ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಿಸುವಂತೆ ದಾವಣಗೆರೆ ರೈಲ್ವೆ ಪ್ರಯಾಣಿಕರ ಸಂಘವು ನೈಋತ್ಯ ರೈಲ್ವೆಗೆ ಮನವಿ ಮಾಡಿದೆ. ಈ ಹೊಸ ಮಾರ್ಗವು ಮೈಸೂರು, ದಾವಣಗೆರೆ, ಹೊಸಪೇಟೆ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಹಂಪಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.
ಮೈಸೂರು, ದಾವಣಗೆರೆ, ಹೊಸಪೇಟೆ, ಬಳ್ಳಾರಿ ಭಾಗದ ಸಾವಿರಾರು ಪ್ರಯಾಣಿಕರು ಆಂಧ್ರ ಪ್ರದೇಶದ ಪ್ರಮುಖ ನಗರವಾದ ವಿಶಾಖಪಟ್ಟಣಂಗೆ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ಪ್ರವಾಸ ಉದ್ದೇಶಗಳಿಂದ ಪ್ರಯಾಣಿಸುತ್ತಿದ್ದಾರೆ. ಆದರೆ, ಈ ಮಾರ್ಗದಲ್ಲಿ ನೇರ ರೈಲು ಸೇವೆಯ ಕೊರತೆಯಿಂದ ಪ್ರಯಾಣಿಕರು ಬೆಂಗಳೂರಿನಲ್ಲಿ ರೈಲು ಬದಲಾಯಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.
24
ನೈಋತ್ಯ ರೈಲ್ವೆ ಮಹಾ ಪ್ರಬಂಧಕರಿಗೆ ಪತ್ರ
ಪ್ರಸ್ತುತ ಮೈಸೂರು- ವಿಶಾಖಪಟ್ಟಣಂ ನಡುವೆ ಸೀಮಿತ ನೇರ ಸಂಪರ್ಕ ಮಾತ್ರ ಲಭ್ಯವಿದೆ. ಆದ್ದರಿಂದ ಈ ರೀತಿ ಮಾರ್ಗದಲ್ಲಿ ಹೊಸ ದೈನಂದಿನ ವಾರಾಂತ್ಯ ಎಕ್ಸ್ ಪ್ರೆಸ್ ರೈಲು ಆರಂಭಿಸುವಂತೆ ದಾವಣಗೆರೆ ನೈಋತ್ಯ ರೈಲ್ವೆ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್.ಜೈನ್ ನೈಋತ್ಯ ರೈಲ್ವೆ ಮಹಾ ಪ್ರಬಂಧಕರಿಗೆ ಪತ್ರ ಬರೆದು ಮೇಲ್ ಮೂಲಕ ಮನವಿ ಮಾಡಿದ್ದಾರೆ.
34
ಹೊಸಪೇಟೆ- ಹಂಪಿ ಪ್ರವಾಸೋದ್ಯಮ
ಮೈಸೂರು- ತುಮಕೂರು- ದಾವಣಗೆರೆ- ಹೊಸಪೇಟೆ- ಬಳ್ಳಾರಿ- ಗೂಟಿ- ವಿಜಯವಾಡ- ವಿಶಾಖಪಟ್ಟಣಂ ರೈಲು ಸೇವೆಯನ್ನು ಮಾಡುವುದರಿಂದ ದಾವಣಗೆರೆ ಮತ್ತು ಮಧ್ಯ ಕರ್ನಾಟಕಕ್ಕೆ ಆಂಧ್ರ ಪ್ರದೇಶದೊಂದಿಗೆ ಉತ್ತಮ ಸಂಪರ್ಕ ಸಿಗುತ್ತದೆ. ಹೊಸಪೇಟೆ- ಹಂಪಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಮಾರ್ಗದ ಪ್ರಯಾಣ ಒತ್ತಡ ಕಡಿಮೆಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಹಲವು ರೈಲು ಬಳಕೆದಾರ ಸಂಘಗಳು ಹೊಸ ರೈಲುಗಳು ಹಾಗೂ ಹೊಸ ಮಾರ್ಗಗಳ ಬೇಡಿಕೆ ಸಲ್ಲಿಸಿರುವುದು ಗಮನಾರ್ಹವಾಗಿದೆ. ಆದ್ದರಿಂದ ಸಾರ್ವಜನಿಕರ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ ಶೀಘ್ರವೇ ಈ ಹೊಸ ನೇರ ರೈಲು ಸೇವೆಯನ್ನು ಘೋಷಿಸುವಂತೆ ಮನವಿ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.