ತನ್ನ ಶಿಕ್ಷಣದ ವೆಚ್ಚ ಪೋಷಕರಿಗೆ ಹೊರೆಯಾಗಬಾರದು ತನ್ನ ಖರ್ಚುಗಳನ್ನು ತಾನೇ ಬರಿಸಬೇಕು ಎಂಬ ನಿಲುವಿನಿಂದ ಯುವತಿಯೊಬ್ಬಳು ರಸ್ತೆ ಬದಿ ಯಾವುದೇ ಅಂಜಿಕೆ ಇಲ್ಲದೇ ಪಾನಿಪುರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾಳೆ. ಈಕೆ ಪಾನಿಪುರಿ ಮಾರಾಟ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವರು ವಿಧಿ ಎಷ್ಟು ಕಷ್ಟ ನೀಡಿದರೂ, ಎದೆಗುಂದದೇ ಬದುಕಿನಲ್ಲಿ ಬರುವ ಕಷ್ಟಗಳಿಗೆಲ್ಲ ತಮ್ಮದೇ ರೀತಿಯಲ್ಲಿ ಹೊಂದಿಕೊಂಡು ಎಲ್ಲವನ್ನು ಸಕರಾತ್ಮಕವಾಗಿ ತೆಗೆದುಕೊಂಡು ಹೋಗುವ ಮೂಲಕ ಬದುಕಿಗೆ ಹೊಸ ಅರ್ಥ ನೀಡುತ್ತಾರೆ. ಕಷ್ಟ ಎಂದು ಕೊರಗುತ್ತಾ ಕೂರದೇ ಯಶಸ್ಸಿನತ್ತ ಮುನ್ನುಗುತ್ತಾರೆ. ಹೀಗೆ ತಮ್ಮ ಬದುಕಿನ ಮೂಲಕ ಅನೇಕರಿಗೆ ಬದುಕಲು ಸ್ಪೂರ್ತಿ ತುಂಬಿದ ಅನೇಕರು ನಮ್ಮ ನಡುವೆ ಇದ್ದಾರೆ. ಅಂತಹವರ ಸಾಲಿಗೆ ಹೊಸ ಸೇರ್ಪಡೆ ಮೊಹಾಲಿಯ ಈ ಯುವತಿ. ತನ್ನ ಶಿಕ್ಷಣದ ವೆಚ್ಚ ಪೋಷಕರಿಗೆ ಹೊರೆಯಾಗಬಾರದು ತನ್ನ ಖರ್ಚುಗಳನ್ನು ತಾನೇ ಬರಿಸಬೇಕು ಎಂಬ ನಿಲುವಿನಿಂದ ಈ ಯುವತಿ ರಸ್ತೆ ಬದಿ ಯಾವುದೇ ಅಂಜಿಕೆ ಇಲ್ಲದೇ ಪಾನಿಪುರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾಳೆ.
ಪಾನಿಪುರಿ,ಗೋಲ್ಗಪ್ಪ ಮುಂತಾದ ಉತ್ತರ ಭಾರತದ ಸ್ಟೀಟ್‌ಫುಡ್‌ಗಳನ್ನು ಸಾಮಾನ್ಯವಾಗಿ ಯುವಕರೇ ಮಾರಾಟ ಮಾಡುತ್ತಾರೆ. ರಸ್ತೆ ಬದಿ ಗಂಟೆಗಟ್ಟಲೇ ನಿಂತುಕೊಂಡು ಮಾರಾಟ ಮಾಡಬೇಕು. ಎಲ್ಲ ತರಹದ ಗ್ರಾಹಕರಿಗೆ ಸೇವೆ ನೀಡಬೇಕು. ಹೋ ಪಾನಿಪುರಿ ಮಾರೋ ಕೆಲಸ ಎಂದು ಬಹುತೇಕರು ಆಸಡ್ಡೆಯಿಂದ ನೋಡುವುದನ್ನು ಅರಗಿಸಿಕೊಳ್ಳಬೇಕು. ಇದೆಲ್ಲವೂ ಸುಲಭದ ಕೆಲಸವಲ್ಲ. ಆದಾಗ್ಯೂ ಈ ಹೆಣ್ಣು ಮಗಳು ಧೈರ್ಯವಾಗಿ ನಿಂತು ಯಾರಿಗೂ ತಲೆಕೆಡಿಸಿಕೊಳ್ಳದೇ ಪಾನಿಪುರಿ ಮಾರಾಟ ಮಾಡುತ್ತಿದ್ದು, ಈಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆ ಬಹುತೇಕರ ಪ್ರಶಂಸೆಗೆ ಪಾತ್ರವಾಗಿದೆ.
