Published : Feb 11, 2026, 04:08 PM ISTUpdated : Feb 11, 2026, 04:15 PM IST
ಬಿಹಾರದ ಸಮಷ್ಟಿಪುರದಲ್ಲಿ, ಪೊಲೀಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಯುವಕನನ್ನು ಅಪಹರಿಸಿ, ಅಮಲು ಪದಾರ್ಥ ನೀಡಿ ಬಲವಂತವಾಗಿ ಮದುವೆ ಮಾಡಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವರನ ವಿಡಿಯೋ ವೈರಲ್ ಆಗಿ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಮಷ್ಟಿಪುರ: ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಬಲವಂತದ ಮದುವೆಯೊಂದು ನಡೆದಿದೆ. ಬಿಹಾರ ಪೊಲೀಸ್ ಇಲಾಖೆಗೆ ಸೇರಬೇಕು ಎಂಬ ಹಂಬಲದಿಂದ ಅದಕ್ಕಾಗಿ ಸಿದ್ಧಗೊಳ್ಳುತ್ತಿದ್ದ ಯುವಕನನ್ನು ಹುಡುಗಿ ಕಡೆಯವರು ಅಪಹರಿಸಿ ಆತನಿಗೆ ಮತ್ತು ಬರುವ ಔಷಧ ನೀಡಿ ಆತ ಹೂವಿನ ಹಾರ ಹಾಕುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದಾಗಲೇ ಆತನಿಗೆ ಯುವತಿ ಜೊತೆ ಮದುವೆ ಮಾಡಲಾಗಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
27
ವಧುವಿನ ಕುಟುಂಬದಿಂದ ಕೃತ್ಯ
ಪಕ್ದುವಾ ಮ್ಯಾರೇಜ್ ಅಥವಾ ಬಲವಂತದ ಮದುವೆ ಎಂದು ಕರೆಯಲ್ಪಡುವ ಈ ವಿಚಿತ್ರ ಆಚರಣೆ ಭಾರತದ ಬಿಹಾರ ಹಾಗೂ ಉತ್ತರ ಪ್ರದೇಶದ ಕೆಲ ಗ್ರಾಮೀಣ ಭಾಗಗಳಲ್ಲಿ ಚಾಲನೆಯಲ್ಲಿದ್ದು, ಅದರ ಪ್ರಕಾರ, ಸರ್ಕಾರಿ ಉದ್ಯೋಗಗಳಲ್ಲಿ ಉತ್ತಮ ಸ್ಥಿತಿಯಲ್ಲಿರುವವರು ಅಥವಾ ಉನ್ನತ ಶಿಕ್ಷಣ ಪಡೆದ ಅರ್ಹ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ವಧುವಿನ ಕುಟುಂಬದವರು ಅಪಹರಿಸಿ, ಬಂದೂಕಿನಿಂದ ಬೆದರಿಸಿ ಮದುವೆಯಾಗುವಂತೆ ಒತ್ತಾಯಿಸುತ್ತಾರೆ.
37
ಪೊಲೀಸ್ ನೇಮಕಾತಿಗೆ ಸಿದ್ಧಗೊಳ್ಳುತ್ತಿದ್ದ ಯುವಕನ ಕಿಡ್ಯಾಪ್
ಹಾಗೆಯೇ ಇಲ್ಲಿ ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ ನಿತೀಶ್ ಎಂಬಾತನನ್ನು ದುಷ್ಕರ್ಮಿಗಳು ಅಪಹರಿಸಿ ಆತನಿಗೆ ಅಮಲು ಥಳಿಸಿ ಅಮಲು ಪದಾರ್ಥ ನೀಡಿ ಮದುವೆ ಮಾಡಿದ್ದಾರೆ. ಮದುವೆಯ ಸಮಯದಲ್ಲಿ ಯುವಕ ನಿತೀಶ್ ಪ್ರಜ್ಞೆಕಳೆದುಕೊಂಡು ಹಾರವನ್ನು ಕೂಡ ಹಾಕಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುವುದನ್ನು ಕಾಣಬಹುದು. ಆದರೆ ಇನ್ನೊಬ್ಬ ಯುವಕ ಬಲವಂತವಾಗಿ ನಿತೀಶ್ ಕೈಯನ್ನು ಹಿಡಿದು ಹುಡುಗಿಯ ಕತ್ತಿಗೆ ಹಾರ ಹಾಕಿಸಿದ್ದಾನೆ.
