ಐದೇ ದಿನದಲ್ಲಿ ಬ್ರೈನ್‌ ಟ್ಯೂಮರ್‌ ಮಾಯ ಮಾಡೋ ವಿಧಾನ ಪತ್ತೆ; ಮೂವರ ಮೇಲೆ ಯಶಸ್ವಿ ಪ್ರಯೋಗ

Published : Apr 01, 2026, 09:21 AM IST

ಗ್ಲಿಯೊಬ್ಲಾಸ್ಟೊಮಾ ಎಂಬ ಅಪಾಯಕಾರಿ ಮೆದುಳಿನ ಕ್ಯಾನ್ಸರ್‌ಗೆ ಕಾರ್-ಟಿ ಎಂಬ ಹೊಸ ಚಿಕಿತ್ಸಾ ವಿಧಾನವು ಆಶಾಕಿರಣ ಮೂಡಿಸಿದೆ. ಮೂವರು ರೋಗಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ, ಈ ಚಿಕಿತ್ಸೆಯು ಕೆಲವೇ ದಿನಗಳಲ್ಲಿ ಮೆದುಳಿನ ಗಡ್ಡೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. 

PREV
15
ಬ್ರೈನ್‌ ಕ್ಯಾನ್ಸರ್‌ನಿಂದ ಮೆದುಳಿನಲ್ಲಿ ಬೆಳೆಯುವ ಗಡ್ಡೆ

ಮಸ್ಸಾಚ್ಯುಸೆಟ್ಸ್: ಮಾರಕ ರೋಗಗಳಲ್ಲೊಂದಾದ ಬ್ರೈನ್‌ ಕ್ಯಾನ್ಸರ್‌ನಿಂದ ಮೆದುಳಿನಲ್ಲಿ ಬೆಳೆಯುವ ಗಡ್ಡೆಯನ್ನು ಕೇವಲ 5 ದಿನಗಳಲ್ಲಿ ಕರಗಿಸಬಲ್ಲ ಚಿಕಿತ್ಸಾ ವಿಧಾನವನ್ನು ಪತ್ತೆ ಮಾಡಲಾಗಿದ್ದು, ಕ್ಯಾನ್ಸರ್‌ ರೋಗಿಗಳ ಪಾಲಿಗಿದು ಆಶಾಕಿರಣವಾಗಿದೆ.

ಗ್ಲಿಯೊಬ್ಲಾಸ್ಟೊಮಾ ಎಂಬ ಅಪಾಯಕಾರಿ ಮೆದುಳಿನ ಕ್ಯಾನ್ಸರ್‌ ಗುಣಪಡಿಸಲು ಅಮೆರಿಕದ ಬಾಸ್ಟನ್‌ನಲ್ಲಿರುವ ಮಾಸ್ ಜನರಲ್ ಕ್ಯಾನ್ಸರ್ ಸೆಂಟರ್ ಕಾರ್‌-ಟಿ ಎಂಬ ವಿಧಾನವನ್ನು 3 ರೋಗಿಗಳ ಮೇಲೆ ಪ್ರಯೋಗ ಮಾಡಿದ್ದು, ಅಚ್ಚರಿಯೆಂಬಂತೆ ನಿರೀಕ್ಷಿತ ಫಲಿತಾಂಶ ಸಿಕ್ಕಿದೆ.

25
ಏನಿದು ಚಿಕಿತ್ಸೆ?

ಗ್ಲಿಯೊಬ್ಲಾಸ್ಟೊಮಾದಿಂದ ಬಳಸುತ್ತಿರುವವರಲ್ಲಿ ಕ್ಯಾನ್ಸರ್‌ ಮೆದುಳಿನಾದ್ಯಂತ ವೇಗವಾಗಿ ಹಬ್ಬುತ್ತದೆ ಹಾಗೂ ಇದನ್ನು ಸಂಪೂರ್ಣವಾಗಿ ತಡೆಯುವಲ್ಲಿ ಶಸ್ತ್ರಚಿಕಿತ್ಸೆ, ವಿಕಿರಣ, ಕಿಮೊಥೆರಪಿಯಂತಹ ಆಧುನಿಕ ಚಿಕಿತ್ಸಾ ವಿಧಾನಗಳೂ ಯಶಸ್ವಿಯಾಗಿಲ್ಲ. ಇದು ಕಾಣಿಸಿಕೊಂಡ 6 ತಿಂಗಳೊಳಗೆ ಚಿಕಿತ್ಸೆ ನೀಡದಿದ್ದಲ್ಲಿ ವ್ಯಕ್ತಿ ಮೃತಪಡುವ ಸಾಧ್ಯತೆ ಅಧಿಕ. ಇಂತಹ ಕಾಯಿಲೆಯಿಂದ ಬಳಲುತ್ತಿದ್ದ ಮೂವರನ್ನು 2023ರಲ್ಲಿ ಕಾರ್‌-ಟಿ (ಕೈಮೆರಿಕ್ ಆ್ಯಂಟಿಜೆನ್‌ ರಿಸೆಪ್ಟರ್‌ ಟಿ-ಕೋಶ) ಥೆರಪಿಗೆ ಒಳಪಡಿಸಲಾಯಿತು.

