ಭಾರತೀಯ ರೈಲ್ವೆಯು 'ಜನ್ ವಿಶ್ವಾಸ್ ಕಾಯ್ದೆ, 2026' ಅಡಿಯಲ್ಲಿ, ಮಹಿಳಾ ಬೋಗಿಗಳಿಗೆ ಅಕ್ರಮವಾಗಿ ಪ್ರವೇಶಿಸುವ ಪುರುಷರಿಗೆ ವಿಧಿಸುವ ದಂಡವನ್ನು ₹2,500ಕ್ಕೆ ಹೆಚ್ಚಿಸಿದೆ. ಈ ಕಠಿಣ ಕ್ರಮವು ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.
ರೈಲಿನಲ್ಲಿ ಮಹಿಳೆಯರಿಗಾಗಿಯೇ ಮೀಸಲಿಟ್ಟಿರುವ ಕೋಚ್ ಮತ್ತು ಸೀಟ್‌ಗಳಿಗೆ ಅಕ್ರಮವಾಗಿ ನುಗ್ಗುವ ಪುರುಷ ಪ್ರಯಾಣಿಕರ ವಿರುದ್ಧ ಭಾರತೀಯ ರೈಲ್ವೆ ಕಠಿಣ ಕ್ರಮಕ್ಕೆ ಮುಂದಾಗಿದೆ. 'ಜನ್ ವಿಶ್ವಾಸ್ ಕಾಯ್ದೆ, 2026'ರ ಅಡಿಯಲ್ಲಿ, ಮಹಿಳಾ ಬೋಗಿಗೆ ಅತಿಕ್ರಮ ಪ್ರವೇಶ ಮಾಡುವವರಿಗೆ ವಿಧಿಸುವ ದಂಡವನ್ನು 500 ರೂಪಾಯಿಯಿಂದ 2,500 ರೂಪಾಯಿಗೆ ಏರಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
26
ರೈಲ್ವೆ ಅಧಿಕಾರಿಗಳ ಪ್ರಕಾರ, ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶ ಇರುತ್ತದೆ. ಹೀಗಿರುವಾಗ ಪುರುಷರು ಮಹಿಳೆಯರ ಕೋಚ್ ಅಥವಾ ಸೀಟ್‌ಗಳನ್ನು ಆಕ್ರಮಿಸಿಕೊಳ್ಳುವ ಅಗತ್ಯವೇ ಇಲ್ಲ. ಆದರೂ ಇಂತಹ ನಿಯಮ ಉಲ್ಲಂಘನೆಗಳು ಪದೇ ಪದೇ ನಡೆಯುತ್ತಿರುವುದರಿಂದ ದಂಡದ ಮೊತ್ತವನ್ನು భారీಯಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
36
2026ರ ಜೂನ್ 19ರಂದು ಭಾರತೀಯ ಗೆಜೆಟ್‌ನಲ್ಲಿ ರೈಲ್ವೆ ಸಚಿವಾಲಯ ಒಂದು ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ, ಯಾವುದೇ ಪುರುಷ ಪ್ರಯಾಣಿಕ ಉದ್ದೇಶಪೂರ್ವಕವಾಗಿ ಮಹಿಳಾ ಬೋಗಿ ಪ್ರವೇಶಿಸಿದರೆ, ಅಥವಾ ಮಹಿಳೆಯರ ಸೀಟಿನಲ್ಲಿ ಕುಳಿತು ಪ್ರಯಾಣ ಮುಂದುವರಿಸಿದರೆ, ಅದನ್ನು ಕಾನೂನು ಪ್ರಕಾರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದು ರೈಲ್ವೆ ಕಾಯ್ದೆಯ ಸೆಕ್ಷನ್ 162ರ ಉಲ್ಲಂಘನೆಯಾಗುತ್ತದೆ.
ನಿಯಮ ಮುರಿದ ಪ್ರಯಾಣಿಕನಿಗೆ 2,500 ರೂ. ದಂಡ ವಿಧಿಸುವುದಲ್ಲದೆ, ಅವರ ಟಿಕೆಟ್ ರದ್ದುಪಡಿಸಬಹುದು ಅಥವಾ ಮುಟ್ಟುಗೋಲು ಹಾಕಿಕೊಳ್ಳಬಹುದು. ಅಷ್ಟೇ ಅಲ್ಲ, ಆ ಪ್ರಯಾಣಿಕನನ್ನು ರೈಲಿನಿಂದ ಕೆಳಗಿಳಿಸುವಂತೆ ಸೂಚಿಸುವ ಅಧಿಕಾರ ರೈಲ್ವೆ ಸಿಬ್ಬಂದಿಗೆ ಇರುತ್ತದೆ. ಒಂದು ವೇಳೆ ಪ್ರಯಾಣಿಕ ದಂಡ ಕಟ್ಟಲು ನಿರಾಕರಿಸಿದರೆ, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆಗ ದಂಡದ ಮೊತ್ತ 5,000 ರೂಪಾಯಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಸೂಚನೆಯಲ್ಲಿ ಎಚ್ಚರಿಸಲಾಗಿದೆ.
56
ಈ ಅಪರಾಧಕ್ಕೆ ಕನಿಷ್ಠ 2,500 ರೂ. ದಂಡ ವಿಧಿಸಬೇಕೆಂದು ಕಾನೂನು ಹೇಳುತ್ತದೆ. ಒಂದು ವೇಳೆ ವಿಶೇಷ ಸಂದರ್ಭಗಳಲ್ಲಿ ಇದಕ್ಕಿಂತ ಕಡಿಮೆ ದಂಡ ವಿಧಿಸುವುದಾದರೆ, ಅದಕ್ಕೆ ಸೂಕ್ತ ಕಾರಣವನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಆದರೆ, ಈ ನಿಯಮವು ತೃತೀಯಲಿಂಗಿಗಳಿಗೆ ಅನ್ವಯಿಸುವುದಿಲ್ಲ. 'ತೃತೀಯಲಿಂಗಿ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣಾ ಕಾಯ್ದೆ'ಯ ಅಡಿ ಬರುವ ವ್ಯಕ್ತಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.
66
ಮಹಿಳೆಯರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಈ ಹೊಸ ಕ್ರಮ ಕೈಗೊಂಡಿದೆ. ಮಹಿಳಾ ಬೋಗಿಗಳ ದುರ್ಬಳಕೆ ತಡೆಯುವುದು ಮತ್ತು ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಈ ಕಠಿಣ ನಿಯಮದ ಮುಖ್ಯ ಉದ್ದೇಶವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.