ಅಂದಹಾಗೆ ಹೀಗೆ ಪಾನಿಪುರಿ ಮಾರಾಟ ಮಾಡುತ್ತಿರುವ ಯುವತಿ ಹೆಸರು ಪೂನಂ. ಪಾನಿಪುರಿ ಮಾರಾಟ ಮಾಡಿ ಬಂದ ಹಣವನ್ನು ಈಕೆ ತನ್ನ ಶಿಕ್ಷಣಕ್ಕೆ ವೆಚ್ಚ ಮಾಡುತ್ತಾಳೆ. ಈಕೆಯ ಈ ಪುಟ್ಟ ಸ್ಟಾಲ್‌ನಲ್ಲಿ ಬಾಯಲ್ಲಿ ನೀರೂರಿಸುವಂತಹ ರುಚಿ ರುಚಿಯಾದ ಗೋಲ್‌ಗಪ್ಪ, ಪಪಡಿ ಚಾಟ್, ಅಲೂ ಟಿಕ್ಕಿ ಹಾಗೂ ದಹಿ ಭಲ್ಲಾ ಮುಂತಾದ ತಿನಿಸುಗಳು ಸಿಗುತ್ತವೆ. ಇತ್ತೀಚೆಗೆ ಫುಡ್ ವ್ಲಾಗರ್ ಹ್ಯಾರಿ ಉಪ್ಪಲ್ ಅವರು ಈಕೆಯ ಸ್ಟಾಲ್‌ಗೆ ಭೇಟಿ ನೀಡಿ ಪೂನಂ ಜೊತೆ ಆಕೆಯ ಈ ಪುಟ್ಟ ವ್ಯವಹಾರದ ಬಗ್ಗೆ ಮಾತನಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಆಕೆ, ಈ ಹಿಂದೆ ಶಿಕ್ಷಣದ ಮೇಲೆ ಗಮನ ಕೇಂದ್ರಿಕರಿಸುವ ನಿಟ್ಟಿನಲ್ಲಿ ತನ್ನ ಹಳೇ ಕೆಲಸವನ್ನು ತೊರೆದಿದ್ದಾಗಿ ಹೇಳಿದರು. ಆದರೆ ಶಿಕ್ಷಣದ ವೆಚ್ಚ ಭರಿಸುವ ಕಾರಣಕ್ಕೆ ಈ ಚಾಟ್ ಸ್ಟಾಲ್ ಆರಂಭಿಸಿದಾಗಿ ಆಕೆ ಹೇಳಿದರು. ಇದಕ್ಕಾಗಿ ನಾನು ಹೊಸದೇನನ್ನು ಕಲಿಯಲಿಲ್ಲ. ಇದನ್ನು ನಾನು ನನ್ನಷ್ಟಕ್ಕೆ ಮಾಡುತ್ತಿದ್ದೇನೆ. ಮೊದಲಿಗೆ ನನಗೆ ಈ ಕೆಲಸ ಮಾಡಲು ಇಷ್ಟವಿರಲಿಲ್ಲ. ಆದರೆ ನಂತರ ಈ ರೀತಿ ಹಣ ಸಂಪಾದನೆ ಮಾಡುವುದಕ್ಕೆ ನಾಚಿಕೆಗೆಡಬೇಕಾಗಿಲ್ಲ ಎಂದೆನಿಸಿತು ಎಂದು ಆಕೆ ಹೇಳಿದ್ದಾಳೆ.
ಮೊದಲು ಪಾನಿಪುರಿ ತಯಾರಿಸಿದ್ದು ಮಹಾಭಾರತದ ದ್ರೌಪದಿಯಂತೆ !
ಶಿಕ್ಷಣದ ವೆಚ್ಚಕ್ಕಾಗಿ ಮೊಹಾಲಿಯ ಹುಡುಗಿ ಗೋಲ್‌ಗಪ್ಪ ಮಾರಾಟ ಮಾಡುತ್ತಿದ್ದಾಳೆ ಎಂದು ಬರೆದು ಈ ವಿಡಿಯೋವನ್ನು ಇನಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಲಕ್ಷಕ್ಕೂ 7 ಮಿಲಿಯನ್‌ಗೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 6 ಲಕ್ಷಕ್ಕೂ ಹೆಚ್ಚು ಮಂದಿ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಡಿದ್ದಾರೆ. ಅಲ್ಲದೇ ಅನೇಕರು ಈ ಸ್ಟೀಟ್‌ಫುಡ್ ಇರುವ ಸ್ಥಳವನ್ನು ತಿಳಿಸುವಂತೆ ಕಾಮೆಂಟ್‌ನಲ್ಲಿ ಕೇಳಿದ್ದು, ಆಕೆಯ ಶಿಕ್ಷಣಕ್ಕೆ ನೆರವಾಗುವುದಾಗಿ ಹೇಳುತ್ತಿದ್ದಾರೆ. ನೀವು ಆಕೆಯ ಜೊತೆ ಗೌರವಯುತವಾಗಿ ಮಾತನಾಡಿದ ರೀತಿ ನನಗೆ ಇಷ್ಟವಾಯಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಎಂತಹದ್ದೇ ವ್ಯವಹಾರ ಶುರು ಮಾಡುವ ಮೊದಲು ಮಹಿಳೆಯರಿಗೆ ಅದು ಆರಾಮದಾಯಕ ಎಂಬ ಭಾವನೆ ಮೂಡಬೇಕು ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಆಕೆಗೆ ಬದುಕಿನಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಕಾಮೆಂಟ್ ಮಾಡಿದ್ದಾರೆ.
ಹೆಣ್ಣು ಮಗು ಜನಿಸಿದ ಖುಷಿ: ಉಚಿತ ಪಾನಿಪುರಿ ಹಂಚಿದ ಬೀದಿಬದಿ ವ್ಯಾಪಾರಿ!