶಗಳನ್ನು ಸುತ್ತಾಡುತ್ತಾ ವ್ಲಾಗ್‌ಗಳನ್ನು ಮಾಡುತ್ತಾರೆ. ಇವರೆಲ್ಲರೂ ಬಹುಶಃ ಸುಮಾರು 50 ರಿಂದ 100 ದೇಶಗಳನ್ನು ಸುತ್ತಾಡಿರಬಹದು. ಆದರೆ, ಇಲ್ಲೊಬ್ಬ ಬೆಂಗಳೂರಿನ ಸಂಗೀತ ಕಲಾವಿದ ಬರೋಬ್ಬರಿ 245 ದೇಶಗಳನ್ನು ಸುತ್ತಾಡಿದ್ದಾರೆ. ಯಾರಿವರು? ಇವರ ಹಿನ್ನೆಲೆಯೇನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.
26
ಇಂದಿನ ಕಾಲದಲ್ಲಿ ಒಂದೆರಡು ದೇಶ ಸುತ್ತುವುದೆಂದರೆ ದೊಡ್ಡ ಮಾತು. ಆದರೆ ಬೆಂಗಳೂರಿನ ಸಂಗೀತಗಾರರೊಬ್ಬರು ಇಡೀ ವಿಶ್ವವನ್ನೇ ಸುತ್ತಿ ಮುಗಿಸಿದ್ದಾರೆ ಎಂದರೆ ನೀವು ನಂಬಲೇಬೇಕು. ಹೌದು, ಬೆಂಗಳೂರು ಮೂಲದ ಬೆನ್ನಿ ಪ್ರಸಾದ್ (Benny Prasad) ಅವರು ಕೇವಲ 6 ವರ್ಷ, 6 ತಿಂಗಳು ಮತ್ತು 22 ದಿನಗಳಲ್ಲಿ ಅಂಟಾರ್ಕ್ಟಿಕಾ ಸೇರಿದಂತೆ ವಿಶ್ವದ 245 ದೇಶ ಹಾಗೂ ಪ್ರಾಂತ್ಯಗಳಿಗೆ ಭೇಟಿ ನೀಡುವ ಮೂಲಕ ಅತಿ ವೇಗವಾಗಿ ಜಗತ್ತನ್ನು ಸುತ್ತಿದ ವ್ಯಕ್ತಿ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.
36
ವೈರಲ್ ಆದ 16 ಪಾಸ್‌ಪೋರ್ಟ್‌ಗಳು:
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೆನ್ನಿ ಪ್ರಸಾದ್ ಅವರ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅವರು ವೀಸಾ ಮತ್ತು ಇಮಿಗ್ರೇಷನ್ ಸ್ಟ್ಯಾಂಪ್‌ಗಳಿಂದ ತುಂಬಿ ಹೋಗಿರುವ ತಮ್ಮ 16 ಪಾಸ್‌ಪೋರ್ಟ್‌ಗಳನ್ನು ತೋರಿಸುತ್ತಿದ್ದಾರೆ. ಭಾರತದಂತಹ 'ವೀಸಾ ನಿರ್ಬಂಧ' ಹೆಚ್ಚಿರುವ ಪಾಸ್‌ಪೋರ್ಟ್ ಇಟ್ಟುಕೊಂಡು ಇಷ್ಟೊಂದು ದೇಶಗಳನ್ನು ಸುತ್ತುವುದು ಸುಲಭದ ಮಾತಲ್ಲ. ಇದನ್ನೇ ನೆಟ್ಟಿಗರು 'ರಿಯಲ್ ಒಜಿ ಟ್ರಾವೆಲ್ ಇನ್ ಫ್ಲೂಯೆನ್ಸರ್' (OG Travel Influencer) ಎಂದು ಕೊಂಡಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಕ್ರೇಜ್ ಆರಂಭವಾಗುವ ಮೊದಲೇ ಬೆನ್ನಿ ಇಡೀ ಜಗತ್ತನ್ನು ಅಂಗೈಯಲ್ಲಿ ಇಟ್ಟುಕೊಂಡಿದ್ದರು.
