Published : Feb 27, 2026, 03:09 PM ISTUpdated : Feb 27, 2026, 03:48 PM IST
ಪ್ರಧಾನಿ ಮೋದಿಯವರ ಎರಡು ದಿನಗಳ ಇಸ್ರೇಲ್ ಪ್ರವಾಸ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಭೇಟಿಯ ವೇಳೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತೀಯ ಮೂಲದ ಶೆಫ್ ರೀನಾ ಪುಷ್ಕರ್ಣ ಅವರನ್ನು ಹಾಡಿ ಹೊಗಳಿದ್ದು, ಮೋದಿಯವರ ಔತಣಕೂಟಕ್ಕೆ ಅವರೇ ಆಹಾರ ಸಿದ್ಧಪಡಿಸಿದ್ದರು.
ಎರಡು ದಿನಗಳ ಇಸ್ರೇಲ್ ಪ್ರವಾಸ ಮುಗಿಸಿದ ಪ್ರಧಾನಿ ಮೋದಿ ಇಸ್ರೇಲ್ ದೇಶ ಹಾಗೂ ಪ್ರಧಾನಿಗೆ ತಮ್ಮನ್ನು ಆತ್ಮೀಯವಾಗಿ ಸತ್ಕರಿಸಿದ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ಇಸ್ರೇಲ್‌ನ ಪ್ರೀತಿ ತುಂಬಿದ ಬೆಚ್ಚಗಿನ ಸತ್ಕಾರ ಹಾಗೂ ವೈಯಕ್ತಿವಾಗಿ ತಮ್ಮ ಬಗ್ಗೆ ಕಾಳಜಿ ತೋರಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಹಾಗೂ ಅವರ ಪತ್ನಿ ಸಾರಾ ನೆತನ್ಯಾಹು ಅವರಿಗೆ ಧನ್ಯವಾದ ಹೇಳಿದ್ದಾರೆ.
ಇಸ್ರೇಲ್‌ನಲ್ಲಿ ಪ್ರಧಾನಿ ಮೋದಿಯವರಿಗೆ ಇಸ್ರೇಲ್ ತಿನಿಸುಗಳ ಜೊತೆಗೆ ಭಾರತೀಯ ಮೂಲದ ತಿನಿಸುಗಳನ್ನು ಕೂಡ ಬಡಿಸಿ ಸತ್ಕರಿಸಲಾಗಿದೆ. ಭೇಟಿಯ ನಂತರ ಜಂಟಿ ಹೇಳಿಕೆಯ ವೇಳೆ ಇಸ್ರೇಲ್ ಅಧ್ಯಕ್ಷರು ಭಾರತೀಯ ಮೂಲದ ಶೆಫ್(ಬಾಣಸಿಗರು) ರೀನಾ ಪುಶ್ಕರ್ಣ ಅವರ ಜೊತೆಗೆ ತಮಗಿರುವ ಅವಿನಾಭಾವವಾದ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬೆಂಜಮಿನ್ ನೇತಾನ್ಯಾಹು ಹೇಳಿದ್ದರು. ಅವರೇ ಪ್ರಧಾನಿ ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡಿದ್ದ ವೇಳೆ ಅವರಿಗೆ ಇಸ್ರೇಲ್ ಪ್ರಧಾನಿ ಆಯೋಜಿಸಿದ ಖಾಸಗಿ ಔತಣ ಕೂಟಕ್ಕೆ ಆಹಾರವನ್ನು ಸಿದ್ಧಪಡಿಸಿದರು ಎಂಬುದು ತಿಳಿದು ಬಂದಿದೆ.