ಸಮಷ್ಟಿಪುರ ಜಿಲ್ಲೆಯ ಪಟೋರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಬಳಿಕ ಈ ವಿಚಾರ ಸ್ಥಳೀಯವಾಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪಟೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಚಕ್ರಜ್ ಅಲಿ ಗ್ರಾಮದಲ್ಲಿ ಮದುವೆ ನಡೆದಿದ್ದು, ಚಕ್ರಜ್ ಅಲಿ ಗ್ರಾಮದ ನಿವಾಸಿ ಶಂಕರ್ ರೈ ಅವರ ಪುತ್ರಿ ಲಕ್ಷ್ಮಿ ಕುಮಾರಿಯ ಜೊತೆ ಶಿಯುರಾ ಪಂಚಾಯತ್‌ನ ಜೋಡಿ ಪೋಖರ್ ಗ್ರಾಮದ ನಿವಾಸಿ ಕಾಲೇಶ್ವರ ರೈ ಅವರ ಪುತ್ರ ನಿತೀಶ್ ಕುಮಾರ್ ಅವರನ್ನು ಬಲವಂತವಾಗಿ ಮದುವೆ ಮಾಡಲಾಗಿದೆ ವರನೇ ಈ ಮಾಹಿತಿಯನ್ನು ವೀಡಿಯೋ ಮೂಲಕ ತಿಳಿಸಿದ್ದಾನೆ.
ತನ್ನನ್ನು ಸಂತ್ರಸ್ತ ವರ ಎಂದು ಹೇಳಿಕೊಂಡ ನಿತೀಶ್‌ಕುಮಾರ್, ಫೆಬ್ರವರಿ 7 ರಂದು ಗ್ರಂಥಾಲಯಕ್ಕೆ ಹೋಗುತ್ತಿದ್ದಾಗ ಗ್ರಾಮದ ಕೆಲವು ಯುವಕರು ನನ್ನನ್ನು ಬಲವಂತವಾಗಿ ಎತ್ತಿಕೊಂಡು ಹೋದರು. ನಂತರ ನನಗೆ ಅಮಲು ಪದಾರ್ಥ ನೀಡಿ ಥಳಿಸಿ, ನಂತರ ಮೋರ್ವಾ ಬ್ಲಾಕ್‌ನಲ್ಲಿರುವ ಖುದೇಶ್ವರ ಸ್ಥಾನ ದೇವಸ್ಥಾನದಲ್ಲಿ ಬಲವಂತವಾಗಿ ಮದುವೆ ಮಾಡಿದರು. ಮದುವೆಯ ನಂತರ, ಯಾರನ್ನೂ ಸಂಪರ್ಕಿಸಲು ಸಾಧ್ಯವಾಗದಂತೆ ಮನೆಯಲ್ಲಿ ಬೀಗ ಹಾಕಿ ಬಂಧನದಲ್ಲಿ ಇರಿಸಿದ್ದರು ಎಂದು ನಿತೀಶ್‌ಕುಮಾರ್ ಆರೋಪಿಸಿದ್ದಾರೆ. ತನ್ನ ಇಚ್ಛೆಗೆ ವಿರುದ್ಧವಾಗಿ ಈ ಮದುವೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಯುವಕ ನಿತೀಶ್ ಕುಮಾರ್ ಅವರನ್ನು ಆತನನ್ನು ಅಡಗಿಸಿಟ್ಟಿದ ಅತ್ತೆ-ಮಾವನ ಮನೆಯಿಂದ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ. ಪ್ರಕರಣದ ಇಡೀ ವಿಚಾರದ ಬಗ್ಗೆ ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ. ಪಟ್ವಾರಿ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ಪ್ರತಿಕ್ರಿಯಿಸಿ, ಮದುವೆ ಒಪ್ಪಿಗೆಯಿಂದಾಗಿದೆಯೇ ಅಥವಾ ಬಲವಂತದಿಂದಾಗಿದೆಯೇ ಎಂದು ನಿರ್ಧರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ವೈರಲ್ ವೀಡಿಯೊದಲ್ಲಿ ಮಾಡಲಾದ ಹೇಳಿಕೆಗಳ ಸತ್ಯಾಸತ್ಯತೆಯನ್ನು ಸಹ ತನಿಖೆ ಮಾಡಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರ, ಸತ್ಯಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ
ಇತ್ತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದಲೂ ಈ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಬಲವಂತವಾಗಿ ಯಾರನ್ನಾದರೂ ಅಪಹರಿಸಿ ಮದುವೆಯಾಗುವುದು ಸಂಪ್ರದಾಯವಲ್ಲ, ಅದು ಅಪರಾಧ. ಯಾರಿಗಾದರೂ ಆಮಲು ಪದಾರ್ಥ ನೀಡಿ ನೀಡಿ ಅವರನ್ನು ಮದುವೆಯಲ್ಲಿ ಸಿಲುಕಿಸುವುದು ಕ್ರಿಮಿನಲ್ ಕಿರುಕುಳ ಮತ್ತು ಮೂಲಭೂತ ನಾಗರಿಕ ಪ್ರಜ್ಞೆಯ ಸಂಪೂರ್ಣ ಕುಸಿತ ಎಂದು ಒಬ್ಬರು ಆಕ್ರೋಶ ಹೊರ ಹಾಕಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.