ಬೆನ್ನಿ ಪ್ರಸಾದ್ ಅವರ ಈ ಸಾಧನೆಯ ಹಿಂದೆ ನೋವಿನ ಕಥೆಯಿದೆ. 1975ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಬೆನ್ನಿ, ಬಾಲ್ಯದಲ್ಲಿ ತೀವ್ರವಾದ ಅಸ್ತಮಾದಿಂದ ಬಳಲುತ್ತಿದ್ದರು. ಅತಿಯಾದ ಸ್ಟಿರಾಯ್ಡ್ ಚಿಕಿತ್ಸೆಯಿಂದಾಗಿ ಅವರ ಶ್ವಾಸಕೋಶ ಶೇ. 60ರಷ್ಟು ಹಾನಿಗೊಳಗಾಗಿತ್ತು ಮತ್ತು ಅವರಿಗೆ ಸಂಧಿವಾತ (Rheumatoid Arthritis) ಕಾಣಿಸಿಕೊಂಡಿತ್ತು. ಇದರಿಂದಾಗಿ ಅವರ ರೋಗನಿರೋಧಕ ಶಕ್ತಿ ಸಂಪೂರ್ಣ ಕುಸಿದಿತ್ತು.
56
ಬಾಲ್ಯದಲ್ಲಿ ಅನುಭವಿಸಿದ ದೈಹಿಕ ಯಾತನೆ ಮತ್ತು ಸಮಾಜದ ಒತ್ತಡದಿಂದಾಗಿ ಬೆನ್ನಿ 16ನೇ ವಯಸ್ಸಿನಲ್ಲಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಒಂದು ಹಂತದಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನೂ ಮಾಡಿದ್ದರು. ಆದರೆ, ಅವರ ಬದುಕಿನ ತಿರುವು ಆರಂಭವಾಗಿದ್ದೇ ಸಂಗೀತದಿಂದ. ಗಿಟಾರ್ ಹಿಡಿದ ಬೆನ್ನಿ, ತಮ್ಮ ನೋವನ್ನೆಲ್ಲ ಸಂಗೀತದ ಮೂಲಕ ಮರೆತರು. ಅವರ ಪ್ರತಿಭೆಯೇ ಅವರನ್ನು ಇಡೀ ವಿಶ್ವ ಸುತ್ತುವಂತೆ ಮಾಡಿತು.
66
ಬಡತನವಲ್ಲ, ಪ್ರತಿಭೆಯೇ ಬಂಡವಾಳ:
ಬೆನ್ನಿ ಪ್ರಸಾದ್ ಅವರು ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಆದರೆ ತಮ್ಮ ಅದ್ಭುತ ಗಿಟಾರ್ ವಾದನ ಮತ್ತು ಮೋಟಿವೇಶನಲ್ ಸ್ಪೀಚ್ ಮೂಲಕ ಅವರು ಜಗತ್ತಿನ ಮೂಲೆ ಮೂಲೆಗೆ ಆಹ್ವಾನ ಪಡೆದರು. ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಜಗತ್ತಿನ ಪ್ರತಿ ದೇಶವನ್ನೂ ಸಂದರ್ಶಿಸಿದರು. 'ನಿಮ್ಮಲ್ಲಿ ಛಲವಿದ್ದರೆ ದೈಹಿಕ ನ್ಯೂನತೆ ಅಥವಾ ಹಣದ ಕೊರತೆ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ' ಎಂಬುದಕ್ಕೆ ಬೆನ್ನಿ ಪ್ರಸಾದ್ ಜೀವಂತ ಉದಾಹರಣೆ. ಇಂದು ಸಾವಿರಾರು ಪ್ರಯಾಣಿಕರಿಗೆ ಸ್ಫೂರ್ತಿಯಾಗಿರುವ ಬೆನ್ನಿ ಪ್ರಸಾದ್, ಕನ್ನಡಿಗರ ಸಾಧನೆಯ ಹಾದಿ ಎಷ್ಟು ದೊಡ್ಡದು ಎಂಬುದನ್ನು ಜಗತ್ತಿಗೆ ಸಾರಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.