ಹೌದು ಪ್ರಧಾನಿ ಇಸ್ರೇಲ್ ಭೇಟಿಯಿಂದಾಗಿ ಭಾರತೀಯ ಮೂಲದ ಇಸ್ರೇಲಿ ಶೆಫ್ ರೀನಾ ಪುಷ್ಕರ್ ಅವರು ಮತ್ತೊಮ್ಮೆ ಬೆಳಕಿಗೆ ಬಂದಿದ್ದಾರೆ. ಸೆಲೆಬ್ರಿಟಿ ಹೊಟೇಲರ್ ಆಗಿರುವ ಇವರು ಇಸ್ರೇಲ್ ಪ್ರಧಾನಿಯವರಿಂದಲೇ ಪ್ರಶಂಸೆಗೆ ಪಾತ್ರರಾಗಿದ್ದಾರೆ. "ನಮ್ಮ ಮೊದಲ ಅಥವಾ ಎರಡನೇ ಡೇಟ್ ಟೆಲ್ ಅವಿವ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ನಲ್ಲಿ ಆಗಿತ್ತು ಎಂದು ನಾನು ಭಾವಿಸುತ್ತೇನೆ. ರೀನಾ ಪುಷ್ಕರ್ಣ. ಮತ್ತು ನಾನು ನಿಮಗೆ ಹೇಳಲೇಬೇಕು, ಯಾವುದೇ ಸಂದೇಹವಿಲ್ಲದೇ ರೀನಾ ಪುಷ್ಕರ್ಣ ಅವರ ಹೊಟೇಲ್‌ನ ಆಹಾರ ನಂಬಲಸಾಧ್ಯವಾಗಿತ್ತು ಎಂದು ನೆತನ್ಯಾಹು ಹೇಳುವಾಗ ಅವರ ಪತ್ನಿ ಸಾರಾ ತಲೆಯಾಡಿಸುತ್ತಿರುವುದು ಕಂಡು ಬಂದಿದೆ.
ನೆತನ್ಯಾಹು ತಮ್ಮ ಹೇಳಿಕೆಗಳಲ್ಲಿ, ದಶಕಗಳ ಹಿಂದೆ ಪುಷ್ಕರ್ಣ ಸ್ಥಾಪಿಸಿದ ಟೆಲ್ ಅವಿವ್‌ನಲ್ಲಿರುವ ತಂದೂರಿ ರೆಸ್ಟೋರೆಂಟ್ ಅನ್ನು ಉಲ್ಲೇಖಿಸಿದರು. ಈ ಹೊಟೇಲ್ ತನ್ನನ್ನು 40 ವರ್ಷಗಳಿಗೂ ಹೆಚ್ಚು ಕಾಲ ಇಸ್ರೇಲ್‌ನ ಅತ್ಯಂತ ಪ್ರೀತಿಯ ಭಾರತೀಯ ರೆಸ್ಟೋರೆಂಟ್ ಬಣ್ಣಿಸಲ್ಪಟ್ಟಿದೆ. ಪತ್ನಿ ಸಾರಾಗೆ ಮೊದಲ ಬಾರಿಗೆ ಇದನ್ನು ಪರಿಚಯಿಸಲಾಯಿತು, ಆದ್ದರಿಂದ ಅದು ನಮ್ಮ ಉತ್ತಮ ಮೊದಲ ಡೇಟ್ ಆಗಿತ್ತು. ಆಹಾರದ ಕಾರಣದಿಂದಾಗಿ ಮಾತ್ರವಲ್ಲ, ಡೇಟ್ ಕೂಡ ಅತ್ಯುತ್ತಮವಾಗಿತ್ತು. ಆದ್ದರಿಂದ, ನಿಸ್ಸಂಶಯವಾಗಿ, ನಾನು ನಿಮಗೆ ಮತ್ತು ನನ್ನ ಮಕ್ಕಳಿಗೆ ಋಣಿಯಾಗಿದ್ದೇನೆ ಎಂದು ಇಸ್ರೇಲಿ ಪ್ರಧಾನಿ ಪುಷ್ಕರ್ಣ ಅವರನ್ನು ಹೊಗಳುತ್ತಾ ಹೇಳಿದರು.
ನಂತರ ಮಾತನಾಡಿದ ಪುಷ್ಕರ್ಣ ಇಸ್ರೇಲ್ ಪ್ರಧಾನಿ ಹಾಗೂ ಭಾರತದ ಪ್ರಧಾನಿಯವರ ಪ್ರಶಂಸೆ ನನ್ನ ಪಾಲಿಗೆ ದೊಡ್ಡ ಪ್ರಪಂಚದಂತೆ ಎಂದು ಹೆಳಿದರು. ನಮ್ಮ ಪ್ರಧಾನಿ ಬೀಬಿ ನೆತನ್ಯಾಹು ಅವರು ಭಾರತ ಮತ್ತು ಭಾರತೀಯ ಪಾಕಪದ್ಧತಿ ಬಹಳ ಇಷ್ಟಪಡುತ್ತಿರುವುದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಇದು ತುಂಬಾ ನಿಕಟ ಸಂಬಂಧ ಮತ್ತು ಅವರ ಇಡೀ ಕುಟುಂಬವು ಕಳೆದ 30 ವರ್ಷಗಳಿಂದ ನನ್ನನ್ನು ಭೇಟಿ ಮಾಡುತ್ತಿದೆ. ಪ್ರಧಾನಿ ಮೋದಿಯವರು ನನಗೆ ಧನ್ಯವಾದ ಹೇಳಿದರು. ನನ್ನ ಆಸೆ ಈಡೇರಿತು ಎಂದು ರೀನಾ ಪುಷ್ಕರ್ಣ ಹೇಳಿದ್ದಾರೆ.
ಇರಾಕಿ ಮೂಲದ ಯಹೂದಿ ತಾಯಿ ಮತ್ತು ಭಾರತೀಯ ತಂದೆಗೆ ನವದೆಹಲಿಯಲ್ಲಿ ಜನಿಸಿದ ರೀನಾ, ಚಿಕ್ಕ ವಯಸ್ಸಿನಲ್ಲಿಯೇ ಮರ್ಚೆಂಟ್ ನೇವಿ ಕ್ಯಾಪ್ಟನ್ ವಿನೋದ್ ಪುಷ್ಕರ್ಣ ಅವರನ್ನು ವಿವಾಹವಾದರು ಮತ್ತು ಇಸ್ರೇಲ್ ಏಷ್ಯಾ ಕೇಂದ್ರದ ಪ್ರಕಾರ ಒಂಬತ್ತು ವರ್ಷಗಳ ಕಾಲ ಅವರೊಂದಿಗೆ ನೌಕಾಯಾನ ಮಾಡಿದರು. ವಿನೋದ್ ಜೊತೆಗಿನ ಪ್ರಯಾಣದ ಸಮಯದಲ್ಲಿ, ರೀನಾ ಹಡಗುಗಳಲ್ಲಿ ಭೇಟಿಯಾದ ವಿವಿಧ ಬಾಣಸಿಗರಿಂದ ಅಡುಗೆ ಮಾಡಲು ಕಲಿತರು. ನಂತರ 1983 ರಲ್ಲಿ, ದಂಪತಿಗಳು ಮತ್ತು ಅವರ ಇಬ್ಬರು ಮಕ್ಕಳು ಇಸ್ರೇಲ್‌ನಲ್ಲಿ ನೆಲೆಸಿದರು, ಮತ್ತು ಅದೇ ವರ್ಷ ರೀನಾ ಟೆಲ್ ಅವಿವ್‌ನಲ್ಲಿ ತಂದೂರಿಯನ್ನು ತೆರೆದರು.
ಅಂದಿನಿಂದ, ಸೆಲೆಬ್ರಿಟಿ ಬಾಣಸಿಗರಾಗಿರುವ ರೀನಾ, ಇಸ್ರೇಲ್‌ನಾದ್ಯಂತ ತಂದೂರಿ/ಕೊಹಿನೂರ್ ಸರಪಳಿಗಳ ಅಡಿಯಲ್ಲಿ ಭಾರತೀಯ ರೆಸ್ಟೋರೆಂಟ್‌ಗಳನ್ನು ತೆರೆದಿದ್ದಾರೆ. ಮತ್ತು ಇಸ್ರೇಲ್-ಏಷ್ಯಾ ಕೇಂದ್ರದ ಪ್ರಕಾರ ಸಿಂಗಾಪುರ ಮತ್ತು ಮಕಾವುಗಳಲ್ಲಿಯೂ ಅವರು ಇಸ್ರೇಲಿ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ಪ್ರಸಿದ್ಧ ರೆಸ್ಟೋರೆಂಟ್‌ಗಳನ್ನು ನಿರ್ವಹಿಸುವುದರ ಜೊತೆಗೆ, ಪುಷ್ಕರ್ಣ ಅವರು ಯುರೋಪ್, ಕೆನಡಾ ಮತ್ತು ಯುಎಸ್‌ನಲ್ಲಿರುವ ಸೂಪರ್ ಮಾರ್ಕೆಟ್‌ಗಳಿಗೆ ಮೀಸಲಾದ ಕೋಷರ್ ಹೆಪ್ಪುಗಟ್ಟಿದ ಭಾರತೀಯ ಆಹಾರವನ್ನು ಉತ್ಪಾದಿಸುವ ವ್ಯವಹಾರವನ್ನೂ ನಡೆಸುತ್ತಿದ್ದಾರೆ.
ಪುಷ್ಕರ್ಣ ಹಲವಾರು ಇಸ್ರೇಲಿ ಟಿವಿ ಕಾರ್ಯಕ್ರಮಗಳಲ್ಲಿಯೂ ಸೆಲೆಬ್ರಿಟಿ ಬಾಣಸಿಗರಾಗಿ ಕಾಣಿಸಿಕೊಂಡಿದ್ದಾರೆ. ಆತಿಥ್ಯ ವಲಯದಲ್ಲಿನ ತನ್ನ ಕೆಲಸದ ಹೊರತಾಗಿ, ಪುಷ್ಕರ್ಣ ಅವರು ಮರೀನಾ ಬೇ ಸ್ಯಾಂಡ್ಸ್‌ನ ಹಿರಿಯ ನಿರ್ವಹಣೆಗೆ ಭಾರತದ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದರು, ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ತಮ್ಮ ಕಚೇರಿಗಳನ್ನು ಸ್ಥಾಪಿಸುವಲ್ಲಿ ಅವರಿಗೆ ಸಹಾಯ ಮಾಡಿದರು. ಅವರು ಮರೀನಾ ಬೇ ಸ್ಯಾಂಡ್ಸ್ ಸಿಂಗಾಪುರ ಮತ್ತು ವೆನೆಷಿಯನ್ ಮಕಾವೊದಲ್ಲಿ ಜೀ ಸಿನಿ ಪ್ರಶಸ್ತಿ ಪ್ರದರ್ಶನವನ್ನು ಸಹ ಆಯೋಜಿಸಿದರು.
ಪುಷ್ಕರ್ಣ ಅವರು ಹಲವು ವರ್ಷಗಳಿಂದ ರಾಜತಾಂತ್ರಿಕರೊಂದಿಗೆ ಸಂಬಂಧ ಹೊಂದಿದ್ದಾರೆ: 2003 ರಲ್ಲಿ, ಅವರು ಭಾರತಕ್ಕೆ ಇಸ್ರೇಲ್ ಪ್ರಧಾನಿ ಏರಿಯಲ್ ಶರೋನ್ ಅವರು ಆಗಮಿಸಿದಾಗ ಆ ನಿಯೋಗದ ಭಾಗವಾಗಿದ್ದರು, 2018 ರಲ್ಲಿ ಪ್ರಧಾನಿ ನೆತನ್ಯಾಹು ಭಾರತಕ್ಕೆ ಬಂದಾಗಲೂ ಅವರು ಆ ನಿಯೋಗದ ಭಾಗವೂ ಆಗಿದ್ದರು.
ಜುಲೈ 2017 ರಲ್ಲಿ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಇಸ್ರೇಲ್‌ಗೆ ಭೇಟಿ ನೀಡಿದಾಗಲೂ ಇವರೇ ಅವರಿಗೆ ಆಹಾರ ತಯಾರಿಕೆಯಲ್ಲಿ ಭಾಗವಹಿಸಿದ್ದರು, ಪ್ರಧಾನಿ ನೆತನ್ಯಾಹು ಅವರ ಮನೆಯಲ್ಲಿಯೇ ಭಾರತೀಯ ಪ್ರಧಾನಿಗಾಗಿ ಅವರು ಊಟವನ್ನು ಸಿದ್ಧಪಡಿಸಿದ್ದರು. ಇಸ್ರೇಲ್-ಏಷ್ಯಾ ಕೇಂದ್ರದ ಪ್ರಕಾರ, 1993 ರಲ್ಲಿ ನಾರ್ವೆಯಿಂದ ಆಯೋಜಿಸಲ್ಪಟ್ಟ ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯನ್ನರ ನಡುವಿನ ಕೆಲವು ಶಾಂತಿ ಮಾತುಕತೆಗಳಿಗೆ ಟೆಲ್ ಅವೀವ್‌ನಲ್ಲಿರುವ ಅವರ ರೆಸ್ಟೋರೆಂಟ್ ತಂದೂರಿ ವೇದಿಕೆಯಾಗಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.