35
ಚಿಕಿತ್ಸಾ ವಿಧಾನ

ಇದರಡಿಯಲ್ಲಿ ರೋಗಿಗಳ ರೋಗನಿರೋಧಕ ಜೀವಕೋಶಗಳನ್ನು ತೆಗೆದು(ಇಮ್ಯೂನ್‌ ಸೆಲ್‌), ಕ್ಯಾನ್ಸರ್‌ ಸೆಲ್‌ಗಳನ್ನು ಗುರುತಿಸಿ ನಾಶ ಮಾಡುವಂತೆ ಅವುಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತದೆ. ಬಳಿಕ ಮಾರ್ಪಡಿಸಲಾದ ಈ ಕೋಶಗಳನ್ನು ಡ್ರಿಪ್‌ ಮೂಲಕ ರೋಗಿಯ ದೇಹಕ್ಕೆ ಸೇರಿಸಲಾಗುತ್ತದೆ. ಈ ಚಿಕಿತ್ಸಾ ವಿಧಾನವನ್ನು ಈಗಾಗಲೇ ರಕ್ತದ ಕ್ಯಾನ್ಸರ್‌ ವಿರುದ್ಧ ಬಳಸಲಾಗುತ್ತಿದೆ.

45
ಪರಿಣಾಮವೇನು?

ಈ ಚಿಕಿತ್ಸೆಗೆ ಒಳಪಟ್ಟ 5 ದಿನಗಳಲ್ಲೇ ಒಬ್ಬ ವ್ಯಕ್ತಿಯ ಮೆದುಳಿನಲ್ಲಿದ್ದ ಗಡ್ಡೆ ಸಂಪೂರ್ಣ ಮಾಯವಾಗಿದ್ದರೆ, ಇನ್ನೊಬ್ಬರಲ್ಲಿ ಸುಮಾರು ಶೇ.60ರಷ್ಟು ಕರಗಿತ್ತು. ಮತ್ತೊಬ್ಬರ ಗಡ್ಡೆಯ ಗಾತ್ರವೂ ತಗ್ಗಿತ್ತು. ಇದರಿಂದ ಆ ಮೂವರಿಗೆ ಯಾವುದೇ ಗಂಭೀರ ತೊಂದರೆಗಳು ಕಾಣಿಸಿಕೊಳ್ಳಲಿಲ್ಲವಾದರೂ, ಜ್ವರ, ತಾತ್ಕಾಲಿಕ ಗೊಂದಲ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಯಂತಹ ಅಡ್ಡಪರಿಣಾಮಗಳು ಉಂಟಾಗಿವೆ. ಜತೆಗೆ, ತಿಂಗಳುಗಳು ಕಳೆದಂತೆ ಗಡ್ಡೆ ಮತ್ತೆ ಬೆಳೆಯಲು ಆರಂಭಿಸಿದೆ.

ಇದನ್ನೂ ಓದಿ: ಯುದ್ಧದ ಎಫೆಕ್ಟ್: ಹೀಲಿಯಂ ಅನಿಲದ ಕೊರತೆ.. ಎಂಆರ್‌ಐ ಸ್ಕ್ಯಾನಿಂಗ್ ದರ ಏರಿಕೆ ಸಾಧ್ಯತೆ!

55
ಆಶಾಕಿರಣ

ಸದ್ಯ ಪ್ರಯೋಗ ಹಂತದಲ್ಲಿರುವ ಈ ವಿಧಾನವು ಕೇವಲ ಮೂವರ ಮೇಲೆ ಪ್ರಯೋಗವಾಗಿರುವುದರಿಂದ ಇನ್ನೂ ಅನೇಕರನ್ನು ಇದಕ್ಕೆ ಒಳಪಡಿಸಿ ಅದರ ಯಶಸ್ಸನ್ನು ನಿಶ್ಚಯಿಸಿಕೊಳ್ಳಬೇಕಿದೆ. ಆದರೂ ಚಮತ್ಕಾರದಂತೆ ಆದ ಈ ಅಲ್ಪಕಾಲದ ಬದಲಾವಣೆಯನ್ನು ಇನ್ನಷ್ಟು ಆಧುನೀಕರಣಗೊಳಿಸಿ, ಸದ್ಯ ಇರುವ ಕಿಮೊಥೆರಪಿ ಜತೆ ಕಾರ್‌-ಟಿ ಚಿಕಿತ್ಸೆಯನ್ನೂ ನೀಡಿದರೆ, ಮೆದುಳಿನ ಕ್ಯಾನ್ಸರ್‌ ವಿರುದ್ಧ ವೈದ್ಯಲೋಕಕ್ಕೆ ದೊರೆತ ಬಹುದೊಡ್ಡ ಜಯವೇ ಸರಿ.

ಇದನ್ನೂ ಓದಿ: MRI ಸ್ಕ್ಯಾನಿಂಗ್ ವೇಳೆ ಪುಟ್ಟ ಮಗನಿಗೆ ಭಯವಾಗುತ್ತೆ ಅಂತ ಜೊತೆಗೆ ಮೆಷಿನ್ ಒಳಗೆ ಹೋದ ಅಪ್ಪ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories