wedding called off over pet dog: ಉತ್ತರ ಪ್ರದೇಶದಲ್ಲಿ, ಮದುವೆ ಸಮಾರಂಭದ ವೇಳೆ ವಧುವಿನ ಸಾಕುನಾಯಿ ಬೊಗಳಿದ್ದಕ್ಕೆ ವರನ ಕಡೆಯವರು ಅದಕ್ಕೆ ಥಳಿಸಿದ್ದಾರೆ. ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದು, ಹೊಡೆದಾಟವಾಗಿದೆ. ಇದರಿಂದಾಗಿ ವಧು ಮದುವೆಯಾಗಲು ನಿರಾಕರಿಸಿದ್ದು, ಮದುವೆಯೇ ರದ್ದಾಗಿದೆ.
ಪ್ರಯಾಗರಾಜ್: ಇತ್ತೀಚೆಗೆ ಸಾಕುನಾಯಿಗಳು ಮನೆಯ ಸದಸ್ಯರಂತಾಗಿದ್ದಾರೆ. ಮನುಷ್ಯರಿಗಿಂತ ಹೆಚ್ಚಿನ ಸವಲತ್ತುಗಳನ್ನು ಸಾಕುನಾಯಿಗಳಿಗೆ ಅನೇಕರು ಕೊಡಿಸುತ್ತಾರೆ. ಅದಕ್ಕೆ ಅದರದ್ದೇ ಆದ ಮಲಗುವ ಮಂಚ, ಬೆಡ್‌ಶೀಟ್, ಆಟಿಕೆ ತಿನ್ನುವ ಆಹಾರ ಹೀಗೆ ಸಿಟಿಗಳಲ್ಲಿ ನಾಯಿ ಸಾಕುವ ಜನ ಅದಕ್ಕೆಂದೇ ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ತೆಗೆದಿರಿಸುತ್ತಾರೆ.
ಸಾಕುನಾಯಿಗಳ ಕಾರಣಕ್ಕೆ ಗಂಡ ಹೆಂಡತಿ ವಿಚ್ಛೇದನ ಪಡೆದುಕೊಂಡಿದ್ದು ಇದೆ. ನಾಯಿಯನ್ನು ಜೊತೆಗೆ ಮಲಗಿಸಿಕೊಳ್ಳುತ್ತಾಳೆ ಎಂದು ಗಂಡ ಹೆಂಡತಿ ಮಧ್ಯೆ ಜಗಳ ಬಂದು ವಿಚ್ಛೇದನವಾದ ಘಟನೆ ವರ್ಷದ ಹಿಂದೆ ನಡೆದಿತ್ತು. ಮತ್ತೊಂದು ಪ್ರಕರಣದಲ್ಲಿ ಗಂಡನ ನಾಯಿ ಹಾಗೂ ಹೆಂಡತಿಯ ನಾಯಿಗೆ ಪರಸ್ಪರ ಆಗಿ ಬರುವುದಿಲ್ಲ ಎಂಬ ಕಾರಣಕ್ಕೂ ಜೋಡಿಯೊಂದು ಡಿವೋರ್ಸ್ ಪಡೆದುಕೊಂಡ ಘಟನೆ ನಡೆದಿತ್ತು. ಈ ಎಲ್ಲಾ ಘಟನೆಗಳು ಮಾಸುವ ಮೊದಲೇ ಇಲ್ಲೊಂದು ನಾಯಿಯ ಕಾರಣಕ್ಕೆ ಮದುವೆಯೇ ಮುರಿದು ಬಿದ್ದಂತಹ ಘಟನೆಯೊಂದು ನಡೆದಿದೆ.
ಹೌದು ವಧುವಿನ ನಾಯಿಯ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಮದುವೆಯೊಂದು ನಿಂತು ಹೋಗಿದೆ.. ಹಾಗಿದ್ರೆ ಆಗಿದ್ದೇನು?
ಮದುವೆ ಸಂಭ್ರಮ ಮನೆಯಲ್ಲಿ ನಡೆಯುತ್ತಿದ್ದಾಗ ಮನೆಯಿಂದ ತುಸು ದೂರದಲ್ಲಿ ಕಟ್ಟಿ ಹಾಕಿದ್ದ ನಾಯಿ ತುಂಬಾ ಜನರನ್ನು ನೋಡಿ ಗೊಂದಲಕ್ಕೆ ಒಳಗಾಗಿ ಬೊಗಳುವುದಕ್ಕೆ ಶುರು ಮಾಡಿದೆ. ಈ ನಾಯಿ ನಿರಂತರವಾಗಿ ಬೊಗಳುವುದನ್ನು ನೋಡಿ ಕಿರಿಕಿರಿಗೊಳಗಾದ ವರನ ಕಡೆಯವರು ಅದನ್ನು ಶಾಂತಗೊಳಿಸುವುದಕ್ಕೆ ಮುಂದಾಗಿದ್ದಾರೆ. ಆದರೆ ನಾಯಿ ಸುಮ್ಮನಿರುವ ಬದಲು ಅಪರಿಚಿತರನ್ನು ನೋಡಿ ಇನ್ನೂ ಜೋರಾಗಿ ಬೊಬ್ಬೆ ಹಾಕುವುದಕ್ಕೆ ಶುರು ಮಾಡಿದೆ. ಈ ವೇಳೆ ವರನ ಕಡೆಯವರು ನಾಯಿಗೆ ಥಳಿಸಿದರು ಎಂಬ ಆರೋಪ ಕೇಳಿ ಬಂದಿದೆ.
ತಮ್ಮ ಸಾಕುನಾಯಿಗೆ ವರನ ಸಂಬಂಧಿಕರು ಥಳಿಸಿದರು ಎಂದು ಸಿಟ್ಟಿಗೆದ್ದ ವಧುವಿನ ಕಡೆಯವರು ಈ ವಿಚಾರವನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಎರಡು ಕಡೆಯವರ ನಡುವೆ ಗಲಾಟೆ ಶುರುವಾಗಿದೆ. ಕೂಡಲೇ ಈ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ಕನಿಷ್ಠ ಐದು ಜನ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಖಾಗ ತಹಸಿಲ್‌ನಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಆಭರಣ ವ್ಯಾಪಾರಿ ಸುಮಿತ್ ಕೇಸರ್ವಾನಿ ಹಾಗೂ 19 ವರ್ಷದ ತನು ಕೇಸರ್ವಾನಿ ನಡುವೆ ಮದುವೆ ನಿಗದಿಯಾಗಿದ್ದು, ಇಬ್ಬರು ಮದುವೆಯಾಗುವುದಕ್ಕೆ ಸಿದ್ಧ
ವಧುವಿನ ಕುಟುಂಬಕ್ಕೆ ಸೇರಿದ ಸಾಕು ನಾಯಿಯೊಂದು ವಧು ಮತ್ತು ವರನ ಕುಟುಂಬಗಳ ನಡುವೆ ಹಿಂಸಾತ್ಮಕ ವಾಗ್ವಾದಕ್ಕೆ ಕಾರಣವಾಗಿ, ಕನಿಷ್ಠ ಐದು ಜನರು ಗಾಯಗೊಂಡಿರುವ ಘಟನೆ ಫತೇಪುರ್ ಜಿಲ್ಲೆಯ ಖಾಗಾ ತಹಸಿಲ್‌ನಲ್ಲಿ ನಡೆದಿದೆ. ಗುರುವಾರ ಈ ಘಟನೆ ನಡೆದಿದ್ದು, 25 ವರ್ಷದ ಆಭರಣ ವ್ಯಾಪಾರಿ ಸುಮಿತ್ ಕೇಸರ್ವಾನಿ 19 ವರ್ಷದ ತನು ಕೇಸರ್ವಾನಿ ಅವರನ್ನು ಮದುವೆಯಾಗಲು ಸಿದ್ಧರಾಗಿ ಮದುವೆಯ ಸಂಪ್ರದಾಯಗಳು ನಡೆಯುತ್ತಿದ್ದಾಗಲೇ ಘಟನೆ ನಡೆದಿದೆ.
ವಧು ಹಾಗೂ ವರನ ಕಡೆಯವರು ಪರಸ್ಪರ ಕುರ್ಚಿ ಹಾಗೂ ಕೋಲುಗಳನ್ನು ಬಳಸಿ ಹೊಡೆದಾಡಿದ್ದು, ಘಟನೆಯಲ್ಲಿ ವಧುವಿನ ಕುಟುಂಬದ ಮೂವರು ಸದಸ್ಯರಾದ ರಿಷಭ್ ಕೇಸರ್ವಾನಿ, ಶುಭಂ ಗುಪ್ತಾ ಮತ್ತು ಸಂಗೀತಾ ದೇವಿ ಅವರ ತಲೆಗೆ ಗಾಯಗಳಾಗಿದ್ದರೆ, ಮತ್ತೊಬ್ಬರ ಕೈ ಮುರಿದಿದೆ. ವರನ ಕಡೆಯ ಕೆಲವು ಸದಸ್ಯರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದಾಗಿ ವಧು ಮದುವೆಯಾಗಲು ನಿರಾಕರಿಸಿದ್ದು ಮದುವೆ ಕ್ಯಾನ್ಸಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಖಗಾದ ಎಸ್‌ಎಚ್‌ಒ ಆರ್‌ಕೆ ಪಟೇಲ್ ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.